Koppal Gavi Mutt | ಆರಂಭವಾಯಿತು ʼಅಜ್ಜನ ಜಾತ್ರೆʼ; ಇದು ಸರ್ವಧರ್ಮ ಸಮನ್ವಯ ಯಾತ್ರೆ
ಉತ್ತರ ಕರ್ನಾಟಕದಲ್ಲಿ ಗವಿಮಠದ ಜಾತ್ರೆಯನ್ನು ಅಜ್ಜನ ಜಾತ್ರೆ, ರೊಟ್ಟಿ ಬುತ್ತಿ ಜಾತ್ರೆ ಎಂತಲೂ ಕರೆಯುತ್ತಾರೆ. ವರ್ಷವಿಡೀ ಹೊಲದಲ್ಲಿ ದಣಿಯುವ ರೈತರು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಅಜ್ಜನ ಜಾತ್ರೆಗಾಗಿ ಮೀಸಲಿಡುತ್ತಾರೆ.
ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮಿಗಳ ಜಾತ್ರೆಗೆ ಚಾಲನೆ ದೊರೆತಿದೆ. ಸರ್ವಧರ್ಮಗಳ ಸಮನ್ವಯದ ಗವಿಮಠದ ಜಾತ್ರೆ ಧಾರ್ಮಿಕವಾಗಿ ಮಾತ್ರವಲ್ಲದೆ ಸಾಮಾಜಿಕ ಜನಜಾಗೃತಿಯ ಯಾತ್ರೆಯಾಗಿಯೂ ಪ್ರಖ್ಯಾತಿ ಪಡೆದಿದೆ.
ಜ.11ರಂದು ಬಸವ ಪಟ ಆರೋಹಣದ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಜ. 15 ರಂದು ಗವಿಸಿದ್ದೇಶ್ವರರ ಮಹಾರಥೋತ್ಸವ ಜರುಗಲಿದೆ. ರಥೋತ್ಸವದ ದಿನ ಅಂದಾಜು 5 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಉತ್ತರ ಕರ್ನಾಟಕದಲ್ಲಿ ಗವಿಮಠದ ಜಾತ್ರೆಯನ್ನು ಅಜ್ಜನ ಜಾತ್ರೆ, ರೊಟ್ಟಿ ಬುತ್ತಿ ಜಾತ್ರೆ ಎಂತಲೂ ಕರೆಯುವುದು ವಾಡಿಕೆ. ಗವಿ ಮಠದ ಜಾತ್ರೆ ಎಂದರೆ ಮನೆ ಮನೆಯಲ್ಲೂ ಹಬ್ಬದ ಸಡಗರ. ವರ್ಷವಿಡೀ ಹೊಲದಲ್ಲಿ ದಣಿಯುವ ರೈತರು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಅಜ್ಜನ ಜಾತ್ರೆಗಾಗಿ ಮೀಸಲಿಡುತ್ತಾರೆ. ಜೋಳದ ರೊಟ್ಟಿ, ಶೇಂಗಾ ಪುಡಿ ಸೇರಿದಂತೆ ನಾನಾ ದವಸ ಧಾನ್ಯಗಳನ್ನು ಅಜ್ಜನ ಜಾತ್ರೆಯ ದಾಸೋಹಕ್ಕಾಗಿ ಅರ್ಪಿಸುತ್ತಾರೆ. ಸುಮಾರು ಸಾವಿರ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಗವಿಮಠ ಮಹಾಸಂಸ್ಥಾನವು ಭಕ್ತರ ದೇಣಿಗೆಯಿಂದಲೇ ʼಅನ್ನ ಅರಿವು, ಅದ್ಯಾತ್ಮʼದ ದಾಸೋಹ ಮಠವಾಗಿದೆ.
ಜಾತ್ರಾ ಮಹೋತ್ಸವಕ್ಕೆ ಚಾಲನೆ
ಪ್ರತಿ ವರ್ಷ ಗವಿ ಸಿದ್ದೇಶ್ವರರ ಜಾತ್ರಾ ಮಹೋತ್ಸವಕ್ಕೆ ಶನಿವಾರ (ಜ.11) ಬಸವ ಪಟ ಆರೋಹಣ ಮಾಡುವ ಮೂಲಕ ಚಾಲನೆ ನೀಡಲಾಗಿದೆ. ಜ.12 ರಂದು ತೆಪ್ಪೋತ್ಸವ, 13 ರಂದು ಗವಿ ಸಿದ್ದೇಶ್ವರರ ಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಅಂದೇ ಹಲಗೇರಿ ಗ್ರಾಮದ ಲಿಂಗೈಕ್ಯ ವೀರನಗೌಡ ಲಿಂಗನಗೌಡ ಪಾಟೀಲರ ಮನೆಯಿಂದ ರಥದ ಮೇಲಿನ ಕಳಸ ತರಲಾಗುವುದು. ಜ. 14 ರಂದು ಸಂಜೆ 5 ಗಂಟೆಗೆ ಉಚ್ಛಾಯಿ (ಲಘು ರಥೋತ್ಸವ) ಹಾಗೂ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. 15 ರಂದು ಸಂಜೆ 5 ಗಂಟೆಗೆ ಐತಿಹಾಸಿಕ ಗವಿಸಿದ್ದೇಶ್ವರ ಮಹಾರಥೋತ್ಸವ ಹಾಗೂ ಧಾರ್ಮಿಕ ಗೋಷ್ಠಿ ನಡೆಯಲಿದೆ. 16 ರಂದು ಬಳಗನೂರು ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ ಹಾಗೂ ಧಾರ್ಮಿಕ ಗೋಷ್ಠಿ ಇರಲಿದೆ. 17 ರಂದು ಸಂಜೆ 5 ಗಂಟೆಗೆ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ.
ಮಠದಲ್ಲಿ ರೊಟ್ಟಿಗಳ ರಾಶಿ
ಅಜ್ಜನ ಜಾತ್ರೆಯನ್ನು ರೊಟ್ಟಿಯ ಜಾತ್ರೆ ಎಂದು ಕರೆಯಲಾಗುತ್ತದೆ. ಕೊಪ್ಪಳ, ರಾಯಚೂರು, ಬಾಗಲಕೋಟೆ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ದೇವಸ್ಥಾನಕ್ಕೆ ರೊಟ್ಟಿಗಳನ್ನು ತಂದು ಅರ್ಪಿಸುತ್ತಾರೆ. ಗವಿಸಿದ್ದೇಶ್ವರ ಸ್ವಾಮಿ ಜಾತ್ರೆಗೆ ಬರುವವರಿಗೆ ಭಕ್ತರು ತರುವ ರೊಟ್ಟಿಯನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಇನ್ನು ಮಹಾದಾಸೋಹಕ್ಕೆ ಹೊರ ರಾಜ್ಯ, ಹೊರ ದೇಶದ ಭಕ್ತರು ಕೂಡ ದವಸ ಧಾನ್ಯ, ಆಹಾರ ಪದಾರ್ಥಗಳನ್ನು ನೀಡುತ್ತಾರೆ.
ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಶ್ರೀಮಠದಲ್ಲೇ ಪ್ರಸಾದ ಸಿದ್ಧಪಡಿಸಲಾಗುತ್ತದೆ. ಅದಕ್ಕಾಗಿ ಭಕ್ತರು ಕಟ್ಟಿಗೆ, ಉಸುಗು, ರೊಟ್ಟಿ ತಂದು ನೀಡುತ್ತಾರೆ. ನೂರಾರು ಸಂಖ್ಯೆಯ ಬಾಣಸಿಗರು ಆಹಾರ ಸಿದ್ಧಪಡಿಸುತ್ತಾರೆ. ಜಾತ್ರೆ ಆರಂಭದಿಂದ ಮುಕ್ತಾಯದವರೆಗೆ ಸುಮಾರು 15 ರಿಂದ 16 ಲಕ್ಷ ರೊಟ್ಟಿ, ಅಕ್ಕಿ 700 ಕ್ವಿಂಟಾಲ್, ಜಿಲೇಬಿ 900 ಕ್ವಿಂಟಾಲ್, ತರಕಾರಿ 400 ಕ್ವಿಂಟಾಲ್, ದ್ವಿದಳ ಧಾನ್ಯಗಳು 250 ಕ್ವಿಂಟಲ್ ಸಂಗ್ರಹವಾಗಿದೆ.
ಜನಜಾಗೃತಿಯ ಮೆರುಗು ನೀಡಿದ ಶ್ರೀಗಳು
2002ರಲ್ಲಿ ಗವಿಮಠದ 18ನೇ ಪೀಠಾಧಿಪತಿಯಾಗಿ ಪಟ್ಟಾಧಿಕಾರ ವಹಿಸಿಕೊಂಡ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಜಾತ್ರೆಯ ಸ್ವರೂಪವನ್ನು ಸಂಪೂರ್ಣ ಬದಲಿಸಿದರು. ಮಠದ ವಿದ್ಯಾರ್ಥಿಯಾಗಿ ಒಳ ಹೊರಗು ತಿಳಿಸಿದ್ದ ಸ್ವಾಮೀಜಿ ಅವರು ಜಾತ್ರೆಯನ್ನು ಸಾಮಾಜಿಕ ಜಾಗೃತಿ ಯಾತ್ರೆಯಾಗಿ ಪರಿವರ್ತಿಸಿದರು. ಜಾತ್ರೆ ಸಂದರ್ಭದಲ್ಲಿ ಮೂರು ದಿನಕ್ಕೆ ಸೀಮಿತವಾಗಿದ್ದ ದಾಸೋಹವನ್ನು 15 ದಿನಗಳಿಗೆ ವಿಸ್ತರಿಸಿದರು. 2016 ರಿಂದ ಪ್ರತಿ ವರ್ಷದ ಜಾತ್ರೆ ಸಂದರ್ಭದಲ್ಲೂ ಜನಜಾಗೃತಿ ಮೂಡಿಸುತ್ತಿರುವುದು ಗವಿಮಠದ ಸಂಸ್ಥಾನದ ಹೆಗ್ಗಳಿಕೆ.
2015 ರಿಂದ 2022 ರವರೆಗೆ ಶ್ರೀ ಮಠದ ಜಾತ್ರಾ ಮಹೋತ್ಸವದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತಾ ಬಂದಿದ್ದು, ಒಟ್ಟು 5050 ಯೂನಿಟ್ ರಕ್ತ ಸಂಗ್ರಹ ಮಾಡಿ ಅಗತ್ಯವಿರುವವರಿಗೆ ನೆರವಾಗಿದೆ.
2016 ರಲ್ಲಿ ಬಾಲ್ಯವಿವಾಹ ತಡೆ, 2017 ರಲ್ಲಿ ನೀರಿನ ಸಂರಕ್ಷಣೆಯ ಜಲದೀಕ್ಷೆ, 2018 ರಲ್ಲಿ ಸಶಕ್ತ ಮನ - ಸಂತ್ರಪ್ತ ಜೀವನ, 2019 ರಲ್ಲಿ ಕೃಪಾದೃಷ್ಠಿ - ನೇತ್ರದಾನ ಜಾಗೃತಿ, 2020 ರಲ್ಲಿ ಲಕ್ಷ ವೃಕ್ಸೋತ್ಸವ, 2021 ರಲ್ಲಿ ಸರಳ ಜಾತ್ರೆ - ಸಮಾಜಮುಖಿ ಜಾತ್ರೆ, 2022ರಲ್ಲಿ ಅಡವಿಹಳ್ಳಿ ಗ್ರಾಮ ದತ್ತು, ಕ್ಯಾನ್ಸರ್ ರೋಗ ತಪಾಸಣೆ, ಗಿಣಗೇರಿ ಕೆರೆ ಊಳೆತ್ತುವ ಕಾರ್ಯಕ್ರಮ, 2023 ರಲ್ಲಿ ಅಂಗಾಂಗ ದಾನ ಜಾಗೃತಿ ಮೂಡಿಸುವ ಕಾಯಕ್ರಮ ನಡೆಸಲಾಗಿತ್ತು. ಇದೇ ವರ್ಷ ಮೊದಲ ಬಾರಿಗೆ ಕೆರೆಯ ಮಧ್ಯಭಾಗದ ಈಶ್ವರ ದೇವಸ್ಥಾನದ ಪ್ರಾಂಗಣದ ಬಳಿ ಗಂಗಾರತಿ ನೇರವೇರಿಸಲಾಗಿತ್ತು.
5000 ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹ
ಗವಿಮಠದ ಗವಿಸಿದ್ದೇಶ್ವರದ ವಿದ್ಯಾವರ್ಧಕ ಟ್ರಸ್ಟ್ ಅಡಿಯಲ್ಲಿ ಸುಮಾರು ೫೦೦೦ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ದಾಸೋಹ ನೀಡಲಾಗುತ್ತಿದೆ. ಮಠದ ವಿದ್ಯಾರ್ಥಿಗಳಿಗಾಗಿ 6 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶಿವಶಾಂತವೀರ ಮಹಾಸ್ವಾಮೀಜಿ ಚಾರಿಟೇಬಲ್ ಟ್ರಸ್ಟ್ ಅಡಿ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ.
ʼಸಕಲಚೇತನʼ ಈ ವರ್ಷದ ಜನಜಾಗೃತಿ
ಗವಿಮಠದ ಜಾತ್ರಾ ಮಹೋತ್ಸವದ ಪ್ರಯುಕ್ತ ಈ ವರ್ಷ ಸಕಲಚೇತನ ಎಂಬ ಶೀರ್ಷಿಕೆಯಡಿ ಜನಜಾಗೃತಿ ನಡೆಯುತ್ತಿದೆ. ಜ.11 ರಂದು ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಯಿತು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ʼವಿಕಲಚೇತನರ ನಡೆ ಸಕಲಚೇತನದ ಕಡೆʼ ಎಂಬ ಘೋಷವಾಕ್ಯದೊಂದಿಗೆ ಜಾತ್ರೆಗೆ ಸಾಮಾಜಿಕ ಜನಜಾಗೃತಿಯ ಮೆರುಗು ನೀಡಿದ್ದಾರೆ.
ಕೃತಕ ಅಂಗಾಗ ಜೋಡಣೆಯ ಸಂಕಲ್ಪದ ಅಭಿಯಾನ ಇದಾಗಿದೆ. ಪೋಲಿಯೋ, ರಸ್ತೆ ಅಪಘಾತ, ಆಕಸ್ಮಿಕ ಘಟನೆಗಳಲ್ಲಿ ಅನೇಕರು ಕೈ, ಕಾಲು ಕಳೆದುಕೊಂಡು ಅಂಗವೈಕಲ್ಯದಿಂದ ಬಳಲುತ್ತಾರೆ. ಕೃತಕ ಅಂಗಾಗಗಳನ್ನು ಅನೇಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಸಂಕಷ್ಟ ಪಡುತ್ತಾರೆ. ಇಂತಹವರಿಗೆ ಆಸರೆಯಾಗಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೃತಕ ಕೈ-ಕಾಲು ಅವಶ್ಯಕತೆ ಇರುವ ಎಲ್ಲರಿಗೂ ಈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಸ್ವಾವಲಂಬಿ ಜೀವನಕ್ಕೆ ಉರುಗೋಲಾಗಲು ಗವಿಮಠ ಸಂಕಲ್ಪ ತೊಟ್ಟಿದೆ.
ಉಚಿತ ಶ್ರವಣ ಸಾಧನ ವಿತರಣೆ
ಇನ್ನು ಅನೇಕ ವಿದ್ಯಾರ್ಥಿಗಳು ಶ್ರವಣ ದೋಷ ಹೊಂದಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯಲು ಕಾರಣವಾಗುತ್ತಿದೆ. ಇದನ್ನು ಮನಗಂಡಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು, ಜಾತ್ರೆಯ ಅಂಗವಾಗಿ ಶ್ರವಣ ದೋಷ ಹೊಂದಿರುವ ವಿದ್ಯಾರ್ಥಿಗಳಿಗೆ ಉಚಿತ ಶ್ರವಣ ಸಾಧನ ವಿತರಿಸುವ ಸಂಕಲ್ಪ ಮಾಡಿದ್ದಾರೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೊಪ್ಪಳ ಜಿಲ್ಲಾ ಶಾಖೆಯ ಸಹಯೋಗದೊಂದಿಗೆ, ಉಚಿತ ಶ್ರವಣ ಸಾಧನ ವಿತರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಜಾತ್ರೆಯ ಹಿನ್ನೆಲೆ ಏನು?
ಶ್ರೀಮಠದ 11 ನೇ ಪೀಠಧೀಪತಿಗಳಾಗಿದ್ದ ಗವಿಸಿದ್ದೇಶ್ವರ ಸ್ವಾಮಿಗಳು ಗವಿಮಠಕ್ಕೆ ಬರುವ ಮುನ್ನ ಮಂಗಾಳಪುರ ಸಮೀಪದ ಊರಗೌಡರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದರು. ಗವಿಮಠಕ್ಕೆ ಹೊರಟು ನಿಂತಾಗ ತಮ್ಮ ಜಡೆಯನ್ನು ಕತ್ತರಿಸಿ ಆ ಮನೆಯ ಗೌಡಸಾನಿಗೆ ನೀಡಿದರು. ಸಂತಾನವಿಲ್ಲದ ಆ ಗೌಡ ದಂಪತಿ ಗವಿ ಸಿದ್ದೇಶ್ವರರ ಜಡೆಯನ್ನು ಪೂಜಿಸಿದ ಫಲವಾಗಿ ಗಂಡು ಸಂತಾನ ಪಡೆದರು. ಆ ಮಗುವಿಗೆ ಜಡೇಗೌಡ ಎಂದು ನಾಮಕರಣ ಮಾಡಲಾಯಿತು. ಇಂದಿಗೂ ಮಠದಲ್ಲಿ ಪೂಜೆಗೊಂಡ ಗವಿಸಿದ್ದೇಶ್ವರರ ಮೂರ್ತಿಯನ್ನು ಜಡೆಗೌಡರ ಮನೆತನದ ಮನೆಗೆ ತಂದು ಪೂಜಿಸಿದ ಬಳಿಕ ವಾದ್ಯ ಮೇಳಗಳೊಂದಿಗೆ ಕೊಪ್ಪಳ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಮರಳಿ ಗವಿಮಠಕ್ಕೆ ತರಲಾಗುತ್ತದೆ.
ಮಹಾರಥೋತ್ಸವವು ನಿರಾಂತಕ, ನಿರ್ವಿಘ್ನವಾಗಿ ನೆಡೆಯಲೆಂದು ಜ.14ರಂದು ಮುನ್ನದಿನ ಲಘು ರಥೋತ್ಸವ ಅಥವಾ ಉಚ್ಛಾಯ ನೆರವೇರುತ್ತದೆ. ಮರುದಿನ ಗವಿಸಿದ್ದೇಶ್ವರರ ಮಹಾರಥೋತ್ಸವ ಜರುಗಲಿದೆ. ಇ