
ಶಾಸಕ ಪುಟ್ಟಣ್ಣ ಹಾಗೂ ಪಶ್ಚಿಮ ಪದವೀಧರ ಕೇತ್ರದ ಅಭ್ಯರ್ಥಿ ಮಹೇಶ್ ಲಿಂಬೆಕಾಯಿ
ʼಮೇಲ್ಮನೆʼ ಹಿಡಿತಕ್ಕೆ ಮಾಸ್ಟರ್ ಪ್ಲಾನ್; ನಾಲ್ಕು ಪರಿಷತ್ ಸ್ಥಾನಗಳಿಗೆ ʼಕೈʼ ಅಭ್ಯರ್ಥಿಗಳ ಘೋಷಣೆ
ವಿಧಾನ ಪರಿಷತ್‌ನಲ್ಲಿ ಒಟ್ಟು ಸ್ಥಾನಗಳ ಪೈಕಿ ಕಾಂಗ್ರೆಸ್ 37 ಸ್ಥಾನಗಳನ್ನು ಹೊಂದಿದ್ದು ದೊಡ್ಡ ಪಕ್ಷವಾಗಿದೆ. ಬಿಜೆಪಿ 29, ಜೆಡಿಎಸ್ ಏಳು ಹಾಗೂ ಪಕ್ಷೇತರ ಸದಸ್ಯರು ಒಬ್ಬರು ಹಾಗೂ ಸಭಾಪತಿ ಒಂದು ಸ್ಥಾನ ಸೇರಿ ಒಟ್ಟು 75 ಸ್ಥಾನಗಳ ಬಲ ಹೊಂದಿದೆ.
ರಾಜ್ಯ ವಿಧಾನ ಪರಿಷತ್‌ನಲ್ಲಿ ಖಾಲಿಯಾಗಲಿರುವ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕೇತ್ರಗಳು ಸೇರಿದಂತೆ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಘೋಷಿಸಿದ್ದಾರೆ.
ಈ ಕುರಿತು ಮಂಗಳವಾರ(ಡಿ.30) ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಲ್ಕು ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಪದವೀಧರ ಕೇತ್ರಕ್ಕೆ ಮೋಹನ್ ಲಿಂಬಿಕಾಯಿ, ಆಗ್ನೇಯ ಪದವೀಧರ ಕೇತ್ರಕ್ಕೆ ಶಶಿ ಹುಲಿಕುಂಟೆಮಠ, ಈಶಾನ್ಯ ಶಿಕ್ಷಕರ ಕೇತ್ರಕ್ಕೆ ಶರಣಪ್ಪ ಮಟ್ಟೂರ್ ಹಾಗೂ ಬೆಂಗಳೂರು ಶಿಕ್ಷಕರ ಕೇತ್ರಕ್ಕೆ ಪುಟ್ಟಣ್ಣ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ವಿಧಾನ ಪರಿಷತ್‌ನಲ್ಲಿ ಪಕ್ಷಗಳ ಬಲಾಬಲ
ಸಾಮಾನ್ಯವಾಗಿ ಹಿರಿಯರ ಅಥವಾ ಬುದ್ದಿವಂತರ ಸದನ ಎಂದು ಕರೆಯುವ ವಿಧಾನ ಪರಿಷತ್‌ನಲ್ಲಿ ಒಟ್ಟು 75 ಸ್ಥಾನಗಳ ಪೈಕಿ ಕಾಂಗ್ರೆಸ್ 37 ಸ್ಥಾನಗಳನ್ನು ಹೊಂದಿದ್ದು ದೊಡ್ಡ ಪಕ್ಷವಾಗಿದೆ. ಬಿಜೆಪಿ 29 ಸ್ಥಾನ ಹಾಗೂ ಜೆಡಿಎಸ್ 7 ಹಾಗೂ ಪಕ್ಷೇತರ ಸದಸ್ಯರು ಒಂದು ಹಾಗೂ ಸಭಾಪತಿ ಒಂದು ಸ್ಥಾನ ಸೇರಿ ಒಟ್ಟು 75 ಸ್ಥಾನಗಳ ಬಲವನ್ನು ಹೊಂದಿದೆ.
ಮತದಾರರ ಪಟ್ಟಿ ಪರಿಷ್ಕರಣೆ
ಪಶ್ಚಿಮ ಹಾಗೂ ಆಗ್ನೇಯ ಪದವೀಧರ ಮತ್ತು ಈಶಾನ್ಯ ಹಾಗೂ ಬೆಂಗಳೂರು ಶಿಕ್ಷಕರ ಕೇತ್ರಗಳ ಹಾಲಿ ಸದಸ್ಯರ ಅಧಿಕಾರಾವಧಿಯು 2026ರ ಜೂನ್‌ನಲ್ಲಿ ಅವಧಿ ಮುಕ್ತಾಯಗೊಳ್ಳಲಿದ್ದು, 2026 ಏಪ್ರಿಲ್ ಅಥವಾ ಮೇನಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ಚುನಾವಣಾ ಆಯೋಗವು ಈಗಾಗಲೇ ಈ ಕ್ಷೇತ್ರಗಳ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರಗಳಿಗೆ ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.
ಅಂತಿಮ ಮತದಾರರ ಪಟ್ಟಿಯು 2025ರ ಡಿಸೆಂಬರ್ 30 ಅಥವಾ ಜನವರಿ ಮೊದಲ ವಾರದಲ್ಲಿ ಅಧಿಕೃತವಾಗಿ ಪ್ರಕಟವಾಗುವ ನಿರೀಕ್ಷೆಯಿದೆ.
ಪ್ರಸ್ತುತ ಅಧಿಕಾರದಲ್ಲಿರುವ ಶಾಸಕರು
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಚಿದಾನಂದ ಎಂ. ಗೌಡ, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಸ್.ವಿ. ಸಂಕನೂರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶೀಲ್ ಜಿ. ನಮೋಶಿ ಸೇರಿದಂತೆ ಮೂರು ಕ್ಷೇತ್ರದಲ್ಲಿಯೂ ಬಿಜೆಪಿಯ ಸದಸ್ಯರಿದ್ದು, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣನವರು ಅಧಿಕಾರದಲ್ಲಿದ್ದಾರೆ.
ಬಹುಮತದ ತವಕದಲ್ಲಿ ಕಾಂಗ್ರೆಸ್
ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ವಿಧಾನ ಪರಿಷತ್‌ನಲ್ಲಿ 37 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ ಹಾಗೂ ಜೆಡಿಎಸ್ 36 ಸ್ಥಾನಗಳನ್ನು ಹೊಂದಿದೆ. ಇದೀಗ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ 40 ಸ್ಥಾನ ಪಡೆದು ಬಹುಮತ ಹೆಚ್ಚಿಸಿಕೊಳ್ಳಲಿದೆ. ವಿಧಾನಪರಿಷತ್‌ನಲ್ಲಿ ವಿಧೇಯಕಗಳ ಒಪ್ಪಿಗೆಗೂ ಅನುಕೂಲವಾಗಲಿದೆ. ಆದರೆ ಬಿಜೆಪಿ ತನ್ನ ಸ್ಥಾನಗಳ ಕಳೆದುಕೊಂಡರೆ ವಿಧಾನಪರಿಷತ್‌ನಲ್ಲಿ ಕಾಯ್ದೆಗಳನ್ನು ವಿರೋಧಿಸುವಲ್ಲಿ ಹಿನ್ನಡೆ ಅನುಭವಿಸಲಿದೆ. ಒಂದು ವೇಳೆ ಬಿಜೆಪಿ ತನ್ನ ಸ್ಥಾನಗಳನ್ನು ಉಳಿಸಿಕೊಂಡು ಮತ್ತೊಂದು ಸ್ಥಾನ ಗೆದ್ದರೆ ರಾಜ್ಯ ಸರ್ಕಾರಕ್ಕೆ ಸಂಕಷ್ಟ ತಪ್ಪಿದ್ದಲ್ಲ.

