
ಮೃತ ಮಂಜುಳ
ಮೈಸೂರು ಹೀಲಿಯಂ ಸಿಲಿಂಡರ್ ಸ್ಫೋಟ: ಗಾಯಾಳು ಮಂಜುಳಾ ಸಾವು, ಮೃತರ ಸಂಖ್ಯೆ 2ಕ್ಕೆ ಏರಿಕೆ
ಅರಮನೆಯ ಜಯಮಾರ್ತಾಂಡ ದ್ವಾರ ಬಳಿ ಬಲೂನ್‌ಗಳಿಗೆ ಹೀಲಿಯಂ ಗ್ಯಾಸ್ ತುಂಬುವಾಗ ಸ್ಫೋಟ ಸಂಭವಿಸಿತು. ಸ್ಫೋಟದ ಆಘಾತದಿಂದ ಸ್ಥಳದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಮೈಸೂರು ಅರಮನೆ ಮುಂಭಾಗದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಹೂವಿನ ವ್ಯಾಪಾರಿ ಮಂಜುಳಾ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತರಾಗಿದ್ದಾರೆ. ಇದರ ಜೊತೆಗೇ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಮೊದಲನೇಯದಾಗಿ ಬಲೂನ್ ಮಾರುತ್ತಿದ್ದ ಉತ್ತರ ಪ್ರದೇಶದ ಕನೌಜ್ ಮೂಲದ ಸಲೀಂ ಖಮರುದ್ದೀನ್ (40) ಸ್ಫೋಟದ ವೇಳೆ ಮೃತಪಟ್ಟಿದ್ದರು.
ಮಹಿಳೆ ಮಂಜುಳಾ ಸೇರಿದಂತೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಲಕ್ಷ್ಮಿ, ಕೋಲ್ಕತ್ತಾದ ಶಮಿನಾ ಶಬೀರ್, ರಾಣೆಬೆನ್ನೂರಿನ ಕೊಟ್ರೇಶ್ ಮತ್ತು ರಂಜಿತಾ ಗಾಯಗೊಂಡು ಕೆ.ಆರ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ತಲೆಗೆ ತೀವ್ರ ಪೆಟ್ಟಾದ ಮಂಜುಳಾ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಅರಮನೆಯ ಜಯಮಾರ್ತಾಂಡ ದ್ವಾರ ಬಳಿ ಬಲೂನ್‌ಗಳಿಗೆ ಹೀಲಿಯಂ ಗ್ಯಾಸ್ ತುಂಬುವಾಗ ಸ್ಫೋಟ ಸಂಭವಿಸಿತು. ಸ್ಫೋಟದ ಆಘಾತದಿಂದ ಸ್ಥಳದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಮೃತ ಬಲೂನ್ ವ್ಯಾಪಾರಿ ವಿರುದ್ಧ ಎಫ್‌ಐಆರ್
ಘಟನೆಯಲ್ಲಿ ಮೃತನಾದ ಬಲೂನ್ ವ್ಯಾಪಾರಿ ಸಲೀಂ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಗಾಯಾಳು ಪ್ರವಾಸಿಗ ಕೊಟ್ರೇಶ್ ಬೀರಪ್ಪ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ. ಅವರು ಕುಟುಂಬದೊಡನೆ ಮೈಸೂರು ಪ್ರವಾಸಕ್ಕೆ ಬಂದಿದ್ದ ವೇಳೆ ಸ್ಫೋಟ ಸಂಭವಿಸಿತ್ತು.
ಕೊಟ್ರೇಶ್ ಅವರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯ ಸಂಪೂರ್ಣ ಹಿನ್ನೆಲೆ ಮತ್ತು ಸಿಲಿಂಡರ್ ಸುರಕ್ಷತಾ ಅಂಶಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

