ಅಬಕಾರಿ ಸನ್ನದು ಹರಾಜು| ಕೋರ್ಟ್ ತಡೆ:  600 ಕೋಟಿ ಆದಾಯ ತರುವ ಯತ್ನಕ್ಕೆ ಹಿನ್ನಡೆ
x

ಅಬಕಾರಿ ಸನ್ನದು ಹರಾಜು| ಕೋರ್ಟ್ ತಡೆ: 600 ಕೋಟಿ ಆದಾಯ ತರುವ ಯತ್ನಕ್ಕೆ ಹಿನ್ನಡೆ

ಮದ್ಯದ ಲೈಸೆನ್ಸ್‌ಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಈ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದ್ದು, ಸರ್ಕಾರದ ನಡೆ ಕುತೂಹಲ ಮತ್ತು ಕಾನೂನು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.


Click the Play button to hear this message in audio format

ರಾಜ್ಯ ಸರ್ಕಾರವು ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ತನ್ನ ಆದಾಯದ ಮೂಲಗಳನ್ನು ವಿಸ್ತರಿಸಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಿದ್ದು, ಸುಮಾರು 600 ಕೋಟಿ ರೂ. ಆದಾಯಗಳಿಸುವ ಅಬಕಾರಿ ಇಲಾಖೆ ಪ್ರುಯತ್ನಕ್ಕೆ ಕಾನೂನು ಅಡೆತಡೆ ಎದುರಾಗಿದೆ. ಆ ಮೂಲಕ ಸರ್ಕಾರದ ಯತ್ನಕ್ಕೆ ಹಿನ್ನಡೆ ಉಂಟಾಗಿದೆ.

ಅಬಕಾರಿ ಇಲಾಖೆಯು ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತರುವ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಇದೀಗ, ದಶಕಗಳಿಂದ ಬಳಕೆಯಾಗದೆ ಅಥವಾ ಬಾಕಿ ಉಳಿದಿರುವ ಮದ್ಯದ ಪರವಾನಗಿಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡಲು ಸರ್ಕಾರ ಮುಂದಾಗಿದೆ.

ಸುಮಾರು 579ಕ್ಕೂ ಹೆಚ್ಚು ಲೈಸೆನ್ಸ್‌ಗಳನ್ನು ಹರಾಜು ಹಾಕಿ, ಅಂದಾಜು 600 ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ, ಈ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದ್ದು, ಸರ್ಕಾರದ ನಡೆ ಕುತೂಹಲ ಮತ್ತು ಕಾನೂನು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ನ್ಯಾಯಾಲಯದ ಮಧ್ಯಂತರ ತಡೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರುವ ಉದ್ದೇಶದಿಂದ ದೀರ್ಘಕಾಲದಿಂದ ಬಳಕೆಯಾಗದೆ ಉಳಿದಿದ್ದ ಅಥವಾ ನವೀಕರಣಗೊಳ್ಳದ ಅಬಕಾರಿ ಸನ್ನದುಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.

ಅಲ್ಲದೇ, ಡಿಸೆಂಬರ್ ಅಂತ್ಯದೊಳಗೆ ಪ್ರಕ್ರಿಯೆ ಮುಗಿಸುವ ಸರ್ಕಾರದ ಲೆಕ್ಕಾಚಾರ ತಲೆಕೆಳಗಾಗಿದೆ. 2025-26ನೇ ಸಾಲಿನ ಆಯವ್ಯಯದಲ್ಲಿ ಸಂಪನ್ಮೂಲ ಕ್ರೋಢೀಕರಣದ ಭಾಗವಾಗಿ, ಅಬಕಾರಿ ಇಲಾಖೆಯು ಹಿಂದೆ ನವೀಕರಣವಾಗದ ಅಥವಾ ಅವಧಿ ಮುಗಿದಿದ್ದ ಸುಮಾರು 500ಕ್ಕೂ ಹೆಚ್ಚು ಅಬಕಾರಿ ಸನ್ನದುಗಳನ್ನು ಗುರುತಿಸಿತ್ತು. ಇವುಗಳನ್ನು ಇ-ಹರಾಜು ಮಾಡುವ ಮೂಲಕ ದೊಡ್ಡ ಮಟ್ಟದ ಆದಾಯ ಗಳಿಸಲು ಸರ್ಕಾರ ನಿರ್ಧರಿಸಿತ್ತು.

ಈ ಉದ್ದೇಶಕ್ಕಾಗಿಯೇ ಸರ್ಕಾರವು ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ- 2025 ಅನ್ನು ಜಾರಿಗೆ ತಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಹರಾಜು ಪ್ರಕ್ರಿಯೆಯನ್ನು ಸುಗಮಗೊಳಿಸಲು ಸರ್ಕಾರವು ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು 1968ಕ್ಕೆ ತಿದ್ದುಪಡಿ ತಂದಿದೆ.

ನ.3 ರಂದು ಹೊರಡಿಸಲಾದ ಅಂತಿಮ ಅಧಿಸೂಚನೆಯಂತೆ, ಹೊಸ ನಿಯಮಗಳನ್ನು "ಕರ್ನಾಟಕ ಅಬಕಾರಿ (ಪರವಾನಗಿಗಳ ಗುತ್ತಿಗೆ) ಮತ್ತು ತಿದ್ದುಪಡಿ ನಿಯಮಗಳು, 2025" ಎಂದು ಕರೆಯಲಾಗುತ್ತದೆ. ಇದಕ್ಕಾಗಿ ಸಿಎಲ್-2 ಮತ್ತು ಸಿಎಲ್-9 ಅಡಿಯಲ್ಲಿ ಎರಡು ಹೊಸ ವರ್ಗಗಳನ್ನು ಸೃಷ್ಟಿಸಲಾಗಿದೆ.

ಸರ್ಕಾರದ ಈ ತಿದ್ದುಪಡಿ ನಿಯಮಗಳನ್ನು ಪ್ರಶ್ನಿಸಿ ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ. ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯವು ಗುರುವಾರಕ್ಕೆ (ಡಿ.18) ಅರ್ಜಿಯ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ವಿಚಾರಣೆ ನಡೆಸಬೇಕಾಗಿರುವ ಕಾರಣ ಗುರುವಾರಕ್ಕೆ ಮುಂದೂಡಲಾಗಿದೆ. ಸರ್ಕಾರಕ್ಕೆ ತಡೆಯಾಜ್ಞೆಯನ್ನು ತೆರವುಗೊಳಿಸಲು ಅಥವಾ ಮಾರ್ಪಾಡು ಕೋರಿ ಅರ್ಜಿ ಸಲ್ಲಿಸಲು ಸ್ವತಂತ್ರವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮದ್ಯದ ಮಳಿಗೆಗಳಿಗೆ ಬೇಡಿಕೆ

ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಮದ್ಯದ ಬೇಡಿಕೆಯೂ ಹೆಚ್ಚಿದೆ. ಆದರೆ ಕಳೆದ ಹಲವು ದಶಕಗಳಿಂದ ಹೊಸ ಮದ್ಯದ ಲೈಸೆನ್ಸ್‌ಗಳ ಮಂಜೂರಾತಿಯನ್ನು (ವಿಶೇಷವಾಗಿ ಸಿಎಲ್-2 ಮತ್ತು ಸಿಎಲ್-9) ತಡೆಹಿಡಿಯಲಾಗಿತ್ತು. ಈಗ ಲಭ್ಯವಿರುವ 579 ಲೈಸೆನ್ಸ್‌ಗಳು ಹೊಸದಾಗಿ ಸೃಷ್ಟಿಸಿದವುಗಳಲ್ಲ, ಬದಲಾಗಿ ಇವು ಹಳೆಯ ಮಂಜೂರಾತಿಗಳಾಗಿದ್ದು, ನಾನಾ ಕಾರಣಗಳಿಂದ ಬಳಕೆಯಾಗದೆ ಉಳಿದಿದ್ದವು. ಇವುಗಳನ್ನು ಹರಾಜು ಹಾಕಲು ಮುಂದಾಗಿದೆ. ಸರ್ಕಾರವು ಪ್ರಮುಖವಾಗಿ ಸಿಎಲ್-2 (ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳು), ಸಿಎಲ್-9 (ಬಾರ್ ಮತ್ತು ರೆಸ್ಟೋರೆಂಟ್) ಹಾಗೂ ಸಿಎಲ್-11ಸಿ (ಎಂಎಸ್‌ಐಎಲ್ - ಸರ್ಕಾರಿ ಸ್ವಾಮ್ಯದ ಮಳಿಗೆಗಳು) ಲೈಸೆನ್ಸ್‌ಗಳನ್ನು ಹರಾಜು ಹಾಕಲಿದೆ. ಹರಾಜಿಗೆ ಇಡಲಾಗಿರುವ ಬಹುಪಾಲು ಲೈಸೆನ್ಸ್‌ಗಳು ಬೆಂಗಳೂರು ನಗರಕ್ಕೆ ಸೇರಿವೆ.

ಬೆಂಗಳೂರು ವಿಶ್ವದ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ಇಲ್ಲಿನ ಐಟಿ ಹಬ್‌ಗಳು ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಮದ್ಯದ ಮಳಿಗೆಗಳಿಗೆ ಭಾರೀ ಬೇಡಿಕೆಯಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಗಳೂರು ಮತ್ತು ಬೆಳಗಾವಿಯಂತಹ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿಯೂ ಪರವಾನಿಗೆ ಲಭ್ಯವಿವೆ. ಸರ್ಕಾರವು ಈ ಲೈಸೆನ್ಸ್‌ಗಳಿಗೆ ಮೂಲ ಬೆಲೆಯನ್ನು ನಿಗದಿಪಡಿಸಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ (ಬೆಂಗಳೂರು ಸೇರಿ) ಕನಿಷ್ಠ 1.5 ಕೋಟಿ ರೂ. ಮತ್ತು ಇತರೆಡೆ 80 ಲಕ್ಷ ರೂ. ನಿಗದಿಗೊಳಿಸಿದೆ ಎಂದು ಮೂಲಗಳು ಹೇಳಿವೆ. ಇದು ಕೇವಲ ಆರಂಭಿಕ ಬೆಲೆಯಾಗಿದ್ದು, ಹರಾಜಿನಲ್ಲಿ ಇದು ಇನ್ನೂ ಹೆಚ್ಚಿನ ಮೊತ್ತಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ಬಿಡ್ದಾರರು ಸುಮಾರು 50 ಸಾವಿರ ರೂ.ಗಳ ಹಿಂತಿರುಗಿಸಲಾಗದ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಇದರ ಜೊತೆಗೆ, ನಿಗದಿಪಡಿಸಿದ ಮೂಲ ಬೆಲೆಯ ಶೇ. 3 ರಷ್ಟು ಮೊತ್ತವನ್ನು ಮುಂಗಡ ಠೇವಣಿಯಾಗಿ ನೀಡಬೇಕಾಗುತ್ತದೆ. ಈ ಮೊತ್ತವು ಹರಾಜಿನಲ್ಲಿ ಸೋತವರಿಗೆ ಹಿಂತಿರುಗಿಸಲಾಗುತ್ತದೆ.

600 ಕೋಟಿ ರೂ. ಆದಾಯದ ಲೆಕ್ಕಾಚಾರ

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಆರ್ಥಿಕವಾಗಿ ಹೆಚ್ಚಿನ ಒತ್ತಡದಲ್ಲಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯಿಂದ ಬರುವ ಆದಾಯ ಅತ್ಯಂತ ನಿರ್ಣಾಯಕವಾಗಿದೆ. ಸಾಮಾನ್ಯವಾಗಿ ಲೈಸೆನ್ಸ್ ಶುಲ್ಕ ವಾರ್ಷಿಕ ನವೀಕರಣದ ಮೂಲಕ ಬರುತ್ತದೆ. ಆದರೆ, ಈ ಹರಾಜು ಪ್ರಕ್ರಿಯೆಯು 'ಒನ್ ಟೈಮ್' ದೊಡ್ಡ ಮೊತ್ತದ ಆದಾಯವನ್ನು ತಂದುಕೊಡಲಿದೆ. 579 ಲೈಸೆನ್ಸ್‌ಗಳಿಂದ ಕನಿಷ್ಠ 600 ಕೋಟಿ ರೂ. ನಿರೀಕ್ಷಿಸಲಾಗಿದೆ.

ಬೆಂಗಳೂರಿನಂತಹ ಪ್ರಮುಖ ಸ್ಥಳಗಳಲ್ಲಿ ಒಂದು ಲೈಸೆನ್ಸ್ 2 ರಿಂದ 3 ಕೋಟಿಗೂ ಹೆಚ್ಚು ಬೆಲೆಗೆ ಹರಾಜಾಗುವ ಸಾಧ್ಯತೆಯಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಳೆಯ ಲೈಸೆನ್ಸ್‌ಗಳನ್ನು ಒಬ್ಬರಿಂದ ಒಬ್ಬರಿಗೆ ವರ್ಗಾಯಿಸಲು ಅನಧಿಕೃತವಾಗಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತದೆ.

ಸರ್ಕಾರವೇ ಅಧಿಕೃತವಾಗಿ ಹರಾಜು ನಡೆಸುವುದರಿಂದ, ಈ ಹಣವು ಮಧ್ಯವರ್ತಿಗಳ ಪಾಲಾಗುವ ಬದಲು ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ. ಇದು ಪಾರದರ್ಶಕತೆಯನ್ನು ತರುವ ಒಂದು ಪ್ರಯತ್ನವೂ ಆಗಿರುತ್ತದೆ ಎಂದು ತಿಳಿದುಬಂದಿದೆ.

ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರದ ಸ್ವಾಮ್ಯದ ಉದ್ಯಮವಾದ 'ಎಂಎಸ್‌ಟಿಸಿ ಲಿಮಿಟೆಡ್' ಸಂಸ್ಥೆಗೆ ಜವಾಬ್ದಾರಿ ನೀಡಲಾಗಿದೆ. ಇದು ಸಂಪೂರ್ಣವಾಗಿ ಆನ್‌ಲೈನ್ (ಎಲೆಕ್ಟ್ರಾನಿಕ್ ಹರಾಜು) ಮೂಲಕ ನಡೆಯಲಿದ್ದು, ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಲಿದೆ.

ಹೈಕೋರ್ಟ್ ತಡೆ ಮತ್ತು ಕಾನೂನು ಸಂಘರ್ಷ

ಸರ್ಕಾರದ ಈ ನಿರ್ಧಾರ ಸುಗಮವಾಗಿ ಜಾರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಾನೂನು ಸಂಘರ್ಷಗಳು ಈಗಾಗಲೇ ಶುರುವಾಗಿದೆ. ಹೈಕೋರ್ಟ್ ಈ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿದೆ. ಸರ್ಕಾರದ ಈ ತಿದ್ದುಪಡಿ ನಿಯಮಗಳನ್ನು ಪ್ರಶ್ನಿಸಿ 'ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್' ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಆರಂಭಗೊಂಡಿದೆ.

ಅರ್ಜಿದಾರರ ಪರ ವಕೀಲರು, 1992-94ರ ಅವಧಿಯಲ್ಲಿ ಅಥವಾ ನಂತರದ ದಿನಗಳಲ್ಲಿ ಮದ್ಯದ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿ, ಅದಕ್ಕೆ ಬೇಕಾದ ಠೇವಣಿ ಅಥವಾ ಶುಲ್ಕವನ್ನು ಭರಿಸಿದ್ದ ಅನೇಕರು ಇಂದಿಗೂ ಲೈಸೆನ್ಸ್‌ಗಾಗಿ ಕಾಯುತ್ತಿದ್ದಾರೆ. ನಾವು ಅಂದೇ ಅರ್ಜಿ ಸಲ್ಲಿಸಿದ್ದೇವೆ, ನಮಗೆ ಆದ್ಯತೆ ನೀಡದೆ, ಈಗ ಅದನ್ನು ಹರಾಜು ಹಾಕುವುದು ಎಷ್ಟು ಸರಿ? ಎಂಬುದು ಅರ್ಜಿದಾರರ ಪ್ರಶ್ನೆಯಾಗಿದೆ. ಅಂದು ಚಾಲ್ತಿಯಲ್ಲಿದ್ದ ನಿಯಮಗಳ ಪ್ರಕಾರ ತಮಗೆ ಲೈಸೆನ್ಸ್ ನೀಡಬೇಕು. ಒಮ್ಮೆ ಸನ್ನದುಗಳು ನವೀಕರಣಗೊಳ್ಳದಿದ್ದರೆ ಅಥವಾ ಲ್ಯಾಪ್ಸ್ ಆದರೆ, ಅವು ಸಹಜವಾಗಿಯೇ ರದ್ದಾಗುತ್ತವೆ. ಅಸ್ತಿತ್ವದಲ್ಲಿಲ್ಲದ ಅಥವಾ ರದ್ದಾದ ಸನ್ನದುಗಳನ್ನು ಸರ್ಕಾರವು ಹರಾಜು ಮಾಡಲು ಹೊರಟಿರುವುದು ಕಾನೂನುಬಾಹಿರ ಎಂದು ವಾದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸರ್ಕಾರವು ಪ್ರತಿವಾದ ಮಂಡಿಸಿದೆ. ಮದ್ಯ ಮಾರಾಟ ಮಾಡುವುದು ಮೂಲಭೂತ ಹಕ್ಕಲ್ಲ, ಅದು ಸರ್ಕಾರದ ವಿವೇಚನೆಗೆ ಒಳಪಟ್ಟ ವಿಚಾರ.

ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಲೈಸೆನ್ಸ್ ನೀಡುವ ಅಧಿಕಾರ ಸರ್ಕಾರಕ್ಕಿದೆ. ಹಳೆಯ ಅರ್ಜಿಗಳನ್ನು ಪರಿಗಣಿಸಲು ಈಗಿನ ನಿಯಮಗಳಲ್ಲಿ ಅವಕಾಶವಿಲ್ಲ ಎಂಬುದು ಸರ್ಕಾರದ ನಿಲುವಾಗಿದೆ.

ಮದ್ಯದ ಲಾಬಿ ಮತ್ತು ಮಾರುಕಟ್ಟೆ ಪೈಪೋಟಿ

ಕರ್ನಾಟಕದಲ್ಲಿ ಮದ್ಯದ ಲಾಬಿ ಅತ್ಯಂತ ಪ್ರಬಲವಾಗಿದೆ. ಹೊಸ ಲೈಸೆನ್ಸ್‌ಗಳ ಹರಾಜು ಹಾಲಿ ಇರುವ ಮದ್ಯದ ದೊರೆಗಳಿಗೆ ನುಂಗಲಾರದ ತುತ್ತಾಗಿದೆ. ಪ್ರಸ್ತುತ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಕೆಲವೇ ಕೆಲವು ಬಾರ್‌ಗಳು ಅಥವಾ ವೈನ್ ಶಾಪ್‌ಗಳಿವೆ. ಇವರು ಆ ಪ್ರದೇಶದಲ್ಲಿ ಏಕಸ್ವಾಮ್ಯ ಸಾಧಿಸಿರುತ್ತಾರೆ.

ಹೊಸದಾಗಿ 500ಕ್ಕೂ ಹೆಚ್ಚು ಲೈಸೆನ್ಸ್‌ಗಳು ಬಂದರೆ, ಪೈಪೋಟಿ ಹೆಚ್ಚಾಗುತ್ತದೆ ಮತ್ತು ಅವರ ಲಾಭಾಂಶ ಕಡಿಮೆಯಾಗುತ್ತದೆ. ಆದ್ದರಿಂದ, ಹಾಲಿ ಲೈಸೆನ್ಸ್‌ದಾರರು ಪರೋಕ್ಷವಾಗಿ ಹರಾಜು ಪ್ರಕ್ರಿಯೆಯನ್ನು ವಿರೋಧಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲೈಸೆನ್ಸ್ ಹೊಂದಿರುವವರು ಅನಧಿಕೃತವಾಗಿ ಹೆಚ್ಚಿನ ಬೆಲೆಗೆ ಲೈಸೆನ್ಸ್ ಮಾರಾಟ ಮಾಡುವ ದಂಧೆ ನಡೆಯುತ್ತಿತ್ತು. ಈಗ ಸರ್ಕಾರವೇ ಅಧಿಕೃತವಾಗಿ ಹರಾಜಿಗೆ ಇಳಿದಿರುವುದರಿಂದ, ಕಪ್ಪು ಮಾರುಕಟ್ಟೆಗೆ ಹೊಡೆತ ಬೀಳಲಿದೆ. ಹಣಕಾಸಿನ ಶಕ್ತಿಯುಳ್ಳ ಹೊಸ ಉದ್ಯಮಿಗಳಿಗೆ ಅಧಿಕೃತವಾಗಿ ಮದ್ಯದ ವ್ಯಾಪಾರಕ್ಕೆ ಇಳಿಯಲು ಇದೊಂದು ಸುವರ್ಣಾವಕಾಶವಾಗಿದೆ. ಲಭ್ಯವಿರುವ ಬಹುಪಾಲು ಲೈಸೆನ್ಸ್‌ಗಳು ಬೆಂಗಳೂರು ನಗರಕ್ಕೆ ಸೇರಿರುವುದರಿಂದ, ನಗರದ ರಿಯಲ್ ಎಸ್ಟೇಟ್ ಮೇಲೂ ಇದು ಪರಿಣಾಮ ಬೀರಲಿದೆ.

ಸುಮಾರು 600 ಕೋಟಿ ರೂ.ಗೂ ಅಧಿಕ ಆದಾಯವನ್ನು ಈ ಹರಾಜಿನ ಮೂಲಕ ನಿರೀಕ್ಷಿಸಲಾಗಿತ್ತು. ಈ ಆದಾಯವು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅತ್ಯಗತ್ಯವಾಗಿತ್ತು. ನ್ಯಾಯಾಲಯವು ಮಧ್ಯಂತರ ತಡೆ ನೀಡಿರುವುದರಿಂದ ಹಣಕಾಸಿನ ಹರಿವಿಗೆ ತಡೆಯೊಡ್ಡಿದಂತಾಗಿದೆ. 2025-26ನೇ ಸಾಲಿನ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬೊಕ್ಕಸ ತುಂಬಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ 'ಇ-ಹರಾಜು' ಅಸ್ತ್ರವನ್ನು ಪ್ರಯೋಗಿಸಿದೆ. ನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆಯನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂಬುದರ ಮೇಲೆ ಈ ಯೋಜನೆಯ ಯಶಸ್ಸು ನಿಂತಿದೆ.

Read More
Next Story