
ಬೆಂಗಳೂರಿನ ಕೋಗಿಲು ಬಳಿ ಒತ್ತುವರಿ ತೆರವು; ಕೇರಳದ ರಾಜಕಾರಣಿಗಳಿಗೆ ಅನಗತ್ಯ 'ವರಿ'!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಬುಲ್ಡೋಜರ್ ನ್ಯಾಯಕ್ಕೂ ಮತ್ತು ಕಾನೂನುಬದ್ಧ ಒತ್ತುವರಿ ತೆರವಿಗೂ ವ್ಯತ್ಯಾಸವಿದೆ" ಎಂದು ವಿವರಿಸಿದ್ದಾರೆ.
ರಾಜಧಾನಿಯ ಉತ್ತರ ಭಾಗದ ಯಲಹಂಕ ವಲಯದ ಕೋಗಿಲು ಬಳಿ ಬಿಬಿಎಂಪಿ ನಡೆಸಿದ ಒತ್ತುವರಿ ತೆರವು ಕಾರ್ಯಾಚರಣೆಯು ಇದೀಗ ದಕ್ಷಿಣ ಭಾರತದ ಎರಡು ರಾಜ್ಯಗಳ ನಡುವಿನ ರಾಜಕೀಯ ವಿವಾದವಾಗಿ ರೂಪಾಂತರಗೊಂಡಿದೆ. ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಸರ್ಕಾರಿ ಜಮೀನಿನ ರಕ್ಷಣೆ ಮತ್ತು ಮಾನವ ಹಕ್ಕುಗಳ ನಡುವಿನ ಈ ಸಂಘರ್ಷದಲ್ಲಿ ಎಐಸಿಸಿ (ಕಾಂಗ್ರಸ್ ಹೈಕಮಾಂಡ್) ಹಸ್ತಕ್ಷೇಪ ಮಾಡಿದ್ದು, ರಾಜ್ಯ ಸರ್ಕಾರದ ಮೇಲೆ ಒತ್ತಡ ಸೃಷ್ಟಿಸುವ ಕೆಲಸವನ್ನು ನೆರೆಯ ರಾಜ್ಯದ ಕೈ ರಾಜಕಾರಣಿಗಳು ಮಾಡುತ್ತಿದ್ದಾರೆ.
ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಯ ಬೆಂಗಳೂರು ಮಹಾನಗರ ಇಂದು ಎದುರಿಸುತ್ತಿರುವ ಅತಿದೊಡ್ಡ ಸವಾಲೆಂದರೆ ತ್ಯಾಜ್ಯ ನಿರ್ವಹಣೆ. ಅದರಲ್ಲೂ, ನಗರದ ಉತ್ತರ ಭಾಗದ ಯಲಹಂಕ ವಲಯದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕಸದ ವಿಲೇವಾರಿ ಮಾಡಲು ಬಿಬಿಎಂಪಿ (ಹೊಸದಾಗಿ ರಚನೆಗೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ- ಜಿಬಿಎ) ಹೆಣಗಾಡುತ್ತಿದೆ. ಈ ಸಮಸ್ಯೆಗೆ ಪರಿಹಾರ ಎಂಬಂತೆ ಮತ್ತು ಮುಂದಿನ ಯೋಜನೆಗಳಿಗಾಗಿ ಯಲಹಂಕದ ಕೋಗಿಲು ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನನ್ನು ‘ತ್ಯಾಜ್ಯ ಸಂಸ್ಕರಣಾ ಘಟಕ’ ಮತ್ತು ‘ಡಂಪಿಂಗ್ ಯಾರ್ಡ್’ ಸ್ಥಾಪನೆಗಾಗಿ ಮೀಸಲಿಡಲಾಗಿತ್ತು. ಆದರೆ, ವರ್ಷಗಳಿಂದ ಈ ಜಾಗವು ಅಕ್ರಮವಾಗಿ ಒತ್ತುವರಿಯಾಗಿದ್ದು, ಇಲ್ಲಿ ಬೃಹತ್ ಮಟ್ಟದ ಅನಧಿಕೃತ ವಸತಿಗಳು ತಲೆಎತ್ತಿದ್ದವು. ಈ ಒತ್ತುವರಿಯನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾದಾಗ ಅದು ರಾಷ್ಟ್ರೀಯ ಮಟ್ಟದ ರಾಜಕೀಯ ವಿವಾದವಾಗಿ ಮಾರ್ಪಾಟಾಗಿದೆ. ಅದರಲ್ಲೂ ನೆರೆಯ ರಾಜ್ಯದ ಪ್ರಮುಖ ಎರಡೂ ಪಕ್ಷಗಳಾದ ಸಿಪಿಎಂ ಹಾಗೂ ಕಾಂಗ್ರೆಸ್ ಇದನ್ನು ದೊಡ್ಡ ಸುದ್ದಿಯನ್ನಾಗಿ ಮಾಡಿದೆ. ಅದರಲ್ಲೂ ಕಾಂಗ್ರೆಸ್ ಇದನ್ನು ರಾಜಕೀಯ ಒತ್ತಡದ ವಿಷಯವನ್ನಾಗಿ ಪರಿವರ್ತಿಸಿದೆ. ಈ ಅಟಾಟೋಪಗಳಿಗೆ ಮೂಲ ಕಾರಣ ಇಲ್ಲಿದೆ. ತೆರವು ಆದ ಪ್ರದೇಶವನ್ನು ಅತಿ ಹೆಚ್ಚು ಅತಿಕ್ರಮಣ ಮಾಡಿಕೊಂಡಿದ್ದವರು ಕೇರಳದವರು ಅದರಲ್ಲೂ ಮುಸ್ಲಿಮರು!. ಹೀಗಾಗಿ ಆಡಳಿತಾತ್ಮಕ ಕಾರ್ಯಾಚರಣೆಗೆ ಕೋಮು ಬಣ್ಣವೂ ಮೆತ್ತಿಕೊಂಡಿತು. ಕರ್ನಾಟಕ ಸರ್ಕಾರಕ್ಕೆ ಅದೇ ಹೆಸರಲ್ಲಿ ಕಳಂಕ ತರುವ ಪ್ರಯತ್ನ ನಡೆದಿದೆ.
ಡಂಪಿಂಗ್ ಯಾರ್ಡ್‌ನ ಅವಶ್ಯಕತೆ
ಯಲಹಂಕದ ಕೋಗಿಲು ಪ್ರದೇಶದಲ್ಲಿ ತೆರವುಗೊಳಿಸಲಾದ ಈ ಜಾಗವು ಜನವಸತಿಗೆ ಯೋಗ್ಯವಾದ ಪ್ರದೇಶವಲ್ಲ. ಇದು ತಗ್ಗು ಪ್ರದೇಶವಾಗಿದ್ದು, ನಗರದ ಯೋಜಿತ ಅಭಿವೃದ್ಧಿಯಲ್ಲಿ ಇದನ್ನು ತ್ಯಾಜ್ಯ ವಿಲೇವಾರಿಗಾಗಿ ಗುರುತಿಸಲಾಗಿತ್ತು. ಬೆಂಗಳೂರಿನ ಉತ್ತರ ಭಾಗದಲ್ಲಿ ಸೃಷ್ಟಿಯಾಗುವ ಟನ್‌ಗಟ್ಟಲೆ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಇಲ್ಲಿ ಘಟಕ ಸ್ಥಾಪಿಸುವುದು ಅನಿವಾರ್ಯವಾಗಿತ್ತು. ಈ ಜಾಗದಲ್ಲಿ ಸುಮಾರು ಐದಾರು ವರ್ಷಗಳಿಂದ ಕೇರಳ ಮೂಲದ ವಲಸೆ ಕಾರ್ಮಿಕರು ಮತ್ತು ಒಂದು ಮುಸ್ಲಿಂ ಸಮುದಾಯದ ಜನರು ನೂರಾರು ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಸರ್ಕಾರಿ ಜಮೀನನ್ನು ಅತಿಕ್ರಮಿಸಿಕೊಂಡಿದ್ದ ಈ ಪ್ರದೇಶವು ನೈರ್ಮಲ್ಯದ ದೃಷ್ಟಿಯಿಂದಲೂ ಹದಗೆಟ್ಟಿತ್ತು. ಈ ಅತಿಕ್ರಮಣವನ್ನು ತೆರವುಗೊಳಿಸದೆ ಹೋದರೆ ನಗರದ ಕಸದ ಸಮಸ್ಯೆ ಸ್ಫೋಟಗೊಳ್ಳುವ ಭೀತಿ ಇದ್ದ ಕಾರಣ, ಬಿಬಿಎಂಪಿ ಪೊಲೀಸರ ರಕ್ಷಣೆಯೊಂದಿಗೆ ಬುಲ್ಡೋಜರ್‌ಗಳ ಮೂಲಕ ದಾಳಿ ನಡೆಸಿತ್ತು.
'ಪಿಣರಾಯಿ ವಿಜಯನ್' ಕಿಡಿ ಮತ್ತು ಕೋಮು ಬಣ್ಣ
ಈ ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಕೇರಳ ರಾಜಕೀಯ ವಲಯದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಯಿತು. ಇದಕ್ಕೆ ಪ್ರಮುಖ ಕಾರಣ, ತೆರವುಗೊಂಡ ನಿರಾಶ್ರಿತರಲ್ಲಿ ಕೇರಳ ಮೂಲದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂಬುದು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಪ್ರಕರಣಕ್ಕೆ ಅತ್ಯಂತ ವೇಗವಾಗಿ ಪ್ರತಿಕ್ರಿಯಿಸಿದರು. ಅವರು ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ, "ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯದ ಮೇಲೆ ಬುಲ್ಡೋಜರ್ ಹರಿಸುತ್ತಿದೆ" ಎಂಬ ಆರ್ಥದ ಕಟು ಟೀಕೆ ಮಾಡಿದರು. ಇದು ಆಡಳಿತಾತ್ಮಕವಾಗಿ ನಡೆಯುತ್ತಿದ್ದ ಒತ್ತುವರಿ ತೆರವಿಗೂ ರಾಜಕೀಯ ಮತ್ತು ಕೋಮು ಪ್ರೇರಿತ ಬಣ್ಣ ಬಳಿಯುವ ಪ್ರಯತ್ನವಾಗಿತ್ತು. ಪಿಣರಾಯಿ ವಿಜಯನ್ ಅವರ ಈ ಹೇಳಿಕೆಯು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ರಾಜಕೀಯ ಗಿಮಿಕ್ ಎಂಬ ಟೀಕೆಗಳು ಕರ್ನಾಟಕದ ರಾಜಕೀಯ ವಲಯದಲ್ಲಿ ಕೇಳಿಬಂದವು.
ಕೇರಳದ ಕಮ್ಯುನಿಸ್ಟ್ ಪಕ್ಷದ ಆರೋಪವೇನು?
ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ದಲಿತ ಹಾಗೂ ಮುಸ್ಲಿಂ ಫಕೀರ್ ಕುಟುಂಬಗಳ ಮನೆಗಳನ್ನು ಬೃಹತ್ ಬೆಂಗಳೂರು ಪ್ರಾಧಿಕಾರವು ಅಮಾನವೀಯವಾಗಿ ಧ್ವಂಸಗೊಳಿಸಿದೆ ಎಂಬುದು ಕೇರಳದ ಕಮ್ಯುನಿಸ್ಟ್ ಪಕ್ಷದ (ಸಿಪಿಐಎಂ) ಆರೋಪ. ಈ ಕಾರ್ಯಾಚರಣೆಯು ಕೇವಲ ಅಕ್ರಮವಷ್ಟೇ ಅಲ್ಲದೆ, ಬಡವರ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ ಎಂದು ಆರೋಪಿಸಿರುವ ಪಕ್ಷವು, 2017-18ರಲ್ಲೇ ತಹಶೀಲ್ದಾರ್ ಅವರಿಂದ ಅನುಮತಿ ಪಡೆದು ವಿದ್ಯುತ್ ಮತ್ತು ನೀರಿನ ಸೌಲಭ್ಯ ಹೊಂದಿದ್ದ ಮನೆಗಳನ್ನು ಯಾವುದೇ ಮುನ್ಸೂಚನೆ ನೀಡದೆ ಕೆಡವಿರುವುದು ಸರ್ಕಾರದ ದೌರ್ಜನ್ಯದ ಪರಮಾವಧಿಯಾಗಿದೆ ಎಂದು ದೂರಿದೆ. ಈ ಘಟನೆಯಿಂದಾಗಿ ನೂರಾರು ಮಂದಿ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಬೀದಿಗೆ ಬಿದ್ದಿರುವುದು ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಪಕ್ಷದ ನಾಯಕರು ಕಿಡಿಕಾರಿದ್ದಾರೆ.
ಕರ್ನಾಟಕ ಸರ್ಕಾರದ ಈ ಕ್ರಮವು ಸಂಪೂರ್ಣವಾಗಿ ಬಡವರ ವಿರೋಧಿಯಾಗಿದ್ದು, ಸಂಕಷ್ಟದಲ್ಲಿರುವ ಕುಟುಂಬಗಳ ರಕ್ಷಣೆಗೆ ಸರ್ಕಾರವು ತಕ್ಷಣವೇ ಧಾವಿಸಬೇಕು ಎಂದು ಸಿಪಿಐಎಂ ಘಟಕ ಒತ್ತಾಯಿಸಿದೆ. ರಾಜ್ಯ ಸರ್ಕಾರದ ಈ ದಬ್ಬಾಳಿಕೆಯ ವಿರುದ್ಧ ಸಿಪಿಐಎಂ ನಿಯೋಗವು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದು, ನೆಲಸಮಗೊಂಡ ಮನೆಗಳನ್ನು ಸರ್ಕಾರವೇ ಸ್ವತಃ ಪುನರ್ ನಿರ್ಮಿಸಿಕೊಡಬೇಕು ಮತ್ತು ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದೆ. ಬಡವರ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಇಂತಹ ಕಾನೂನುಬಾಹಿರ ಕೃತ್ಯಗಳನ್ನು ನಿಲ್ಲಿಸದಿದ್ದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಪಕ್ಷವು, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗುವವರೆಗೂ ಅವರ ಪರವಾಗಿ ಧ್ವನಿ ಎತ್ತಲಾಗುವುದು ಎಂದು ತಿಳಿಸಿದೆ.
ಕೇರಳದ ರಾಜ್ಯಸಭಾ ಸದಸ್ಯ ರಹೀಂ ಭೇಟಿ, ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ!
ವಾಸೀಂ ಲೇಔಟ್ ಮತ್ತು ಫಕೀರ್ ಕಾಲೋನಿಯಲ್ಲಿ ನಡೆದ ಮನೆ ತೆರವು ಕಾರ್ಯಾಚರಣೆಯ ಸ್ಥಳಕ್ಕೆ ಕೇರಳದ ರಾಜ್ಯಸಭಾ ಸದಸ್ಯ ಹಾಗೂ ಸಿಪಿಎಂ ಮುಖಂಡ ಎ.ಎ. ರಹೀಂ ಅವರು ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳ ಪರವಾಗಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದೂ ನಡೆದಿದೆ. ಸುಮಾರು 400ಕ್ಕೂ ಹೆಚ್ಚು ಬಡ ಕುಟುಂಬಗಳು, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯದವರು ಸೂರಿಲ್ಲದೆ ಬೀದಿಪಾಲಾಗಿದ್ದಾರೆ ಎಂದು ಸಂಸದರು ಈ ವೇಳೆ ಕಳವಳ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ತಕ್ಷಣವೇ ಪುನರ್ವಸತಿ ಕಲ್ಪಿಸಬೇಕು ಮತ್ತು ಬಾಕಿ ಉಳಿದಿರುವ ಧ್ವಂಸ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ ರಹೀಂ ಅವರು, ನಿರಾಶ್ರಿತರಾದ ಪ್ರತಿಯೊಬ್ಬರಿಗೂ ನ್ಯಾಯ ಸಿಗುವವರೆಗೂ ಸಿಪಿಐ(ಎಂ) ಹೋರಾಟ ನಡೆಸಲಿದೆ ಎಂದು ಕೇರಳದಿಂದ ಬಂದ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಹೋಗಿದ್ದಾರೆ!
ಸಿದ್ದರಾಮಯ್ಯ ಸಮರ್ಥನೆ ಏನು?
ಇದೇ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಬುಲ್ಡೋಜರ್ ನ್ಯಾಯಕ್ಕೂ ಮತ್ತು ಕಾನೂನುಬದ್ಧ ಒತ್ತುವರಿ ತೆರವಿಗೂ ವ್ಯತ್ಯಾಸವಿದೆ" ಎಂದು ವಿವರಿಸಿದರು. ಉತ್ತರ ಪ್ರದೇಶದ ಮಾದರಿಯಲ್ಲಿ ಯಾವುದೇ ಕಾನೂನು ಪ್ರಕ್ರಿಯೆ ಅನುಸರಿಸದೆ ಶಿಕ್ಷಿಸುವ ಉದ್ದೇಶದಿಂದ ನಾವು ಮನೆಗಳನ್ನು ಕೆಡವುತ್ತಿಲ್ಲ. ಬದಲಾಗಿ, ಸಾರ್ವಜನಿಕ ಉದ್ದೇಶದ ಜಮೀನನ್ನು ಮರುಪಡೆಯುತ್ತಿದ್ದೇವೆ. ಟೀಕೆಗಳು ಅನಗತ್ಯವಾಗಿದ್ದು, ಸಂತ್ರಸ್ತರಿಗೆ ಮಾನವೀಯತೆಯ ದೃಷ್ಟಿಯಿಂದ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಡಿಕೆ ಶಿವಕುಮಾರ್ ತಿರುಗೇಟು
ಯಲಹಂಕದ ಕೋಗಿಲು ಗ್ರಾಮದಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯು ಸಂಪೂರ್ಣ ಕಾನೂನುಬದ್ಧವಾಗಿದ್ದು, ಇದನ್ನು 'ಬುಲ್ಡೋಜರ್ ರಾಜ್' ಎಂದು ಕರೆದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಟೀಕೆಯನ್ನು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ಸರ್ವೇ ನಂಬರ್ 99ರ 15 ಎಕರೆ ಸರ್ಕಾರಿ ಗೋಮಾಳ ಭೂಮಿಯನ್ನು ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ತಾಣಕ್ಕಾಗಿ ಹಂಚಿಕೆ ಮಾಡಲಾಗಿದ್ದು, ಮನುಷ್ಯರ ವಾಸಕ್ಕೆ ಈ ಪ್ರದೇಶ ಅತ್ಯಂತ ಅಪಾಯಕಾರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಪ್ರತಿಕ್ರಿಯಿಸಿರುವ ಅವರು, ಸಾರ್ವಜನಿಕ ಸುರಕ್ಷತೆ ಮತ್ತು ಸರ್ಕಾರಿ ಭೂಮಿ ರಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಲ್ಲದೆ, ವಾಸ್ತವ ಸತ್ಯಾಂಶಗಳನ್ನು ತಿಳಿಯದೆ ಟೀಕೆ ಮಾಡುವುದು ಸರಿಯಲ್ಲ ಎಂದು ಕೇರಳ ಮುಖ್ಯಮಂತ್ರಿಗಳಿಗೆ ನೇರ ತಿರುಗೇಟು ನೀಡಿದ್ದಾರೆ.
ಕರ್ನಾಟಕ ಸರ್ಕಾರವು ಸಂವಿಧಾನದ ಆಶಯದಂತೆ ಸಮಾನತೆ ಮತ್ತು ಮಾನವೀಯತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, 'ಸರ್ವ ಜನಾಂಗದ ಶಾಂತಿಯ ತೋಟ' ಎಂಬ ತತ್ವವೇ ತಮ್ಮ ಆಡಳಿತದ ಮಾರ್ಗದರ್ಶಿಯಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಸ್ಥಳಾಂತರಗೊಂಡಿರುವ ಅರ್ಹ ಕುಟುಂಬಗಳಿಗೆ ಸರ್ಕಾರಿ ಯೋಜನೆಗಳಡಿ ವಸತಿ ಸೌಲಭ್ಯ ಮತ್ತು ಅಗತ್ಯ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿರುವ ಅವರು, ಈ ಕ್ರಮವನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸುವುದು ತಪ್ಪು ಎಂದು ಹೇಳಿದ್ದಾರೆ.
ಕೆ.ಸಿ. ವೇಣುಗೋಪಾಲ್ ಮತ್ತು ಎಐಸಿಸಿ ಮಧ್ಯಸ್ಥಿಕೆ
ವಿವಾದವು ನೆರೆರಾಜ್ಯದ ಸಿಎಂ ಮತ್ತು ಕರ್ನಾಟಕದ ನಾಯಕರ ನಡುವಿನ ಶೀತಲ ಸಮರವಾಗಿ ಬದಲಾದಾಗ, ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿದ್ದು ಇನ್ನೊಂದು ಅಚಾತುರ್ಯ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕೇರಳದ ಪ್ರಭಾವಿ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಈ ವಿಚಾರದಲ್ಲಿ ಸೇತುವೆಯಾಗಿ ಕೆಲಸ ಮಾಡಿದ್ದಾರೆ. ಅವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಮಾನವೀಯ ನೆಲೆಯಲ್ಲಿ ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡಿದರು. "ಒತ್ತುವರಿ ತೆರವು ಮಾಡುವುದು ಸರ್ಕಾರದ ಹಕ್ಕಾದರೂ, ಅಲ್ಲಿ ವಾಸವಿದ್ದ ಬಡ ಕುಟುಂಬಗಳ ಜೀವನದ ಬಗ್ಗೆ ಸಂವೇದನೆ ಇರಬೇಕು. ಜನರನ್ನು ಬೀದಿಗೆ ತಳ್ಳುವ ಮೊದಲು ಅವರಿಗೆ ಕನಿಷ್ಠ ಸೌಕರ್ಯ ಒದಗಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ. ಹೈಕಮಾಂಡ್‌ನ ಈ ಮಧ್ಯಸ್ಥಿಕೆಯು ಕರ್ನಾಟಕ ಸರ್ಕಾರದ ಮೇಲೆ ಒಂದು ರೀತಿಯ ನೈತಿಕ ಒತ್ತಡವನ್ನೂ ಹಾಕಿದೆ.
ಬೆಂಗಳೂರು ಇಂದು ತ್ಯಾಜ್ಯದ ಸುಳಿಯಲ್ಲಿ ಸಿಲುಕಿದೆ. ಇಂತಹ ಸಮಯದಲ್ಲಿ ಸರ್ಕಾರಿ ಜಮೀನನ್ನು ಮರುಪಡೆಯುವುದು ಆಡಳಿತದ ಅನಿವಾರ್ಯತೆ. ಆದರೆ, ಇಲ್ಲಿ ರಾಜಕೀಯ ನಾಯಕರು ತಮ್ಮ ಪ್ರಾದೇಶಿಕ ಹಿತಾಸಕ್ತಿಗಾಗಿ ಮತ್ತು ಮತಬ್ಯಾಂಕ್ ಉಳಿಸಿಕೊಳ್ಳಲು ಕೋಮು ಸಂವೇದನೆಯನ್ನು ಬಳಸಿಕೊಳ್ಳುತ್ತಿರುವುದು ಆತಂಕಕಾರಿ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ತಮ್ಮ ನಿಲುವಿನಲ್ಲಿ ಅಚಲವಾಗಿದ್ದರೂ, ಕೆ.ಸಿ. ವೇಣುಗೋಪಾಲ್ ಅವರ ಮೂಲಕ ಹೈಕಮಾಂಡ್ ನೀಡಿದ ಸೂಚನೆಯು ಸರ್ಕಾರಕ್ಕೆ ಸಂಕಷ್ಟ ತಂದಿದೆ.

