
ಗೃಹ ಸಚಿವ ಡಾ.ಜಿ. ಪರಮೇಶ್ವರ್
ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ: ತನಿಖೆಗೆ ಗೃಹ ಸಚಿವ ಪರಮೇಶ್ವರ್ ಆದೇಶ
ಮೈಸೂರು ಅರಮನೆ ಬಳಿ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣವನ್ನು ತನಿಖೆಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶಿಸಿದ್ದಾರೆ. ಘಟನಾ ಸ್ಥಳಕ್ಕೆ ಎನ್‌ಐಎ (NIA) ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಅರಮನೆ ನಗರಿ ಮೈಸೂರಿನಲ್ಲಿ ಗುರುವಾರ ರಾತ್ರಿ ನಡೆದ ಹೀಲಿಯಂ ಸಿಲಿಂಡರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯ ತನಿಖೆಗೆ ಆದೇಶಿಸಿದೆ. ಪ್ರಕರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗೃಹ ಸಚಿವ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. ಶುಕ್ರವಾರ (ಡಿ.26) ಗೃಹಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಬಲೂನ್ ಮಾರುತ್ತಿದ್ದ ಲಖನೌ ಮೂಲದ ಸಲೀಂ (40) ಎಂಬ ವ್ಯಕ್ತಿ ಮೃತಪಟ್ಟಿದ್ದ. ಸಣ್ಣಪುಟ್ಟ ವಸ್ತುಗಳ ಮಾರಾಟ ಮಾಡುವವರ ಮೇಲೆ ಯಾವುದೇ ರೀತಿಯ ನಿಯಂತ್ರಣ ಇಲ್ಲ ಎಂಬುದು ಕಾಣಿಸುತ್ತಿದೆ ಎಂದರು.
ಪರಮೇಶ್ವರ್ ಹೇಳಿದ್ದೇನು?
"ಮೈಸೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿಬರುವುದರಿಂದ ಬಿಗಿ ಭದ್ರತೆ ಕೈಗೊಳ್ಳಬೇಕು. ಇದೆಲ್ಲವನ್ನು ಸೂಕ್ಷ್ಮದೃಷ್ಟಿಯಿಂದ ನೋಡಬೇಕು. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಬಲೂನ್ ವ್ಯಾಪಾರಿಗೆ ಹೀಲಿಯಂ ಸಿಲಿಂಡರ್ ಹೇಗೆ ಸಿಕ್ಕಿದೆ? ಎಲ್ಲಿ ಖರೀದಿಸಿದ್ದ ಅದೆಲ್ಲವನ್ನು ತನಿಖೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದರು.
ಏನಿದು ಘಟನೆ ?
ಅರಮನೆ ಮಂಡಳಿಯು ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಪ್ರಯುಕ್ತ 'ಮಾಗಿ ಉತ್ಸವ' ಹಾಗೂ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದೆ. ಗುರುವಾರ ರಾತ್ರಿ ಖ್ಯಾತ ಗಾಯಕ ವಾಸುಕಿ ವೈಭವ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಾಗ, ರಾತ್ರಿ 8:30ರ ಸುಮಾರಿಗೆ ಸೈಕಲ್‌ನಲ್ಲಿ ಬಲೂನ್ ಮಾರುತ್ತಿದ್ದ ಸಲೀಂ ಬಳಿಯಿದ್ದ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸಲೀಂ ಅವರ ದೇಹ ಛಿದ್ರಛಿದ್ರವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದರು.
ಹಲವರಿಗೆ ಗಾಯ
ಸಿಲಿಂಡರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಬೆಂಗಳೂರಿನ ಲಕ್ಷ್ಮಿ, ನಂಜನಗೂಡಿನ ಮಂಜುಳಾ, ಕೋಲ್ಕತ್ತಾದ ಶಮಿನಾ ಶಬಿಲ್ ಮತ್ತು ರಾಣೇಬೆನ್ನೂರಿನ ಕೊಟ್ರೇಶ್ ಅವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಇವರೆಲ್ಲರಿಗೂ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಎನ್‌ಐಎ ತಂಡ ಆಗಮನ
ಮೈಸೂರಿನಲ್ಲಿ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹೀಲಿಯಂ ಸಿಲಿಂಡರ್ ಸ್ಫೋಟಗೊಳ್ಳಲು ಕಾರಣವೇನು ? ಇದು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ, ಈ ಸ್ಫೋಟದ ಹಿಂದೆ ಯಾವುದಾದರು ಸಂಘಟನೆಗಳ ಕೈವಾಡ ಇದೆಯಾ ಎಂಬುದರ ಬಗ್ಗೆ ಅಧಿಕಾರಿಗಳ ತಂಡ ಸೂಕ್ಷ್ಮವಾಗಿ ಮಾಹಿತಿ ಸಂಗ್ರಹಿಸಲಿದೆ.
CWC ಸಭೆ ಬಗ್ಗೆ ಪರಮೇಶ್ವರ್ ಹೇಳಿದ್ದೇನು?
ಇನ್ನು ಇದೇ ವೇಳೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲೂಸಿ) ಸಭೆ ಬಗ್ಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲೂಸಿ) ಸದಸ್ಯ ಅಲ್ಲ. ಹಾಗಾಗಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗುತ್ತಿಲ್ಲ. ಸಭೆಯಲ್ಲಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಚರ್ಚೆ ಆದರೆ ಗೊತ್ತಾಗುತ್ತದೆ. ಹೊಸ ವರ್ಷ ಸಂಭ್ರಮಾಚರಣೆಯ ಕುರಿತಂತೆ ಪೊಲೀಸ್ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ಕರೆದಿದ್ದೇನೆ. ಚರ್ಚೆ ಮಾಡಿ ಅಗತ್ಯ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.

