
ಬೆಕ್ಕಿನ ಮರಿಗೆ ಟಿಕೆಟ್ ನೀಡಿರುವ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್
ಮ್ಯಾಂವ್' ಅಂದರೂ ಬಿಡದ ಕಂಡಕ್ಟರ್: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಹಿಳೆಗೆ ಫ್ರೀ; ಬೆಕ್ಕಿನ ಮರಿಗೆ 'ಹಾಫ್ ಟಿಕೆಟ್'!
ಕಂಡಕ್ಟರ್ ಅವರ ಬಿಗಿ ಪಟ್ಟಿಗೆ ಸೋತ ಪ್ರಯಾಣಿಕರು ಅನಿವಾರ್ಯವಾಗಿ ಆ ಬೆಕ್ಕುಗಳಿಗೆ ಹಣ ನೀಡಲು ಒಪ್ಪಿದ್ದಾರೆ. ಕಂಡಕ್ಟರ್ ಸಾಹೇಬರು ಕೂಡ ತಡಮಾಡದೆ ಮೈಸೂರಿನಿಂದ ಮಡಿಕೇರಿಗೆ ಮಕ್ಕಳ ದರವಾದ 73 ರೂಪಾಯಿಯ ಎರಡು ಟಿಕೆಟ್ ಹರಿದು ಕೊಟ್ಟಿದ್ದಾರೆ.
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರತಿದಿನ ಸಾವಿರಾರು ತರಹೇವಾರಿ ಪ್ರಯಾಣಿಕರು ಓಡಾಡುತ್ತಾರೆ. ಆದರೆ, ಮೈಸೂರಿನಿಂದ ಮಡಿಕೇರಿಗೆ ಹೊರಟಿದ್ದ ಬಸ್ಸೊಂದರಲ್ಲಿ ನಡೆದ ಘಟನೆ ಮಾತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ನಗುವಿನ ಅಲೆ ಎಬ್ಬಿಸಿದೆ.
ಸಾಮಾನ್ಯವಾಗಿ ಐದು ವರ್ಷದ ಒಳಗಿನ ಮಕ್ಕಳಿಗೆ ಟಿಕೆಟ್ ಇಲ್ಲ, ಅದಕ್ಕಿಂತ ದೊಡ್ಡವರಿಗೆ ಹಾಫ್ ಟಿಕೆಟ್ ಎಂಬ ನಿಯಮ ನಮಗೆ ಗೊತ್ತು. ಆದರೆ ಇಲ್ಲೊಬ್ಬ ಕಂಡಕ್ಟರ್ ಸಾಹೇಬರು ಮಾತ್ರ ನಿಯಮ ಪಾಲನೆಯಲ್ಲಿ ಎಷ್ಟು ಖಡಕ್ ಆಗಿದ್ದರೆಂದರೆ, ಪಾಪದ ಪುಟ್ಟ ಬೆಕ್ಕಿನ ಮರಿಗೂ 'ಹಾಫ್ ಟಿಕೆಟ್' ನೀಡಿ ಅದರ ಮಾಲೀಕರ ಪರ್ಸ್‌ಗೆ ಕತ್ತರಿ ಹಾಕಿದ್ದಾರೆ!
ಬೆಕ್ಕಿನ ಮರಿ ನೋಡಿ ಟಿಕೆಟ್ ಕೇಳಿದ ಕಂಡಕ್ಟರ್!
ಮೈಸೂರಿನಿಂದ ಕೊಡಗಿನತ್ತ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಪುಟ್ಟ ಬೆಕ್ಕಿನ ಮರಿಗಳನ್ನು ಹಿಡಿದುಕೊಂಡು ಪ್ರಯಾಣಿಸುತ್ತಿದ್ದರು. ಬಸ್ಸು ಚಲಿಸುತ್ತಿದ್ದಂತೆ ಎಂದಿನಂತೆ ಟಿಕೆಟ್ ಚೆಕ್ ಮಾಡಲು ಬಂದ ಕಂಡಕ್ಟರ್ ಕಣ್ಣಿಗೆ ಈ ಬೆಕ್ಕುಗಳು ಮರಿ ಬಿದ್ದಿದೆ. ಕೂಡಲೇ ಬೆಕ್ಕಿನ ಮಾಲೀಕನ ಬಳಿ ಹೋದ ಕಂಡಕ್ಟರ್, "ಅವುಗಳಿಗೂ ಟಿಕೆಟ್ ತೆಗೆದುಕೊಳ್ಳಿ" ಎಂದು ತಾಕೀತು ಮಾಡಿದ್ದಾರೆ. ಆ ಮಹಿಳೆ "ಇದು ಕೇವಲ ಬೆಕ್ಕಿನ ಮರಿ ಅಲ್ವಾ ಸಾರ್, ಇದಕ್ಕೆ ಯಾಕೆ ಟಿಕೆಟ್?" ಎಂದು ಕೇಳಿದ್ದಕ್ಕೆ, ಕಂಡಕ್ಟರ್ ಮಾತ್ರ ಬಗ್ಗಲಿಲ್ಲ. "ಬೆಕ್ಕಿನ ಮರಿಯೇ ಆಗಲಿ ಅಥವಾ ಮನುಷ್ಯನ ಮಗುವೇ ಆಗಲಿ, ಬಸ್ಸಿಗೆ ಏರಿದರೆ ಅರ್ಧ ಟಿಕೆಟ್ ಕೊಡಲೇಬೇಕು" ಎಂದು ಹೇಳಿ ಟಿಕೆಟ್ ವಿತರಿಸಿದ್ದಾರೆ. ಆದರೆ, ಮಹಿಳೆ ಮಾತ್ರ ಶಕ್ತಿ ಯೋಜನೆಯಡಿ ಫ್ರೀಯಾಗಿ ಪ್ರಯಾಣಿಸಿದ್ದಾರೆ.
'ಮಗು' ಎಂದು ನಮೂದಿಸಿ 73 ರೂಪಾಯಿ ಟಿಕೆಟ್ !
ಕಂಡಕ್ಟರ್ ಅವರ ಬಿಗಿ ಪಟ್ಟಿಗೆ ಸೋತ ಪ್ರಯಾಣಿಕರು ಅನಿವಾರ್ಯವಾಗಿ ಆ ಬೆಕ್ಕುಗಳಿಗೆ ಹಣ ನೀಡಲು ಒಪ್ಪಿದ್ದಾರೆ. ಕಂಡಕ್ಟರ್ ಸಾಹೇಬರು ಕೂಡ ತಡಮಾಡದೆ ಮೈಸೂರಿನಿಂದ ಮಡಿಕೇರಿಗೆ ಮಕ್ಕಳ ದರವಾದ 73 ರೂಪಾಯಿಯ ಎರಡು ಟಿಕೆಟ್ ಹರಿದು ಕೊಟ್ಟಿದ್ದಾರೆ. ಇಲ್ಲಿ ಮತ್ತೊಂದು ತಮಾಷೆಯೆಂದರೆ, ಆ ಟಿಕೆಟ್ ಮೇಲೆ ಕೆಟಗರಿ ವಿಭಾಗದಲ್ಲಿ 'ಮಗು' (Children) ಎಂದೇ ನಮೂದಿಸಲಾಗಿದೆ. ಅಂದರೆ, ಸಾರಿಗೆ ಇಲಾಖೆಯ ಲೆಕ್ಕಾಚಾರದಲ್ಲಿ ಆ ಬೆಕ್ಕಿನ ಮರಿ ಈಗ 'ಮಗು'ವಾಗಿ ಬದಲಾಗಿದೆ. ಬುದ್ಧಿವಂತ ಕಂಡೆಕ್ಟರ್ ಕೊನೆಯಲ್ಲಿ ಪೆನ್ನಲ್ಲಿ ಬೆಕ್ಕಿನ ಮರಿಗಳು ಎಂದು ಬರೆದಿದ್ದಾರೆ. ಈ ಟಿಕೆಟ್ ಫೋಟೋ ಈಗ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ಸೋಷಿಯಲ್ ಮೀಡಿಯಾ ಕಾಮೆಂಟ್
ಈ ವಿಚಿತ್ರ ಘಟನೆ ಹೊರಬೀಳುತ್ತಿದ್ದಂತೆ ನೆಟ್ಟಿಗರು ಕಂಡಕ್ಟರ್ ಮತ್ತು ಸಾರಿಗೆ ಇಲಾಖೆಯ ಕಾಲೆಳೆಯಲು ಶುರು ಮಾಡಿದ್ದಾರೆ. "ಪುಣ್ಯಕ್ಕೆ ಆ ಬೆಕ್ಕಿನ ಮರಿಯ ಬಳಿ ಆಧಾರ್ ಕಾರ್ಡ್ ಅಥವಾ ಕ್ಯಾಟ್ ಪಾಸ್ ಕೇಳಲಿಲ್ಲವಲ್ಲ, ಅಷ್ಟೇ ಸಾಕು" ಎಂದು ಒಬ್ಬರು ಕಾಮೆಂಟ್ ಮಾಡಿದರೆ, "ರಾಜ್ಯದಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣವಿದೆ, ಆದರೆ ಪಾಪದ ಬೆಕ್ಕಿನ ಮರಿಗಳು ಗಂಡಾಗಿರಬಹುದು. ಅದಕ್ಕೆ ಟಿಕೆಟ್ ಕೊಡಬೇಕಾಯಿತು ಅನ್ಸುತ್ತೆ" ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಸಾರಿಗೆ ಸಚಿವರನ್ನು ಟ್ಯಾಗ್ ಮಾಡಿ, ಟಿಕೆಟ್ ಪಡೆದ ಮೇಲೆ ಆ ಬೆಕ್ಕುಗಳಿಗೆ ವಿಂಡೋ ಸೀಟು ಸಿಕ್ಕಿದೆಯೇ?" ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

