
ಜಂಟಿ ಅಧಿವೇಶನ ಭಾಷಣ; ಕಾನೂನು ಸಮರದಿಂದ ತಪ್ಪಿಸಿಕೊಂಡರೇ ರಾಜ್ಯಪಾಲರು?
ಸಂವಿಧಾನದ 176(1) ನೇ ವಿಧಿಯನ್ವಯ ರಾಜ್ಯಪಾಲರು ಅಧಿವೇಶನ ಉದ್ದೇಶಿಸಿ ಮಾತನಾಡಬೇಕು. ತಮಿಳುನಾಡು ಮತ್ತು ಕೇರಳದಲ್ಲಿ ರಾಜ್ಯಪಾಲರು ಮಾತನಾಡಿದರೂ ಕೆಲ ವಿಷಯಗಳನ್ನು ಬಿಟ್ಟಿದ್ದರು.
ಇಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸುದೀರ್ಘ ಭಾಷಣ ಮಾಡಬೇಕಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು, ಕೇವಲ ಚುಟುಕು ಭಾಷಣ ಮಾಡಿ ಹೊರನಡೆಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಶೀತಲ ಸಮರ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ, ಅಧಿವೇಶನಕ್ಕೆ ಗೈರಾಗುವ ಬದಲು ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾವನ್ನು ಮಾತ್ರ ಓದಿ ರಾಜ್ಯಪಾಲರು ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಪೂರೈಸಿದರು. ಸರ್ಕಾರದ ಸಾಧನೆಗಳ ದೊಡ್ಡ ಪಟ್ಟಿಯನ್ನೇ ಓದದೆ ಜಾಣ್ಮೆಯಿಂದ ಜಾರಿಕೊಂಡ ರಾಜ್ಯಪಾಲರ ಈ ನಡೆ, ಕಾನೂನು ಸಮರದಿಂದ ತಪ್ಪಿಸಿಕೊಳ್ಳುವ ತಂತ್ರವೇ ಎಂಬ ಚರ್ಚೆ ಈಗ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ.
ಕಾನೂನು ಕ್ರಮ ಸಾಧ್ಯವಿಲ್ಲವೇ?
ಸಂವಿಧಾನದ 175 ನೇ ವಿಧಿಯನ್ವಯ ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಬರಬೇಕು. 176(1) ನೇ ವಿಧಿಯನ್ವಯ ರಾಜ್ಯಪಾಲರು ಅಧಿವೇಶನ ಉದ್ದೇಶಿಸಿ ಮಾತನಾಡಬೇಕು. ಸಂವಿಧಾನದ ನಿಯಮದಂತೆ ರಾಜ್ಯಪಾಲರು ನಡೆದುಕೊಂಡಿದ್ದು, ಅವರ ವಿರುದ್ಧ ಯಾವುದೇ ಕಾನೂನು ಸಮರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾನೂನು ಸೂಕ್ಷ್ಮತೆಗಳನ್ನು ತಿಳಿದುಕೊಂಡೇ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಚೆಕ್‌ಮೇಟ್ ನೀಡಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯಪಾಲರು ಮೊದಲ ಪ್ಯಾರಾದಲ್ಲಿ ಎಲ್ಲರನ್ನು ಸ್ವಾಗತಿಸಿದ ಬಳಿಕ ಕೊನೆಯ ಪ್ಯಾರಾದಲ್ಲಿ "ನನ್ನ ಸರ್ಕಾರವು ರಾಜ್ಯದ ಅರ್ಥಿಕ, ಸಾಮಾಜಿಕ, ಭೌತಿಕ ಅಭಿವೃದ್ಧಿಯನ್ನು ದ್ವಿಗುಣ ಮಾಡಲು ಬದ್ಧವಾಗಿದೆ. ಜೈ ಹಿಂದ್, ಜೈ ಕರ್ನಾಟಕ" ಎಂದು ಹೇಳಿ ಹೊರನಡೆದರು. ರಾಜ್ಯಪಾಲರು ಪೀಠದಿಂದ ಕೆಳಗಿಳಿಯುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದರು.
ಸಂವಿಧಾನದ 176(1) ನೇ ವಿಧಿಯನ್ವಯ ರಾಜ್ಯಪಾಲರು ಅಧಿವೇಶನ ಉದ್ದೇಶಿಸಿ ಮಾತನಾಡಬೇಕು. ತಮಿಳುನಾಡು ಮತ್ತು ಕೇರಳದಲ್ಲಿ ರಾಜ್ಯಪಾಲರು ಮಾತನಾಡಿದರೂ ಕೆಲ ವಿಷಯಗಳನ್ನು ಬಿಟ್ಟಿದ್ದರು.
ಜಂಟಿ ಅಧಿವೇಶನ ಭಾಷಣದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ ವಿಬಿ ಜಿ ರಾಮ್ ಜಿ ಕಾಯ್ದೆಯ ಕುರಿತ ಅಂಶಗಳನ್ನು ತೆಗೆದುಹಾಕುವಂತೆ ರಾಜ್ಯಪಾಲರು ಸೂಚಿಸಿದರೂ ಸರ್ಕಾರ ಒಪ್ಪಿಕೊಂಡಿರಲಿಲ್ಲ. ಮೊದಲಿಗೆ ಅಧಿವೇಶನಕ್ಕೆ ಬಾರದಿರಲು ರಾಜ್ಯಪಾಲರು ತೀರ್ಮಾನಿಸಿದ್ದರು. ನಂತರ ಸಚಿವರ ನಿಯೋಗ ಹಾಗೂ ಕಾನೂನು ಸಲಹೆಗಾರರು ಮನವೊಲಿಸಿದ ನಂತರ ಅಧಿವೇಶನಕ್ಕೆ ಬರಲು ಥಾವರ್‌ಚಂದ್ ಗೆಹ್ಲೋಟ್ ಒಪ್ಪಿಕೊಂಡಿದ್ದರು. ಆದರೆ, ಇಂದು ಜಂಟಿ ಅಧಿವೇಶನಕ್ಕೆ ಬಂದ ರಾಜ್ಯಪಾಲರು ಕೆಲ ಸೆಕೆಂಡುಗಳಲ್ಲೇ ಭಾಷಣ ಕೆಲ ಪ್ಯಾರಾ ಓದಿ ವಾಪಸಾದರು. ಇದು ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿತು.
ಪೂರ್ಣ ಭಾಷಣವೆಂದೇ ಪರಿಗಣನೆ
ರಾಜ್ಯಪಾಲರು ಮಾಡಿದ ಚುಟುಕು ಭಾಷಣವನ್ನು ಪೂರ್ಣ ಭಾಷಣವೆಂದೇ ಪರಿಗಣಿಸಲಾಗಿದೆ. ಸ್ಪೀಕರ್ ಯು.ಟಿ. ಖಾದರ್ ಸೂಚನೆ ಮೇರೆಗೆ ವಿಧಾನಸಭೆ ಕಾರ್ಯದರ್ಶಿ ಅವರು ಭಾಷಣವನ್ನು ಮಂಡಿಸಿದರು.
ರಾಜ್ಯಪಾಲರ ಮಾಡಿದ ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾ ಆಧರಿಸಿ ಮಂಡನೆ ಎಂದು ತೀರ್ಮಾನಿಸಲಾಗಿದೆ. ಈ ಭಾಷಣದ ಮೇಲೆ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.
ರಾಷ್ಟ್ರಗೀತೆಗೆ ಅಪಮಾನ ಆರೋಪ
ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್ ಅವರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರು ಆರೋಪಿಸಿದ್ದಾರೆ. ರಾಜ್ಯಪಾಲರು ಕೂಡಲೇ ಸದನದ ಕ್ಷಮೆ ಕೇಳಬೇಕು. ರಾಷ್ಟ್ರಗೀತೆಗೆ ಯಾರೇ ಅಪಮಾನ ಮಾಡಿದರೂ ಸಹಿಸುವುದಿಲ್ಲ. ಅಧಿವೇಶನಕ್ಕೆ ಬಂದ ಅವರು, ಓಡಿ ಹೋಗುವ ರೀತಿ ನಡೆದುಕೊಂಡಿದ್ದಾರೆ. ಅವರು ಸದನದ ಕ್ಷಮೆ ಕೇಳದೇ ಹೋದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ರಾಷ್ಟ್ರಗೀತೆಗೆ ಅಪಮಾನ ಮಾಡಿದ ಪ್ರಸಂಗವನ್ನು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಿದ್ದು, ವಿರೋಧಿ ಭಾವನೆ ಹೊಂದಿದ್ದಾರೆ. ಈ ಬಗ್ಗೆ ಸ್ಪೀಕರ್ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ರಾಷ್ಟ್ರಗೀತೆಗೆ ಅಪಮಾನ ಮಾಡಿದರೆಂಬ ಕಾಂಗ್ರೆಸ್ ಸದಸ್ಯರ ಆರೋಪವು ಸದನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.

