
ಬದನವಾಳು ಗ್ರಾಮದಲ್ಲಿನ ಖಾದಿ ಸಂಶೋಧನ ಮತ್ತು ತರಬೇತಿ ಕೇಂದ್ರ
ಗಾಂಧೀಜಿ ಭೇಟಿ ನೀಡಿದ್ದ ಬದನವಾಳು ಈಗ ಪ್ರವಾಸಿ ತಾಣ: ಖಾದಿ ಕ್ರಾಂತಿಯ ಮರುಜೀವಕ್ಕೆ ಸರ್ಕಾರ ಸಜ್ಜು
ಮಹಾತ್ಮ ಗಾಂಧಿಯವರ ಖಾದಿ ಸ್ವತಂತ್ರ ಹೋರಾಟದ ಭಾಗವಾಗಿದ್ದ ಚಳವಳಿಯು ಹಲವು ಆಯಾಮದಲ್ಲಿ ಪರಿಣಾಮ ಬೀರುವ ದೃಷ್ಟಿಕೋನವನ್ನು ಹೊಂದಿದ್ದು, ಖಾದಿ ಗೃಹ ಕೈಗಾರಿಕೆಗೆ ಮಹತ್ವ ನೀಡಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದರು.
ಮಹಾತ್ಮ ಗಾಂಧಿಯವರು 1927 ಹಾಗೂ 1932ರಲ್ಲಿ ಮೈಸೂರು ಜಿಲ್ಲೆಯಲ್ಲಿರುವ ಬದನವಾಳು ಗ್ರಾಮಕ್ಕೆ ಭೇಟಿ ನೀಡಿ ಖಾದಿ ಕ್ರಾಂತಿಗೆ ಉತ್ತೇಜನ ನೀಡಿ, “ಗ್ರಾಮ ಸ್ವರಾಜ್ಯʼʼ ಪರಿಕಲ್ಪನೆಗೆ ಕಾರಣವಾದ ಹಿನ್ನೆಲೆಯಲ್ಲಿ ಬದನವಾಳು ಗ್ರಾಮದ ಎಲ್ಲಾ ಐತಿಹಾಸಿಕ ಹೆಜ್ಜೆಗುರುತುಗಳನ್ನು ಪುನಃರುಜ್ಜೀವನಗೊಳಿಸುವ ಮತ್ತು ಖಾದಿ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಆಕರ್ಷಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಶುಕ್ರವಾರ(ಜ.16) ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಉದ್ದೇಶಿತ ಯೋಜನೆಯಡಿ ಏಳು ಎಕರೆ ಪ್ರದೇಶದಲ್ಲಿ ಬದನವಾಳು ಗ್ರಾಮದಲ್ಲಿ ನಡೆದು ಬಂದ ಖಾದಿ ನೇಕಾಣಿಕೆಯ ಇತಿಹಾಸ, ಖಾದಿ ಉತ್ಪಾದನ ಘಟಕ, ತರಬೇತಿ ಕೇಂದ್ರ, ವಿನ್ಯಾಸ ಕೇಂದ್ರ, ಖಾದಿ ಪರೀಕ್ಷೆ, ದಾಸ್ತಾನು ಕೇಂದ್ರ, ಖಾದಿ ಸಂಶೋಧನ ಕೇಂದ್ರ ಮುಂತಾದ ಸೌಲಭ್ಯಗಳನ್ನು ಒಳಗೊಳ್ಳುವಂತೆ ಅಭಿವೃದ್ಧಿಪಡಿಸಲಾಗುವುದು. ಈ ಕೇಂದ್ರದಲ್ಲಿ ಮೈಸೂರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿವರ, ವಸ್ತು ಸಂಗ್ರಹಾಲಯ ಮುಂತಾದ ಪ್ರವಾಸಿ ಆಕರ್ಷಣೆಗಳೂ ಇರಲಿದೆ ಎಂದರು.
ಖಾದಿಯಿಂದ ಹಳ್ಳಿಗಳ ಬಲವರ್ಧನೆ
ಮಹಾತ್ಮ ಗಾಂಧಿಯವರ ಖಾದಿ ಸ್ವತಂತ್ರ ಹೋರಾಟದ ಭಾಗವಾಗಿದ್ದ ಚಳವಳಿಯು ಹಲವು ಆಯಾಮದಲ್ಲಿ ಪರಿಣಾಮ ಬೀರುವ ದೃಷ್ಟಿಕೋನವನ್ನು ಹೊಂದಿದ್ದು, ಖಾದಿ ಗೃಹ ಕೈಗಾರಿಕೆಗೆ ಮಹತ್ವ ನೀಡಿದ್ದರು. ಖಾದಿಯು ಸ್ವಾವಲಂಬನೆ, ಸರಳತೆ ಮತ್ತು ಸ್ವಾತಂತ್ರ್ಯದ ಸಂಕೇತವಾಗಿತ್ತು. ಖಾದಿ ಧರಿಸುವುದರಿಂದ ಪ್ರತಿ ಭಾರತೀಯ ಪ್ರಜೆಯೂ ದೇಶದ ಆರ್ಥಿಕ ಸ್ವಾತಂತ್ರ್ಯಕ್ಕೆ ತನ್ನ ಕೊಡುಗೆಯನ್ನು ನೀಡಬಹುದು ಮತ್ತು ಹಳ್ಳಿಗಳಲ್ಲಿ ಉದ್ಯೋಗ ಒದಗಿಸುವ ಮೂಲಕ ಹಳ್ಳಿಗಳ ಬಲವರ್ಧನೆಗೆ ಕಾರಣವಾಗಬಹುದು ಎಂದು ಗಾಂಧೀಜಿ ನಂಬಿದ್ದರು ಎಂದು ಮಾಹಿತಿ ನೀಡಿದರು.
ಮೈಸೂರಿನ ಯಾವ-ಯಾವ ಸ್ಥಳಕ್ಕೆ ಗಾಂಧಿ ಭೇಟಿ ?
ಮಹಾತ್ಮ ಗಾಂಧೀಜಿಯವರು 1927 ಮತ್ತು 1934ರಲ್ಲಿ ಮೈಸೂರಿಗೆ ಭೇಟಿ ನೀಡಿದ್ದಾಗ ಹಲವು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಶೇಷಾದ್ರಿ ಹೌಸ್ (ಶೇಷಾದ್ರಿ ಅಯ್ಯರ್ ರಸ್ತೆ) ಇಲ್ಲಿಯೇ ತಂಗಿದ್ದರು. ಇದು ಆಗಿನ ಮೈಸೂರು ದಿವಾನರಾಗಿದ್ದ ಸರ್. ಶೇಷಾದ್ರಿ ಅಯ್ಯರ್ ಅವರ ನಿವಾಸವಾಗಿತ್ತು. ಪ್ರಸ್ತುತ ಈ ಕಟ್ಟಡದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯಿದೆ. 1927ರ ಭೇಟಿಯ ಸಮಯದಲ್ಲಿ ಕೆಆರ್‌ಎಸ್ ಅಣೆಕಟ್ಟೆಯನ್ನು ವೀಕ್ಷಿಸಿದ್ದರು. ಸರ್ ಎಂ. ವಿಶ್ವೇಶ್ವರಯ್ಯನವರ ಈ ಅದ್ಭುತ ತಾಂತ್ರಿಕ ಸಾಧನೆಯನ್ನು ಕಂಡು ಅವರು ಬೆರಗಾಗಿದ್ದರು.
ಹರಿಜನ ಚಳುವಳಿ ಬಗ್ಗೆ ಚರ್ಚೆ
ಗ್ರಾಮ ಸ್ವರಾಜ್ಯದ ಕನಸಿನೊಂದಿಗೆ 1927 ಮತ್ತು 1932ರಲ್ಲಿ ನಂಜನಗೂಡಿನ ಬದನವಾಳು ಗ್ರಾಮದ ಖಾದಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಇಲ್ಲಿನ ನೇಕಾರಿಕೆ ಮತ್ತು ಖಾದಿ ಉತ್ಪಾದನೆಯನ್ನು ನೋಡಿ ಅವರು ಪ್ರಭಾವಿತರಾಗಿದ್ದರು. ಈಗ ಈ ಸ್ಥಳವನ್ನು ಸರ್ಕಾರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ʼಮೈಸೂರು ಗಾಂಧಿ' ಎಂದೇ ಖ್ಯಾತರಾಗಿದ್ದ ತಗಡೂರು ರಾಮಚಂದ್ರರಾಯರ ಆಹ್ವಾನದ ಮೇರೆಗೆ ತಗಡೂರಿಗೆ ಭೇಟಿ ನೀಡಿ, ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ವೀಕ್ಷಿಸಿ, ಹರಿಜನ ಚಳವಳಿಯ ಬಗ್ಗೆ ಮಾತನಾಡಿದ್ದರು.
1934ರಲ್ಲಿ ಮೈಸೂರಿನ ಕೆ.ಆರ್. ಮಿಲ್ಸ್‌ಗೆ ಭೇಟಿ ನೀಡಿ ಅಲ್ಲಿನ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದರು. ನಗರದ ಹಳೆಯ ಮಾರುಕಟ್ಟೆ ಸಂಕೀರ್ಣಗಳಲ್ಲಿ ಒಂದಾದ ಲ್ಯಾನ್ಸ್‌ಡೌನ್ ಕಟ್ಟಡಕ್ಕೂ ಗಾಂಧೀಜಿಯವರು ತಮ್ಮ ಮೈಸೂರು ಪ್ರವಾಸದ ವೇಳೆ ಭೇಟಿ ನೀಡಿದ್ದರು.

