
ಮೃತ ಮಂಜುಳಾ
ಮೈಸೂರು ಅರಮನೆ ಸ್ಫೋಟ ದುರಂತ: ತಂಗಿಯ ಸಾವಿನ ಸುದ್ದಿ ಕೇಳಿ ಆಸ್ಪತ್ರೆಯಲ್ಲಿದ್ದ ಅಣ್ಣನೂ ಸಾವು!
ಘಟನೆಯಲ್ಲಿ ನಂಜನಗೂಡಿನ ಮಂಜುಳಾ ಹಾಗೂ ಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗಾಯಗೊಂಡಿದ್ದ ಇಬ್ಬರೂ ಮೃತಪಟ್ಟಿದ್ದಾರೆ.
ಮೈಸೂರು ಅರಮನೆ ದ್ವಾರದ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುಳಾ ಅವರ ಸಾವಿನ ಸುದ್ದಿ ಕೇಳಿ ಸಹೋದರ ಕೂಡ ಮೃತಪಟ್ಟಿದ್ದಾರೆ.
ನಂಜನಗೂಡು ತಾಲೂಕಿನ ಚಾಮಲಪುರದ ನಿವಾಸಿಯಾಗಿರುವ ಮೃತ ಮಂಜುಳಾ ಅವರ ಸಹೋದರ ಪರಮೇಶ್ವರ್(60) ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ತನ್ನ ತಂಗಿಯ ಮರಣದ ವಿಷಯ ಕೇಳಿ ಶನಿವಾರ ಅಣ್ಣನೂ ಮೃತಪಟ್ಟಿದ್ದಾರೆ.
ಏನಿದು ಘಟನೆ ?
ಅರಮನೆ ಮಂಡಳಿಯು ಆಯೋಜಿಸಿದ್ದ 'ಮಾಗಿ ಉತ್ಸವ'ದ ಅಂಗವಾಗಿ ಖ್ಯಾತ ಗಾಯಕ ವಾಸುಕಿ ವೈಭವ್ ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಅರಮನೆಯ ಜಯಮಾರ್ತಂಡ ದ್ವಾರದ ಬಳಿ ರಾತ್ರಿ ಸುಮಾರು 8.30ಕ್ಕೆ ಬಲೂನ್ ವ್ಯಾಪಾರಿ ಸಲೀಂ ತನ್ನ ಸೈಕಲ್‌ನಲ್ಲಿ ತಂದಿದ್ದ ಹೀಲಿಯಂ ಸಿಲಿಂಡರ್ ಒಮ್ಮಿಂದೊಮ್ಮೆಗೆ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸಲೀಂನ ದೇಹ ಸ್ಥಳದಲ್ಲೇ ಛಿದ್ರಛಿದ್ರವಾಗಿತ್ತು. ಘಟನೆಯಲ್ಲಿ ನಂಜನಗೂಡಿನ ಮಂಜುಳಾ ಹಾಗೂ ಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಗಾಯಗೊಂಡಿದ್ದ ಇಬ್ಬರೂ ಮೃತಪಟ್ಟಿದ್ದಾರೆ.
ಮೃತ ಸಲೀಂ ಹೆಸರಲ್ಲಿ 5 ಎಕರೆ ಜಮೀನು
ಮೈಸೂರು ಅರಮನೆ ಪ್ರವೇಶದ್ವಾರದ ಬಳಿ ಬಲೂನ್ ಮಾರುತ್ತಿದ್ದ ಉತ್ತರ ಪ್ರದೇಶ ಮೂಲದ ಸಲೀಂ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು ಮೃತಪಟ್ಟಿದ್ದರು. ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮೃತ ಸಲೀಂ ಹೆಸರಲ್ಲಿ ಐದು ಎಕರೆ ಜಮೀನು ಇರವ ಮಾಹಿತಿ ಲಭ್ಯವಾಗಿದ್ದು, ಜಮೀನು ಇದ್ದರೂ ಕೃಷಿ ಕೆಲಸ ಮಾಡದೇ ಬಲೂನ್ ಮಾರಲು ಸಲೀಂ ಮೈಸೂರಿಗೆ ಏಕೆ ಬಂದಿದ್ದರು ಎಂಬುದರ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಭದ್ರತಾ ಲೋಪದ ಚರ್ಚೆ
ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳಿರುವಾಗ, ಅರಮನೆಯಂತಹ ಜಗತ್ಪ್ರಸಿದ್ಧ ಪ್ರವಾಸಿ ತಾಣದ ಬಳಿಯೇ ಇಂತಹ ಸ್ಫೋಟ ಸಂಭವಿಸಿರುವುದು ಭದ್ರತಾ ಲೋಪದ ಮೇಲೆ ಬೆಳಕು ಚೆಲ್ಲಿದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ಈಗಾಗಲೇ ಸಮಗ್ರ ತನಿಖೆಗೆ ಆದೇಶಿಸಿದ್ದು, ಅರಮನೆ ಸುತ್ತಮುತ್ತ ಬೀದಿ ವ್ಯಾಪಾರಿಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲು ಪ್ರವಾಸೋದ್ಯಮ ಇಲಾಖೆಗೆ ಸೂಚಿಸಿದ್ದಾರೆ.

