
Karnataka Assembly live:ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆ
ಕೇಂದ್ರ ಸರ್ಕಾರವು ನರೇಗಾ (MGNREGA) ಯೋಜನೆಯನ್ನು ರದ್ದುಗೊಳಿಸಿ 'ವಿಬಿ ಜಿ ರಾಮ್ ಜಿ' ಎಂಬ ಹೊಸ ಕಾಯ್ದೆ ಜಾರಿಗೆ ತಂದಿರುವುದನ್ನು ವಿರೋಧಿಸಲು ಕರೆದಿರುವ ವಿಶೇಷ ಜಂಟಿ ಅಧಿವೇಶನವು ಇಂದು ನಡೆಯುತ್ತಿದೆ.
ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡುವಿನ ಸಂಘರ್ಷ ಹೊಸ ತಿರುವು ಪಡೆದುಕೊಂಡಿದೆ. ರಾಜ್ಯ ಸರ್ಕಾರದ ಅಧಿಕೃತ ಆಹ್ವಾನದಂತೆ ಜಂಟಿ ಅಧಿವೇಶನಕ್ಕೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಚಿವರು ಬರ ಮಾಡಿಕೊಂಡರು. ಆದರೆ, ರಾಜ್ಯಪಾಲರು ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾವನ್ನಷ್ಟೇ ಓದಿ ಹೊರ ನಡೆದದ್ದು ಆಡಳಿತ ಪಕ್ಷವನ್ನು ಮುಜುಗರಕ್ಕೀಡು ಮಾಡಿತಲ್ಲದೇ ಆಕ್ರೋಶಕ್ಕೂ ಕಾರಣವಾಯಿತು.
ಆಡಳಿತ ಪಕ್ಷದ ಸದಸ್ಯರ ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದರು. ಮಾರ್ಷಲ್‌ಗಳ ಭದ್ರತೆಯಲ್ಲಿ ರಾಜ್ಯಪಾಲರು ಅಧಿವೇಶನದಿಂದ ಹೊರನಡೆದರು. ವಿರೋಧ ಪಕ್ಷಗಳ ಸದಸ್ಯರು ಕೂಡ ಜಂಟಿ ಅಧಿವೇಶನದಿಂದ ಹೊರ ನಡೆದರು. ರಾಜ್ಯಪಾಲರ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಭಾಷಣದ ಮೊದಲ, ಕೊನೆ ಪ್ಯಾರಾ ಓದಿದ ಗೆಹ್ಲೋಟ್
ಅಧಿವೇಶನಕ್ಕೆ ಬಂದ ರಾಜ್ಯಪಾಲರು ಕೆಲ ಸೆಕೆಂಡುಗಳಲ್ಲೇ ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾ ಓದಿ ಹೊರನಡೆದರು. ಸರ್ಕಾರದ ಭಾಷಣದ 11ನೇ ಪ್ಯಾರಾದಲ್ಲಿರುವ 'ಜಿ ರಾಮ್ ಜಿ' (G RAM G) ಯೋಜನೆ ಕುರಿತು ರಾಜ್ಯಪಾಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಭಾಗವನ್ನು ಓದಬಾರದೆಂದು ನಿರ್ಧರಿಸಿದ್ದರು. ಇದಕ್ಕೂ ಮುನ್ನ ಸರ್ಕಾರದ ಪರವಾಗಿ ಎ.ಎಸ್. ಪೊನ್ನಣ್ಣ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಮನವೊಲಿಸಲು ಯತ್ನಿಸಿದರೂ, ಆಕ್ಷೇಪಿತ ಸಾಲುಗಳನ್ನು ತೆಗೆಯದಿರಲು ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು.
11ನೇ ಪ್ಯಾರಾದಲ್ಲೇನಿದೆ?
ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಭಾಷಣದ ಸಂಘರ್ಷದ ಕುರಿತು ಕಾನೂನು ಸಚಿವ ಎಚ್.ಕೆ. ಪಾಟೀಲ್ ಪ್ರತಿಕ್ರಿಯಿಸಿದ್ದು, ಭಾಷಣದ 11ನೇ ಪ್ಯಾರಾದಲ್ಲಿನ 'ಜಿ ರಾಮ್ ಜಿ' ಯೋಜನೆ ಮಾತ್ರವಲ್ಲದೆ, ಕೇಂದ್ರದ ನಿಲುವು, ರಾಜ್ಯಕ್ಕಾದ ಅನ್ಯಾಯ ಹಾಗೂ ಆಗಬೇಕಿರುವ ಕೆಲಸಗಳ ಕುರಿತೂ ಉಲ್ಲೇಖಗಳಿವೆ. ಇಂತಹ ನೂರು ಪ್ಯಾರಾಗಳು ಭಾಷಣದಲ್ಲಿ ಇರಬಹುದು ಎಂದು ಅವರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
Live Updates
- 22 Jan 2026 11:31 AM IST
ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ಕರ್ತವ್ಯ: ಸಿಎಂ ಆರೋಪ
ಸದನದ ಭಾಷಣ ಓದದೇ ರಾಜ್ಯಪಾಲರು ಕೇವಲ ಒಂದು ಸಾಲು ತಾವೇ ಸಿದ್ಧಪಡಿಸಿದ ಭಾಷಣ ಓದಿ ಸಂವಿಧಾನ ವಿರೋಧ ನಡೆ ಅನುಸರಿಸಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ರಾಜ್ಯದ ಜನತೆಗೆ, ಜನಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ ಎಂದರು.
- 22 Jan 2026 11:28 AM IST
ರಾಜ್ಯಪಾಲರಿಂದ ಕೇವಲ ಒಂದು ಸಾಲು ಭಾಷಣ: ಸಿಎಂ ಸಿದ್ದರಾಮಯ್ಯ
ರಾಜ್ಯಪಾಲರು ಸಚಿವ ಸಂಪುಟ ಸಿದ್ದಪಡಿಸಿದ ಭಾಷಣ ಓದದೇ ಕೇವಲ ಅವರೇ ಸಿದ್ಧಪಡಿಸಕೊಂಡು ಬಂಇದ್ದ ಕೇವಲ ಒಂದು ಸಾಲು ಭಾಷಣ ಮಾಡಿ ತೆರಳಿದ್ದು ಸಂವಿಧಾನಕ್ಕೆ ವಿರೋಧವಾಗಿದೆ ಎಂದರು.

- 22 Jan 2026 11:26 AM IST
ರಾಜ್ಯಪಾಲರು ಭಾಷಣ ಮಾಡುವುದು ಕಡ್ಡಾಯ: ಸಿಎಂ
ಜಂಟಿ ಅಧಿವೇಶನ ಉದ್ದೇಶಿಸಿ ಸರ್ಕಾರ ಸಿದ್ದಪಡಿಸಿದ ಭಾಷಣ ಓದುವುದು ರಾಜ್ಯಪಾಲರ ಕರ್ತವ್ಯ. ಆದರೆ ರಾಜ್ಯಪಾಲರು ಕೇವಲ ಸದನಕ್ಕೆ ಆಗಮಿಸಿ ವಾಪಸ್ ತೆರಳಿದ್ದಾರೆ ಎಂದು ತಿಳಿಸಿದರು.
- 22 Jan 2026 11:17 AM IST
ಭಾಷಣ ಮಾಡದೆ ವಾಪಸ್ ತೆರಳಿದ ರಾಜ್ಯಪಾಲರು
ಜಂಟಿ ಅಧಿವೇಶನದ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಬೇಕಿದ್ದ ರಾಜ್ಯಪಾಲರು ಸರ್ಕಾರದ ಭಾಷಣ ಓದದೆ ವಾಪಸ್ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ್ ಮನವೊಲಿಸಲು ಪ್ರಯತ್ನಸಿದರೂ ಯಾವುದೇ ಪ್ರಯೋಜನವಾಗಿಲ್ಲ.
- 22 Jan 2026 11:09 AM IST
ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲರು
ಜಂಟಿ ಅಧಿವೇಶನಕ್ಕೆ ರಾಜ್ಯಪಾಲರನ್ನು ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ. ಖಾದರ್ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜು ಹೊರಟ್ಟಿ.

- 22 Jan 2026 11:01 AM IST
ವಿಧಾನಸೌಧದತ್ತ ಹೊರಟ ರಾಜ್ಯಪಾಲರು
ಸದನದಲ್ಲಿ ಭಾಗವಹಿಸಲು ಲೋಕಭವನದಿಂದ ವಿಧಾನಸೌಧದ ಕಡೆ ಹೊರಟ ರಾಜ್ಯಪಾಲರು.

- 22 Jan 2026 10:56 AM IST
ಸರ್ಕಾರ ನೀಡಿದ್ದ ಭಾಷಣದ ಬದಲು ರಾಜ್ಯಪಾಲರಿಂದ ಪ್ರತ್ಯೇಕ ಭಾಷಣ
ಸರ್ಕಾರ ಸಿದ್ಧಪಡಿಸಿರುವ ಭಾಷಣದ ಕೆಲವು ಸಾಲುಗಳನ್ನು ಕೈಬಿಡುವಂತೆ ರಾಜ್ಯಪಾಲರು ಸೂಚನೆ ನೀಡಿದ್ದರು. ಆದರೆ ಈ ಸಲಹೆಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ರಾಜ್ಯಪಾಲರೇ ತಾವೇ ಪ್ರತ್ಯೇಕ ಭಾಷಣ ಸಿದ್ಧಪಡಿಸಿದ್ದು, ಅದನ್ನೇ ಸದನದಲ್ಲಿ ಓದಲು ಮುಂದಾಗಿದ್ದಾರೆ.
- 22 Jan 2026 10:53 AM IST
ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸ್ವಾಗತಕ್ಕೆ ಸಜ್ಜಾದ ಸಿಎಂ ಮತ್ತು ಸ್ಪೀಕರ್
ಕರ್ನಾಟಕ ವಿಧಾನಮಂಡಲದ ಅತ್ಯಂತ ಕುತೂಹಲಕಾರಿ ಜಂಟಿ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯಪಾಲರ ಆಗಮನಕ್ಕಾಗಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಈಗಾಗಲೇ ಆಗಮಿಸಿದ್ದಾರೆ.

- 22 Jan 2026 10:48 AM IST
ರಾಜ್ಯಪಾಲರ ಆಕ್ಷೇಪಕ್ಕೆ ಮಣಿದ ಸರ್ಕಾರ? ಭಾಷಣದ ಕೆಲವು ಅಂಶಗಳಿಗೆ ಕತ್ತರಿ!
ರಾಜ್ಯಪಾಲರ ಭಾಷಣದ ಕೆಲ ಅಂಶ ಸರ್ಕಾರ ಕೈ ಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ. ವಿಬಿ ಜಿ ರಾಮ್ ಜಿ ಕಾಯ್ದೆ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಡುತ್ತದೆ. ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂಬ ಅಂಶವನ್ನು ಭಾಷಣದಿಂದ ತೆಗೆದು ಹಾಕಲಾಗಿದ್ದು, ಕೈ ಬಿಟ್ಟಿರುವ ವಿಷಯಗಳನ್ನು ರಾಜ್ಯಪಾಲರ ಗಮನಕ್ಕೂ ಸರ್ಕಾರ ತಂದಿದೆ ಎನ್ನಲಾಗಿದೆ.

