KAP survey controversy: State government logo, Election Commissioner photo. Report caught between vote theft allegations
x

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿರೋ 5.3ಕೋಟಿ ಮತದಾರರಲ್ಲಿ ಕೇವಲ 5,100 ಜನರ ಸರ್ವೆ-EVM ಸಮೀಕ್ಷೆ ಸತ್ಯಾಸತ್ಯತೆ ಏನು?

ರಾಜ್ಯದಲ್ಲಿ ಇವಿಎಂ ವಿಶ್ವಾಸಾರ್ಹತೆ ಸಮೀಕ್ಷೆ ವರದಿ ಕೋಲಾಹಲವನ್ನೇ ಸೃಷ್ಟಿಸಿದೆ. ಕಾಂಗ್ರೆಸ್‌ ಈ ಸಮೀಕ್ಷೆಯ ಬಗ್ಗ ಅನುಮಾನ ವ್ಯಕ್ತಪಡಿಸಿದರೆ ಬಿಜೆಪಿ ಇದೇ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದೆ.


Click the Play button to hear this message in audio format

ಲೋಕಸಭಾ ಚುನಾವಣೆ 2024ರ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮತದಾರರ ಜಾಗೃತಿ ಮತ್ತು ಚುನಾವಣಾ ಪ್ರಕ್ರಿಯೆಯ ಮೌಲ್ಯಮಾಪನಕ್ಕಾಗಿ ನಡೆಸಲಾದ 'ನಾಗರಿಕರ ಜ್ಞಾನ-ವರ್ತನೆ-ಅಭ್ಯಾಸ' (KAP) ಸಮೀಕ್ಷೆಯು ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಈ ವರದಿಯು ಅಂಕಿಅಂಶಗಳಿಂದ ಗಮನ ಸೆಳೆಯುವ ಜತೆಗೆ ಅದರ ಪ್ರಸ್ತುತಿ, ಬ್ರಾಂಡಿಂಗ್ ಮತ್ತು ಅದರಲ್ಲಿ ಬಳಕೆಯಾಗಿರುವ ಲೋಗೊಗಳಿಂದಾಗಿ "ಈ ಸಮೀಕ್ಷೆಯನ್ನು ನಿಜವಾಗಿ ನಡೆಸಿದವರು ಯಾರು?" ಎಂಬ ಗೊಂದಲವನ್ನು ಸೃಷ್ಟಿಸಿದೆ. ಕರ್ನಾಟಕ ಸರ್ಕಾರದ ಅಧಿಕೃತ ಲೋಗೊ ಮತ್ತು ಮುಖ್ಯ ಚುನಾವಣಾಧಿಕಾರಿಗಳ ಫೋಟೋಗಳನ್ನು ಒಳಗೊಂಡಿರುವ ಈ ವರದಿ ಮಾಡಿಸಿದ್ದು ಚುನಾವಣಾ ಆಯೋಗವೇ ಅಥವಾ ಕರ್ನಾಟಕ ಸರ್ಕಾರವೇ ಎಂಬ ಪ್ರಶ್ನೆಗಳು ಏಳುವಂತೆ ಮಾಡಿದೆ.

ಒಂದು ವೇಳೆ ಕರ್ನಾಟಕ ಸರ್ಕಾರವೇ ಮಾಡಿದ್ದರೆ ತನ್ನ 'ವೋಟ್​ ಚೋರಿ' ಆರೋಪಕ್ಕೆ ತಾನೇ ಹಿನ್ನಡೆ ತಂದಂತಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗ ಮಾಡಿದ್ದರೆ ಸಮೀಕ್ಷೆಯ ಫಲಿತಾಂಶದ ಬಗ್ಗೆ ಮತ್ತು ಸಮೀಕ್ಷೆಯ ನಡೆದ ವಿಧಾನ ಕುರಿತು ಹಲವು ಪ್ರಶ್ನೆಗಳು ಭುಗಿಲೆದ್ದಿವೆ.

ಸಮೀಕ್ಷೆಯ ಹೊಣೆಗಾರಿಕೆ ಮತ್ತು ಗುರುತಿನ ಬಿಕ್ಕಟ್ಟು

ಈ ಸಮೀಕ್ಷೆಯ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಮೂರು ವಿಭಿನ್ನ ಹಂತದ ಸಂಸ್ಥೆಗಳ ಪಾತ್ರವಿರುವುದು ಕಂಡುಬರುತ್ತದೆ. ರಾಜ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಡಿಯಲ್ಲಿ ಬರುವ 'ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ' (KMEA) ಈ ಯೋಜನೆಯ ಮೇಲ್ವಿಚಾರಣೆ ನಡೆಸಿದ್ದರೆ, ಮೈಸೂರಿನ 'ಗ್ರಾಸ್‌ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿ ಮೂವ್‌ಮೆಂಟ್' (GRAAM) ಎಂಬ ಖಾಸಗಿ ಸಂಸ್ಥೆಯು ಕ್ಷೇತ್ರ ಸಮೀಕ್ಷೆ ಮತ್ತು ದತ್ತಾಂಶ ವಿಶ್ಲೇಷಣೆಯ ಜವಾಬ್ದಾರಿ ಹೊತ್ತಿತ್ತು. ಇದರ ಜೊತೆಗೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ (CEO Karnataka) ಸಹಯೋಗ ನೀಡಿದೆ. ಆದರೆ, ವರದಿಯ ಮುಖಪುಟದಲ್ಲಿ ಕರ್ನಾಟಕ ಸರ್ಕಾರದ ಲೋಗೊ ದೊಡ್ಡದಾಗಿ ಪ್ರಕಟವಾಗಿರುವುದು ಮತ್ತು "Government of Karnataka" ಎಂಬ ಶೀರ್ಷಿಕೆ ಇರುವುದು ಗೊಂದಲಕ್ಕೆ ಮೂಲವಾಗಿದೆ. ಸಾಮಾನ್ಯ ಓದುಗರಿಗೆ ಇದು ಸ್ವತಂತ್ರ ಸಂಸ್ಥೆಯ ವರದಿಯ ಬದಲಾಗಿ, ಸರ್ಕಾರವೇ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳಲು ಸಿದ್ಧಪಡಿಸಿದ 'ಸರ್ಕಾರಿ ದಾಖಲೆ'ಯಂತೆ ಭಾಸವಾಗುತ್ತಿದೆ.

ಲೋಗೊ ಬಳಕೆ ಮತ್ತು ವಿಶ್ವಾಸಾರ್ಹತೆಯ ಪ್ರಶ್ನೆ

ವರದಿಯ ಮೇಲೆ ಸರ್ಕಾರದ ಲೋಗೊ ಬಳಸಿರುವುದು ಕೇವಲ ವಿನ್ಯಾಸದ ಪ್ರಶ್ನೆಯಾಗಿ ಉಳಿದಿಲ್ಲ, ಅದು ವರದಿಯ ತಟಸ್ಥತೆಯ ಮೇಲೆಯೂ ನೆರಳು ಬೀರಿದೆ. ಚುನಾವಣಾ ನೀತಿ ಸಂಹಿತೆ ಮತ್ತು ಸ್ವೀಪ್ (SVEEP) ಮಾರ್ಗಸೂಚಿಗಳ ಪ್ರಕಾರ, ಮತದಾರರ ಜಾಗೃತಿ ಕಾರ್ಯಕ್ರಮಗಳು ಯಾವುದೇ ರಾಜಕೀಯ ಅಥವಾ ಸರ್ಕಾರಿ ಪ್ರಚಾರದ ಹಿತಾಸಕ್ತಿಯನ್ನು ಹೊಂದಿರಬಾರದು. ಆದರೆ, ಇಲ್ಲಿ ಸರ್ಕಾರದ ಲೋಗೊ ಅಡಿಯಲ್ಲೇ ಚುನಾವಣಾ ವ್ಯವಸ್ಥೆಯ ಯಶಸ್ಸನ್ನು (ಮತದಾನದ ಏರಿಕೆ, ಸೌಲಭ್ಯಗಳ ವಿಸ್ತರಣೆ ಇತ್ಯಾದಿ) ಹೇಳಿಕೊಳ್ಳಲಾಗಿದೆ.

ಮುಖ್ಯ ಚುನಾವಣಾಧಿಕಾರಿಗಳ ಫೋಟೋ ಮತ್ತು ಸಾಂಸ್ಥಿಕ ಇಮೇಜ್

ವರದಿಯಲ್ಲಿ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬಕುಮಾರ್ ಅವರ ಫೋಟೋ ಮತ್ತು ಅವರು ಬರೆದಿರುವ ಮುನ್ನುಡಿ ಇರುವುದು ಮತ್ತೊಂದು ಗೊಂದಲಕಾರಿ ಅಂಶವಾಗಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಇವಿಎಂ (EVM) ಮತ್ತು ವಿವಿಪ್ಯಾಟ್ (VVPAT) ಕುರಿತು ಶಂಕೆ ವ್ಯಕ್ತಪಡಿಸುವ ವರ್ಗಕ್ಕೆ, ಈ ವರದಿಯಲ್ಲಿರುವ "ಇವಿಎಂ ಮೇಲೆ ಶೇ. 80ರಷ್ಟು ವಿಶ್ವಾಸವಿದೆ" ಎಂಬ ಅಂಕಿ-ಅಂಶವು ಕೇವಲ 'ಡ್ಯಾಮೇಜ್ ಕಂಟ್ರೋಲ್' ತಂತ್ರ ಎಂದು ಹೇಳಲಾಗುತ್ತಿದೆ. ಅಲ್ಲದೆ, ವೋಟ್ ಚೋರಿ ಆರೋಪ ಮಾಡುವ ಕಾಂಗ್ರಸ್​ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮುಜುಗರ ತರುವ ವಿಷಯ ಎಂದು ಹೇಳಲಾಗುತ್ತಿದೆ.

'ವೋಟ್ ಚೋರಿ' ಆರೋಪಕ್ಕೆ ಹಿನ್ನಡೆಯೇ?

ಕಾಂಗ್ರಸ್​ ಸತತವಾಗಿ ಮಾಡುತ್ತಿರುವ "ವೋಟ್ ಚೋರಿ" ಮತ್ತು ಮತದಾರರ ಪಟ್ಟಿ ಅಕ್ರಮದಂತಹ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ವರದಿಯನ್ನು ವಿಶ್ಲೇಷಿಸಿದರೆ, ಇದು ಕರ್ನಾಟಕ ಸರ್ಕಾರಕ್ಕೆ ದೊಡ್ಡ ಹಿನ್ನಡೆ. ಇನ್ನು ಸಮೀಕ್ಷೆಯಲ್ಲಿ 5,100 ಮತದಾರರ ಸರ್ವೇ ಮತ್ತು ವೈಜ್ಞಾನಿಕ ವಿಧಾನಗಳನ್ನು ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೇಲ್ನೊಟಕ್ಕೆ ಎಲ್ಲವೂ ಸರಿಯಾಗಿದೆ, ಕಾಂಗ್ರೆಸ್ ಆರೋಪಗಳೇ ತಪ್ಪು ಎಂಬಂತೆ ಭಾಸವಾಗುವಂತೆ ಮಾಡಲಾಗಿದೆ.

ಸಮೀಕ್ಷೆ ನಮ್ಮದಲ್ಲ ಎಂದ ಕಾಂಗ್ರೆಸ್‌

ಈ ಕೆಎಪಿ ಸಮೀಕ್ಷೆಯು ಆಡಳಿತಾತ್ಮಕ ದೃಷ್ಟಿಯಿಂದ ಡೇಟಾ ಆಧಾರಿತ ಮೌಲ್ಯಮಾಪನವಾಗಿ ಕಂಡರೂ, ಸಾರ್ವಜನಿಕ ಮತ್ತು ರಾಜಕೀಯ ರಂಗದಲ್ಲಿ ಮಾತ್ರ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ. ಬಿಜೆಪಿಯ ಆರೋಪಗಳಿಗೆ ಅಷ್ಟೇ ವೇಗವಾಗಿ ಪ್ರತ್ಯುತ್ತರ ನೀಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಈ ಸಮೀಕ್ಷೆಯು ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಅನುಮೋದನೆ ಪಡೆದಿದ್ದಲ್ಲ ಎಂದು ಸ್ಪಷ್ಟಪಡಿಸಿದರು. ಇದು ಚುನಾವಣಾ ಆಯೋಗದ ವಿನಂತಿಯ ಮೇರೆಗೆ 'ಗ್ರಾಮ್' (GRAAM) ಎಂಬ ಎನ್‌ಜಿಓ ನಡೆಸಿದ ಅಧ್ಯಯನವಾಗಿದ್ದು, ಈ ಸಂಸ್ಥೆಯ ಮುಖ್ಯಸ್ಥರಾದ ಡಾ. ಆರ್. ಬಾಲಸುಬ್ರಮಣಿಯನ್ ಅವರು ಪ್ರಧಾನಮಂತ್ರಿ ಕಚೇರಿಯೊಂದಿಗೆ (PMO) ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬಾಲಸುಬ್ರಮಣಿಯನ್ ಅವರು ಪ್ರಧಾನಿ ಮೋದಿ ಅವರ ನಾಯಕತ್ವದ ಕುರಿತು ಪುಸ್ತಕ ಬರೆದಿದ್ದಾರೆ ಮತ್ತು ಕೇಂದ್ರ ಸರ್ಕಾರದ ವಿವಿಧ ಸಮಿತಿಗಳಲ್ಲಿ ಗುರುತಿಸಿಕೊಂಡಿದ್ದಾರೆ, ಹೀಗಾಗಿ ಇಂತಹ ಸಂಸ್ಥೆಯಿಂದ ನಿಷ್ಪಕ್ಷಪಾತ ವರದಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಖರ್ಗೆ ವಾದಿಸಿದರು.

ಎಷ್ಟು ಜನರ ಸಮೀಕ್ಷೆ

ಸಮೀಕ್ಷೆಗೊಳಪಡಿಸಿರುವ ಮತದಾರರ ಸಂಖ್ಯೆ ಈ ಸಮೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ಮೂಡಿಸುವಂತಿದೆ. ರಾಜ್ಯದಲ್ಲಿ ಪ್ರಸ್ತುತ ೫ಕೋಟಿ ಮತದಾರರಿದ್ದಾರೆ. ಆದರೆ ಈ ಸಮೀಕ್ಷೆಗೊಳಪಟ್ಟಿರುವುದು ಕೇವಲ ಐದು ಸಾವಿರ ಜನರ ಅಷ್ಟೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಮತದಾರರ ಸಂಖ್ಯೆ ಇರುವ ರಾಜ್ಯದಲ್ಲಿ ಕೇವಲ ಐದು ಸಾವಿರ ಜನರ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದ ಮೇಲೆ ವರದಿ ನೀಡಿರುವುದು ಪ್ರಶ್ನಾರ್ಹ ಸಂಗತಿಯೇ ಆಗಿದೆ.








Read More
Next Story