
ಸರ್ಕಾರ vs ರಾಜ್ಯಪಾಲ: ಸಂಘರ್ಷದ ಹಿಂದೆ ʼಹೈಕಮಾಂಡ್ʼಗಳ ಜಿದ್ದು?
ವಿಬಿ ಜಿ ರಾಮ್ ಜಿ ಯೋಜನೆಯ ಅನುಷ್ಠಾನದ ಕುರಿತು ಕೇವಲ ಭಿನ್ನಾಭಿಪ್ರಾಯವಾಗಿರದೆ ಉಭಯ ಪಕ್ಷಗಳ ದೆಹಲಿ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟದ ಪ್ರತಿಫಲ ಎಂಬುದು ಸ್ಪಷ್ಟವಾಗಿದೆ.
ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣದ ಕೆಲವು ಭಾಗಗಳನ್ನು ಕಡಿತಗೊಳಿಸಿದ ನಡೆ, ಮೇಲ್ನೋಟಕ್ಕೆ ಸಾಂವಿಧಾನಿಕ ವಿವಾದದಂತೆ ಕಂಡರೂ, ಅದರ ಆಳದಲ್ಲಿ ಅಡಗಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ಹೈಕಮಾಂಡ್‌ಗಳ ನಡುವಿನ ಪ್ರಬಲ ಶಕ್ತಿ ಪ್ರದರ್ಶನ ಎಂಬುದು ಇದೀಗ ರಾಜಕೀಯ ಚರ್ಚೆಯ ವಿಷಯವಾಗಿದೆ.
ಕೇಂದ್ರದ ಮಹತ್ವಾಕಾಂಕ್ಷೆಯ 'ವಿಬಿಜಿ ರಾಮ್ ಜಿ' ಯೋಜನೆಯ ಸುತ್ತ ಹೊತ್ತಿಕೊಂಡಿರುವ ಈ ಕಿಡಿ, ಇದೀಗ ರಾಜ್ಯ ರಾಜಕಾರಣದ ಗಡಿ ದಾಟಿ ರಾಷ್ಟ್ರ ರಾಜಕಾರಣದ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ರಾಜ್ಯಪಾಲರ ಹುದ್ದೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿರುವ ಈ ವಿದ್ಯಮಾನ, ರಾಜ್ಯದ ಹಿತಾಸಕ್ತಿಗಿಂತ ಹೆಚ್ಚಾಗಿ ದೆಹಲಿ ನಾಯಕರ ಅಜೆಂಡಾಗಳನ್ನು ಈಡೇರಿಸುವ ಕಸರತ್ತಾಗಿದೆ ಎಂಬುದು ರಾಜಕೀಯ ಪಂಡಿತರ ಅಂಬೋಣ.
ಒಕ್ಕೂಟದ ಬಿಕಟ್ಟು; ಹೈಕಮಾಂಡ್ನ ಜಿದ್ದು
ಈ ಇಡೀ ಪ್ರಕರಣವು ರಾಜ್ಯ ಮತ್ತು ಕೇಂದ್ರದ ನಡುವಿನ ಒಕ್ಕೂಟ ವ್ಯವಸ್ಥೆಯ ಬಿಕ್ಕಟ್ಟನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ. ರಾಜ್ಯ ಸರ್ಕಾರವು ತನ್ನದೇ ಆದ ಜನಾದೇಶವನ್ನು ಹೊಂದಿದ್ದು, ಕೇಂದ್ರದ ನೀತಿಗಳನ್ನು ಟೀಕಿಸುವ ಅಥವಾ ಒಪ್ಪದಿರುವ ಹಕ್ಕನ್ನು ಹೊಂದಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಿದೆ. ರಾಜ್ಯಪಾಲರು ಕೇವಲ 'ರಬ್ಬರ್ ಸ್ಟ್ಯಾಂಪ್' ಅಲ್ಲದಿದ್ದರೂ, ಸಚಿವ ಸಂಪುಟದ ಸಲಹೆಗೆ ಬದ್ಧರಾಗಿರಬೇಕು ಎಂಬುದು ಅವರ ವಾದ. ರಾಜ್ಯಪಾಲರು ಕೇಂದ್ರ ಸರ್ಕಾರದ ಪ್ರತಿನಿಧಿಯಂತೆ ವರ್ತಿಸುವ ಮೂಲಕ ರಾಜ್ಯದ ಸ್ವಾಯತ್ತತೆಗೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪವನ್ನು ಮಾಡುತ್ತಿದ್ದಾರೆ. ಹೀಗಾಗಿ ದೆಹಲಿ ದೊರೆಗಳ ಜಿದ್ದಿಗೆ ಸಾಂವಿಧಾನಿಕ ಹುದ್ದೆಯ ಇತಿಮಿತಿಗಳ ಚರ್ಚೆ ಮುನ್ನೆಲೆಗೆ ಬಂದಿದೆ.
'ವಿಬಿಜಿ ರಾಮ್ ಜಿ' ಮತ್ತು 'ಎಂಜಿಎನ್‌ಆರ್‌ಇಜಿಎ' ನಡುವಿನ ಈ ಸಂಘರ್ಷ ರಾಜಕೀಯ 'ಬ್ರ್ಯಾಂಡಿಂಗ್' ಯುದ್ಧವಾಗಿ ಪರಿವರ್ತನೆಗೊಂಡಿದೆ. ಬಿಜೆಪಿ ಹೈಕಮಾಂಡ್ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಲೇಪನ ಕೊಟ್ಟು ಲೋಪಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಆಧರೆ, ಕಾಂಗ್ರೆಸ್ ಪ್ರಾದೇಶಿಕ ಅಸ್ಮಿತೆಯ ಮೂಲಕ ತಡೆಯಲು ಯತ್ನಿಸುತ್ತಿದೆ. ಆದಾಗ್ಯೂ, ಕರ್ನಾಟಕದ ಮತದಾರರು ಇದು ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಗಲಾಟೆ ಅಲ್ಲ. ಇದಕ್ಕೆ ಹೈಕಮಾಂಡ್ನ ಸ್ಪಷ್ಟ ಆದೇಶವಿದೆ ಎಂಬುದನ್ನು ಅರಿತುಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ.
ಯಶಸ್ಸಿಗೆ ಸಮರ, ತಡೆ
ವಿಬಿಜಿ ರಾಮ್ ಜಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದನ್ನು ರಾಜ್ಯದಲ್ಲಿ ಜಾರಿಗೆ ತರುವಾಗ ಅದರ ಯಶಸ್ಸಿನ ಶ್ರೇಯಸ್ಸು ಕೇಂದ್ರಕ್ಕೆ ಸಲ್ಲುತ್ತದೆ. ಇದು ಕಾಂಗ್ರೆಸ್‌ಗೆ ರಾಜಕೀಯವಾಗಿ ಪೆಟ್ಟು ಬೀಳಲಿದೆ. ಬಿಜೆಪಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು 'ರಾಮ ರಾಜ್ಯ'ದ ಪರಿಕಲ್ಪನೆಯ ಭಾಗ ಎಂದು ಬಿಂಬಿಸುತ್ತಿದ್ದರೆ, ಕಾಂಗ್ರೆಸ್ ಸರ್ಕಾರವು ರಾಜ್ಯದ ಪಾಲಿನ ತೆರಿಗೆ ಹಣವನ್ನು ಬಳಸಿಕೊಂಡು ಕೇಂದ್ರವು ಕೇವಲ ಪ್ರಚಾರ ಪಡೆಯುತ್ತಿದೆ ಎಂದು ವಾದಿಸುತ್ತಿದೆ.
ವರ್ಷದ ಮೊದಲ ಅಧಿವೇಶನವು ಜಂಟಿ ಅಧಿವೇಶನವಾಗಿರಲಿದ್ದು, ಕಡ್ಡಾಯವಾಗಿ ರಾಜ್ಯಪಾಲರಿಂದಲೇ ಆರಂಭವಾಗಬೇಕು. ರಾಜ್ಯಪಾಲರು ಮಾಡುವ ಭಾಷಣವು ಸರ್ಕಾರದ ನೀತಿ-ನಿರೂಪಣೆಗಳ ಪ್ರತಿಬಿಂಬವಾಗಿರುತ್ತದೆ. ರಾಜ್ಯ ಸರ್ಕಾರವು ಸಿದ್ಧಪಡಿಸಿದ ಭಾಷಣದಲ್ಲಿ ಕೇಂದ್ರದ ಯೋಜನೆಗಳ ವೈಫಲ್ಯ ಅಥವಾ ಅನುದಾನ ತಾರತಮ್ಯದ ಬಗ್ಗೆ ಉಲ್ಲೇಖವಿರುತ್ತದೆ. ರಾಜ್ಯಪಾಲರು ಅದನ್ನು ಓದುವುದು ಸಂಕಷ್ಟ ತರುತ್ತದೆ. ಅದರಲ್ಲಿಯೂ ವಿಬಿಜಿ ರಾಮ್ ಜಿ ಯೋಜನೆಯ ವಿರುದ್ಧ ಭಾಷಣ ಮಾಡಿದರೆ ಕೇಂದ್ರದ ವಿರುದ್ಧ ಮಾತನಾಡಿದಂತಾಗುತ್ತದೆ. ರಾಜ್ಯಪಾಲರು ಕೇಂದ್ರದ ಪ್ರತಿನಿಧಿಯಾಗಿದ್ದು, ಕೇಂದ್ರದಲ್ಲಿನ ತಮ್ಮದೇ ಪಕ್ಷ ಮಾಡಿದ ಸರ್ಕಾರದ ವಿರುದ್ಧ ಮಾತನಾಡುವುದು ಅವರಿಗೆ ನೈತಿಕ ಸಂಕಷ್ಟ ತರುತ್ತದೆ.
ವಿರೋಧಿಸದಿದ್ದರೆ ಉತ್ತರ ಕೊಡಬೇಕಾಗುತ್ತದೆ
ಕಾಂಗ್ರೆಸ್ ಸರ್ಕಾರವು ರಾಜ್ಯಪಾಲರ ಮೂಲಕ ಕೇಂದ್ರವನ್ನು ಟೀಕಿಸದಿದ್ದರೆ, ದೆಹಲಿಯ ತನ್ನ ಹೈಕಮಾಂಡ್‌ಗೆ ಉತ್ತರ ನೀಡಬೇಕಾಗುತ್ತದೆ. ನಾವು ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಬಿಂಬಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಇದು ಅನಿವಾರ್ಯ. ಇನ್ನು, ಬಿಜೆಪಿ ಕೇಂದ್ರ ಯೋಜನೆಗಳನ್ನು ಸಮರ್ಥಿಸಿಕೊಳ್ಳಲೇಬೇಕಾಗಿದೆ. ರಾಜ್ಯಪಾಲರ ಮೂಲಕ ವಿಬಿಜಿ ರಾಮ್ ಜಿ ಯೋಜನೆಯ ಬಗ್ಗೆ ಟೀಕೆ ಮಾಡಿಸುವುದನ್ನು ಕಟುವಾಗಿ ಟೀಕಿಸುವ ಮೂಲಕ ರಾಜ್ಯಪಾಲರ ಬೆನ್ನಿಗೆ ನಿಂತಿದ್ದೇವೆ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ನೀಡಬೇಕಾಗಿದೆ. ಒಂದು ವೇಳೆ ನಿಲ್ಲದಿದ್ದರೆ ಕೇಂದ್ರದ ಹೈಕಮಾಡ್ ಕೆಂಗಣ್ಣಿಗೆ ರಾಜ್ಯ ನಾಯಕರು ಗುರಿಯಾಗಬೇಕಾಗುತ್ತದೆ. ಹೀಗಾಗಿ ರಾಜ್ಯದ ಅಧಿವೇಶನವು ದೆಹಲಿಯ ಎರಡು ಪ್ರಬಲ ಪಕ್ಷಗಳ ನಡುವಿನ ಸಮರಕ್ಕೆ ಸಾಕ್ಷಿಯಾಗಿದೆ ಎಂದು ಹೇಳಲಾಗಿದೆ.
ಗ್ಯಾರಂಟಿಗೆ ಸೆಡ್ಡು?
ಬಿಜೆಪಿ ಹೈಕಮಾಂಡ್, ರಾಜ್ಯದಲ್ಲಿ ಕಾಂಗ್ರೆಸ್‌ನ 'ಗ್ಯಾರಂಟಿ' ಯೋಜನೆಗಳನ್ನು ಎದುರಿಸಲು ಕೇಂದ್ರದ ಯೋಜನೆಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ರಾಜ್ಯ ಬಿಜೆಪಿ ನಾಯಕರು ಕೇವಲ ಈ ಅಸ್ತ್ರವನ್ನು ಬಳಸುವ ಸೈನಿಕರಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಸಹ ಕೇಂದ್ರದ ಯೋಜನೆಗಳ ವಿರುದ್ಧ ಸಮರ ಸಾರಿದ್ದು, ಯಾವುದೇ ಕಾರಣಕ್ಕೂ ಕೇಂದ್ರದ ಆಧಿಪತ್ಯಕ್ಕೆ ಮಣಿಯಬಾರದು ಎಂಬ ಸಂದೇಶವನ್ನು ರವಾನಿಸಿದೆ. ಇದೇ ಕಾರಣಕ್ಕಾಗಿ ಕೇಂದ್ರದ ಯೋಜನೆಗಳಿಗೆ ಪರ್ಯಾಯವಾಗಿ ರಾಜ್ಯದ ಅಸ್ಮಿತೆ ಮತ್ತು ಸ್ಥಳೀಯ ಯೋಜನೆಗಳನ್ನು ಮುನ್ನೆಲೆಗೆ ತರಲಾಗಿದೆ ಎಂದು ಹೇಳಲಾಗಿದೆ. ಅಧಿವೇಶನಕ್ಕೂ ಮುನ್ನ ರಾಜ್ಯಪಾಲರು ವಿಬಿಜಿ ರಾಮ್ ಜಿ ಯೋಜನೆ ಕುರಿತು ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರವು ಮನವೊಲಿಕೆ ಮಾಡಿದರೂ ರಾಜ್ಯಪಾಲರು ಮಣಿಯಲಿಲ್ಲ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವು ರಾಜ್ಯಪಾಲರ ಒತ್ತಾಯಕ್ಕೆ ಸೊಪ್ಪು ಹಾಕದೆ ವಿಬಿಜಿ ರಾಮ್ ಜಿ ಯೋಜನೆಯನ್ನು ತೆಗೆಯಲು ನಿರಾಕರಿಸಿತು. ಇದು ಅಧೀವೇಶನದ ಮೇಲೆ ಪರಿಣಾಮ ಬೀರಿತು.
ಕೇಂದ್ರವು ತನ್ನ ಯೋಜನೆಗಳಿಗೆ 'ರಾಮ್' ಅಥವಾ 'ವಿಕಸಿತ ಭಾರತ' ಎಂಬ ಹೆಸರಿಡುವ ಮೂಲಕ ಭಾವನಾತ್ಮಕ ಮತ್ತು ರಾಷ್ಟ್ರೀಯತೆಯನ್ನು ಬಿಂಬಿಸಿದರೆ, ಇದನ್ನು ತಡೆಯಲು ಕಾಂಗ್ರೆಸ್ ಸರ್ಕಾರವು ಇದು ಕನ್ನಡಿಗರ ತೆರಿಗೆ ಹಣ ಎಂಬ ಪ್ರಾದೇಶಿಕ ಅಸ್ಮಿತೆ ಎಂದು ಬಿಂಬಿಸಿದೆ. ವಿಬಿಜಿ ರಾಮ್ ಜಿ ಯೋಜನೆಯಡಿ ಬರುವ ಅನುದಾನವನ್ನು ರಾಜ್ಯ ಸರ್ಕಾರವು ತನ್ನದೇ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬುದು ಬಿಜೆಪಿಯ ಆರೋಪ. ಇದಕ್ಕೆ ಪ್ರತಿಯಾಗಿ, ಕೇಂದ್ರವು ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಮತ್ತು ತೆರಿಗೆ ಪಾಲನ್ನು ನೀಡದೆ ಸತಾಯಿಸುತ್ತಿದೆ ಎಂಬುದು ಕಾಂಗ್ರೆಸ್‌ನ ತಿರುಗೇಟು ಆಗಿದೆ. ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿ ನಾಯಕರು ತಮ್ಮ ಹೈಕಮಾಂಡ್ ಪರವಾಗಿ ನಿಂತಿದ್ದರೆ, ಆಡಳಿತ ಪಕ್ಷದವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಪರವಾಗಿ ನಿಂತಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕೇಂದ್ರದ ವಿರುದ್ಧ ರಾಜ್ಯಪಾಲರನ್ನು ಬಳಸಿಕೊಂಡರೆ, ಬಿಜೆಪಿಗೆ ತನ್ನ ರಾಷ್ಟ್ರೀಯ ನಾಯಕತ್ವದ ವರ್ಚಸ್ಸನ್ನು ರಾಜ್ಯದಲ್ಲಿ ಸ್ಥಾಪಿಸಲು ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಳ್ಳಬೇಕಿದೆ. ಕಾಂಗ್ರೆಸ್, ಬಿಜೆಪಿ ಪಕ್ಷದ ಹೈಕಮಾಡ್ ನಡುವಿನ ಕಿತ್ತಾಟದಲ್ಲಿ ರಾಜ್ಯಪಾಲರ ಹುದ್ದೆಯು ಅಗ್ನಿಪರೀಕ್ಷೆಗೊಳಗಾಗಿದೆ.

