
ತಿರುಪತಿ ಲಡ್ಡು ತಯಾರಿಕೆಗೆ ʼನಂದಿನಿʼ ತುಪ್ಪ; 2025 ರಲ್ಲಿ ದಾಖಲೆ ಪ್ರಮಾಣದ ಲಡ್ಡು ಮಾರಾಟ
ತಿರುಮಲ ಶ್ರೀವಾರಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಗುಣಮಟ್ಟದ ತುಪ್ಪ, ಒಣ ಹಣ್ಣುಗಳು, ಮಸಾಲೆಗಳು ಮತ್ತು ಇತರ ಪದಾರ್ಥಗಳ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ. ಕೆಲ ಭಕ್ತರು ಜನದಟ್ಟಣೆಯಿಂದ ದರ್ಶನಕ್ಕೆ ಹೋಗದಿದ್ದರೂ ಲಡ್ಡು ಪ್ರಸಾದ ಖರೀದಿಸಿ ಒಯ್ಯುತ್ತಾರೆ.
ಪ್ರಸಿದ್ಧ ತಿರುಪತಿ ತಿರುಮಲದ ಲಡ್ಡು ತಯಾರಿಕೆಗೆ ಕೆಎಂಎಫ್‌ನ ( ಕರ್ನಾಟಕ ಹಾಲು ಮಹಾಮಂಡಳ) ನಂದಿನಿ ತುಪ್ಪ ಬಳಕೆ ಆರಂಭಿಸಿದ ಬಳಿಕ ಲಡ್ಡು ಪ್ರಸಾದ ಮಾರಾಟವು ಹೊಸ ದಾಖಲೆ ಬರೆದಿದೆ.
2025 ರಲ್ಲಿ 13.52 ಕೋಟಿ ಲಡ್ಡು ಮಾರಾಟವಾಗಿದೆ. ಕೆಎಂಎಫ್ ಕಳೆದ ಒಂದು ವರ್ಷದಿಂದ ತಿರುಮಲಕ್ಕೆ ನಂದಿನಿ ತುಪ್ಪ ಪೂರೈಕೆ ಮಾಡುತ್ತಿದೆ. ಇತ್ತೀಚೆಗೆ ಈ ಪ್ರಮಾಣವೂ ಹೆಚ್ಚಾಗಿದೆ. ಇದು 2024 ನೇ ಸಾಲಿಗೆ ಹೋಲಿಸಿದರೆ ಶೇ 10 ರಷ್ಟು ಲಡ್ಡು ಮಾರಾಟ ಹೆಚ್ಚಳವಾಗಿದೆ.
ಡಿ. 27 ರಂದು ಒಂದೇ ದಿನ ಭಕ್ತರು 5.13 ಲಕ್ಷ ಲಡ್ಡುಗಳನ್ನು ಖರೀದಿಸಿರುವುದು ಸಹ ದಾಖಲೆಯಾಗಿದೆ. ಇದು ಹತ್ತು ವರ್ಷಗಳಲ್ಲಿ ಅತಿ ಹೆಚ್ಚಿನ ಮಾರಾಟವಾಗಿದೆ. ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಂದಿನಿ ಬ್ರ್ಯಾಂಡ್ ತುಪ್ಪ ಬಳಕೆಯ ನಂತರ ಗುಣಮಟ್ಟ ಮತ್ತು ಶುಚಿತ್ವದಲ್ಲಿ ಸುಧಾರಣೆ ಕಂಡಿರುವುದು ಲಡ್ಡು ಮಾರಾಟವಾಗಲು ಕಾರಣ ಎಂದು ಟಿಟಿಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರತಿದಿನ 65 ಸಾವಿರದಿಂದ 75 ಸಾವಿರ ಜನರು ತಿರುಮಲ ಶ್ರೀವಾರಿಗೆ ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ 90 ಸಾವಿರದ ಗಡಿ ತಲುಪುತ್ತದೆ. ಡಿ.28 ರಂದು ಭಾನುವಾರ ಒಟ್ಟು 91,147 ಯಾತ್ರಿಕರು ಶ್ರೀವಾರಿಗೆ ಭೇಟಿ ನೀಡಿರುವುದು ದಾಖಲೆಯಾಗಿದೆ.
"ತಿರುಮಲಕ್ಕೆ ಬರುವ ಯಾತ್ರಿಕರಿಗೆ ಯಾವುದೇ ತೊಂದರೆಯಾಗದಂತೆ ದರ್ಶನ ಅವಕಾಶ ಕಲ್ಪಿಸುತ್ತಿದ್ದು, ಇದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ "ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಹೇಳಿದ್ದಾರೆ.
ತಿರುಮಲದ ವೆಂಗಮಾಂಬ ನಿತ್ಯಾನಂದ ನಿಲಯದಲ್ಲಿ ನೀಡುವ ಅನ್ನ ಪ್ರಸಾದದಲ್ಲೂ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ. ವಾರಾಂತ್ಯಗಳಲ್ಲಿ ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲಿಯೂ ಯಾತ್ರಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಟಿಟಿಡಿ ಇಒ ಅನಿಲ್ ಕುಮಾರ್ ಸಿಂಘಾಲ್ ಹೇಳಿದ್ದಾರೆ.
ತಿರುಮಲದಲ್ಲಿ ಯಾತ್ರಿಕರಿಗೆ ಅನುಕೂಲಕರ ಪರಿಸ್ಥಿತಿಗಳನ್ನು ರೂಪಿಸಲು ತೆಗೆದುಕೊಂಡ ಕ್ರಮಗಳಿಂದ ಇದು ಸಾಧ್ಯವಾಗಿದೆ. ವೆಂಕಟೇಶ್ವರನ ದರ್ಶನ, ಲಡ್ಡು ಪ್ರಸಾದ ತಯಾರಿಕೆ ಮತ್ತು ಅನ್ನಪ್ರಸಾದದ ತಯಾರಿಕೆಯಲ್ಲಿ ಆಗಿರುವ ಬದಲಾವಣೆಯಿಂದ ಯಾತ್ರಿಕರು ತೃಪ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಹತ್ತು ವರ್ಷಗಳ ನಂತರ...
2025 ರಲ್ಲಿ ಶ್ರೀವಾರಿ ಲಡ್ಡು ಪ್ರಸಾದ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ. 2024 ರಲ್ಲಿ 12.15 ಕೋಟಿ ಲಡ್ಡುಗಳನ್ನು ಮಾರಾಟ ಮಾಡಲಾಗಿತ್ತು. ಆದರೆ, 2025 ರಲ್ಲಿ ಟಿಟಿಡಿಯಿಂದ 13.52 ಕೋಟಿ ಲಡ್ಡುಗಳನ್ನು ಮಾರಾಟ ಮಾಡಲಾಗಿದೆ. ಡಿ 27 ರಂದು ಭಕ್ತರು 5.13 ಲಕ್ಷ ಲಡ್ಡುಗಳನ್ನು ಖರೀದಿಸಿದ್ದಾರೆ. ಇದು ತಿರುಮಲದಲ್ಲಿ ಹತ್ತು ವರ್ಷಗಳಲ್ಲಿ ಎಂದಿಗೂ ಕಂಡುಬಂದಿರಲಿಲ್ಲ.
ತಿರುಮಲ ಶ್ರೀವಾರಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಗುಣಮಟ್ಟದ ತುಪ್ಪ, ಒಣ ಹಣ್ಣುಗಳು, ಮಸಾಲೆಗಳು ಮತ್ತು ಇತರ ಪದಾರ್ಥಗಳ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ. ಕೆಲ ಭಕ್ತರು ಜನದಟ್ಟಣೆಯಿಂದ ದರ್ಶನಕ್ಕೆ ಹೋಗದಿದ್ದರೂ ಲಡ್ಡು ಪ್ರಸಾದ ಖರೀದಿಸಿ ಒಯ್ಯುತ್ತಾರೆ. ದಿನಕ್ಕೆ ಮೂರರಿಂದ 3.5 ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತಿತ್ತು. ಕಳೆದ ವರ್ಷ ಲಡ್ಡುಗಳ ತಯಾರಿಕೆ ಸಂಖ್ಯೆ ಹೆಚ್ಚಿಸಲಾಗಿದೆ. ದಿನಕ್ಕೆ ನಾಲ್ಕು ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತಿದೆ. ಅದನ್ನು ಸಂಗ್ರಹಿಸಿ ಯಾತ್ರಾರ್ಥಿಗಳಿಗೆ ಸಮಸ್ಯೆಯಾಗದಂತೆ ಮಾರಾಟ ಮಾಡಲಾಗುತ್ತಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
"ಯಾತ್ರಿಕರಿಗೆ ಯಾವುದೇ ಕೊರತೆಯಿಲ್ಲದೆ ಅವರು ಬಯಸುವಷ್ಟು ಲಡ್ಡುಗಳನ್ನು ಒದಗಿಸುವುದು ನಮ್ಮ ಉದ್ದೇಶ. ನಾವು ಲಡ್ಡುಗಳ ತಯಾರಿಕೆ ಮತ್ತು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಿದ್ದೇವೆ. ಪ್ರಮುಖ ದಿನಗಳಲ್ಲಿ 8 ಲಕ್ಷದಿಂದ 10 ಲಕ್ಷ ಲಡ್ಡುಗಳನ್ನು ದಾಸ್ತಾನು ಮಾಡಿ ಯಾತ್ರಿಕರಿಗೆ ಮಾರಾಟ ಮಾಡುತ್ತಿದ್ದೇವೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ತಿಳಿಸಿದ್ದಾರೆ.
ತಿರುಮಲ ಶ್ರೀವಾರಿ ಲಡ್ಡು ಪ್ರಸಾದ ತಯಾರಿಕಾ ಕೇಂದ್ರದ ಸಾಮರ್ಥ್ಯವನ್ನು ಸಹ ಹೆಚ್ಚಿಸಲಾಗಿದೆ. ಈ ಕೇಂದ್ರದಲ್ಲಿ 700 ಸಿಬ್ಬಂದಿ ಲಡ್ಡು ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿನ ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಇದರಿಂದ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ ಎಂದು ಹೇಳಿದ್ದಾರೆ.

