ಕೆಎಂಎಫ್‌: ದಾಖಲೆ ಪ್ರಮಾಣದ ನಂದಿನಿ ಸಿಹಿ ಉತ್ಪನ್ನ ಮಾರಾಟ
x

ಕೆಎಂಎಫ್‌: ದಾಖಲೆ ಪ್ರಮಾಣದ ನಂದಿನಿ ಸಿಹಿ ಉತ್ಪನ್ನ ಮಾರಾಟ

ಕೆಎಂಎಫ್‌ ಒಟ್ಟು 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, 46 ಕೋಟಿ ರೂ. ವಹಿವಾಟು ನಡೆಸಿದೆ. ಕಳೆದ ವರ್ಷ ಇದೇ ಹಬ್ಬದ ಋತುವಿನಲ್ಲಿ 725 ಮೆಟ್ರಿಕ್ ಟನ್ ಸಿಹಿ ಉತ್ಪನ್ನ ಮಾರಾಟವಾಗಿತ್ತು.


ದಸರಾ ಹಾಗೂ ದೀಪಾವಳಿ ಹಬ್ಬದ ಅವಧಿಯಲ್ಲಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ದಾಖಲೆ ಪ್ರಮಾಣದಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದೆ.

ಕೆಎಂಎಫ್‌ ಒಟ್ಟು 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, 46 ಕೋಟಿ ರೂ. ವಹಿವಾಟು ನಡೆಸಿದೆ. ಕಳೆದ ವರ್ಷ ಇದೇ ಹಬ್ಬದ ಋತುವಿನಲ್ಲಿ 725 ಮೆಟ್ರಿಕ್ ಟನ್ ಸಿಹಿ ಉತ್ಪನ್ನ ಮಾರಾಟವಾಗಿತ್ತು.

ಹಾಲು ಉತ್ಪಾದನೆಯೂ ಹೆಚ್ಚಳ

ರಾಜ್ಯದಲ್ಲಿ ಪ್ರತಿದಿನ ಒಂದು ಕೋಟಿ ಲೀಟರ್‌ಗೂ ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. ರೈತರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ನಿತ್ಯ ಸಂಗ್ರಹವಾಗುವ ಹಾಲಿನಲ್ಲಿ ಸುಮಾರು 60 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಉಳಿದ ಹಾಲಿನಿಂದ ಕೆಎಂಎಫ್, ನಂದಿನಿ ಬ್ರಾಂಡ್ ಹೆಸರಿನಲ್ಲಿ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ ಎಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್‌ ತಿಳಿಸಿದರು.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜನರಿಂದ ಬರುವ ಬೇಡಿಕೆಗೆ ಅನುಗುಣವಾಗಿ ನಂದಿನಿ ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದು ತಿಳಿಸಿದರು.

ಕ್ಯಾಬಿನೆಟ್ ಪುನಾರಚನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಂಪುಟ ಪುನಾರಚನೆ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು, ನಾವು ಹೇಳಿದ ತಕ್ಷಣ ಬದಲಾವಣೆ ಆಗೋದಿಲ್ಲ. ಬದಲಾವಣೆ ನಮ್ಮ ವ್ಯಾಪ್ತಿಯ ವಿಷಯವಲ್ಲ ಎಂದು ಸ್ಪಷ್ಟಪಡಿಸಿದರು.

ತುಪ್ಪದ ಪಾಕೆಟ್ ಮೇಲೆ ಕ್ಯೂಆರ್ ಕೋಡ್

ನಂದಿನಿ ಉತ್ಪನ್ನಗಳಲ್ಲಿ ಕಲಬೆರಕೆ ತಡೆಯುವ ಸಲುವಾಗಿ ಕೆಎಂಎಫ್‌ ಕಠಿಣ ಕ್ರಮಗಳನ್ನು ಅನುಸರಿಸುತ್ತಿದೆ. ರಾಜ್ಯದಾದ್ಯಂತ ಇರುವ ಎಲ್ಲಾ 16 ಘಟಕಗಳ 700ಕ್ಕೂ ಹೆಚ್ಚು ಉತ್ಪನ್ನಗಳನ್ನು ಈಗಾಗಲೇ ಪರಿಶೀಲನೆ ಮಾಡಲಾಗಿದೆ. ಎಲ್ಲಿಯೂ ಕಲಬೆರಕೆ ಪತ್ತೆಯಾಗಿಲ್ಲ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹೇಳಿದರು.

ಕಲಬೆರಕೆ ಪತ್ತೆಗೆ ನಮ್ಮದೇ ವಿಚಕ್ಷಣಾ ದಳವಿದೆ. ಅದು ನಿಯಮಿತವಾಗಿ ಘಟಕಗಳಿಗೆ ಭೇಟಿ ನೀಡಿ ಉತ್ಪನ್ನಗಳನ್ನು ಪರಿಶೀಲನೆ ನಡೆಸಲಿದೆ. ನಂದಿನಿ ತುಪ್ಪದ ಪ್ಯಾಕೇಟ್ಗಳ ಮೇಲೆ ಶೀಘ್ರದಲ್ಲೇ ಕ್ಯೂಆರ್ ಕೋಡ್ ಅಳವಡಿಸಲಾಗುವುದು. ಇದರಿಂದ ಯಾವುದೇ ರೀತಿಯ ಕಲಬೆರಕೆ ಪತ್ತೆ ಹಚ್ಚಬಹುದು ಎಂದು ತಿಳಿಸಿದರು.

ರಾಜ್ಯದಲ್ಲಿ ಹಾಲು ಉತ್ಪಾದನೆ ಮತ್ತು ನಂದಿನಿ ಬ್ರ್ಯಾಂಡ್ ಮೇಲಿನ ವಿಶ್ವಾಸ ಮತ್ತಷ್ಟು ಬಲಪಡಿಸಲು ಸರ್ಕಾರ ಹಾಗೂ ಕೆಎಂಎಫ್ ಗಂಭೀರವಾಗಿ ಕ್ರಮ ಕೈಗೊಂಡಿದೆ ಎಂದು ಹೇಳಿದರು.

Read More
Next Story