
Karnataka Assembly live:ಸಿದ್ದರಾಮಯ್ಯ ಕ್ಷಮೆ ಕೇಳಲಿ: ಬಿ.ವೈ. ವಿಜಯೇಂದ್ರ ಆಗ್ರಹ
ಕೇಂದ್ರ ಸರ್ಕಾರವು ನರೇಗಾ (MGNREGA) ಯೋಜನೆಯನ್ನು ರದ್ದುಗೊಳಿಸಿ 'ವಿಬಿ ಜಿ ರಾಮ್ ಜಿ' ಎಂಬ ಹೊಸ ಕಾಯ್ದೆ ಜಾರಿಗೆ ತಂದಿರುವುದನ್ನು ವಿರೋಧಿಸಲು ಕರೆದಿರುವ ವಿಶೇಷ ಜಂಟಿ ಅಧಿವೇಶನವು ಇಂದು ನಡೆಯುತ್ತಿದೆ.
ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡುವಿನ ಸಂಘರ್ಷ ಹೊಸ ತಿರುವು ಪಡೆದುಕೊಂಡಿದೆ. ರಾಜ್ಯ ಸರ್ಕಾರದ ಅಧಿಕೃತ ಆಹ್ವಾನದಂತೆ ಜಂಟಿ ಅಧಿವೇಶನಕ್ಕೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಚಿವರು ಬರ ಮಾಡಿಕೊಂಡರು. ಆದರೆ, ರಾಜ್ಯಪಾಲರು ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾವನ್ನಷ್ಟೇ ಓದಿ ಹೊರ ನಡೆದದ್ದು ಆಡಳಿತ ಪಕ್ಷವನ್ನು ಮುಜುಗರಕ್ಕೀಡು ಮಾಡಿತಲ್ಲದೇ ಆಕ್ರೋಶಕ್ಕೂ ಕಾರಣವಾಯಿತು.
ಆಡಳಿತ ಪಕ್ಷದ ಸದಸ್ಯರ ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದರು. ಮಾರ್ಷಲ್‌ಗಳ ಭದ್ರತೆಯಲ್ಲಿ ರಾಜ್ಯಪಾಲರು ಅಧಿವೇಶನದಿಂದ ಹೊರನಡೆದರು. ವಿರೋಧ ಪಕ್ಷಗಳ ಸದಸ್ಯರು ಕೂಡ ಜಂಟಿ ಅಧಿವೇಶನದಿಂದ ಹೊರ ನಡೆದರು. ರಾಜ್ಯಪಾಲರ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಭಾಷಣದ ಮೊದಲ, ಕೊನೆ ಪ್ಯಾರಾ ಓದಿದ ಗೆಹ್ಲೋಟ್
ಅಧಿವೇಶನಕ್ಕೆ ಬಂದ ರಾಜ್ಯಪಾಲರು ಕೆಲ ಸೆಕೆಂಡುಗಳಲ್ಲೇ ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾ ಓದಿ ಹೊರನಡೆದರು. ಸರ್ಕಾರದ ಭಾಷಣದ 11ನೇ ಪ್ಯಾರಾದಲ್ಲಿರುವ 'ಜಿ ರಾಮ್ ಜಿ' (G RAM G) ಯೋಜನೆ ಕುರಿತು ರಾಜ್ಯಪಾಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಭಾಗವನ್ನು ಓದಬಾರದೆಂದು ನಿರ್ಧರಿಸಿದ್ದರು. ಇದಕ್ಕೂ ಮುನ್ನ ಸರ್ಕಾರದ ಪರವಾಗಿ ಎ.ಎಸ್. ಪೊನ್ನಣ್ಣ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಮನವೊಲಿಸಲು ಯತ್ನಿಸಿದರೂ, ಆಕ್ಷೇಪಿತ ಸಾಲುಗಳನ್ನು ತೆಗೆಯದಿರಲು ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು.
ಸಂವಿಧಾನದ ವಿಧಿ 175ರ ಪ್ರಕಾರ ರಾಜ್ಯಪಾಲರು ಅಧಿವೇಶನಕ್ಕೆ ಬರುವುದು ಕಡ್ಡಾಯ. ಆದರೆ ವಿಧಿ 176ರ ಅಡಿಯಲ್ಲಿ ಭಾಷಣದ ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸುವ ಅಧಿಕಾರ ಅವರಿಗಿದೆ. ಹೀಗಾಗಿ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ನಡೆದಂತೆ ರಾಜ್ಯಪಾಲರು ರಾಜ್ಯ ಸರ್ಕಾರದ ಭಾಷಣ ಓದಲು ಹಿಂದೇಟು ಹಾಕುವ ಸಾಧ್ಯತೆ ಇದೆ.
11ನೇ ಪ್ಯಾರಾದಲ್ಲೇನಿದೆ?
ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಭಾಷಣದ ಸಂಘರ್ಷದ ಕುರಿತು ಕಾನೂನು ಸಚಿವ ಎಚ್.ಕೆ. ಪಾಟೀಲ್ ಪ್ರತಿಕ್ರಿಯಿಸಿದ್ದು, ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಬರುವುದಿಲ್ಲ ಎಂದು ನಮಗೆ ಇದುವರೆಗೂ ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಸಂವಿಧಾನದ ಪ್ರಕಾರ ರಾಜ್ಯಪಾಲರು ಅಧಿವೇಶನಕ್ಕೆ ಬರುವುದು ಕಡ್ಡಾಯವಾಗಿದ್ದು, ಸರ್ಕಾರ ಅವರಿಗೆ ಈ ಬಗ್ಗೆ ವಿನಂತಿ ಮಾಡಲಿದೆ" ಎಂದು ತಿಳಿಸಿದರು.
ಕಾನೂನು ಹೋರಾಟದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಪ್ರಸ್ತುತ ಕಾನೂನು ಹೋರಾಟ ಮಾಡುವಂತಹ ಅನಿವಾರ್ಯ ಪರಿಸ್ಥಿತಿ ಬಂದಿಲ್ಲ ಮತ್ತು ಅಂತಹ ಸ್ಥಿತಿ ಉದ್ಭವಿಸುವುದಿಲ್ಲ ಎನ್ನುವ ನಂಬಿಕೆಯಿದೆ. ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೆ ಮುಂದೆ ನೋಡೋಣ" ಎಂದು ಸೂಚ್ಯವಾಗಿ ಹೇಳಿದರು. ಭಾಷಣದ 11ನೇ ಪ್ಯಾರಾದಲ್ಲಿನ 'ಜಿ ರಾಮ್ ಜಿ' ಯೋಜನೆ ಮಾತ್ರವಲ್ಲದೆ, ಕೇಂದ್ರದ ನಿಲುವು, ರಾಜ್ಯಕ್ಕಾದ ಅನ್ಯಾಯ ಹಾಗೂ ಆಗಬೇಕಿರುವ ಕೆಲಸಗಳ ಕುರಿತೂ ಉಲ್ಲೇಖಗಳಿವೆ. ಇಂತಹ ನೂರು ಪ್ಯಾರಾಗಳು ಭಾಷಣದಲ್ಲಿ ಇರಬಹುದು ಎಂದು ಅವರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
Live Updates
- 22 Jan 2026 2:38 PM IST
ರಾಜ್ಯಪಾಲರ ನಡೆ ಸರಿಯಾಗಿದೆ-ಸಿದ್ದರಾಮಯ್ಯ ಕ್ಷಮೆ ಕೇಳಲಿ: ಬಿ.ವೈ. ವಿಜಯೇಂದ್ರ
ಕರ್ನಾಟಕ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಪೂರ್ಣ ಭಾಷಣ ಮಾಡದೆ ಹೊರನಡೆದ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. "ರಾಜ್ಯಪಾಲರು ಇಂದು ಮಾಡಿದ್ದು ಸರಿಯಾಗಿದೆ, ಅವರು ಅತ್ಯಂತ ಸೂಕ್ತ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ" ಎಂದು ವಿಜಯೇಂದ್ರ ಹೇಳಿದ್ದಾರೆ.
ಇದೇ ವೇಳೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಆಡಳಿತ ಪಕ್ಷದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ನಡೆಸಿಕೊಂಡ ರೀತಿ ಸರಿಯಲ್ಲ. ಇದು ರಾಜ್ಯಪಾಲರಿಗೆ ಮಾಡಿದ ಅವಮಾನ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಕ್ಷಮೆ ಯಾಚಿಸಬೇಕು" ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ರಾಜ್ಯಪಾಲರ ವಿರುದ್ಧ ಅಸಭ್ಯವಾಗಿ ವರ್ತಿಸಿದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
- 22 Jan 2026 1:28 PM IST
ರಾಜ್ಯಪಾಲರ ನಡೆ ಕನ್ನಡಿಗರಿಗೆ ಮಾಡಿದ ಘೋರ ಅಪಮಾನ: ಸಚಿವ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲ!
ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯಪಾಲರ ನಡವಳಿಕೆ ಹಾಗೂ ಬಿಜೆಪಿಯ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಕನ್ನಡಿಗರನ್ನು ಅವಮಾನಿಸುವ ಪ್ರಕ್ರಿಯೆಯನ್ನು ಮುಂದುವರಿಸಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಸಾಂಸ್ಕೃತಿಕ, ಆರ್ಥಿಕ ಮತ್ತು ಆಡಳಿತಾತ್ಮಕವಾಗಿ ಕರ್ನಾಟಕವನ್ನು ಕಡೆಗಣಿಸಿ ಶೋಷಿಸುತ್ತಿದ್ದ ಬಿಜೆಪಿ, ಈಗ ರಾಜ್ಯಪಾಲರ ಮೂಲಕ ಕನ್ನಡಿಗರಿಗೆ ಮತ್ತೊಂದು ಅವಮಾನ ಎಸಗಿದೆ ಎಂದು ಅವರು ಕಿಡಿಕಾರಿದ್ದಾರೆ.
ರಾಷ್ಟ್ರಗೀತೆ ನುಡಿಸುವವರೆಗೂ ಕಾಯದೆ ಶಿಷ್ಟಾಚಾರವನ್ನು ಬದಿಗೊತ್ತಿ ಹೊರನಡೆದ ರಾಜ್ಯಪಾಲರ ನಡೆ ರಾಷ್ಟ್ರಗೀತೆ ಮತ್ತು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದ್ದು, ಈ ಮೂಲಕ ಬಿಜೆಪಿ ರಾಷ್ಟ್ರಗೀತೆ ಹಾಗೂ ಸಂವಿಧಾನ ವಿರೋಧಿ ಎನ್ನುವುದು ಜಗಜ್ಜಾಹೀರಾಗಿದೆ ಎಂದು ಅವರು ಹೇಳಿದ್ದಾರೆ. ಕನ್ನಡಿಗರನ್ನು ಉದ್ದೇಶಿಸಿ ಪೂರ್ಣ ಭಾಷಣ ಮಾಡದಷ್ಟು ಅಸಹನೆ ತೋರಿರುವ ರಾಜ್ಯಪಾಲರು ಬಿಜೆಪಿಯ ದರ್ಪದ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿರುವ ಖರ್ಗೆ, ಸರ್ಕಾರದ ಭಾಷಣವನ್ನು ತಿರಸ್ಕರಿಸಿ ಕೇವಲ ನಾಲ್ಕು ಸಾಲುಗಳನ್ನು ಅಸಡ್ಡೆಯಿಂದ ಓದಿರುವುದು ಕನ್ನಡಿಗರಿಗೆ ಎಸಗಿದ ಘೋರ ಅವಮಾನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಹೊಸಕುತ್ತಿರುವ ಬಿಜೆಪಿಗೆ ರಾಜ್ಯದ ಜನತೆ ಖಂಡಿತ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
ಬಿಜೆಪಿ ಕನ್ನಡಿಗರನ್ನು ಅವಮಾನಿಸುವ ಪ್ರಕ್ರಿಯೆ ಮುಂದುವರೆದಿದೆ,
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 22, 2026
ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಕನ್ನಡಿಗರನ್ನು ಮತ್ತು ಕರ್ನಾಟಕವನ್ನು ಕಡೆಗಣಿಸಿ, ಶೋಷಿಸಿದ್ದ ಬಿಜೆಪಿ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರಾಜ್ಯಪಾಲರ ಮೂಲಕವೇ ಕನ್ನಡಿಗರನ್ನು ಅವಮಾನಿಸಿದೆ.
ರಾಷ್ಟ್ರಗೀತೆ ನುಡಿಸುವವರೆಗೂ ಕಾಯದೆ ಎದ್ದು ಹೊರಟ… - 22 Jan 2026 12:44 PM IST
ರಾಜ್ಯಪಾಲರಿಗೆ ಅಡ್ಡಿಪಡಿಸಿದ ಶಾಸಕರ ವಿರುದ್ಧ ಕ್ರಮಕ್ಕೆ ಸ್ಪೀಕರ್‌ಗೆ ಆರ್. ಅಶೋಕ್ ಪತ್ರ
ರಾಜ್ಯಪಾಲರು ಜಂಟಿ ಸದನವನ್ನುದ್ದೇಶಿಸಿ ಭಾಷಣ ಮುಗಿಸಿ ನಿರ್ಗಮಿಸುವ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ಆಡಳಿತ ಪಕ್ಷದ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರುಗಳು ಅವರನ್ನು ಅಡ್ಡಗಟ್ಟಿ, ನೂಕುನುಗ್ಗಲು ಉಂಟು ಮಾಡಿ ರಾಜ್ಯಪಾಲರಿಗೆ ಅಗೌರವ ತೋರಿದ್ದು ಅವರ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.
ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ-27ರಂತೆ "ಸಂವಿಧಾನದ 175 ಅಥವಾ 176ನೇ ಅನುಚ್ಛೇದದ ಮೇರೆಗೆ ವಿಧಾನಮಂಡಲದ ಮೇರೆಗೆ ಉಭಯ ಸದನಗಳು ಸಭೆ ಸೇರುವಾಗ ಅಥವಾ 175ನೇ ಅನುಚ್ಛೇದದ ಮೇರಗೆ ವಿಧಾನಸಭಾ ಸದಸ್ಯರು ಮಾತ್ರ ಸಭೆ ಸೇರಿರುವಾಗ, ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಯಾರೇ ಸದಸ್ಯರು ಯಾವುದೇ ಭಾಷಣ ಮಾಡುವ ಮೂಲಕ ಅಥವಾ ಯಾವುದೇ ಕ್ರಿಯಾಲೋಪವೆತ್ತಿ ರಾಜ್ಯಪಾಲರ ಭಾಷಣಕ್ಕೆ ಮುಂಚೆಯಾಗಲಿ ಅಥವಾ ತರುವಾಯವಾಗಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಮಾಡುವುದನ್ನು ಸದನದ ಆದೇಶದ ಉಲ್ಲಂಘನೆಯೆಂದು ಪರಿಗಣಿಸಿ ಕೂಡಲೇ ಶಿಸ್ತು ಕ್ರಮ ಜರುಗಿಸುವಂತೆ ಕೋರುತ್ತೇನೆ" ಎಂದು ಸ್ಪೀಕರ್ ಯು.ಟಿ. ಖಾದರ್‌ಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

- 22 Jan 2026 12:28 PM IST
ಹೆಚ್.ಕೆ. ಪಾಟೀಲ್ Vs ಆರ್. ಅಶೋಕ್: ಸಂತಾಪ ಸೂಚನೆ ವೇಳೆ ಸದನದಲ್ಲಿ ಗದ್ದಲ!
ವಿಧಾನಸಭೆ ಕಲಾಪದಲ್ಲಿ ಸಂತಾಪ ಸೂಚನಾ ನಿರ್ಣಯದ ವೇಳೆ ಸಚಿವ ಎಚ್.ಕೆ. ಪಾಟೀಲ್ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಅಧಿವೇಶನದ ಆರಂಭದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಅತ್ಯಂತ ನೋವಿನಿಂದ ಮಾತನಾಡಲು ಬಯಸುತ್ತೇನೆ ಎಂದು ಎಚ್.ಕೆ. ಪಾಟೀಲ್ ಅವರು ರಾಜ್ಯಪಾಲರ ಭಾಷಣದ ವಿಚಾರವನ್ನು ಪ್ರಸ್ತಾಪಿಸಲು ಮುಂದಾದಾಗ, ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಆರ್. ಅಶೋಕ್ ಅವರು, ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲು ಸ್ಪೀಕರ್ ಅವರು ಅವಕಾಶ ನೀಡಿದ್ದಾರೆ, ಹೀಗಾಗಿ ಈ ಸಮಯದಲ್ಲಿ ಕೇವಲ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಿರಿ ಎಂದು ಎಚ್.ಕೆ. ಪಾಟೀಲ್ ಅವರಿಗೆ ಟಾಂಗ್ ನೀಡಿದರು. ಸಂತಾಪ ಸೂಚಿಸುವ ಗಂಭೀರ ಸಂದರ್ಭದಲ್ಲಿ ರಾಜಕೀಯ ವಿಚಾರ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಅಶೋಕ್ ಪಟ್ಟು ಹಿಡಿದಿದ್ದರಿಂದ ಸದನದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
- 22 Jan 2026 12:21 PM IST
ರಾಜ್ಯಪಾಲರಿಗೆ ಅಗೌರವ ತೋರಿದ ಕಾಂಗ್ರೆಸ್ ಶಾಸಕರು; ಕ್ರಮಕ್ಕೆ ಆಗ್ರಹಿಸಿ ಪ್ರತಿಪಕ್ಷಗಳ ಭಾರಿ ಹಂಗಾಮಾ!
ವಿಧಾನಸಭೆಯ ಕಲಾಪ ಪುನರಾರಂಭಗೊಳ್ಳುತ್ತಿದ್ದಂತೆಯೇ ಸದನದಲ್ಲಿ ಭಾರಿ ಗದ್ದಲ ಉಂಟಾಗಿದ್ದು, ರಾಜ್ಯಪಾಲರಿಗೆ ಅಗೌರವ ತೋರಿದ ಆಡಳಿತ ಪಕ್ಷದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡದೆ ರಾಜ್ಯಪಾಲರು ಹೊರನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಅವರನ್ನು ಅಡ್ಡಗಟ್ಟಿ ಸರ್ಕಾರದ ಪರ ಘೋಷಣೆಗಳನ್ನು ಕೂಗಿದ್ದನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ತೀವ್ರವಾಗಿ ಖಂಡಿಸಿದರು. ಈ ವರ್ತನೆಯು ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯರು, ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಕಲಾಪದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
- 22 Jan 2026 11:57 AM IST
ಕೇಂದ್ರದ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಬೇರೆ ಭಾಷಣ: ಸಿಎಂ
ರಾಜ್ಯಪಾಲರಿಂದ ಸಂವಿಧಾನದ ಉಲ್ಲಂಘನೆಯಾಗಿದ್ದು, ಜನಪ್ರತಿನಿಧಿಗಳಿಗೆ ಅಪಮಾನ ಮಾಡಿದ್ದಾರೆ. ಪಕ್ಷ ಮತ್ತು ಸರ್ಕಾರದಿಂದ ಇದನ್ನು ಪ್ರತಿಭಟಿಸುತ್ತೇವೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೇಂದ್ರದ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಬೇರೆ ಭಾಷಣ ಓದಿಸಲಾಗಿದೆ. ರಾಜ್ಯಪಾಲರು ತಮ್ಮ ಜವಾಬ್ದಾರಿ ನಿರ್ವಹಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ಸರ್ಕಾರ ಬಂದಾಗ ಜಂಟಿ ಅಧಿವೇಶನ ಉದ್ದೇಶಿ ಭಾಷಣ ಮಾಡುವುದು ಸಂವಿಧಾನದ ರೀತಿ ರಾಜ್ಯಪಾಲ ಕರ್ತವ್ಯ, ರಾಜ್ಯಪಾಲರು ತಯಾರಿಸಿರುವ ಭಾಷಣ ಓದುವಂತಿಲ್ಲ. ಸಚಿವ ಸಂಪುಟ ಭಾಷಣ ತಯಾರು ಮಾಡುತ್ತದೆಯೋ ಅದನ್ನ ಓದಲೇಬೇಕು ಎಂದು ತಿಳಿಸಿದರು.

- 22 Jan 2026 11:40 AM IST
ರಾಜ್ಯಪಾಲರ ನಡೆಗೆ ಈಶ್ವರ ಖಂಡ್ರೆ ಅಸಮಾಧಾನ
ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು, ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ ಭಾಷಣವನ್ನು ಓದಬೇಕೇ ಹೊರತು ತಾವೇ ಸಿದ್ಧಮಾಡಿಕೊಂಡ ಭಾಷಣ ಓದಲು ಅವಕಾಶವಿಲ್ಲ. ರಾಜ್ಯಪಾಲರ ಇಂದಿನ ನಡೆ ಸೂಕ್ತವಲ್ಲ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರ್ಷದ ಪ್ರಥಮ ಅಧಿವೇಶನದಲ್ಲಿ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡುವುದು ಸಂಪ್ರದಾಯ ಮತ್ತು ಇದು ರಾಜ್ಯಪಾಲರ ಸಂವಿಧಾನಾತ್ಮಕ ಕರ್ತವ್ಯವೂ ಆಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿ ಆಗಿರುವುದಿಲ್ಲ. ಆದರೆ, ಅವರು ಇಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿ ಸಂವಿಧಾನದ ವಿಧಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಘಟನೆ ನಡೆದಿರುವುದು ನೋವು ತಂದಿದೆ. ಯುಪಿಎ ಸರ್ಕಾರ ರಾಷ್ಟ್ರಪಿತ ಮಹಾತ್ಮಾಗಾಂಧೀ ಅವರ ಹೆಸರಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕಾಯ್ದೆ ರೂಪದಲ್ಲಿ ಜಾರಿಗೆ ತಂದಿತ್ತು. ಇದರ ಹೆಸರು ಬದಲಾಯಿಸುವ ಅಗತ್ಯ ಕೇಂದ್ರ ಸರ್ಕಾರಕ್ಕೆ ಇರಲಿಲ್ಲ. ಆದರೂ ರಾಜಕೀಯ ಲಾಭಕ್ಕಾಗಿ ಈ ರೀತಿ ಮಹಾತ್ಮಾ ಗಾಂಧೀ ಹೆಸರನ್ನೇ ತೆಗೆದಿರುವ ಕ್ರಮದ ವಿರುದ್ಧ ರಾಜ್ಯ ಸರ್ಕಾರ ಅಧಿವೇಶದಲ್ಲಿ ಚರ್ಚಿಸುವುದು, ಖಂಡಿಸುವುದು ಸರಿಯಾದುದಾಗಿದೆ. ಆದರೆ ಗೌರವಾನ್ವಿತ ರಾಜ್ಯಪಾಲರ ನಡೆ ಸೂಕ್ತವಾಗಿರುವುದಿಲ್ಲ ಎಂದೂ ಅವರು ಹೇಳಿದ್ದಾರೆ.
- 22 Jan 2026 11:39 AM IST
ರಾಜ್ಯಪಾಲರಿಗೆ ಆಡಳಿತ ಪಕ್ಷದ ಶಾಸಕರಿಂದ ಅಡ್ಡಿ : ವಿಪಕ್ಷ ಕಿಡಿ
ಜಂಟಿ ಅಧಿವೇಶನಕ್ಕೆ ಆಗಮಿಸಿ ಕೇವಲ ಒಂದು ಸಾಲು ಭಾಷಣ ಓದಿ ವಾಪಸ್ ಆಗುವಾಗ ವಿಧಾನಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಶಾಸಕರು ಅಡ್ಡಿಪಡಿಸಿದ್ದಾರೆ ಎಂದು ವಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕಿದೆ.
- 22 Jan 2026 11:35 AM IST
ಆರ್‌ಎಸ್‌ಎಸ್, ಪ್ರಧಾನಿ ಮೋದಿ ನಿರ್ದೇಶನದಂತೆ ರಾಜ್ಯಪಾಲರು ಕರ್ತವ್ಯ
ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದಂತೆ ರಾಜ್ಯಪಾಲರು ನಡೆದಕೊಂಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
- 22 Jan 2026 11:31 AM IST
ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ಕರ್ತವ್ಯ: ಸಿಎಂ ಆರೋಪ
ಸದನದ ಭಾಷಣ ಓದದೇ ರಾಜ್ಯಪಾಲರು ಕೇವಲ ಒಂದು ಸಾಲು ತಾವೇ ಸಿದ್ಧಪಡಿಸಿದ ಭಾಷಣ ಓದಿ ಸಂವಿಧಾನ ವಿರೋಧ ನಡೆ ಅನುಸರಿಸಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ರಾಜ್ಯದ ಜನತೆಗೆ, ಜನಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ ಎಂದರು.

