Year Ender 2025| ಕಾಂಗ್ರೆಸ್‌ನಲ್ಲಿ ಕ್ರಾಂತಿಯ ಭ್ರಾಂತಿ, ಬಿಜೆಪಿಯಲ್ಲಿ ಬಂಡಾಯದ ಬಿಸಿ,  ಅಪ್ಪ-ಮಕ್ಕಳ ಹಣೆಪಟ್ಟಿಯನ್ನು ಕಳಚಿಕೊಳ್ಳದ ಜೆಡಿಎಸ್‌!
x

Year Ender 2025| ಕಾಂಗ್ರೆಸ್‌ನಲ್ಲಿ ಕ್ರಾಂತಿಯ ಭ್ರಾಂತಿ, ಬಿಜೆಪಿಯಲ್ಲಿ ಬಂಡಾಯದ ಬಿಸಿ, ಅಪ್ಪ-ಮಕ್ಕಳ ಹಣೆಪಟ್ಟಿಯನ್ನು ಕಳಚಿಕೊಳ್ಳದ ಜೆಡಿಎಸ್‌!

2025ನೇ ಸಾಲಿನಲ್ಲಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದವು. ವಿಶೇಷವಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಉದ್ಭವಿಸಿದ ನಾಯಕತ್ವ ಬದಲಾವಣೆ ಬಿಕ್ಕಟ್ಟು, ಬಿಜೆಪಿಯ ಬಂಡಾಯ ಚಟುವಟಿಕೆಗಳು ದೆಹಲಿಗೆ ವಿಸ್ತರಿಸಿದವು.


Click the Play button to hear this message in audio format

ಕರ್ನಾಟಕದಲ್ಲಿ 2025ನೇ ಸಾಲಿನ ರಾಜಕೀಯ ವಿದ್ಯಮಾನಗಳು ದೇಶದಲ್ಲೇ ಹೆಚ್ಚು ಗಮನ ಸೆಳೆದವು. ಕಾಂಗ್ರೆಸ್ಸಿನಲ್ಲಿ ನಾಯಕತ್ವ ಬದಲಾವಣೆ ವಿಷಯ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಕದನ ಏರ್ಪಡುವಂತೆ ಮಾಡಿತು. ಇಡೀ ವರ್ಷ ರಾಜಕೀಯ ಸಂಚಲನಕ್ಕೆ ಕಾರಣವಾಯಿತು.

ಅಧಿಕಾರ ಹಸ್ತಾಂತರದ ನೆಪದಲ್ಲಿ ಕೇಳಿ ಬಂದ "ಸೆಪ್ಟೆಂಬರ್‌, ನವೆಂಬರ್ ಕ್ರಾಂತಿ"ಗಳು ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದ್ದವು. ಅದೇ ರೀತಿ ಯಾವುದೇ ಸದ್ದು ಮಾಡದೇ ಠುಸ್‌ ಎಂದವು. ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಸಿಎಂ ಆಪ್ತ ಸಚಿವರ ನಿವಾಸಗಳಲ್ಲಿ ನಡೆದ ಡಿನ್ನರ್‌ ಮೀಟಿಂಗ್‌ಗಳು ಕುತೂಹಲ ಕೆರಳಿಸಿದ್ದವು. ಸರ್ಕಾರ ಎರಡು ವರ್ಷ ಪೂರೈಸಿದಾಗಿನಿಂದ ಸರದಿ ಸಾಲಿನ ಔತಣಕೂಟಗಳ ಆಯೋಜನೆ ಹಿಂದೆ ರಾಜಕೀಯ ಲೆಕ್ಕಾಚಾರ ಅಡಗಿತ್ತು. ನಾಯಕತ್ವ ಬದಲಾವಣೆಗೆ ಕಡಿವಾಣ ಹಾಕಲು ಸಂಪುಟ ಪುನಾರಚನೆಯ ವಿಚಾರ ಮುನ್ನೆಲೆಗೆ ತರಲಾಯಿತು. ನಿಷ್ಕ್ರಿಯ ಸಚಿವರು ಮತ್ತು ಭ್ರಷ್ಟಾಚಾರದ ಆರೋಪ ಹೊತ್ತ 12ಕ್ಕೂ ಹೆಚ್ಚು ಸಚಿವರನ್ನು ಕೈ ಬಿಡುವ ಬಗ್ಗೆ ಊಹಾಪೋಹಗಳು ಹೆಚ್ಚಿದವು. ಹಲವು ತಿಂಗಳ ಕಾಲ ಇದೇ ವಿಚಾರಗಳ ಸುತ್ತ ರಾಜ್ಯ ರಾಜಕೀಯ ಗಿರಕಿ ಹೊಡೆದಿತ್ತು.

ಸಿಎಂ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ಒತ್ತಾಯಿಸಿ ಸಿಎಂ ಹಾಗೂ ಡಿಸಿಎಂ ನೇತೃತ್ವದಲ್ಲಿ ಪ್ರತ್ಯೇಕ ಬಣಗಳು ಸೃಷ್ಟಿಯಾದವು. ಸಚಿವರು, ಶಾಸಕರ ದಿನಕ್ಕೊಂದು ಹೇಳಿಕೆ, ಟೀಕೆಯು ಪಕ್ಷದ ವರ್ಚಸ್ಸಿಗೆ ಹೊಡೆತ ನೀಡಿತು. ಉಭಯ ಬಣದ ನಾಯಕರ ಪದೇ ಪದೇ ಹೈಕಮಾಂಡ್ ಭೇಟಿ, ಭೋಜನಕೂಟಗಳು ಕೂಡ ಆಂತರಿಕ ಕಲಹವನ್ನು ಹೆಚ್ಚಿಸಿದವು. ಅಧಿಕಾರಕ್ಕಾಗಿ ಕಚ್ಚಾಡುವುದರಲ್ಲೇ ಅಭಿವೃದ್ಧಿ ಹಿನ್ನೆಡೆ ಕಂಡು, ವಿರೋಧ ಪಕ್ಷಗಳು, ಉದ್ಯಮಿಗಳ ಟೀಕೆಗೆ ಗುರಿಯಾಯಿತು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿವಾದ ಹೆಚ್ಚುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಸತೀಶ್‌ ಜಾರಕಿಹೊಳಿ ಹಾಗೂ ಇತರೆ ಆಪ್ತ ಸಚಿವರೊಂದಿಗೆ ಹೈಕಮಾಂಡ್‌ ನಾಯಕರನ್ನು ಭೇಟಿಯಾದರು. ಮತ್ತೊಂದೆಡೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಸೋದರ ಡಿ.ಕೆ. ಸುರೇಶ್‌ ಕೂಡ ಪ್ರತ್ಯೇಕವಾಗಿ ಎಐಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರು ನಾನೇ ಐದು ವರ್ಷ ಸಿಎಂ ಎಂದು ದೆಹಲಿಯಲ್ಲೇ ಘೋಷಿಸಿದರು.

ಎಲ್ಲದಕ್ಕೂ ಹೈಕಮಾಂಡ್‌ ಕಡೆ ಬೊಟ್ಟು ಮಾಡುತ್ತಿದ್ದ ಡಿ.ಕೆ. ಶಿವಕುಮಾರ್‌ ಅವರು ಎರಡೂವರೆ ವರ್ಷ ಪೂರ್ಣವಾಗುತ್ತಿದ್ದಂತೆ ಪಟ್ಟು ಬಿಗಿಗೊಳಿಸಿದರು. ಆಗ ಹೈಕಮಾಂಡ್‌ ಇಬ್ಬರು ನಾಯಕರಿಗೆ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ನಡೆಸುವಂತೆ ಸೂಚಿಸಿತು. ಅಲ್ಲದೇ ಇಬ್ಬರಿಗೂ ಕರೆ ಮಾಡಿ ತಾನು ನಿರ್ಧಾರ ಪ್ರಕಟಿಸುವವರೆಗೂ ಯಾರೂ ನಾಯಕತ್ವದ ಬದಲಾವಣೆ ವಿಚಾರ ಪ್ರಸ್ತಾಪಿಸಕೂಡದು ಎಂದು ಕಟ್ಟಾಜ್ಞೆ ವಿಧಿಸಿತು. ಇದೇ ಅವಧಿಯಲ್ಲಿ ಚಳಿಗಾಲದ ಅಧಿವೇಶನ ಇದ್ದುದರಿಂದ ವಿರೋಧ ಪಕ್ಷಗಳಿಗೆ ಆಹಾರ ಆಗದಂತೆ ನೋಡಿಕೊಳ್ಳಲಾಯಿತು.

ಈಗ ಅಧಿವೇಶನ ಮುಕ್ತಾಯವಾಗಿದ್ದು, ಮತ್ತೆ ನಾಯಕತ್ವ ಬದಲಾವಣೆಯ ಮಾತುಗಳು ಜೋರಾಗುತ್ತಿವೆ. ನಮ್ಮಿಬ್ಬರಿಗೂ ಹೈಕಮಾಂಡ್‌ ಕರೆ ಮಾಡುತ್ತಾರೆ. ಆಗ ನಾನು ಮತ್ತು ಸಿಎಂ ಇಬ್ಬರು ಒಟ್ಟಿಗೆ ದೆಹಲಿಗೆ ತೆರಳುತ್ತೇವೆ ಎಂದು ಡಿಕೆಶಿವಕುಮಾರ್‌ ಹೇಳಿದ್ದರು. ಈ ನಡುವೆ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರೊಂದಿಗೆ ಡಿನ್ನರ್‌ ಮೀಟಿಂಗ್‌ ನಡೆಸಿ ಅಧಿಕಾರದಿಂದ ಕೆಳಗಿಳಿಯುವ ಅನಿವಾರ್ಯತೆ ಎದುರಾದರೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳು, ದಲಿತ ಸಿಎಂ ಕಾರ್ಡ್‌ ಚಲಾವಣೆ ಮಾಡುವ ಬಗ್ಗೆಯೂ ಚರ್ಚಿಸಿದ್ದರು.

ಕಾಲ್ತುಳಿತ ದುರಂತವೂ, ರಾಜಕೀಯವೂ!

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತವು ದೊಡ್ಡ ಮಟ್ಟದ ರಾಜಕೀಯ ಕೋಲಾಹಲಕ್ಕೆ ಸಾಕ್ಷಿಯಾಯಿತು. ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ ಆರ್‌ಸಿಬಿ ತಂಡವನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಖುದ್ದು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಕರೆತಂದರು. ವಿಧಾನಸೌಧದ ಮೆಟ್ಟಿಲುಗಳ ಮುಂದೆ ಆಟಗಾರರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲೂ ರಾಜಕೀಯ ನಾಯಕರು ಹಾಗೂ ಅವರ ಕುಟುಂಬಸ್ಥರ ದರ್ಬಾರ್‌ ಜೋರಾಗಿತ್ತು. ಅಲ್ಲಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಟಗಾರರನ್ನು ಕರೆದೋಯ್ದ ಡಿಕೆಶಿ ಅವರು, ಟ್ರೋಫಿಗೆ ಮುತ್ತು ಕೊಟ್ಟಿದ್ದರು. ಅದೇ ಅದೇ ವೇಳೆ ಕ್ರೀಡಾಂಗಣದ ಹೊರಗೆ ಕಾಲ್ತುಳಿತವಾಗಿ ಸಾವು ನೋವು ಸಂಭವಿಸಿತ್ತು. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಜೆ 5 ಗಂಟೆಯಾದರೂ ಕಾಲ್ತುಳಿತದ ವಿಷಯ ತಿಳಿದಿರಲಿಲ್ಲ, ಅವರು ತಮ್ಮ ಮೊಮ್ಮಗನೊಂದಿಗೆ ದೋಸೆ ಸವಿಯಲು ಹೋಟೆಲ್‌ ಗೆ ಹೋಗಿದ್ದರು. ಈ ವಿಚಾರಗಳು ವಿರೋಧ ಪಕ್ಷ, ಜನಸಾಮಾನ್ಯರ ತೀವ್ರ ಟೀಕೆಗೆ ಗುರಿಯಾದವು.

ಆದರೆ, ಈ ಬಗ್ಗೆ ಉತ್ತರ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು, ನನ್ನ ಮೊಮ್ಮಗ ಹಿಂದಿನ ದಿನವಷ್ಟೇ ಲಂಡನ್‌ನಿಂದ ಬಂದಿದ್ದ. ತಾತ, ದೋಸೆ ತಿನ್ನಲು ಹೋಗೋಣ ಎಂದು ಕೇಳಿದ. ಹಾಗಾಗಿ ಕರೆದುಕೊಂಡು ಹೋಗಿದ್ದೆ ಎಂದು ಸ್ಪಷ್ಟಪಡಿಸಿದ್ದರು.

ಸಿಎಂ ಆಪ್ತ ಕೆ.ಎನ್‌.ರಾಜಣ್ಣ ಸಂಪುಟದಿಂದ ವಜಾ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಿಎಂ ಆಪ್ತರಾಗಿದ್ದ ಕೆ.ಎನ್‌.ರಾಜಣ್ಣ ಅವರು 2025 ಆ.11 ರಂದು ಸಚಿವ ಸಂಪುಟದಿಂದ ವಜಾಗೊಳಿಸಲಾಯಿತು. ವೋಟ್‌ ಚೋರಿ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ್ದ ಸಚಿವ ಕೆ‌.ಎನ್.ರಾಜಣ್ಣ ಅವರು, "ಮತದಾರರ ಪಟ್ಟಿ ಯಾವ ಕಾಲದಲ್ಲಿ ಮಾಡಿದ್ದು, ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ?, ಆವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ" ಎಂದು ಪ್ರಶ್ನಿಸಿದ್ದರು. ರಾಜಣ್ಣ ಅವರ ಈ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು. ಹೈಕಮಾಂಡ್‌ ಸೂಚನೆ ಮೇರೆಗೆ ಅವರನ್ನು ಸಂಪುಟದಿಂದ ವಜಾ ಮಾಡಲಾಗಿತ್ತು.

ಕಾಂಗ್ರೆಸ್‌ ನಾಯಕರೊಬ್ಬರು ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆಸಿದ್ದರು ಎಂದು ಆರೋಪಿಸಿದ್ದರು. ಇದು ಕೂಡ ಹೈಕಮಾಂಡ್‌ಗೆ ಇರಿಸುಮುರಿಸು ತಂದೊಡ್ಡಿತ್ತು. ಪ್ರಕರಣವನ್ನು ಸಿಐಐ ತನಿಖೆಗೆ ವಹಿಸಿದರೂ ಯಾವುದೇ ಸಾಕ್ಷ್ಯ ಸಿಗಲಿಲ್ಲ ಎಂದು ಹೇಳಿ ಬಿ ರಿಪೋರ್ಟ್‌ ಸಲ್ಲಿಸಲಾಯಿತು.

ಬಂಡಾಯದಲ್ಲೇ ಮುಳುಗಿದ ಬಿಜೆಪಿ

ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಒತ್ತಾಯಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ಬಿ.ಪಿ. ಹರೀಶ್ ಮತ್ತು ಕುಮಾರ್ ಬಂಗಾರಪ್ಪ ಮತ್ತು ಎನ್.ಆರ್. ಸಂತೋಷ್ ಅವರು ರಾಜ್ಯ ನಾಯಕತ್ವದ ವಿರುದ್ಧ ಬಂಡಾಯ ಸಾರಿದ್ದರು. ಬಹಿರಂಗ ವೇದಿಕೆಗಳಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ದೆಹಲಿಗೆ ತೆರಳಿ ಹೈಕಮಾಂಡ್‌ ಗೆ ರಾಜ್ಯ ನಾಯಕತ್ವದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದರು.

ಯತ್ನಾಳ್‌ ಸೇರಿ ಹಲವು ನಾಯಕರಿಗೆ ಕೇಂದ್ರೀಯ ಶಿಸ್ತು ಸಮಿತಿ ಷೋಕಾಸ್‌ ನೋಟಿಸ್‌ ಜಾರಿ ಮಾಡಿದರೂ ಭಿನ್ನಮತ ನಿಂತಿರಲಿಲ್ಲ. ಕಳೆದ ಫೆಬ್ರವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳು ದಟ್ಟವಾದ ಹಿನ್ನೆಲೆಯಲ್ಲಿ ಯತ್ನಾಳ್‌ ಬಣವು ಕುಮಾರ್‌ ಬಂಗಾರಪ್ಪ ಅವರನ್ನು ಬಂಡಾಯ ಅಭ್ಯರ್ಥಿ ಎಂದು ಘೋಷಿಸಿತ್ತು. ಇದಾದ ಬಳಿಕ ಹಲವು ಬಾರಿ ರಾಜ್ಯ ನಾಯಕರ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದರು. ವಕ್ಫ್‌ ಆಸ್ತಿ ವಿವಾದದ ಸಂದರ್ಭದಲ್ಲಿ ಯತ್ನಾಳ್‌ ನೇತೃತ್ವದ ಬಣವೇ ಪ್ರತ್ಯೇಕವಾಗಿ ರಾಜ್ಯವ್ಯಾಪಿ ಪ್ರವಾಸ ಮಾಡಿ, ಹೈಕಮಾಂಡ್‌ಗೆ ವರದಿ ನೀಡಿತ್ತು.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರನಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​ ಅವರನ್ನು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ಮಾ.26 ರಂದು ಆದೇಶಿಸಿತು.

ಕರ್ನಾಟಕದಲ್ಲಿ ಹೆಚ್ಚಾಗಿದ್ದ ಬಿಜೆಪಿ ಬಣ ಬಡಿದಾಟಕ್ಕೆ​ ಬ್ರೇಕ್ ಹಾಕಿತ್ತು. ಪದೇ ಪದೇ ಪಕ್ಷದ ಶಿಸ್ತು ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿತ್ತು. ಇಷ್ಟಾದರೂ ಯತ್ನಾಳ್‌ ಜೊತೆ ಗುರುತಿಸಿಕೊಂಡ ನಾಯಕರು ಮಾತ್ರ ಬಂಡಾಯ ಚಟುವಟಿಕೆ ನಿಲ್ಲಿಸಿರಲಿಲ್ಲ.

ಮುನಿರತ್ನ ವಿರುದ್ಧ ಎಫ್‌ಐಆರ್‌

ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮೇ 21 ರಂದು ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತೆಯೇ ಅತ್ಯಾಚಾರ ಆರೋಪದಡಿ ನೀಡಿದ್ದ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ಶಾಸಕ ಮುನಿರತ್ನ, ಬೆಂಬಲಿಗರಾದ ವಸಂತ, ಚನ್ನಕೇಶವ, ಕಮಲ್ ಹಾಗೂ ಒಬ್ಬ ಅಪರಿಚಿತನ ವಿರುದ್ಧ ಪ್ರಕರಣ ​ ದಾಖಲಾಗಿತ್ತು. "2013ರಲ್ಲಿ ಜೆಪಿ ಪಾರ್ಕ್ ಶಾಸಕರ ಕಚೇರಿಯಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಮುಖದ ಮೇಲೆ ಮೂತ್ರ ವಿಸರ್ಜಿಸಿ, ಅಪರಿಚಿತ ವ್ಯಕ್ತಿಯಿಂದ ಮಾರಕ ವೈರಸ್ ಇಂಜೆಕ್ಷನ್ ಕೊಡಿಸಿದ್ದರು ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತೆ ದೂರಿನಲ್ಲಿ ಆರೋಪಿಸಿದ್ದರು. ಇದರನ್ವಯ ಐಪಿಸಿ ಸೆಕ್ಷನ್ 376D, 270, 323, 354, 504, 506, 509, 34 ರಡಿ ಪೊಲೀಸರು ಪ್ರಕರಣ ದಾಖಲಿಸಲಾಗಿತ್ತು.

ಜೆಡಿಎಸ್‌ನಿಂದ ಜಿಟಿಡಿ ಔಟ್‌; ಕೋರ್‌ ಕಮಿಟಿಗೆ ಹೊಸ ಸಾರಥಿ

ಜೆಡಿಎಸ್‌ ಪಕ್ಷದಲ್ಲಿ ಆಂತರಿಕ ಕಲಹಗಳು ಹೆಚ್ಚಾಗಿ ಪಕ್ಷ ಸಂಘಟನೆ ಕ್ಷೀಣಿಸಿತ್ತು. ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷದಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದರು. ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಸ್ಥಾನದಿಂದ ಜಿ.ಟಿ. ದೇವೇಗೌಡ ಅವರನ್ನು ಸಂಪೂರ್ಣ ಹೊರಗಿಟ್ಟು, ಅವರ ಜಾಗಕ್ಕೆ ಕೃಷ್ಣಾರೆಡ್ಡಿ ಅವರನ್ನು ನೇಮಿಸಲಾಯಿತು.

ಜೆಡಿಎಸ್‌ಗೆ ಹೊಸ ರೂಪ ಕೊಡಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೋರ್ ಕಮಿಟಿ ಪುನಾರಚಿಸಿದ್ದರು. ಈ ಮಧ್ಯೆ, ಜಿ.ಟಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಆಪ್ತವಾಗಿದ್ದು, ಕಾಂಗ್ರೆಸ್‌ ಜತೆ ಗುರುತಿಸಿಕೊಳ್ಳುತ್ತಿರುವುದು ಕೂಡ ಜೆಡಿಎಸ್‌ ಕೆಂಗಣ್ಣಿಗೆ ಗುರಿಯಾಗಿತ್ತು. ಮುಡಾ ಪ್ರಕರಣದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಒಂದಾಗಿ ಹೋರಾಟ ಆರಂಭಿಸಿದಾಗ ಜಿ.ಟಿ. ದೇವೇಗೌಡ ಅವರು ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದರು.

ಜೆಡಿಎಸ್‌ಗೆ ರಜತ ಮಹೋತ್ಸವ ಸಂಭ್ರಮ

1999 ರಲ್ಲಿ ಜನತಾದಳದಿಂದ ಬೇರ್ಪಟ್ಟು ಪ್ರತ್ಯೇಕ ರಾಜಕೀಯ ಪಕ್ಷವಾಗಿ ಹುಟ್ಟಿಕೊಂಡ ಜೆಡಿ(ಎಸ್) 2025 ನವೆಂಬರ್ ತಿಂಗಳಿಗೆ 25 ವರ್ಷ ಪೂರ್ಣಗೊಳಿಸಿ, ರಜತ ಮಹೋತ್ಸವ ಆಚರಿಸಿಕೊಂಡಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಮತ್ತೊಂದು ಅವಧಿಗೆ ರಾಷ್ಟ್ರೀಯ ಅಧ್ಯಕ್ಷರನ್ನಾಗಿ, ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಯಿತು.

ಜೆಡಿಎಸ್‌ ತನ್ನ 25 ವರ್ಷದಲ್ಲಿ ಹಲವು ನಾಯಕರನ್ನು ಬೆಳೆಸಿದೆ. ದೇವರಾಜ್ ಅರಸ್, ಬಂಗಾರಪ್ಪ, ಯಡಿಯೂರಪ್ಪ, ಸೇರಿ ಅನೇಕ ನಾಯಕರು ಸ್ವಂತ ಪಕ್ಷ ಕಟ್ಟಿದರೂ ಅವುಗಳು ಉಳಿಯಲಿಲ್ಲ. ಜೆಡಿಎಸ್ ಮಾತ್ರ 25 ವರ್ಷಗಳಿಂದ ರಾಜಕೀಯ ಮಾಡುತ್ತಾ ಬಂದಿದೆ. ಉತ್ತರ ಭಾರತದಲ್ಲಿ ಜೆಡಿಯು ಪ್ರಬಲವಾದರೆ, ಕರ್ನಾಟಕದಲ್ಲಿ ಜೆಡಿಎಸ್ ಪ್ರಬಲವಾದ ಪ್ರಾದೇಶಿಕ ಪಕ್ಷವಾಗಿದೆ. ಆದರೆ ಅಪ್ಪ-ಮಕ್ಕಳ ಪಕ್ಷ ಎಂಬ ಹಣೆಪಟ್ಟಿಯಿಂದ ಕಳಚಿಕೊಳ್ಳಲು ಇನ್ನೂ ಸಾಧ್ಯವಾಗದೆ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿಯವರೆಗೆ ನಾಯಕತ್ವ ಹಂಚಿಕೊಂಡಿದೆ.-

ಜತೆಗೆ, ಪಕ್ಷದಲ್ಲಿ ಒಂದರ್ಥದಲ್ಲಿ ಹಾಸನ ಜಿಲ್ಲೆಯನ್ನು ಕೈವಶಮಾಡಿಕೊಂಡಿದ್ದ ದೇವೇಗೌಡ ಇನ್ನೊಬ್ಬ ಪುತ್ರ ಎಚ್‌.ಡಿ. ರೇವಣ್ಣ ಅವರು, ತಮ್ಮ ಪುತ್ರ , ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಲೈಂಗಿಕ ಹಗರಣ ಬಳಿಕ ಮೌನಕ್ಕೆ ಜಾರಿದ್ದಾರೆ. ಆ ಮೂಲಕ ರಾಜಕೀಯದಲ್ಲಿ ಬೆಳೆಯುತ್ತಿದ್ದ ಪುತ್ರ, ಪತ್ನಿ ಭವಾನಿ ರೇವಣ್ಣ ಇಬ್ಬರೂ ಕಂಗಾಲಾಗಿದ್ದಾರೆ.

ಇದು, ಸಹಜವಾಗಿ ದೇವೇಗೌಡರಂತೆ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಪಾರುಪತ್ಯಕ್ಕೆ ಪ್ರಯತ್ನಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಒಂದರ್ಥದಲ್ಲಿ ಜೆಡಿಎಸ್‌ ಪಕ್ಷವನ್ನು ನಿಯಂತ್ರಿಸಲು ಅನುಕೂಲಕರ ವಾತಾವರಣ ಸೃಷ್ಟಿಸಿದೆ.

ಬಿಜೆಪಿ ಜತೆ ಮೈತ್ರಿ ಸಾಧಿಸಿಕೊಂಡು ಕೇಂದ್ರ ಮಂತ್ರಿಯೂ ಆಗಿರುವ ಕುಮಾರಸ್ವಾಮಿ ಅವರಿಗೆ, ಅಪ್ಪ-ಮಕ್ಕಳ ಪಕ್ಷ ಎಂಬ ವ್ಯಂಗ್ಯದಿಂದ ಪಾರಾಗಿ ಹಳೆಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗ ನಾಯಕನಾಗಿ ಹಾಗೂ ಪಕ್ಷವನ್ನು ಗಟ್ಟಿಗೊಳಿಸುವ ಮುಖಂಡನಾಗಿ ಬೆಳೆಯುವ ಸವಾಲು ಸದಾ ಇದೆ. ಆ ಮೂಲಕ ಕಾಂಗ್ರೆಸ್‌ನಲ್ಲಿ ಬೆಳೆಯುತ್ತಿರುವ ಒಕ್ಕಲಿಗ ಮುಖಂಡ ಡಿ.ಕೆ. ಶಿವಕುಮಾರ್‌ ಅವರನ್ನು ರಾಜಕೀಯವಾಗಿ ಬಗ್ಗುಬಡಿದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಲೆಎತ್ತಿ ನಿಲ್ಲುವುದು ಸಾಧ್ಯವೇ ಎಂಬುದನ್ನು ಆ ಪಕ್ಷದ ಕಾರ್ಯಕರ್ತರು ಕುತೂಹಲದಿಂದ ಗಮನಿಸುತ್ತಿದ್ದಾರೆ.


Read More
Next Story