ಮೈಸೂರು ಅರಮನೆ ಬಳಿ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ: ಒಬ್ಬ ಮೃತ, ಮೂವರಿಗೆ ಗಂಭೀರ ಗಾಯ
x

ಮೈಸೂರು ಅರಮನೆ ಬಳಿ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ: ಒಬ್ಬ ಮೃತ, ಮೂವರಿಗೆ ಗಂಭೀರ ಗಾಯ

ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.


Click the Play button to hear this message in audio format

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ರಿಸ್‌ಮಸ್ ಸಂಭ್ರಮದ ನಡುವೆಯೇ ದುರಂತವೊಂದು ಸಂಭವಿಸಿದೆ. ಇಲ್ಲಿನ ಐತಿಹಾಸಿಕ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ (ಊಟಿ ರಸ್ತೆ ಬದಿ) ಬಲೂನ್ ತುಂಬುವ ನೈಟ್ರೋಜನ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಜತೆಗೆ, ಸ್ಥಳದಲ್ಲಿದ್ದ ಇತರೆ ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.

ಮಾಗಿ ಉತ್ಸವದ ಜನಸಂದಣಿ ನಡುವೆ ಅವಘಡ

ಪ್ರಸ್ತುತ ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಮಾಗಿ ಉತ್ಸವ ನಡೆಯುತ್ತಿದೆ. ಗುರುವಾರ ಕ್ರಿಸ್‌ಮಸ್ ರಜೆ ಇದ್ದಿದ್ದರಿಂದ ಸಹಜವಾಗಿಯೇ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಅರಮನೆಯ ಜಯಮಾರ್ತಾಂಡ ದ್ವಾರದ ಊಟಿ ರಸ್ತೆ ಬದಿಯಲ್ಲಿ ಬಲೂನ್ ವ್ಯಾಪಾರಿಯೊಬ್ಬರು ನೈಟ್ರೋಜನ್ ಸಿಲಿಂಡರ್ ಬಳಸಿ ಬಲೂನುಗಳನ್ನು ಮಾರಾಟ ಮಾಡುತ್ತಿದ್ದರು.

ಪ್ರವಾಸಿಗರ ಓಡಾಟ ಹೆಚ್ಚಿದ್ದ ಸಮಯದಲ್ಲಿಯೇ, ಬಲೂನಿಗೆ ಗ್ಯಾಸ್ ತುಂಬುವಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸಿಲಿಂಡರ್ ಛಿದ್ರವಾಗಿದ್ದು, ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಭಾರೀ ಶಬ್ದದೊಂದಿಗೆ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅರಮನೆಗೆ ಬಂದಿದ್ದ ಪ್ರವಾಸಿಗರು ಮತ್ತು ಸಾರ್ವಜನಿಕರು ಕೆಲಕಾಲ ಆತಂಕಕ್ಕೊಳಗಾಗಿ ದಿಕ್ಕಾಪಾಲಾಗಿ ಓಡಿದರು.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮೃತರ ಮತ್ತು ಗಾಯಾಳುಗಳ ಗುರುತು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ. ಈ ಸಂಬಂಧ ಮೈಸೂರು ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More
Next Story