
ಯಲಹಂಕ ಸ್ಲಂ ತೆರವು: ಸೂರು ಕಳೆದುಕೊಂಡ ಮಕ್ಕಳ ರಕ್ಷಣೆ; 3 ದಿನದೊಳಗೆ ವರದಿಗೆ ಮಕ್ಕಳ ಆಯೋಗದ ಸೂಚನೆ
ಮಕ್ಕಳ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಿ, ಮುಂದಿನ ಮೂರು ದಿನಗಳ ಒಳಗಾಗಿ ಸವಿಸ್ತಾರವಾದ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಹಾಗೂ ಕೇರಳ ಮತ್ತು ಕರ್ನಾಟಕದ ನಡುವೆ ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಯಲಹಂಕದ ಕೋಗಿಲು ಬಳಿಯ ಫಕೀರ್ ಮತ್ತು ವಸೀಮ್ ಲೇಔಟ್‌ನಲ್ಲಿ ನಡೆಸಲಾದ ಸ್ಲಂ ಮನೆಗಳ ತೆರವು ಕಾರ್ಯಾಚರಣೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಗಂಭೀರವಾಗಿ ಪರಿಗಣಿಸಿದೆ.
ಮೈಕೊರೆಯುವ ಚಳಿಯಲ್ಲಿ ನೂರಾರು ಕುಟುಂಬಗಳು ಸೂರು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ, ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಮೂರು ದಿನಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಆಯೋಗದ ಅಧ್ಯಕ್ಷ ಶಶಿಧರ್ ಕೊಸಾಂಬೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಆಯೋಗದ ಅಧ್ಯಕ್ಷ ಶಶಿಧರ್ ಕೊಸಾಂಬೆ ಅವರು, ತೆರವು ಕಾರ್ಯಾಚರಣೆಯಿಂದ ಮಕ್ಕಳ ಮೇಲೆ ಉಂಟಾಗಿರುವ ಪರಿಣಾಮಗಳು ಮತ್ತು ಅವರ ಪ್ರಸ್ತುತ ಸ್ಥಿತಿಗತಿಯ ಕುರಿತು ಸಮಗ್ರ ಕ್ಷೇತ್ರ ಅಧ್ಯಯನ ನಡೆಸಿ, ಮುಂದಿನ ಮೂರು ದಿನಗಳ ಒಳಗಾಗಿ ಸವಿಸ್ತಾರವಾದ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಅವರು, ತೆರವು ಕಾರ್ಯಾಚರಣೆಯಿಂದಾಗಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ಸೂರು ಕಳೆದುಕೊಂಡು ಬೀದಿಗೆ ಬಂದಿವೆ. ಬೆಂಗಳೂರಿನ ಮೈಕೊರೆಯುವ ಚಳಿಯಲ್ಲಿ ವಾಸಸ್ಥಾನವಿಲ್ಲದೆ ಮಹಿಳೆಯರು ಮತ್ತು ಮಕ್ಕಳು ಕಠಿಣ ಪರಿಸ್ಥಿತಿ ಎದುರಿಸುತ್ತಿರುವುದನ್ನು ಗಮನಿಸಲಾಗಿದೆ. ಮನೆಗಳ ತೆರವು ನಡೆದು ಒಂದು ವಾರ ಕಳೆದಿದ್ದರೂ, ಈ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ ಅತೃಪ್ತಿ ವ್ಯಕ್ತಪಡಿಸಿದರು.
ಇಲ್ಲಿನ ಜನರು ಎಲ್ಲಿಗೂ ಹೋಗಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿ ಹೆಚ್ಚು ಸಂಖ್ಯೆಯಲ್ಲಿರುವ ಮಕ್ಕಳು ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ತೆರವು ಕಾರ್ಯಾಚರಣೆಯಿಂದಾಗಿ ಅವರ ಓದಿಗೆ ದೊಡ್ಡ ಅಡ್ಡಿಯಾಗಿದೆ. ಶಾಲೆಗೆ ಹೋಗಲು ಸಾಧ್ಯವಾಗದ ಸ್ಥಿತಿಯಲ್ಲಿ ಮಕ್ಕಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿಗಳಿಗೆ ತಕ್ಷಣವೇ ಕಾರ್ಯಪ್ರವೃತ್ತರಾಗಲು ಸೂಚಿಸಲಾಗಿದೆ. ತೆರವು ಪ್ರಕ್ರಿಯೆಯ ಸಂಪೂರ್ಣ ವಿವರ, ಬಾಧಿತ ಮಕ್ಕಳ ಸಂಖ್ಯೆ, ಶಾಲೆಗೆ ಹೋಗುವ ಮಕ್ಕಳ ವಿವರ ಮತ್ತು ಪ್ರಸ್ತುತ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಕಲೆಹಾಕಲು ಆದೇಶಿಸಲಾಗಿದೆ ಎಂದರು.
ವರದಿ ಸಲ್ಲಿಕೆಯಾದ ನಂತರ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಲು ಮತ್ತು ಅವರ ಶಿಕ್ಷಣ ಮುಂದುವರಿಸಲು ಅಗತ್ಯ ಕ್ರಮಗಳನ್ನು ಆಯೋಗ ಕೈಗೊಳ್ಳಲಿದೆ. ಒಂದು ವೇಳೆ ಕುಟುಂಬಗಳಿಗೆ ಚಿಕ್ಕ ಮಕ್ಕಳ ಆರೈಕೆ ಮಾಡಲು ಸಾಧ್ಯವಾಗದಿದ್ದರೆ, ಅಂತಹ ಮಕ್ಕಳನ್ನು ಉತ್ತಮ ಪಾಲನೆ ಮತ್ತು ಸುರಕ್ಷತೆಗಾಗಿ ಸರ್ಕಾರಿ 'ಬಾಲ ಮಂದಿರ'ಗಳಿಗೆ ಸೇರಿಸಲು ವ್ಯವಸ್ಥೆ ಮಾಡಲಾಗುವುದು. ಮಕ್ಕಳ ಹಕ್ಕುಗಳ ಉಲ್ಲಂಘನೆಗಾಗಿ ಸಂಬಂಧಪಟ್ಟ ನಾಗರಿಕ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಹೇಳಿದರು.
ತೆರವುಗೊಂಡ ಕುಟುಂಬಗಳಲ್ಲಿ ಹೆಚ್ಚಿನವುಗಳ ಮಕ್ಕಳು ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ವಾಸಸ್ಥಾನವಿಲ್ಲದೆ, ಪುಸ್ತಕ-ಬಟ್ಟೆಗಳು ಚಲ್ಲಾಪಿಲ್ಲಿಯಾಗಿರುವ ಈ ಹೊತ್ತಿನಲ್ಲಿ ಮಕ್ಕಳು ಶಾಲೆಗೆ ಹೋಗುವುದು ಅಸಾಧ್ಯವಾಗಿದೆ. ಶಿಕ್ಷಣದ ಹಕ್ಕು ಕಾಯ್ದೆಯಡಿ ಪ್ರತಿಯೊಂದು ಮಗುವಿಗೂ ನಿರಂತರ ಶಿಕ್ಷಣ ಸಿಗಬೇಕು. ಆದರೆ ಇಂತಹ ಕಾರ್ಯಾಚರಣೆಗಳು ಮಕ್ಕಳ ಕಲಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಡಿಸೆಂಬರ್ ತಿಂಗಳ ಚಳಿ ಮತ್ತು ತೆರೆದ ಜಾಗದಲ್ಲಿನ ವಾಸವು ಮಕ್ಕಳಲ್ಲಿ ಶ್ವಾಸಕೋಶದ ಸಮಸ್ಯೆ ಮತ್ತು ಇತರ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಪ್ರಕಾರ, ಈ ತೆರವು ಕಾರ್ಯಾಚರಣೆಯು ಕಾನೂನುಬದ್ಧವಾಗಿದೆ. 2015ರಲ್ಲಿ ಬಿಬಿಎಂಪಿಗೆ ಹಂಚಿಕೆಯಾದ 15 ಎಕರೆ ಭೂಮಿಯಲ್ಲಿ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಅನಿಲ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮುಂದಾಗಿದೆ.
ಈ ಪ್ರದೇಶವು ತ್ಯಾಜ್ಯ ವಿಸರ್ಜನೆ ಪ್ರದೇಶವಾಗಿದ್ದು, ಇಲ್ಲಿನ ವಿಷಕಾರಿ ಅನಿಲಗಳು ಮತ್ತು ಪರಿಸರವು ಮಾನವ ವಾಸಕ್ಕೆ ಯೋಗ್ಯವಲ್ಲ. ಹಾಗಾಗಿ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತೆರವು ಅಗತ್ಯವಾಗಿತ್ತು. ಬೆಳೆಯುತ್ತಿರುವ ಬೆಂಗಳೂರಿನ ಕಸದ ಸಮಸ್ಯೆಯನ್ನು ನೀಗಿಸಲು ಅನಿಲ ಉತ್ಪಾದನಾ ಘಟಕಗಳಂತಹ ಯೋಜನೆಗಳು ಅನಿವಾರ್ಯ ಎಂದು ತಿಳಿಸಿದರು.

