MSIL considering supermarket for government employees on the model of police canteen
x

ಸಾಂದರ್ಭಿಕ ಚಿತ್ರ

ಪೊಲೀಸ್ ಕ್ಯಾಂಟೀನ್ ಮಾದರಿಯಲ್ಲಿ ಎಂಎಸ್‌ಐಎಲ್‌ ಸೂಪರ್‌ ಮಾರ್ಕೆಟ್‌; ಯಾರಿಗಾಗಿ ಆರಂಭ, ಲಾಭವೇನು?

ಅರೆ ಸೇನಾ ಪಡೆಗಳ ನೌಕರರಿಗೆ ಕ್ಯಾಂಟೀನ್‌ ಸೌಲಭ್ಯವಿದೆ. ರಾಜ್ಯದಲ್ಲಿ ಆರು ಲಕ್ಷ ಸರ್ಕಾರಿ ನೌಕರರಿದ್ದಾರೆ. ಅವರ ಕುಟುಂಬಗಳ ಹಿತದೃಷ್ಟಿಯಿಂದ ಇಂಥದ್ದೊಂದು ಉಪಕ್ರಮ ಆರಂಭಿಸುವ ಆಲೋಚನೆ ಇದೆ ಎಂದು ಸಚಿವ ಎಂ.ಬಿ ಪಾಟೀಲ್‌ ತಿಳಿಸಿದ್ದಾರೆ.


Click the Play button to hear this message in audio format

ಪೊಲೀಸರು ಮತ್ತು ಅರೆಸೇನಾ ಪಡೆಗಳಿಗಿರುವ ಕ್ಯಾಂಟೀನ್ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ರಿಯಾಯಿತಿ ದರದ ದೈನಂದಿನ ವಸ್ತುಗಳ ಖರೀದಿಗಾಗಿ ಎಂಎಸ್‌ಐಎಲ್‌ ಸೂಪರ್‌ ಮಾರ್ಕೆಟ್‌ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಸೂಪರ್‌ ಮಾರ್ಕೆಟ್‌ಗಳಲ್ಲಿ ಸರ್ಕಾರಿ ನೌಕರರಿಗೆ ಮಾತ್ರ ಪ್ರತಿಯೊಂದು ವಸ್ತುವೂ ರಿಯಾಯಿತಿ ದರದಲ್ಲಿ ಸಿಗಲಿವೆ.

ರಾಜ್ಯದಲ್ಲಿ ಈಗಾಗಲೇ ಪೊಲೀಸ್‌ ಸಿಬ್ಬಂದಿಗೆ ಕ್ಯಾಂಟೀನ್‌ ವ್ಯವಸ್ಥೆ ಇದೆ. ಸೇನೆ ಮತ್ತು ಅರೆ ಸೇನಾ ಪಡೆಗಳ ಸಿಬ್ಬಂದಿಗೂ ಕ್ಯಾಂಟೀನ್‌ ಸೌಲಭ್ಯವಿದೆ. ಇದೀಗ ರಾಜ್ಯದಲ್ಲಿ ಆರು ಲಕ್ಷ ಸರ್ಕಾರಿ ನೌಕರರಿದ್ದು, ಅವರ ಕುಟುಂಬಗಳ ಹಿತದೃಷ್ಟಿಯಿಂದ ಹಿತದೃಷ್ಟಿಯಿಂದ ಇಂಥದ್ದೊಂದು ಉಪಕ್ರಮ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಆರ್ಥಿಕ ಇಲಾಖೆ ಜೊತೆ ಚರ್ಚೆ

ರಾಜ್ಯ ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ಅಗತ್ಯ ವಸ್ತುಗಳನ್ನು ಒದಗಿಸಲು ಎಂಎಸ್‌ಐಎಲ್‌ ಮಳಿಗೆ ಸ್ಥಾಪಿಸುವ ಸಂಬಂಧ ಅಥವಾ ತೆರಿಗೆ ವಿನಾಯಿತಿ ನೀಡುವ ಕುರಿತು ಆರ್ಥಿಕ ಇಲಾಖೆಯ ಜತೆ ಚರ್ಚಿಸಲಾಗುವುದು. ಸೂಪರ್‌ ಮಾರ್ಕೆಟ್‌ ಮಳಿಗೆ ಆರಂಭಿಸುವ ಸಾಧ್ಯತೆಗಳ ಕುರಿತು ಒಂದು ತಿಂಗಳಲ್ಲಿ ವಿಸ್ತೃತ ವರದಿ ಸಲ್ಲಿಸುವಂತೆ ಎಂಎಸ್‌ಐಎಲ್‌ಗೆ ಸೂಚಿಸಲಾಗಿದೆ ಎಂದು ಬುಧವಾರ ಖನಿಜ ಭವನದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಬೃಹತ್‌ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಸಚಿವ ಎಂ.ಬಿ ಪಾಟೀಲ್‌ ತಿಳಿಸಿದರು.

ನಗರದಲ್ಲಿ ಐದು ಮಳಿಗೆ ಸ್ಥಾಪನೆ

ಉದ್ದೇಶಿತ ಎಂಎಸ್‌ಐಎಲ್‌ ಸೂಪರ್‌ ಮಾರ್ಕೆಟ್‌ನಲ್ಲಿ ಸರ್ಕಾರಿ ನೌಕರರಿಗೆ ಪ್ರತಿಯೊಂದು ಪದಾರ್ಥವೂ ರಿಯಾಯಿತಿ ದರದಲ್ಲಿ ಸಿಗುವಂತಾದರೆ ಉತ್ತಮವಾಗಿರಲಿದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಐದು ಮಳಿಗೆಗಳನ್ನು ತೆರೆಯುವ ಆಲೋಚನೆ ಇದೆ. ನಂತರದ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲೂ ಸೌಲಭ್ಯ ವಿಸ್ತರಣೆಗೆ ಚಿಂತನೆ ನಡೆಸಲಾಗಿದೆ. ಅಧ್ಯಯನ ವರದಿ ಬಂದ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಂ.ಬಿ.ಪಾಟೀಲ್‌ ತಿಳಿಸಿದರು.

ಎಂಎಸ್‌ಐಎಲ್‌ಗೆ ಆದಾಯದ ಮೂಲ

ಸೂಪರ್‌ ಮಾರ್ಕೆಟ್‌ ಸ್ಥಾಪಿಸುವುದರಿಂದ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್‌ ಚಟುವಟಿಕೆಯೂ ವಿಸ್ತರಿಸಲಿದೆ. ಜತೆಗೆ ಆದಾಯದ ಮೂಲವಾಗಲಿದೆ. ಲಕ್ಷಾಂತರ ಸರ್ಕಾರಿ ನೌಕರರ ಕುಟುಂಬಗಳಿಗೂ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳ ಜತೆ ಮಾತುಕತೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಎಂಎಸ್‌ಐಎಲ್‌ನ ಚಟುವಟಿಕೆಗಳು ಈಗ ಸೀಮಿತ ಪ್ರಮಾಣದಲ್ಲಿವೆ. ಇದಕ್ಕೆ ಮತ್ತಷ್ಟು ಕಸುವು ತುಂಬಿ, ಆರ್ಥಿಕವಾಗಿ ಸದೃಢಗೊಳಿಸಬೇಕೆಂಬ ಆಲೋಚನೆ ಇದೆ. ಇದರಿಂದ ಅಪಾರ ಸಂಖ್ಯೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೊಲೀಸ್‌ ಕ್ಯಾಂಟೀನ್‌ ಎಲ್ಲಿವೆ?

ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಪೊಲೀಸ್ ಕ್ಯಾಂಟೀನ್ಗಳು ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರಿನ ಯಲಹಂಕ ಸೆಂಟ್ರಲ್‌ ಪೊಲೀಸ್‌ ಕ್ಯಾಂಟೀನ್ ಇದೆ. ಇದಲ್ಲದೇ ಎಚ್‌ಎಸ್‌ಆರ್‌ ಲೇಔಟ್ನ ಕೆಎಸ್‌ಆರ್‌ಪಿ ರಿಸರ್ವ್‌ ಪೊಲೀಸ್‌ ಕ್ಯಾಂಟೀನ್, ಕೋರಮಂಗಲದ ಸಂತೋಷಪುರಂ, ವೆಂಕಟಾಪುರದಲ್ಲಿ ಕ್ಯಾಂಟೀನ್‌ ಇದೆ. ಕೋಲಾರ, ತುಮಕೂರಿನಲ್ಲಿ ಪೊಲೀಸ್ ಕ್ಯಾಂಟೀನ್‌ಗಳಿವೆ. ಇಲ್ಲಿ ಎಲ್ಲಾ ವಸ್ತುಗಳು ರಿಯಾಯಿತಿ ದರದಲ್ಲಿ ಸಿಗಲಿವೆ.

Read More
Next Story