Man arrested for filming video without womens permission in Bengaluru
x

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಮಹಿಳೆಯರ ಅನುಮತಿಯಿಲ್ಲದೆ ವಿಡಿಯೋ ಚಿತ್ರೀಕರಣ: ವ್ಯಕ್ತಿಯ ಬಂಧನ

ಆರೋಪಿ ಗುರ್‌ದೀಪ್ ಸಿಂಗ್‌ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚರ್ಚ್ ಸ್ಟ್ರೀಟ್ ಮತ್ತು ಕೋರಮಂಗಲದಂತಹ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಸ್ಲೋ-ಮೋಷನ್ ವಿಡಿಯೋಗಳು ಕಂಡುಬಂದಿವೆ.


ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಒಪ್ಪಿಗೆ ಇಲ್ಲದೆ ವಿಡಿಯೋ ಮತ್ತು ಫೋಟೋಗಳನ್ನು ಚಿತ್ರೀಕರಿಸಿ, ಅವುಗಳನ್ನು ಇನ್‌ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡ ಆರೋಪದಡಿ 26 ವರ್ಷದ ಗುರ್‌ದೀಪ್ ಸಿಂಗ್ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಒಬ್ಬ ಮಹಿಳೆಯ ಇನ್‌ಸ್ಟಾಗ್ರಾಮ್‌ ಪೋಸ್ಟ್ ವೈರಲ್ ಆದ ನಂತರ ಈ ಅಕ್ರಮ ಚಟುವಟಿಕೆ ಬಯಲಾಗಿದೆ. ಗುರ್‌ದೀಪ್ ಸಿಂಗ್‌ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚರ್ಚ್ ಸ್ಟ್ರೀಟ್ ಮತ್ತು ಕೋರಮಂಗಲದಂತಹ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಸ್ಲೋ-ಮೋಷನ್ ವಿಡಿಯೋಗಳು ಕಂಡುಬಂದಿವೆ.

ಹೋಟೆಲ್ ಮ್ಯಾನೇಜ್‌ಮೆಂಟ್ ಸ್ನಾತಕೋತ್ತರ ಪದವೀಧರನಾಗಿದ್ದರೂ ನಿರುದ್ಯೋಗಿಯಾಗಿರುವ ಗುರ್‌ದೀಪ್ ಸಿಂಗ್‌ನನ್ನು ಕೆ.ಆರ್. ಪುರಂನಲ್ಲಿರುವ ಆತನ ನಿವಾಸದಲ್ಲಿ ಬಂಧಿಸಲಾಗಿದ್ದು, ಆತ ತನ್ನ ಸಹೋದರನೊಂದಿಗೆ ವಾಸವಾಗಿದ್ದ. ಈ ಪ್ರಕರಣವನ್ನು ಪೊಲೀಸರು ಸ್ವಯಂಪ್ರೇರಿತವಾಗಿ (suo motu) ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಗುರ್‌ದೀಪ್ ಸಿಂಗ್‌ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಚರ್ಚ್ ಸ್ಟ್ರೀಟ್‌ನಲ್ಲಿ ನಡೆದುಕೊಂಡು ಹೋಗುತ್ತಿರುವ ಮಹಿಳೆಯರ ವಿಡಿಯೋಗಳು ಇದ್ದವು. ಕ್ಯಾಮೆರಾವನ್ನು ತಮ್ಮ ಕಡೆಗೆ ತಿರುಗಿಸಿದಾಗ ಮಹಿಳೆಯರು ಆಶ್ಚರ್ಯದಿಂದ ನೋಡುತ್ತಿರುವ ದೃಶ್ಯಗಳೂ ಸಹ ಈ ವಿಡಿಯೋಗಳಲ್ಲಿ ಸೇರಿವೆ. ಕೆಲವು ವಿಡಿಯೋಗಳಲ್ಲಿ ಮಹಿಳೆಯರನ್ನು ಗೌಪ್ಯವಾಗಿ ಹಿಂಬಾಲಿಸಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಅಪ್​ಲೋಡ್ ಮಾಡಲಾಗಿತ್ತು.

ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್ ನಲ್ಲಿ ಈ ಕುರಿತು ಎಚ್ಚರಿಕೆ ನೀಡಿದ ನಂತರ ಈ ವಿಡಿಯೋಗಳು ಸಾರ್ವಜನಿಕರ ಗಮನ ಸೆಳೆದವು. ಆ ಮಹಿಳೆ, "ನನಗೆ ಇದು ಗೊತ್ತಾಗಿದೆ. ಹಲವು ಮಹಿಳೆಯರಿಗೆ ತಮ್ಮ ಚಿತ್ರೀಕರಣವಾಗಿದ್ದೇ ಎಂದು ಗೊತ್ತಿಲ್ಲ. ನನ್ನ ಖಾತೆ ಸಾರ್ವಜನಿಕವಾಗಿ ತೆರೆದಿದ್ದರೂ, ಸಾರ್ವಜನಿಕವಾಗಿ ನನ್ನನ್ನು ಚಿತ್ರೀಕರಿಸಲು ಒಪ್ಪಿಗೆ ಇಲ್ಲ," ಎಂದು ಬರೆದುಕೊಂಡಿದ್ದರು.

ಇನ್‌ಸ್ಟಾಗ್ರಾಮ್‌ನ ಆಂತರಿಕ ನೀತಿ

ಪೊಲೀಸರ ಪ್ರಕಾರ, ಈ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಅಳಿಸುವ ಪ್ರಯತ್ನವು ಸಾಮಾಜಿಕ ಮಾಧ್ಯಮ ತಾಣದ ಆಂತರಿಕ ನೀತಿಗಳಿಂದಾಗಿ ಸಂಕೀರ್ಣವಾಗಿದೆ. ಖಾತೆಯನ್ನು ತೆಗೆದುಹಾಕಲು ಮೆಟಾ (ಇನ್‌ಸ್ಟಾಗ್ರಾಮ್‌ ನ ಮೂಲ ಸಂಸ್ಥೆ) ಕಡೆಯಿಂದ ನ್ಯಾಯಾಲಯದ ಮಧ್ಯಸ್ಥಿಕೆ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಪ್ರಕರಣ

ಕೆಲವೇ ವಾರಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿಯ ಮತ್ತೊಂದು ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿತ್ತು. ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯರ ಚಿತ್ರಗಳು ಮತ್ತು ವಿಡಿಯೋಗಳನ್ನು ಒಂದು ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಆ ಖಾತೆಗೆ 5,000ಕ್ಕೂ ಹೆಚ್ಚು ಅನುಯಾಯಿಗಳಿದ್ದು, ಎಕ್ಸ್ (ಟ್ವಿಟರ್) ನಲ್ಲಿ ಬಳಕೆದಾರರು ದೂರು ನೀಡಿದ ನಂತರ ತನಿಖೆ ನಡೆಸಿ ಆ ಖಾತೆಯನ್ನು ಅಳಿಸಿ ಹಾಕಲಾಗಿತ್ತು.

Read More
Next Story