
ಮೋದಿ ಸರ್ಕಾರದಿಂದ ನರೇಗಾ ರದ್ದು:ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ಕರೆ!
ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಸರ್ಕಾರವು ನರೇಗಾ ರದ್ದುಪಡಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (MGNREGA) ರದ್ದುಗೊಳಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ಮುಂದಾಗಿದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ (ಡಿಸೆಂಬರ್ 27) ಕರೆ ನೀಡಿದ್ದಾರೆ.
ನವದೆಹಲಿಯ ಇಂದಿರಾ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯ ನರೇಗಾ ಯೋಜನೆಯನ್ನು ರದ್ದುಪಡಿಸಿ, ಅದರ ಬದಲಿಗೆ 'ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ' (VB-G RAM G) ಜಾರಿಗೆ ತಂದಿರುವುದನ್ನು ತೀವ್ರವಾಗಿ ಖಂಡಿಸಿದರು.
ಖರ್ಗೆ ಅವರ ಭಾಷಣದ ಮುಖ್ಯಾಂಶಗಳು
ಸರ್ವಾಧಿಕಾರಿ ಧೋರಣೆ: "ಯಾವುದೇ ಅಧ್ಯಯನ ನಡೆಸದೆ, ರಾಜ್ಯ ಸರ್ಕಾರಗಳು ಅಥವಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ಮೋದಿ ಸರ್ಕಾರ ಈ ಹೊಸ ಕಾನೂನನ್ನು ಹೇರಿದೆ. ಇದು ಈ ಹಿಂದೆ ಜಾರಿಗೆ ತಂದಿದ್ದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳಂತೆಯೇ ಇದೆ," ಎಂದು ಖರ್ಗೆ ಟೀಕಿಸಿದರು.
ಚಳುವಳಿಯ ಅವಶ್ಯಕತೆ: "ದೇಶದ ಮೂಲೆ ಮೂಲೆಯಲ್ಲಿ ಈ ನಿರ್ಧಾರದ ವಿರುದ್ಧ ಪ್ರಬಲ ವಿರೋಧ ವ್ಯಕ್ತವಾಗಬೇಕು. 2015ರಲ್ಲಿ ಭೂಸ್ವಾಧೀನ ಕಾಯ್ದೆಯನ್ನು ಬದಲಿಸಲು ಪ್ರಯತ್ನಿಸಿದಾಗ ಕಾಂಗ್ರೆಸ್ ಬೀದಿಗಿಳಿದು ಹೋರಾಡಿದ ಕಾರಣ ಸರ್ಕಾರ ಹಿಂದೆ ಸರಿಯಬೇಕಾಯಿತು. ಅದೇ ಮಾದರಿಯ ಹೋರಾಟ ಈಗಲೂ ಅಗತ್ಯವಿದೆ," ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ: ಚುನಾವಣಾ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕದಂತೆ ಅಥವಾ ಬೇರೆ ಮತಗಟ್ಟೆಗಳಿಗೆ ವರ್ಗಾಯಿಸದಂತೆ ನೋಡಿಕೊಳ್ಳಲು ಬೂತ್ ಮಟ್ಟದ ಏಜೆಂಟ್‌ಗಳು (BLA) ಮನೆ ಮನೆಗೆ ಭೇಟಿ ನೀಡಬೇಕು ಎಂದು ಸೂಚಿಸಿದರು.
ತನಿಖಾ ಸಂಸ್ಥೆಗಳ ದುರುಪಯೋಗ: ಕಳೆದ 11 ವರ್ಷಗಳಿಂದ ಇಡಿ, ಐಟಿ ಮತ್ತು ಸಿಬಿಐನಂತಹ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. 'ನ್ಯಾಷನಲ್ ಹೆರಾಲ್ಡ್' ಪ್ರಕರಣದ ಮೂಲಕ ಕಾಂಗ್ರೆಸ್ ನಾಯಕರ ವರ್ಚಸ್ಸಿಗೆ ಮಸಿ ಬಳಿಯಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿವೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.

