ಮೈಸೂರು ಅರಮನೆ ಬಳಿ ಸ್ಫೋಟ: NIA ಎಂಟ್ರಿ- ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌
x

ಮೈಸೂರು ಅರಮನೆ ಬಳಿ ಸ್ಫೋಟ: NIA ಎಂಟ್ರಿ- ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಮೈಸೂರಿನ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.


Click the Play button to hear this message in audio format

ಸಾಂಸ್ಕೃತಿಕ ನಗರಿ ಮೈಸೂರಿನ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಸಂಭವಿಸಿದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಭೀಕರ ಸ್ಫೋಟದಲ್ಲಿ ಉತ್ತರಪ್ರದೇಶದ ಲಖನೌ ಮೂಲದ ಸಲೀಂ (40) ಎಂಬುವವರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ NIAಭೇಟಿ ಕೊಟ್ಟಿದ್ದು, ಪ್ರಕರಣದ ಹಿಂದೆ ಉಗ್ರರ ಕೈವಾಡ ಇದೆಯೇ ಎಂಬ ಅನುಮಾನ ಹುಟ್ಟು ಹಾಕಿದೆ.

ಘಟನೆಯ ಹಿನ್ನೆಲೆ

ಅರಮನೆ ಮಂಡಳಿಯು ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆಯ ಪ್ರಯುಕ್ತ 'ಮಾಗಿ ಉತ್ಸವ' ಹಾಗೂ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದೆ. ಗುರುವಾರ ರಾತ್ರಿ ಖ್ಯಾತ ಗಾಯಕ ವಾಸುಕಿ ವೈಭವ್‌ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಾಗ, ರಾತ್ರಿ 8:30ರ ಸುಮಾರಿಗೆ ಸೈಕಲ್‌ನಲ್ಲಿ ಬಲೂನ್ ಮಾರುತ್ತಿದ್ದ ಸಲೀಂ ಬಳಿಯಿದ್ದ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸಲೀಂ ಅವರ ದೇಹ ಛಿದ್ರಛಿದ್ರವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಗಾಯಾಳುಗಳ ವಿವರ

ಅಪಘಾತದಲ್ಲಿ ಬೆಂಗಳೂರಿನ ಲಕ್ಷ್ಮಿ, ನಂಜನಗೂಡಿನ ಮಂಜುಳಾ, ಕೋಲ್ಕತ್ತಾದ ಶಮಿನಾ ಶಬಿಲ್ ಮತ್ತು ರಾಣೇಬೆನ್ನೂರಿನ ಕೊಟ್ರೇಶ್ ಅವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಇವರೆಲ್ಲರಿಗೂ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಬಗ್ಗೆ ಅನುಮಾನಗಳು

ಈ ಪ್ರಕರಣವನ್ನು ಮೈಸೂರು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಹಲವು ಪ್ರಶ್ನೆಗಳು ತನಿಖೆಯ ದಿಕ್ಕನ್ನು ಬದಲಿಸಿವೆ

ಸ್ಥಳದ ಆಯ್ಕೆ: ಪ್ರತ್ಯಕ್ಷದರ್ಶಿಗಳು ಮತ್ತು ಅರಮನೆಯ ಗೈಡ್ ನೀಡಿದ ಮಾಹಿತಿ ಪ್ರಕಾರ, ಸಲೀಂ ಈ ಹಿಂದೆ ಎಂದೂ ಅರಮನೆಯ ಈ ದ್ವಾರದ ಬಳಿ ಬಲೂನ್ ಮಾರಾಟ ಮಾಡುತ್ತಿರಲಿಲ್ಲ. ಗುರುವಾರವೂ ಆತ ಅಲ್ಲಿಗೆ ಬಂದಿರಲಿಲ್ಲ. ಹಾಗಾದರೆ ನಿನ್ನೆ ರಾತ್ರಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಅಲ್ಲಿಗೆ ಬಂದಿದ್ದು ಯಾಕೆ?

ತಕ್ಷಣದ ಸ್ಫೋಟ: ಸಲೀಂ ಅರಮನೆ ಮುಂಭಾಗಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿದೆ. ಇದು ಆಕಸ್ಮಿಕವೇ ಅಥವಾ ಯೋಜಿತ ಕೃತ್ಯವೇ ಎಂಬ ಅನುಮಾನ ಮೂಡಿದೆ.

ಹಿನ್ನೆಲೆಯ ತನಿಖೆ: ಸಾಮಾನ್ಯವಾಗಿ ಸ್ಥಳೀಯರೇ ಅರಮನೆ ಬಳಿ ವ್ಯಾಪಾರ ಮಾಡುತ್ತಾರೆ. ಆದರೆ ಕೋಲ್ಕತ್ತಾ ಮೂಲದ ಸಲೀಂ ಮೈಸೂರಿಗೆ ಬಂದಿದ್ದು ಯಾವಾಗ? ಯಾರ ಸಂಪರ್ಕದಲ್ಲಿದ್ದ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಇನ್ನು ಮೂಲಗಳ ಪ್ರಕಾರ ಈತ 15ದಿನಗಳ ಹಿಂದೆಯೇ ಮೈಸೂರಿಗೆ ಬಂದಿದ್ದು ಅಲ್ಲಿಯೇ ಒಂದು ಲಾಡ್ಜ್‌ನಲ್ಲಿ ತಂಗಿದ್ದ ಎನ್ನಲಾಗಿದೆ.

ಸ್ಫೋಟದ ಭೀಕರತೆಯಿಂದಾಗಿ ವಾಸುಕಿ ವೈಭವ್ ಅವರ ಕಾರ್ಯಕ್ರಮವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿ ಪ್ರವಾಸಿಗರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಯಿತು.

Read More
Next Story