
ಕೆಎಂಎಫ್‌ನ ನೂತನ ಉತ್ಪನ್ನಗಳನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.
ಕೆಎಂಎಫ್‌ನಿಂದ ಸ್ಟ್ರಾಬೆರಿ ಲಸ್ಸಿ ಬಿಡುಗಡೆ, ಅಸಲಿ ತುಪ್ಪದ ಪರೀಕ್ಷೆಗಿದೆ ಕ್ಯೂಆರ್ ಕೋಡ್
ರುಚಿ ಮತ್ತು ಗುಣಮಟ್ಟಕ್ಕೆ ಹೆಸರಾದ ನಂದಿನಿ ಉತ್ಪನ್ನಗಳಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್) ತನ್ನ ಗ್ರಾಹಕರಿಗೆ ಗುಡ್ ಲೈಫ್ ತುಪ್ಪ, ಪನೀರ್, ಪ್ರೊ ಮಿಲ್ಕ್, ಪ್ರೋ ಬಯಟಿಕ್ ಮೊಸರು ಸೇರಿ ಇತರೆ ಹೊಸ ಹಾಗೂ ಆರೋಗ್ಯಪೂರ್ಣ ಉತ್ಪನ್ನಗಳನ್ನು ಪರಿಚಯಿಸಿದೆ. ನಂದಿನಿ ಬ್ರ್ಯಾಂಡ್ ಅಡಿ ಗುಣಮಟ್ಟದ ಉತ್ಪನ್ನಗಳಿಗೆ ಹೆಸರಾಗಿರುವ ಕೆಎಂಎಫ್, ಈಗಾಗಲೇ ತಿರುಪತಿ ಸೇರಿದಂತೆ ದೇಶದ ನಾನಾ ದೇವಾಲಯಗಳಿಗೆ ತುಪ್ಪ ಪೂರೈಸುತ್ತಿದೆ.
ಕೆಎಂಎಫ್ ಉತ್ಪನ್ನಗಳಿಗೆ ಜಾಗತಿಕವಾಗಿಯೂ ಬೇಡಿಕೆ ಹೆಚ್ಚುತ್ತಿದೆ. ಅಮೆರಿಕ, ಶ್ರೀಲಂಕಾದಲ್ಲೂ ಕಂಪು ಪಸರಿಸಿದ್ದ ಕೆಎಂಎಫ್ ಇತ್ತೀಚೆಗೆ ದುಬೈನಲ್ಲಿ ನಂದಿನಿ ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡಿತ್ತು. ಈಗ ಕೆಎಂಎಫ್ ವತಿಯಿಂದ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ.
ಹೊಸ ಉತ್ಪನ್ನಗಳು ಯಾವುವು ?
ಗ್ರಾಹಕರ ಜೀವನ ಶೈಲಿ ಹಾಗೂ ಆಹಾರ ಅಭಿರುಚಿಗಳನ್ನು ಪರಿಗಣಿಸಿ 'ನಂದಿನಿ' ಬ್ರಾಂಡ್‌ನಲ್ಲಿ ಕ್ಯೂಆರ್ ಕೋಡ್ ಭದ್ರತೆಯೊಂದಿಗೆ ಗುಡ್ ಲೈಫ್ ಉಪಬ್ರಾಂಡ್‌ನಲ್ಲಿ ಹೈ ಅರೋಮ ತುಪ್ಪ, ಕ್ಯೂಆರ್ ಕೋಡ್ ನೊಂದಿಗೆ ಪೆಟ್ ಜಾರ್‌ಗಳಲ್ಲಿ ನಂದಿನಿ ಶುದ್ಧ ತುಪ್ಪ, ಮೀಡಿಯಂ ಫ್ಯಾಟ್ ಪನೀರ್, ಹೆಚ್ಚಿನ ಪ್ರೋಟಿನ್ ಅಂಶವುಳ್ಳ ಹೊಸ ಮಾದರಿಯ ಎನ್-ಪ್ರೋ ಮಿಲ್ಕ್, ಪ್ರೋಬಯಾಟಿಕ್ ಮೊಸರು, ಪ್ರೊಬಯಾಟಿಕ್ ಮಾವಿನ ಲಸ್ಸಿ, ಪ್ರೊಬಯಾಟಿಕ್ ಸ್ಟ್ರಾಬೆರಿ ಲಸ್ಸಿ, ಡೇರಿ ವೈಟ್ನರ್, ಬಹು ಬೇಡಿಕೆಯುಳ್ಳ 10 ರೂ. ದರದಲ್ಲಿ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಹೊಸದಾಗಿ ಬಿಡುಗಡೆಗೊಳಿಸಿದೆ.
ಸಿಎಂ ಸಿದ್ದರಾಮಯ್ಯನವರಿಗೆ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುತ್ತಿರುವ ಅಧಿಕಾರಿಗಳು
ಸಿಎಂ ಸಿದ್ದರಮಯ್ಯ ಅವರು ಬೆಂಗಳೂರಿನಲ್ಲಿ ಶುಕ್ರವಾರ ನಂದಿನಿ ಬ್ರ್ಯಾಂಡಿನ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.
"ತನ್ನ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ನಂದಿನಿ ಉತ್ಪನ್ನಗಳಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರ ಆರೋಗ್ಯವನ್ನು ಸಹ ಗಮನದಲ್ಲಿಟ್ಟುಕೊಂಡು ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಏಕೈಕ ಸಂಸ್ಥೆ ನಮ್ಮ ನಾಡಿನ ಕೆಎಂಎಫ್ (ನಂದಿನಿ) ಎನ್ನಲು ನನಗೆ ಹೆಮ್ಮೆಯಿದೆ" ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಉತ್ಪನ್ನಗಳ ವಿಶೇಷತೆ ಏನು ?
ಎನ್-ಪ್ರೊ ಮಿಲ್ಕ್
ಇದು ಹೈ ಪ್ರೋಟೀನ್ ಮಿಲ್ಕ್ ಹಾಗೂ ಸಾಮಾನ್ಯ ಟೋನ್ಡ್ ಹಾಲಿಗಿಂತ ಶೇ.18 ರಷ್ಟು ಹೆಚ್ಚಿನ ಪ್ರಮಾಣದ ಪ್ರೋಟೀನ್ ಹೊಂದಿದೆ. ಈ ಹೊಸ ಮಾದರಿಯು ಹಾಲಿನ ನೈಸರ್ಗಿಕ ಪ್ರೋಟೀನ್ ಉತ್ತಮ ಮೂಲವಾಗಿದ್ದು, ಎಲ್ಲ ವಯೋಮಾನದವರಿಗೆ ಸೂಕ್ತವಾದ ಪೌಷ್ಟಿಕಾಂಶ ಒದಗಿಸುತ್ತದೆ. ಮಾರುಕಟ್ಟೆಯಲ್ಲಿ 27 ರೂ.ಗೆ ಅರ್ಧ ಲೀಟರ್ ದೊರೆಯುತ್ತದೆ.
ಪನೀರ್ (ಮೀಡಿಯಂ ಫ್ಯಾಟ್)
ಮೀಡಿಯಂ ಫ್ಯಾಟ್ ಪನೀರ್ ಸಾಮಾನ್ಯ ಪನೀರ್‌ಗಿಂತ ಕಡಿಮೆ ಜಿಡ್ಡಿನಾಂಶ ಮತ್ತು 50 ಗ್ರಾಂ ಪ್ರೋಟೀನ್ ಹೊಂದಿದೆ. 200 ಗ್ರಾಂ ಪೊಟ್ಟಣಕ್ಕೆ 90 ರೂ. ನಿಗಧಿಪಡಿಸಲಾಗಿದ್ದು, ಪ್ರಾರಂಭಿಕ 5 ರೂ. ರಿಯಾಯಿತಿ ನೀಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ.
ಗುಡ್‌ಲೈಫ್ ಶುದ್ಧ ತುಪ್ಪ (ಹೈ ಅರೋಮಾ)
ಗುಡ್‌ಲೈಫ್ ತುಪ್ಪ ಉನ್ನತ ಗುಣಮಟ್ಟದ ಹಾಲಿನ ಕೊಬ್ಬಿನಿಂದ ತಯಾರಿಸಲ್ಪಟ್ಟಿದ್ದು, ಶ್ರೀಮಂತ, ನೈಸರ್ಗಿಕ ಮತ್ತು ಪರಂಪರೆ ತುಪ್ಪದ ಸುವಾಸನೆಯನ್ನು ಹೊಂದಿದೆ. ಪ್ರಸ್ತುತ ಅರ್ಧ ಲೀಟರ್ ಮತ್ತು 1 ಲೀಟರ್ ಪೊಟ್ಟಣದಲ್ಲಿ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತೆ. 500 ಮಿಲಿ ತುಪ್ಪವು 280 ರೂ. ಮತ್ತು ಒಂದು ಲೀಟರ್ 760 ರೂ. ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಈ ಹೊಸ ಉತ್ಪನ್ನಗಳ ಪ್ಯಾಕ್ ಮೇಲೆ ಕ್ಯೂ ಆರ್ ಕೋಡ್ ಲಗತ್ತಿಸಲಾಗುತ್ತಿದ್ದು, ಗ್ರಾಹಕರು ತಕ್ಷಣವೇ ಉತ್ಪನ್ನದ ಸಂಪೂರ್ಣ ಮಾಹಿತಿ ಮತ್ತು ಪ್ರಾಮಾಣಿಕತೆ ಖಚಿತಪಡಿಸಿಕೊಳ್ಳಬಹುದಾಗಿದೆ. ಪ್ರಸ್ತುತ ತುಪ್ಪದ ನಕಲು ಚಟುವಟಿಕೆಯನ್ನು ತಡೆಗಟ್ಟಲು ಕ್ಯೂಆರ್ ಕೋಡ್ ಪರಿಣಾಮಕಾರಿ ಸಾಧನವಾಗಿದ್ದು, ನಕಲಿ ಉತ್ಪನ್ನವನ್ನು ಗುರುತಿಸಲು ಸಹಕಾರಿಯಾಗಲಿದೆ. ಇದರಿಂದ ನಂದಿನಿ ಬ್ರಾಂಡ್ ಬಗ್ಗೆ ಗ್ರಾಹಕರ ನಂಬಿಕೆ ಹೆಚ್ಚಾಗಲಿದೆ.
ಪನ್ನೀರ್ ಬಗ್ಗೆ ವಿವರಣೆ ನೀಡಿದ ಅಧಿಕಾರಿಗಳು
ನಂದಿನಿ ಶುದ್ಧ ತುಪ್ಪ (ಕ್ಯೂಆರ್ ಕೋಡ್‌ನೊಂದಿಗೆ)
ನಂದಿನಿ ಶುದ್ಧ ತುಪ್ಪವನ್ನು ಹೊಸ ವಿನ್ಯಾಸ ಮತ್ತು ಕ್ಯೂ ಆರ್ ಕೋಡ್ ಭದ್ರತೆಯೊಂದಿಗೆ 200 ಮಿಲಿ(165 ರೂ.), 500 ಮಿಲಿ(360 ರೂ.) ಮತ್ತು 1 ಲೀಟರ್(720 ರೂ.) ಜಾರ್ಗಳಲ್ಲಿ ಬಿಡುಗಡೆ ಗೊಳಿಸಲಾಗುತ್ತಿದೆ. ಈ ಹೊಸ ಉತ್ಪನ್ನಗಳ ಪ್ಯಾಕ್ ಮೇಲೆ ಕ್ಯೂ ಆರ್ ಕೋಡ್ ಲಗತ್ತಿಸಲಾಗುತ್ತಿದ್ದು, ಗ್ರಾಹಕರು ತಕ್ಷಣವೇ ಉತ್ಪನ್ನದ ಸಂಪೂರ್ಣ ಮಾಹಿತಿ ಮತ್ತು ಪ್ರಾಮಾಣಿಕತೆ ಖಚಿತಪಡಿಸಿಕೊಳ್ಳಬಹುದಾಗಿದೆ. ಇದರಿಂದ ಗ್ರಾಹಕರ ನಂಬಿಕೆ ಹೆಚ್ಚುತ್ತದೆ. ಜೊತೆಗೆ ನಕಲಿ ಉತ್ಪನ್ನವನ್ನು ಗುರುತಿಸಲು ಸಹಕಾರಿಯಾಗಲಿದೆ.
ಪ್ರೊಬಯಾಟಿಕ್ ಮೊಸರು
ಪ್ರೊಬಯಾಟಿಕ್ ಮೊಸರು ಜೀವಂತ ಲಾಭದಾಯಕ ಬ್ಯಾಕ್ಟೀರಿಯಾಗಳಿಂದ ತಯಾರಿಸಲ್ಪಟ್ಟಿದ್ದು ಆರೋಗ್ಯಕರ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿವೆ. ಪ್ರೊಬಯಾಟಿಕ್ ಮೊಸರು ನಿಯಮಿತ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದರೊಂದಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು 200 ಗ್ರಾಂ ಪ್ಯಾಕ್‌ನಲ್ಲಿ ಲಭ್ಯವಿದ್ದು 35 ರೂ. ನಿಗಧಿಪಡಿಸಲಾಗಿದೆ. ಪ್ರಸ್ತುತ ಮಾರಾಟದ ದರದ ಮೇಲೆ ಪ್ರಾರಂಭಿಕ 5 ರೂ. ರಿಯಾಯಿತಿ ನೀಡಲಾಗುತ್ತಿದೆ.
ಪ್ರೊಬಯಾಟಿಕ್ ಮಾವಿನ ಲಸ್ಸಿ
ಪ್ರೊಬಯಾಟಿಕ್ ಮಾವಿನ ಲಸ್ಸಿ ಜೀವಂತ ಲಾಭದಾಯಕ ಬ್ಯಾಕ್ಟೀರಿಯಾಗಳು, ಮಾವಿನಹಣ್ಣು ಮತ್ತು ಮೊಸರು ಆಧಾರಿತ ಪಾನೀಯವಾಗಿದೆ. 160 ಮಿಲಿ ಪೊಟ್ಟಣಕ್ಕೆ 15 ರೂ. ನಿಗಧಿಪಡಿಸಲಾಗಿದೆ.
ಪ್ರೊಬಯಾಟಿಕ್ ಸ್ಟ್ರಾಬೆರಿ ಲಸ್ಸಿ
ಪ್ರೊಬಯಾಟಿಕ್ ಸ್ಟ್ರಾಬೆರಿ ಲಸ್ಸಿ ಲಾಭದಾಯಕ ಬ್ಯಾಕ್ಟೀರಿಯಾಗಳು, ಸ್ಟ್ರಾಬೆರೆ ಹಣ್ಣು ಮತ್ತು ಮೊಸರು ಆಧಾರಿತ ಪಾನೀಯವಾಗಿದೆ. 160 ಮಿಲಿ ಪೊಟ್ಟಣಕ್ಕೆ 15 ರೂ. ನಿಗಧಿಪಡಿಸಲಾಗಿದೆ.
ಡೇರಿ ವೈಟ್ನರ್
ಡೇರಿ ವೈಟ್ನರ್ ಉತ್ಪನ್ನವು ಸಕ್ಕರೆ ಸೇರಿಸಿದ ಹಾಲಿನ ಪುಡಿಯಾಗಿದ್ದು, ತಾಜಾ ಹಾಲಿಗೆ ಸುಲಭ ಪರ್ಯಾಯವಾಗಿದೆ. ಡೇರಿ ವೈಟ್ನರ್ ಇದು ಹಾಲಿನ ಪ್ರೊಟಿನ್‌ನ ಉತ್ತಮ ಮೂಲವಾಗಿದೆ. ಇದು ದೀರ್ಘಾವಧಿ ಸಂಗ್ರಹಿಸಲು ಮತ್ತು ಸಾಗಿಸಲು ಸುಲಭವಾಗಿದೆ, ಇದು 14 ಗ್ರಾಂ, 28 ಗ್ರಾಂ, 200 ಗ್ರಾಂ, 500 ಗ್ರಾಂ, 1 ಕೆಜಿ ಮತ್ತು 10 ಕೆ.ಜಿ. ಪ್ಯಾಕ್‌ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ನಂದಿನಿ ಹಸುವಿನ ಹಾಲು
ಎಲ್ಲಾ ವರ್ಗದ ಗ್ರಾಹಕರಿಗೆ ಲಭ್ಯವಾಗುವಂತೆ ನಂದಿನಿ ಹಸುವಿನ ಹಾಲು 160 ಮಿಲಿ ಪೊಟ್ಟಣದಲ್ಲಿ 10 ರೂ. ರಂತೆ ಮಾರುಕಟ್ಟೆಗೆ ಬರಲಿದೆ.
ನಂದಿನಿ ಮೊಸರು
ಗ್ರಾಹಕರ ಬೇಡಿಕೆಯಂತೆ ನಂದಿನಿ ಮೊಸರು 140 ಗ್ರಾಂ ಪೊಟ್ಟಣದಲ್ಲಿ 10 ರೂ. ರಂತೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಕೆಎಂಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

