
ಸರ್ಕಾರಕ್ಕೆ ಕಾದಿದೆ ಹೊಸ ವರ್ಷದ ʼಕಿಕ್ʼ: ಬೊಕ್ಕಸ ಸೇರಲಿದೆ 700 ಕೋಟಿ 'ಅಮಲಿನ' ಆದಾಯ!
ವಾರಾಂತ್ಯದ ಮೋಜು ಮಿಸ್ಆಗಲಿದ್ದು, ವಾರದ ಮಧ್ಯೆಯೇ ಮದ್ಯಪ್ರಿಯರು 'ಕಿಕ್' ಪಡೆಯಲು ತಯಾರಿ ನಡೆಸಿದ್ದಾರೆ. ಈ ಬಾರಿ 150-200 ಕೋಟಿ ರೂ. ಬಾಚಿಕೊಳ್ಳಲು ಸರ್ಕಾರಿ ಮದ್ಯದ ಮಳಿಗೆಗಳು ಸಜ್ಜಾಗಿವೆ.
ಹೊಸ ವರ್ಷದ ಹೊಸ್ತಿಲಲ್ಲಿರುವ ರಾಜ್ಯದ ಆರ್ಥಿಕತೆಗೆ ಈ ಬಾರಿ 'ಅಮಲಿನ' ಬಲ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ವರ್ಷ 400 ಕೋಟಿ ರೂ.ಗಿಂತ ಅಧಿಕ ವಹಿವಾಟನ್ನು ಮೀರಿ, ಈ ಬಾರಿ ದಾಖಲೆಯ 600-700 ಕೋಟಿ ರೂ. ಮದ್ಯ ಮಾರಾಟದ ಗುರಿಯನ್ನು ರಾಜ್ಯದ ಮಾರುಕಟ್ಟೆ ಎದುರು ನೋಡುತ್ತಿದೆ.
ಕಳೆದ ಬಾರಿಗಿಂತ ಒಂದೂವರೆ ಪಟ್ಟು ಹೆಚ್ಚು ವಹಿವಾಟು ನಡೆಸಲು ಸಿದ್ಧತೆಗಳು ನಡೆದಿವೆ. ಆದರೆ, ಈ ಅದ್ಧೂರಿ ಲೆಕ್ಕಾಚಾರದ ನಡುವೆ 'ಕ್ಯಾಲೆಂಡರ್' ಒಂದು ಸಣ್ಣ ವಿಘ್ನ ತಂದಿದೆ. ವಾರಾಂತ್ಯದ ಬದಲಾಗಿ ವಾರದ ಮಧ್ಯೆ ಹೊಸ ವರ್ಷ ಬಂದಿರುವುದು ಬಹಳಷ್ಟು ಮಂದಿ ಮದ್ಯದಿಂದ ದೂರ ಇರುವ ಸಾಧ್ಯತೆ ಇದೆ. ವಾರಾಂತ್ಯದ ಮೋಜು ಮಿಸ್ ಮಾಡಿಕೊಳ್ಳುತ್ತಿರುವ ಮದ್ಯಪ್ರಿಯರು ಈ ಬಾರಿ ವಾರದ ಮಧ್ಯೆಯೇ ಎಷ್ಟು ಕಿಕ್ ಪಡೆಯಲಿದ್ದಾರೆ? ಎಂಬ ಕುತೂಹಲ ಮೂಡಿದೆ.
ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಅಬಕಾರಿ ಇಲಾಖೆಯ ಆದಾಯವು ಗಣನೀಯವಾಗಿ ಏರಿಕೆಯಾಗುತ್ತದೆ. ಈ ಬಾರಿ 2026ರ ಹೊಸ ವರ್ಷದ ಸ್ವಾಗತಕ್ಕಾಗಿ ಮದ್ಯದ ವಹಿವಾಟು ದಾಖಲೆ ಮಟ್ಟವನ್ನು ಮುಟ್ಟುವ ನಿರೀಕ್ಷೆಯಿದೆ. ಕಳೆದ ವರ್ಷ (2024ರ ಡಿ.31) ರಾಜ್ಯದಲ್ಲಿ ಮದ್ಯದ ವಹಿವಾಟು ಸುಮಾರು ೪೦೦ ಕೋಟಿ ರೂಪಾಯಿಗಳ ಗಡಿ ದಾಟಿತ್ತು. ಆದರೆ, ಈ ಬಾರಿ ಈ ಅಂಕಿ-ಅಂಶವು ಒಂದೂವರೆ ಪಟ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. ಅಬಕಾರಿ ಇಲಾಖೆ ಹಾಕಿಕೊಂಡಿರುವ ಮಾರಾಟದ ವಹಿವಾಟು ಹೆಚ್ಚಳ
ಮದ್ಯದ ದರ ಏರಿಕೆ
ಕಳೆದ ಒಂದು ವರ್ಷದಲ್ಲಿ ರಾಜ್ಯ ಸರ್ಕಾರವು ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಿರುವುದು ವಹಿವಾಟಿನ ಮೊತ್ತ ಹೆಚ್ಚಾಗಲು ಪ್ರಮುಖ ಕಾರಣವಾಗಲಿದೆ ಎಂಬ ನಿರೀಕ್ಷೆ ಇದೆ. ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರು ಸಾಮಾನ್ಯ ಮದ್ಯಕ್ಕಿಂತ ಹೆಚ್ಚಾಗಿ ದುಬಾರಿ ಬೆಲೆಯ 'ಪ್ರೀಮಿಯಂ' ಬ್ರಾಂಡ್‌ಗಳ ಮೊರೆ ಹೋಗುತ್ತಿದ್ದಾರೆ. ಇದು ಸಹ ವಹಿವಾಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ, ರಾಜ್ಯದಾದ್ಯಂತ ಹೊಸ ಎಂಎಸ್ಐಎಲ್ ಮಳಿಗೆಗಳು ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಪಬ್‌ಗಳ ಸಂಖ್ಯೆ ಹೆಚ್ಚಿರುವುದು ಮಾರಾಟಕ್ಕೆ ಉತ್ತೇಜನ ನೀಡಿದೆ ಎಂದು ಹೇಳಲಾಗಿದೆ.
ವಾರದ ಮಧ್ಯೆ ಬಂದ ಹೊಸ ವರ್ಷ
ಸಾಮಾನ್ಯವಾಗಿ ಹೊಸ ವರ್ಷವು ಶುಕ್ರವಾರ, ಶನಿವಾರ ಅಥವಾ ಭಾನುವಾರದಂತಹ ವಾರಾಂತ್ಯದಲ್ಲಿ ಬಂದರೆ ಮದ್ಯ ಮಾರಾಟವು ಶಿಖರಕ್ಕೇರುತ್ತದೆ. ಏಕೆಂದರೆ ಜನರು ಸತತ ಎರಡು-ಮೂರು ದಿನಗಳ ಕಾಲ ರಜೆಯ ಮೋಜಿನಲ್ಲಿ ಇರುತ್ತಾರೆ. ಆದರೆ, ಈ ಬಾರಿ ಹೊಸ ವರ್ಷ ಗುರುವಾರ ಬಂದಿದೆ. ಗುರುವಾರ ಕೆಲಸದ ದಿನವಾಗಿರುವುದರಿಂದ ಮತ್ತು ಬುಧವಾರ ರಾತ್ರಿ ಆಚರಣೆ ಮುಗಿಸಿ ಮರುದಿನ ಕಚೇರಿಗೆ ಅಥವಾ ಕೆಲಸಕ್ಕೆ ಹೋಗಬೇಕಾದ ಒತ್ತಡ ಇರುವುದರಿಂದ ವಾರಾಂತ್ಯಕ್ಕೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಸ್ವಲ್ಪ ಇಳಿಕೆಯಾಗಬಹುದು ಎಂಬುದು ಅಬಕಾರಿ ಇಲಾಖೆಯ ವಿಶ್ಲೇಷಣೆಯಾಗಿದೆ. ಒಂದು ವೇಳೆ ಹೊಸ ವರ್ಷವು ವಾರಾಂತ್ಯದಲ್ಲಿದ್ದಿದ್ದರೆ, 700 ಕೋಟಿ ರೂ. ನಿರೀಕ್ಷೆಯು ಸುಲಭವಾಗಿ 800-900 ಕೋಟಿ ರೂ. ದಾಟುವ ಸಾಧ್ಯತೆ ಇತ್ತು. ಆದರೂ, ಜ.1 ರಂದು ಅನೇಕರು ರಜೆ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ವಹಿವಾಟು ಸ್ಥಿರವಾಗಿರುವ ನಿರೀಕ್ಷೆಯಿದೆ.
ಕಳೆದ ಎರಡು ವರ್ಷಗಳ ಮದ್ಯ ಮಾರಾಟದ ಅಂಕಿ-ಅಂಶಗಳು
ಮದ್ಯ ಮಾರಾಟವನ್ನು ಸಾಮಾನ್ಯವಾಗಿ 'ಕೇಸ್'ಗಳ ಲೆಕ್ಕದಲ್ಲಿ ಅಳೆಯಲಾಗುತ್ತದೆ. ಐಎಂಎಲ್ ಮತ್ತು ಬಿಯರ್ ಮಾರಾಟವು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಇದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಹೆಚ್ಚಳವಾಗಿದೆ. ಅಂತೆಯೇ ಈ ಬಾರಿಯು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. 2023ರಲ್ಲಿ ಹೊಸ ವರ್ಷದ ಮುನ್ನಾದಿನವು ಭಾನುವಾರ ಬಂದಿತ್ತು. ವಾರಾಂತ್ಯದ ಕಾರಣ ಮಾರಾಟವು ಭರ್ಜರಿಯಾಗಿತ್ತು. ಡಿ.31ರಂದು ಐಎಂಎಲ್ ಮಾರಾಟವು ಅಂದಾಜು 2.5 ಲಕ್ಷ ಕೇಸ್‌ಗಳು ಮತ್ತು ಬಿಯರ್ ಮಾರಾಟ ಅಂದಾಜು 1.8 ಲಕ್ಷ ಕೇಸ್‌ಗಳು ಆಗಿತ್ತು. ಒಟ್ಟು ಆದಾಯ ಸುಮಾರು 350 - 380 ಕೋಟಿ ರೂ. ಆಗಿತ್ತು. ಇನ್ನು, 2024ರ ಡಿ.31ರಂದು ಮದ್ಯದ ದರಗಳು ಹೆಚ್ಚಾಗಿದ್ದವು ಮತ್ತು ಆಚರಣೆಯ ಪ್ರಮಾಣವೂ ಹೆಚ್ಚಿತ್ತು. ಐಎಂಎಲ್ ಮಾರಾಟವು ಅಂದಾಜು 2.8ಲಕ್ಷ ಕೇಸ್‌ಗಳು, ಬಿಯರ್ ಮಾರಾಟವು ಅಂದಾಜು 2.2 ಲಕ್ಷ ಕೇಸ್‌ಗಳು ಆಗಿತ್ತು. ಒಟ್ಟು ಆದಾಯ 400 ಕೋಟಿ ರೂ.ಗೂ ಅಧಿಕವಾಗಿತ್ತು. ಈ ಬಾರಿ 600-700 ಕೋಟಿ ರೂ. ನಿರೀಕ್ಷಿತ ವಹಿವಾಟು ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ದೊಡ್ಡ ಮಟ್ಟದ ಸಿದ್ಧತೆಗಳು ನಡೆದಿರುವುದು.
ನಗರ ಮತ್ತು ಗ್ರಾಮೀಣ ಭಾಗದ ಮಾರಾಟ ವ್ಯತ್ಯಾಸ
ರಾಜ್ಯದ ಒಟ್ಟು ಮದ್ಯದ ಮಾರಾಟದ ಸುಮಾರು ಶೇ. 45 ರಿಂದ 50ರಷ್ಟು ಭಾಗ ಬೆಂಗಳೂರಿನಲ್ಲೇ ನಡೆಯುತ್ತದೆ. ಇಲ್ಲಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಮತ್ತು ಕೋರಮಂಗಲದ ಪಬ್‌ಗಳು ಮತ್ತು ಹೋಟೆಲ್‌ಗಳು ಈ ವಹಿವಾಟಿನ ಕೇಂದ್ರಬಿಂದುಗಳಾಗಿವೆ. ಗ್ರಾಮೀಣ ಭಾಗದಲ್ಲಿ ಬಿಯರ್‌ಗಿಂತ ಹಾರ್ಡ್ ಲಿಕ್ಕರ್ ಮಾರಾಟವೇ ಹೆಚ್ಚಾಗಿರುತ್ತದೆ. ಜಿಲ್ಲಾ ಕೇಂದ್ರಗಳಲ್ಲಿ ಹೊಸ ವರ್ಷದ ಹೆಸರಿನಲ್ಲಿ 'ಸ್ಪೆಶಲ್ ಡಿನ್ನರ್' ವ್ಯವಸ್ಥೆಗಳು ಮದ್ಯದ ಮಾರಾಟಕ್ಕೆ ಪೂರಕವಾಗಿವೆ. ಭಾರಿ ಪ್ರಮಾಣದ ಮದ್ಯದ ಬೇಡಿಕೆಯನ್ನು ಪೂರೈಸಲು ಕೆಎಸ್‌ಬಿಸಿಎಲ್ ಡಿಪೋಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿವೆ. ಕ್ರಿಸ್‌ಮಸ್‌ನಿಂದಲೇ ಮದ್ಯದ ಅಂಗಡಿಗಳು ಮತ್ತು ಬಾರ್‌ಗಳು ಹೆಚ್ಚಿನ ಪ್ರಮಾಣದ ಸ್ಟಾಕ್ ಅನ್ನು ಸಂಗ್ರಹಿಸಿಟ್ಟುಕೊಳ್ಳಲಾರಂಭಿಸಿವೆ. ಹೊಸ ವರ್ಷದ ಆಚರಣೆಗಾಗಿ ಸರ್ಕಾರವು ಬಾರ್ ಮತ್ತು ರೆಸ್ಟೋರೆಂಟ್‌ಗಳ ಅವಧಿಯನ್ನು ರಾತ್ರಿ 1 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿದೆ. ಇದು ಮಾರಾಟ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ನೆರೆ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಸಾಗಣೆಯಾಗುವ ಸಾಧ್ಯತೆ ಇರುವುದರಿಂದ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತದೆ.
ಮದ್ಯ ಮಾರಾಟದ ಮೇಲೆ ಬೆಲೆ ಏರಿಕೆಯ ಪ್ರಭಾವ
ಸರ್ಕಾರವು ಈ ವರ್ಷ ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವುದರಿಂದ, ಸಣ್ಣ ಮಟ್ಟದ ಗ್ರಾಹಕರು ಖರೀದಿಯನ್ನು ಸ್ವಲ್ಪ ಕಡಿಮೆ ಮಾಡಬಹುದು. ಆದರೆ, ಹೊಸ ವರ್ಷದಂತಹ ವಿಶೇಷ ದಿನದಂದು ಗ್ರಾಹಕರು ಬೆಲೆಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ವ್ಯಾಪಾರಿಗಳ ಅನುಭವ. ಇದೇ ಕಾರಣಕ್ಕೆ ವಹಿವಾಟಿನ ಮೊತ್ತವು 400 ಕೋಟಿ ರೂ.ನಿಂದ 700 ಕೋಟಿ ರೂ.ಗೆ ಜಿಗಿಯುವ ನಿರೀಕ್ಷೆಯಿದೆ.
ಹೊಸ ವರ್ಷದ ಆಚರಣೆಯು ರಾಜ್ಯದ ಆರ್ಥಿಕತೆಗೆ ಚೈತನ್ಯ ನೀಡುವ ವಿಷಯ ನಿಜ. 700 ಕೋಟಿ ರೂಪಾಯಿಗಳ ವಹಿವಾಟು ರಾಜ್ಯದ ಆರ್ಥಿಕ ಶಕ್ತಿಯನ್ನು ಬಿಂಬಿಸುತ್ತದೆ. ಆದರೆ, ಅಬಕಾರಿ ಇಲಾಖೆ ಮೂಲಗಳ ಪ್ರಕಾರ ವಾರದ ಮಧ್ಯೆ ಹಬ್ಬ ಬಂದಿರುವುದು ಮಾರಾಟದ ಮೇಲೆ ಸಣ್ಣ ಮಟ್ಟದ ಪರಿಣಾಮ ಬೀರಬಹುದು. ಸರ್ಕಾರಕ್ಕೆ ಭರ್ಜರಿ ಆದಾಯ ಹರಿದುಬರುವ ನಿರೀಕ್ಷೆಯ ನಡುವೆ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಈ ಬಾರಿಯ ಹೊಸ ವರ್ಷದ ಅತಿದೊಡ್ಡ ಸವಾಲಾಗಿದೆ.
ಎಂಎಸ್‌ಐಎಲ್‌ನಲ್ಲಿ 150-200 ಕೋಟಿ ರೂ. ವಹಿವಾಟು ನಿರೀಕ್ಷೆ
ಎಂಎಸ್‌ಐಎಲ್ ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾಗಿದ್ದು, ಮದ್ಯ ಮಾರಾಟದಲ್ಲಿ ಅತ್ಯಂತ ನಂಬಿಕಸ್ತ ಮತ್ತು ಜನಪ್ರಿಯ ಮಳಿಗೆಯಾಗಿ ಹೊರಹೊಮ್ಮಿದೆ. ಈ ವರ್ಷ ರಾಜ್ಯದ ಒಟ್ಟು ಮದ್ಯದ ವಹಿವಾಟು 600-700 ಕೋಟಿ ರೂ. ತಲುಪುವ ನಿರೀಕ್ಷೆಯಿದ್ದರೆ, ಇದರಲ್ಲಿ ಎಂಎಸ್‌ಐಎಲ್ ಸಂಸ್ಥೆಯ ಪಾಲು ಮಾತ್ರ ಸುಮಾರು 150 ರಿಂದ 200 ಕೋಟಿ ರೂ. ನಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಎಂಎಸ್‌ಐಎಲ್ ಮಳಿಗೆಗಳಲ್ಲಿ ಮದ್ಯವನ್ನು ಎಂಆರ್‌ಪಿ ದರದಲ್ಲಿ ಮಾರಾಟ ಮಾಡುವುದರಿಂದ, ಹೊಸ ವರ್ಷದ ಸಂಭ್ರಮದ ವೇಳೆ ಸಾಮಾನ್ಯ ಮತ್ತು ಮಧ್ಯಮ ವರ್ಗದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಅಲ್ಲದೆ, ಇತ್ತೀಚೆಗೆ ಸರ್ಕಾರವು ಹಲವಾರು ಕಡೆಗಳಲ್ಲಿ ಹೊಸ ಎಂಎಸ್‌ಐಎಲ್ ಮಳಿಗೆಗಳನ್ನು ಆರಂಭಿಸಿರುವುದು ಈ ಬಾರಿ ವಹಿವಾಟು ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಎಂಎಸ್‌ಐಎಲ್‌ನ ವಾರ್ಷಿಕ ಮತ್ತು ವಿಶೇಷ ದಿನಗಳ ವಹಿವಾಟು ಪ್ರತಿ ವರ್ಷ ಶೇ.15 ರಿಂದ 20ರಷ್ಟು ಪ್ರಗತಿ ಕಾಣುತ್ತಿದೆ. 2023ರ ಡಿ.31ರಂದು ಹೊಸ ವರ್ಷದ ಸ್ವಾಗತದ ವೇಳೆ ಎಂಎಸ್‌ಐಎಲ್ ಮಳಿಗೆಗಳಲ್ಲಿ ಒಂದೇ ದಿನ ಸುಮಾರು 75 ರಿಂದ 85 ಕೋಟಿ ರೂ. ಮದ್ಯ ಮಾರಾಟವಾಗಿತ್ತು. ಆ ವರ್ಷ ಇಡೀ ರಾಜ್ಯದ ಒಟ್ಟು ಮಾರಾಟದಲ್ಲಿ ಎಂಎಸ್‌ಐಎಲ್ ಗಮನಾರ್ಹ ಪಾಲನ್ನು ಹೊಂದಿತ್ತು. ವಿಶೇಷವಾಗಿ ಬಿಯರ್ ಮಾರಾಟದಲ್ಲಿ ಈ ಸಂಸ್ಥೆ ದಾಖಲೆ ಬರೆದಿತ್ತು. 2024ರ ಡಿ.31ರ ವಹಿವಾಟು ಹೆಚ್ಚಳವಾಗಿದೆ. ಕಳೆದ ವರ್ಷ ಮದ್ಯದ ದರಗಳಲ್ಲಿ ಏರಿಕೆಯಾಗಿದ್ದರೂ, ಎಂಎಸ್‌ಐಎಲ್ ಮಳಿಗೆಗಳ ಮುಂದೆ ಕಿಲೋಮೀಟರ್ ಉದ್ದದ ಸಾಲು ಕಂಡುಬಂದಿತ್ತು. ಆ ಒಂದೇ ದಿನದ ವಹಿವಾಟು ಸರಿಸುಮಾರು 100 ರಿಂದ 115 ಕೋಟಿ ರೂ. ಗಡಿ ದಾಟಿತ್ತು. ಬೆಂಗಳೂರು ಒಂದರಲ್ಲೇ ಇರುವ ಎಂಎಸ್‌ಐಎಲ್ ಮಳಿಗೆಗಳು ಸಿಂಹಪಾಲನ್ನು (ಅಂದಾಜು 40 ಕೋಟಿ ರೂ.) ನೀಡಿದ್ದವು ಎಂದು ಅಬಕಾರಿ ಇಲಾಖೆಯ ಮೂಲಗಳು ಹೇಳಿವೆ.
ಖಾಸಗಿ ಬಾರ್‌ಗಳಲ್ಲಿ ಸರ್ವಿಸ್ ಚಾರ್ಜ್ ಅಥವಾ ಹೆಚ್ಚುವರಿ ಹಣ ವಸೂಲಿ ಮಾಡುವ ಭೀತಿ ಇರುತ್ತದೆ. ಆದರೆ ಎಂಎಸ್‌ಐಎಲ್‌ನಲ್ಲಿ ನಿಗದಿತ ದರವನ್ನೇ ಪಡೆಯುವುದರಿಂದ ಗ್ರಾಹಕರಿಗೆ ವಿಶ್ವಾಸ ಹೆಚ್ಚು. ಸರ್ಕಾರಿ ಮಳಿಗೆಗಳಾಗಿರುವುದರಿಂದ ಇಲ್ಲಿ ನಕಲಿ ಮದ್ಯದ ಹಾವಳಿ ಇರುವುದಿಲ್ಲ ಎಂಬುದು ಗ್ರಾಹಕರ ನಂಬಿಕೆ ಎಂದು ಹೇಳಲಾಗಿದೆ.
ರಾಜ್ಯಾದ್ಯಂತ ಪ್ರಸ್ತುತ ಎಂಎಸ್‌ಐಎಲ್ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಪ್ರಮುಖ ವಸತಿ ಪ್ರದೇಶಗಳಲ್ಲಿ ಮಳಿಗೆಗಳಿರುವುದು ಮಾರಾಟಕ್ಕೆ ಅನುಕೂಲಕರವಾಗಿದೆ. ಹಿಂದೆ ಎಂಎಸ್‌ಐಎಲ್‌ನಲ್ಲಿ ಕೇವಲ ಕಡಿಮೆ ದರದ ಮದ್ಯ ಸಿಗುತ್ತಿತ್ತು. ಈಗ ದುಬಾರಿ ಬೆಲೆಯ ಸ್ಕಾಚ್ ಮತ್ತು ಪ್ರೀಮಿಯಂ ಬಿಯರ್‌ಗಳು ಸಹ ಲಭ್ಯವಿರುವುದು ವಹಿವಾಟಿನ ಮೊತ್ತವನ್ನು ಹೆಚ್ಚಿಸಿದೆ.

