
ನಮ್ಮ ಮೆಟ್ರೋ
ನಮ್ಮ ಮೆಟ್ರೋದಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋ: ವಿಕೃತಿ ಮೆರೆದ ಅಪರಿಚಿತ; ದೂರು ದಾಖಲು
“ಮೆಟ್ರೋ ಕ್ಲಿಕ್ಸ್” ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೆಟ್ರೋದಲ್ಲಿನ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. 5,538 ಹಿಂಬಾಲಕರನ್ನು ಹೊಂದಿರುವ ಖಾತೆಯಲ್ಲಿ ಸುಮಾರು 13ಕ್ಕೂ ಹೆಚ್ಚು ವಿಡಿಯೋಗಳನ್ನು ಅಪರಿಚಿತನೋರ್ವ ಹಂಚಿಕೊಂಡಿದ್ದಾನೆ.
'ನಮ್ಮ ಮೆಟ್ರೋ'ದಲ್ಲಿ ಪ್ರಯಾಣಿಸುತ್ತಿದ್ದ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಅಪರಿಚಿತನೋರ್ವ ವಿಕೃತಿ ಮೆರೆದಿರುವ ಆರೋಪ ಕೇಳಿಬಂದಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
"ಮೆಟ್ರೋ ಕ್ಲಿಕ್ಸ್" ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೆಟ್ರೋ ರೈಲಿನ ಒಳಗೆ ಮತ್ತು ನಿಲ್ದಾಣಗಳಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಹಂಚಿಕೊಳ್ಳಲಾಗಿದೆ. ಈ ಖಾತೆಯು 5,538 ಹಿಂಬಾಲಕರನ್ನು ಹೊಂದಿದ್ದು, ಸುಮಾರು 13ಕ್ಕೂ ಹೆಚ್ಚು ವಿಡಿಯೋಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ಹಂಚಿಕೊಂಡಿದ್ದಾನೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ. ಈ ಕುರಿತು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ 2008 ಸೆಕ್ಷನ್ 67 ಮತ್ತು ಬಿಎನ್‌ಎಸ್ 78(2) ರಡಿ ಸ್ವಯಂ ಪ್ರೇರಿತ (ಸುಮೊಟೋ) ಪ್ರಕರಣ ದಾಖಲಾಗಿದೆ.
ಸಂಸದ ಪಿ.ಸಿ. ಮೋಹನ್ ಪ್ರತಿಕ್ರಿಯೆ
ಕೇಂದ್ರ ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರು ಈ ಘಟನೆ ಬಗ್ಗೆ ಟ್ವೀಟ್ ಮಾಡಿ ಆಘಾತ ವ್ಯಕ್ತಪಡಿಸಿದ್ದಾರೆ. "ಇದು ಭಯಾನಕ ಅಪರಾಧ ಮಾತ್ರವಲ್ಲ, ಗಂಭೀರ ಅಪರಾಧವೂ ಆಗಿದೆ. ಬೆಂಗಳೂರು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು" ಎಂದು ಅವರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ಆತಂಕ
ಈ ಘಟನೆ ಬಗ್ಗೆ ವ್ಯಕ್ತಿಯೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಅಪರಿಚಿತನೋರ್ವ ಇನ್‌ಸ್ಟಾಗ್ರಾಂನಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಅಪ್‌ಲೋಡ್ ಮಾಡುತ್ತಿದ್ದಾನೆ. ನಾಳೆ ಈ ವಿಡಿಯೋಗಳಲ್ಲಿ ನಮ್ಮ ಅಕ್ಕ, ತಂಗಿಯರು ಇರಬಹುದು, ಹುಷಾರಾಗಿರಿ. ಮೊದಲು ಈ ಖಾತೆಯನ್ನು ರಿಪೋರ್ಟ್ ಮಾಡಿ. ಬೆಂಗಳೂರು ನಗರ ಪೊಲೀಸರಿಗೂ ಟ್ಯಾಗ್ ಮಾಡಿ. ಆದಷ್ಟು ಬೇಗ ಈ ಖಾತೆಯನ್ನು ತೆಗೆಸಲೇಬೇಕು" ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.