
ಗವಿ ಸಿದ್ದೇಶ್ವರದ ಮಹಾರಥೋತ್ಸವ
ಗವಿಮಠದ ದಾಸೋಹಕ್ಕೆ ಕೈದಿಗಳಿಂದಲೂ ದೇಣಿಗೆ: ಇಂದು ಅಜ್ಜನ ರಥೋತ್ಸವ, 5 ಲಕ್ಷ ಮಿರ್ಚಿ ಪ್ರಸಾದದ ರಸದೌತಣ!
ವಿಶೇಷವಾಗಿ ಜಾತ್ರೆಗೆ ಬಂದ ಭಕ್ತಾದಿಗಳಿಗೆ ವಿತರಿಸಲು 50 ಬಾಣಸಿಗರು ಸುಮಾರು 10 ಲಕ್ಷ ತುಪ್ಪದ ಮೈಸೂರು ಪಾಕ್ ತಯಾರಿಸಿದ್ದು, ಊತ್ತರ ಕರ್ನಾಟಕ ಖ್ಯಾತಿಯ 5 ಲಕ್ಷ ಮಿರ್ಚಿ ಬಜ್ಜಿಯನ್ನು ಪ್ರಸಾದದ ರೂಪದಲ್ಲಿ ನೀಡಲು ವ್ಯವಸ್ಥೆ ಮಾಡಲಾಗಿದೆ.
ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿ ಸಿದ್ದೇಶ್ವರ ಮಹಾರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೋಮವಾರ(ಜ.5) ಸಂಜೆ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಚಾಲನೆ ನೀಡಲಿದ್ದು, ಈಗಾಗಲೇ ಮಠದಲ್ಲಿ ಲಕ್ಷಾಂತರ ಭಕ್ತಾಧಿಗಳು ಆಗಮಿಸಿ ಜಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಜಾತ್ರಾ ಮೊಹೋತ್ಸವ ಗುರವಾರ(ಜ.1) ಆರಂಭವಾಗಿದ್ದು, ಬಸವಪಟ ಹಾಗೂ ಕರ್ತೃ ಗದ್ದುಗೆಯ ಶಿಖರಕ್ಕೆ ಕಳಸಾರೋಹಣ ಕಾರ್ಯಕ್ರಮ, ಶ್ರೀಮಠದ ಕೆರೆಯಲ್ಲಿ ತೆಪ್ಪೋತ್ಸವ, ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಗವಿಸಿದ್ಧೇಶ್ವರ ಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ನಾನಾ ಜನಪದ ಕಲಾತಂಡಗಳೊಂದಿಗೆ ಗವಿಸಿದ್ಧೇಶ್ವರರ ಮೂರ್ತಿಯ ಕಳಸದ ಮೆರವಣಿಗೆ, ಉಚ್ಚಾಯ (ಲಘು ರಥೋತ್ಸವ) ಹಾಗೂ ಶ್ರೀಮಠದ ಕೈಲಾಸ ಮಂಟಪದಲ್ಲಿ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮಗಳು ನೆರವೇರಿದ್ದು, ಇಂದು ಮಹಾರಥೋತ್ಸವಕ್ಕೆ ಚಾಲನೆ ಸಿಗಲಿದೆ. ಜಾತ್ರೆ ಆರಂಭದಿಂದ ಸತತವಾಗಿ 22 ದಿನಗಳ ಕಾಲ ನಿರಂತರವಾಗಿ ಅನ್ನದಾಸೋಹ ನಡೆಯಲಿದೆ.
ರೊಟ್ಟಿಗಳ ರಾಶಿ
ಪ್ರತೀ ವರ್ಷದಂತೆ ಈ ಬಾರಿಯ ಜಾತ್ರೆಗಾಗಿ ಭಕ್ತರಿಂದ ಲಕ್ಷಾಂತರ ರೊಟ್ಟಿಗಳನ್ನು ಸಂಗ್ರಹಿಸಲಾಗಿದೆ. ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯದಂತೆ ಹಳ್ಳಿ ಹಳ್ಳಿಗಳಿಂದ ಭಕ್ತರು ಲಕ್ಷಾಂತರ ರೊಟ್ಟಿ ಮತ್ತು ಚಟ್ನಿಯನ್ನು ದಾಸೋಹಕ್ಕಾಗಿ ಸಮರ್ಪಿಸಿದ್ದಾರೆ.
ರೊಟ್ಟಿಗಳ ರಾಶಿ ಹಾಗೂ ಸಾಂಬರ್
ಹತ್ತು ಲಕ್ಷ ಮೈಸೂರ್ ಪಾಕ್, ಐದು ಲಕ್ಷ ಮಿರ್ಚಿ
ವಿಶೇಷವಾಗಿ ಜಾತ್ರೆಗೆ ಬಂದ ಭಕ್ತಾದಿಗಳಿಗೆ ವಿತರಿಸಲು 50 ಬಾಣಸಿಗರು ಸುಮಾರು 10 ಲಕ್ಷ ತುಪ್ಪದ ಮೈಸೂರು ಪಾಕ್ ತಯಾರಿಸಿದ್ದು, ಊತ್ತರ ಕರ್ನಾಟಕ ಖ್ಯಾತಿಯ 5 ಲಕ್ಷ ಮಿರ್ಚಿ ಬಜ್ಜಿಯನ್ನು ಪ್ರಸಾದದ ರೂಪದಲ್ಲಿ ನೀಡಲು ವ್ಯವಸ್ಥೆ ಮಾಡಲಾಗಿದೆ.
ಮೈಸೂರ್ ಪಾಕ್ ಹಾಗೂ ಮಿರ್ಚಿ
ಭಕ್ತರಿಗಾಗಿ ರವೆ ಉಂಡಿ ತಯಾರಿ
ದಾಸೋಹದಲ್ಲಿ ಭಕ್ತರಿಗೆ ವಿತರಿಸಲು 25 ಟನ್ ಮಾದಲಿ ಸಿಹಿ ತಯಾರಿಸಲಾಗಿದ್ದು, 60 ಟನ್‌ಗೂ ಹೆಚ್ಚು ತೊಗರಿ ಬೇಳೆ ಮಠಕ್ಕೆ ದೇಣೀಗೆಯಾಗಿ ಭಕ್ತರು ನೀಡಿದ್ದಾರೆ. ಇನ್ನುಳಿದಂತೆ ಧಾನ್ಯ, ತರಕಾರಿ ಮತ್ತು ಕಟ್ಟಿಗೆಯನ್ನು ರೈತರು ಮತ್ತು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನೀಡುತ್ತಿದ್ದಾರೆ. ಭಕ್ತರೇ ರವೆ ಉಂಡಿಯನ್ನು ತಯಾರಿಸಿ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ.
ಖೈದಿಗಳಿಂದ ಧಾನ್ಯ ದೇಣಿಗೆ
ಈ ಬಾರಿಯ ಜಾತ್ರೆಯಲ್ಲಿ ವಿಶೇಷವಾಗಿ ಕೊಪ್ಪಳ ಜಿಲ್ಲಾ ಕಾರಾಗೃಹದ ಕೈದಿಗಳು ತಮ್ಮ ಒಂದು ದಿನದ ಉಪಹಾರವನ್ನು ತ್ಯಜಿಸುವ ಮೂಲಕ ದಾಸೋಹಕ್ಕಾಗಿ ಅಕ್ಕಿ ಮತ್ತು ಗೋಧಿ ಹಿಟ್ಟನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಮೂಲಕ ಜಾತ್ರೆಯ ಸಂಭ್ರವನ್ನು ವಿಶೇಷವಾಗಿಸಿದ್ದಾರೆ.
ಕಳೆದ ವರ್ಷವೂ ಟನ್‌ಗಟ್ಟಲೇ ಆಹಾರ ವಿತರಣೆ
ಮಾದಲಿ, ಹೋಳಿಗೆ, ಮೈಸೂರು ಪಾಕ್, ರವೆಉಂಡೆ, ಜಾಮೂನು ಪದಾರ್ಥಗಳೇ 800 ಕ್ವಿಂಟಲ್‌ನಷ್ಟು ಸಂಗ್ರಹವಾಗಿತ್ತು. 19ರಿಂದ 20 ಲಕ್ಷದಷ್ಟು ರೊಟ್ಟಿ ಗುಡ್ಡವೇ ನಿರ್ಮಾಣವಾಗಿತ್ತು. 700 ಕ್ವಿಂಟಲ್ ಅನ್ನ, 300 ಕ್ವಿಂಟಲ್ ತರಕಾರಿ, 300 ಕ್ವಿಂಟಲ್ ದವಸಧಾನ್ಯ, 15 ಕ್ವಿಂಟಲ್ ತುಪ್ಪ, 15 ಸಾವಿರ ಲೀಟರ್ ಹಾಲು ಹಾಗೂ ಮೊಸರು, ಆರು ಸಾವಿರ ಕೆ.ಜಿ. ಉಪ್ಪಿನಕಾಯಿ, 700 ಕ್ವಿಂಟಲ್ ಕೆಂಪು ಚಟ್ನಿ, ಪುಟಾಣಿ ಪುಡಿ, ಅಗಸಿಪುಡಿ ಹೀಗೆ ತರಹೇವಾರಿ ಆಹಾರ ಜಾತ್ರೆಗೆ ಬರುವ ಭಕ್ತರಿಗೆ ರಸದೌತಣ ಉಣಬಡಿಸಲಾಗಿತ್ತು.

