
Karnataka Assembly live:ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆ
ಕೇಂದ್ರ ಸರ್ಕಾರವು ನರೇಗಾ (MGNREGA) ಯೋಜನೆಯನ್ನು ರದ್ದುಗೊಳಿಸಿ 'ವಿಬಿ ಜಿ ರಾಮ್ ಜಿ' ಎಂಬ ಹೊಸ ಕಾಯ್ದೆ ಜಾರಿಗೆ ತಂದಿರುವುದನ್ನು ವಿರೋಧಿಸಲು ಕರೆದಿರುವ ವಿಶೇಷ ಜಂಟಿ ಅಧಿವೇಶನವು ಇಂದು ನಡೆಯುತ್ತಿದೆ.
ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡುವಿನ ಸಂಘರ್ಷ ಹೊಸ ತಿರುವು ಪಡೆದುಕೊಂಡಿದೆ. ರಾಜ್ಯ ಸರ್ಕಾರದ ಅಧಿಕೃತ ಆಹ್ವಾನದಂತೆ ಜಂಟಿ ಅಧಿವೇಶನಕ್ಕೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಚಿವರು ಬರ ಮಾಡಿಕೊಂಡರು. ಆದರೆ, ರಾಜ್ಯಪಾಲರು ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾವನ್ನಷ್ಟೇ ಓದಿ ಹೊರ ನಡೆದದ್ದು ಆಡಳಿತ ಪಕ್ಷವನ್ನು ಮುಜುಗರಕ್ಕೀಡು ಮಾಡಿತಲ್ಲದೇ ಆಕ್ರೋಶಕ್ಕೂ ಕಾರಣವಾಯಿತು.
ಆಡಳಿತ ಪಕ್ಷದ ಸದಸ್ಯರ ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದರು. ಮಾರ್ಷಲ್‌ಗಳ ಭದ್ರತೆಯಲ್ಲಿ ರಾಜ್ಯಪಾಲರು ಅಧಿವೇಶನದಿಂದ ಹೊರನಡೆದರು. ವಿರೋಧ ಪಕ್ಷಗಳ ಸದಸ್ಯರು ಕೂಡ ಜಂಟಿ ಅಧಿವೇಶನದಿಂದ ಹೊರ ನಡೆದರು. ರಾಜ್ಯಪಾಲರ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಭಾಷಣದ ಮೊದಲ, ಕೊನೆ ಪ್ಯಾರಾ ಓದಿದ ಗೆಹ್ಲೋಟ್
ಅಧಿವೇಶನಕ್ಕೆ ಬಂದ ರಾಜ್ಯಪಾಲರು ಕೆಲ ಸೆಕೆಂಡುಗಳಲ್ಲೇ ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾ ಓದಿ ಹೊರನಡೆದರು. ಸರ್ಕಾರದ ಭಾಷಣದ 11ನೇ ಪ್ಯಾರಾದಲ್ಲಿರುವ 'ಜಿ ರಾಮ್ ಜಿ' (G RAM G) ಯೋಜನೆ ಕುರಿತು ರಾಜ್ಯಪಾಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಭಾಗವನ್ನು ಓದಬಾರದೆಂದು ನಿರ್ಧರಿಸಿದ್ದರು. ಇದಕ್ಕೂ ಮುನ್ನ ಸರ್ಕಾರದ ಪರವಾಗಿ ಎ.ಎಸ್. ಪೊನ್ನಣ್ಣ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಮನವೊಲಿಸಲು ಯತ್ನಿಸಿದರೂ, ಆಕ್ಷೇಪಿತ ಸಾಲುಗಳನ್ನು ತೆಗೆಯದಿರಲು ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು.
11ನೇ ಪ್ಯಾರಾದಲ್ಲೇನಿದೆ?
ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಭಾಷಣದ ಸಂಘರ್ಷದ ಕುರಿತು ಕಾನೂನು ಸಚಿವ ಎಚ್.ಕೆ. ಪಾಟೀಲ್ ಪ್ರತಿಕ್ರಿಯಿಸಿದ್ದು, ಭಾಷಣದ 11ನೇ ಪ್ಯಾರಾದಲ್ಲಿನ 'ಜಿ ರಾಮ್ ಜಿ' ಯೋಜನೆ ಮಾತ್ರವಲ್ಲದೆ, ಕೇಂದ್ರದ ನಿಲುವು, ರಾಜ್ಯಕ್ಕಾದ ಅನ್ಯಾಯ ಹಾಗೂ ಆಗಬೇಕಿರುವ ಕೆಲಸಗಳ ಕುರಿತೂ ಉಲ್ಲೇಖಗಳಿವೆ. ಇಂತಹ ನೂರು ಪ್ಯಾರಾಗಳು ಭಾಷಣದಲ್ಲಿ ಇರಬಹುದು ಎಂದು ಅವರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
Live Updates
- 22 Jan 2026 10:48 AM IST
ವಿಧಾನಸೌಧಕ್ಕೆ ಸಿಎಂ ಸಿದ್ದರಾಮಯ್ಯ ಆಗಮನ
ಇಂದಿನಿಂದ ಆರಂಭವಾಗಲಿರುವ ಜಂಟಿ ಅಧಿವೇಶನದಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯನವರು ವಿಧಾನಸೌಧಕ್ಕೆ ಆಗಮಿಸಿದ್ದು, ರಾಜ್ಯಪಾಲರ ಸ್ವಾಗತಕ್ಕೆ ಸಿದ್ಧರಾಗಿದ್ದಾರೆ.
- 22 Jan 2026 10:39 AM IST
"ರಾಜ್ಯಪಾಲರ ಮೇಲೆ ನಮಗೆ ನಂಬಿಕೆಯಿದೆ"- ಸ್ಪೀಕರ್ ಯು.ಟಿ. ಖಾದರ್
ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನದ ಕುರಿತು ಮಾತನಾಡಿರುವ ಸ್ಪೀಕರ್ ಯು.ಟಿ. ಖಾದರ್ ಅವರು, "ರಾಜ್ಯಪಾಲರು ಅಧಿವೇಶನಕ್ಕೆ ಆಗಮಿಸಿ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಪೂರೈಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ" ಎಂದು ತಿಳಿಸಿದ್ದಾರೆ. ಸರ್ಕಾರದ ಭಾಷಣದ ಕರಡಿನ ಕೆಲವು ಅಂಶಗಳ ಕುರಿತು ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿರುವ ಬಿಕ್ಕಟ್ಟಿನ ನಡುವೆಯೂ, ಸಂಪ್ರದಾಯದಂತೆ ಅಧಿವೇಶನವು ಸುಗಮವಾಗಿ ಆರಂಭವಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಸಂವಿಧಾನಾತ್ಮಕವಾಗಿ ವರ್ಷದ ಮೊದಲ ಅಧಿವೇಶನವು ರಾಜ್ಯಪಾಲರ ಭಾಷಣದೊಂದಿಗೇ ಆರಂಭವಾಗಬೇಕು ಎಂಬ ನಿಯಮವನ್ನು ಉಲ್ಲೇಖಿಸಿದ ಅವರು, ಎಲ್ಲ ಗೊಂದಲಗಳು ಶೀಘ್ರವೇ ಬಗೆಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸುವ ಮೂಲಕ ಅನಿಶ್ಚಿತತೆಗೆ ತೆರೆ ಎಳೆಯಲು ಪ್ರಯತ್ನಿಸಿದರು.
- 22 Jan 2026 10:32 AM IST
ರಾಜ್ಯಪಾಲರು ಅಧಿವೇಶನಕ್ಕೆ ಬರಲು ಒಪ್ಪಿಗೆ
ಜಂಟಿ ಅಧಿವೇಶನದಲ್ಲಿ ಭಾಗವಹಿಸಲು ರಾಜ್ಯಪಾಲರು ಒಪ್ಪಿಗೆ ನೀಡಿದ್ದು, ಸ್ವಾಗತ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಬಳಿ ಸ್ವಾಗತಕ್ಕೆ ಸಕಲ ಸಿದ್ಧತೆ.
- 22 Jan 2026 10:29 AM IST
ರಾಜ್ಯಪಾಲರ ಮೇಲೆ ಸರ್ಕಾರದಿಂದ ಒತ್ತಡ: ಆರ್. ಅಶೋಕ್
ರಾಜ್ಯಪಾಲರ ನಡೆಯನ್ನು ವಿಪಕ್ಷ ನಾಯಕ ಆರ್. ಅಶೋಕ್ ಸಮರ್ಥಿಸಿಕೊಂಡಿದ್ದು, ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದಬೇಕು ಎಂಬ ನಿಯಮವಿದೆ. ಆದರೆ ಓದಲೇ ಬೇಕು ಎಂಬುದಿಲ್ಲ. ಸಿಎಂ ಹಾಗೂ ಸಚಿವರು ರಾಜ್ಯಪಾಲರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.
- 22 Jan 2026 10:26 AM IST
ಸಿಎಂ ನಿವಾಸಕ್ಕೆ ಕಾನೂನು ಸಚಿವರ ಆಗಮನ
ರಾಜ್ಯಪಾಲರು ಸದನಕ್ಕೆ ಆಗಮಿಸದಿದ್ದರೆ ಮುಂದಿನ ನಡೆ ಏನು ಎಂಬುದರ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಆಗಮನ
- 22 Jan 2026 10:11 AM IST
"ರಾಜ್ಯಪಾಲರು ಭಾಷಣ ಮಾಡ್ತಾರೆ ಅನ್ನೋ ವಿಶ್ವಾಸವಿದೆ": ಎಚ್.ಕೆ. ಪಾಟೀಲ್ ಸ್ಪಷ್ಟನೆ
ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ರಾಜ್ಯಪಾಲರ ಭಾಷಣದ ಕುರಿತಾದ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ ಎಂಬ ಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರವು ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದೆ ಮತ್ತು ಮಂತ್ರಿ ಮಂಡಳಿಯ ನಿರ್ಧಾರವನ್ನು ಈಗಾಗಲೇ ರಾಜ್ಯಪಾಲರಿಗೆ ಅಧಿಕೃತವಾಗಿ ತಿಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ರಾಜ್ಯಪಾಲರು ಸಂವಿಧಾನಬದ್ಧವಾಗಿ ಭಾಷಣ ಮಾಡಲೇಬೇಕು, ಅವರು ಮಾಡುತ್ತಾರೆ ಎಂಬ ಭರವಸೆ ನಮಗಿದೆ, ಉಳಿದದ್ದನ್ನು ಕಾದು ನೋಡೋಣ" ಎನ್ನುವ ಮೂಲಕ ಸಚಿವರು ಚೆಂಡನ್ನು ರಾಜ್ಯಪಾಲರ ಅಂಗಳಕ್ಕೆ ಎಸೆದಿದ್ದಾರೆ.
- 22 Jan 2026 9:46 AM IST
ರಾಜ್ಯಪಾಲರ ನಡೆ ಸಂವಿಧಾನದ ವಿಧಿ 176ರ ಉಲ್ಲಂಘನೆ- ಪ್ರಿಯಾಂಕ್ ಖರ್ಗೆ ಕಿಡಿ
ರಾಜ್ಯ ಸರ್ಕಾರದ ಜಂಟಿ ಅಧಿವೇಶನದ ಭಾಷಣವನ್ನು ಪೂರ್ಣವಾಗಿ ಓದಲು ನಿರಾಕರಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಿರ್ಧಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ಈ ಕ್ರಮವು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಚುನಾಯಿತ ಸರ್ಕಾರದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಅವರು ಟೀಕಿಸಿದ್ದಾರೆ.
ಸಂವಿಧಾನದ 176ನೇ ವಿಧಿಯ ಪ್ರಕಾರ, ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರದ ನೀತಿ ಹೇಳಿಕೆಯನ್ನು ಓದುವುದು ಕಡ್ಡಾಯ. ಅಷ್ಟೇ ಅಲ್ಲದೆ, 163ನೇ ವಿಧಿಯಡಿ ಅವರು ಸಚಿವ ಸಂಪುಟದ ಸಲಹೆಯಂತೆ ಕಾರ್ಯನಿರ್ವಹಿಸಬೇಕು. ಅದನ್ನು ಬಿಟ್ಟು ಭಾಷಣದ ಭಾಗಗಳನ್ನು ಕೈಬಿಡುವುದು ಸಾಂವಿಧಾನಿಕವಾಗಿ ತಪ್ಪು ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.
ಭಾಷಣದಲ್ಲಿ ಉಲ್ಲೇಖಿಸಲಾದ ರಾಜ್ಯಕ್ಕೆ ಬರಬೇಕಾದ ಅನುದಾನದ ಕೊರತೆ ಮತ್ತು ಒಕ್ಕೂಟ ವ್ಯವಸ್ಥೆಯ ಕುಸಿತದಂತಹ ವಿಷಯಗಳು ಕೇವಲ ಆರೋಪಗಳಲ್ಲ, ಅವು ವಾಸ್ತವ ಸಂಗತಿಗಳು. ಇದನ್ನೇ ಸಿಎಂ ಅವರು ಪ್ರಧಾನಿ ಮೋದಿ ಅವರ ಮುಂದೆಯೂ ಹಲವು ಬಾರಿ ಪ್ರಸ್ತಾಪಿಸಿದ್ದಾರೆ.
ಭಾಷಣದ ಕೆಲವು ಭಾಗಗಳನ್ನು ಸಂಪೂರ್ಣವಾಗಿ ಕೈಬಿಡಲು ಒತ್ತಾಯಿಸುವುದು ಕರ್ನಾಟಕದ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದು ರಾಜ್ಯಪಾಲರ ಕಚೇರಿಯ ತಟಸ್ಥತೆಯನ್ನು ದುರ್ಬಲಗೊಳಿಸುವ 'ಪಕ್ಷಪಾತದ ಹಸ್ತಕ್ಷೇಪ' ಎಂದು ಅವರು ಕಿಡಿಕಾರಿದ್ದಾರೆ.
ಸರ್ಕಾರವು ಸಣ್ಣಪುಟ್ಟ ಭಾಷಾ ಬದಲಾವಣೆಗಳಿಗೆ ಸಿದ್ಧವಿದ್ದರೂ, ಸರ್ಕಾರದ ಮೂಲ ಆಶಯವನ್ನೇ ಬದಲಿಸಲು ಬಿಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
- 22 Jan 2026 9:32 AM IST
ಎ.ಎಸ್. ಪೊನ್ನಣ್ಣ-ರಾಜ್ಯಪಾಲರ ಭೇಟಿ
ರಾಜ್ಯ ಸರ್ಕಾರವು ಕಾನೂನು ಸಮರಕ್ಕೆ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ, ರಾಜ್ಯಪಾಲರು ಇದರ ಸಾಧಕ-ಬಾಧಕಗಳ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಒಂದು ವೇಳೆ ಸದನಕ್ಕೆ ಹಾಜರಾಗದಿದ್ದರೆ ಎದುರಾಗಬಹುದಾದ ಕಾನೂನು ಪರಿಣಾಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈವರೆಗೆ ರಾಜ್ಯಪಾಲರಿಂದ ಸದನಕ್ಕೆ ಬರುವ ಬಗ್ಗೆ ಯಾವುದೇ ಅಧಿಕೃತ ಸಂದೇಶ ಲಭ್ಯವಾಗಿಲ್ಲದ ಕಾರಣ ಕುತೂಹಲ ಮುಂದುವರಿದಿದೆ. ಈ ನಡುವೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ಇಂದು ಬೆಳಿಗ್ಗೆ 10.15ಕ್ಕೆ ಭೇಟಿಯಾಗಲು ರಾಜ್ಯಪಾಲರು ಸಮಯ ನೀಡಿದ್ದು, ಈ ಭೇಟಿಯ ನಂತರವೇ ರಾಜ್ಯಪಾಲರು ಅಧಿವೇಶನಕ್ಕೆ ಆಗಮಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಅಂತಿಮವಾಗಿ ಸ್ಪಷ್ಟವಾಗಲಿದೆ ಎಂದು ಪೊನ್ನಣ್ಣ ಅವರು ಮಾಹಿತಿ ನೀಡಿದ್ದಾರೆ.
- 22 Jan 2026 8:39 AM IST
ಕಾನೂನು ಸಮರಕ್ಕೂ ಸರ್ಕಾರ ರೆಡಿ
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಜಟಾಪಟಿ ಈಗ ನ್ಯಾಯಾಲಯದ ಹೊಸ್ತಿಲಿಗೆ ಬಂದು ನಿಂತಿದೆ. ಗುರುವಾರ ನಡೆಯಲಿರುವ ಅಧಿವೇಶನದಲ್ಲಿ ಒಂದು ವೇಳೆ ರಾಜ್ಯಪಾಲರು ಭಾಷಣ ಮಾಡದಿದ್ದರೆ ಅಥವಾ ಸರ್ಕಾರದ ನೀತಿಗಳನ್ನು ಓದದೆ ನಿರಾಕರಿಸಿದರೆ, ಕೂಡಲೇ ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಅಡ್ವೊಕೇಟ್ ಜನರಲ್ ಅವರಿಗೆ ಈಗಾಗಲೇ ಸೂಚನೆ ನೀಡಿದ್ದು, ಸಂವಿಧಾನಾತ್ಮಕ ಬಿಕ್ಕಟ್ಟು ಎದುರಾದರೆ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯಪಾಲರ ಪ್ರತಿ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸರ್ಕಾರ, ಅವರ ನಡೆಗೆ ತಕ್ಕಂತೆ ತನ್ನ ಮುಂದಿನ ಕಾನೂನು ಹೋರಾಟದ ಹಾದಿಯನ್ನು ಸ್ಪಷ್ಟಪಡಿಸಲಿದೆ.

