JDS gears up for a huge show of strength in Hassan: Huge convention on Jan. 23-24
x

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ

ಸ್ಥಳೀಯ ಸಮರದಲ್ಲಿ 'ದಳ' ಏಕಾಂಗಿ: ಬಿಜೆಪಿ ಜತೆ ಮೈತ್ರಿ ಇಲ್ಲ ಎಂದ ಎಚ್​​. ಡಿ. ದೇವೇಗೌಡ

ಇದು ರಾಜ್ಯದ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಉಭಯ ಪಕ್ಷಗಳ ನಡುವೆ ಸ್ನೇಹಪೂರ್ವಕ ಪೈಪೋಟಿ ಏರ್ಪಡುವ ಸೂಚನೆ ನೀಡಿದೆ.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪರ್ವ ಮುಂದುವರಿಯುತ್ತಿರುವ ಬೆನ್ನಲ್ಲೇ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಬಿಜೆಪಿ ಜೊತೆಗಿರುವ ಜೆಡಿಎಸ್, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾತ್ರ 'ಏಕಾಂಗಿ'ಯಾಗಿ ಹೋರಾಡಲು ನಿರ್ಧರಿಸಿದೆ. ಈ ಮೂಲಕ ತಳಮಟ್ಟದಲ್ಲಿ ಪಕ್ಷದ ಅಸ್ತಿತ್ವವನ್ನು ಸ್ವತಂತ್ರವಾಗಿ ಉಳಿಸಿಕೊಳ್ಳುವ ತಂತ್ರಕ್ಕೆ ದಳಪತಿಗಳು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಸ್ಥಳೀಯ ಸಂಸ್ಥೆಗಳ ಚುನಾವಣಾ ಕಣದಲ್ಲಿ ಜೆಡಿಎಸ್ ಯಾವುದೇ ಮೈತ್ರಿ ಇಲ್ಲದೆ ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದರು. "ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಸೀಟು ಹಂಚಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಾಗಲಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಾಗಲಿ ಚರ್ಚೆ ನಡೆಸಲು ಸಾಧ್ಯವಿಲ್ಲ. ನಾವು ರಾಷ್ಟ್ರೀಯ ಮಟ್ಟದ ದೊಡ್ಡ ಚುನಾವಣೆಗಳಾದ ವಿಧಾನಸಭೆ ಮತ್ತು ಲೋಕಸಭೆಯ ಸೀಟು ಹಂಚಿಕೆ ಬಗ್ಗೆ ಮಾತ್ರ ಅವರೊಂದಿಗೆ ಚರ್ಚಿಸುತ್ತೇವೆ" ಎನ್ನುವ ಮೂಲಕ ಸ್ಥಳೀಯ ಮಟ್ಟದಲ್ಲಿ ಪ್ರಾದೇಶಿಕ ಪಕ್ಷದ ಬಲವರ್ಧನೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಇದು ರಾಜ್ಯದ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಉಭಯ ಪಕ್ಷಗಳ ನಡುವೆ ಸ್ನೇಹಪೂರ್ವಕ ಪೈಪೋಟಿ ಏರ್ಪಡುವ ಸೂಚನೆ ನೀಡಿದೆ.

ವಿಧಾನಸಭೆ, ಲೋಕಸಭೆಗೆ ಮಾತ್ರ ಎನ್‌ಡಿಎ ಸ್ನೇಹ

ಮೈತ್ರಿಯ ಸ್ವರೂಪದ ಬಗ್ಗೆ ಮತ್ತಷ್ಟು ವಿವರಣೆ ನೀಡಿದ ಗೌಡರು, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಜೆಡಿಎಸ್ ಅಚಲವಾಗಿ ಎನ್‌ಡಿಎ ಮೈತ್ರಿಕೂಟದ ಜೊತೆ ಇರಲಿದೆ ಎಂದು ಪುನರುಚ್ಚರಿಸಿದರು. ಇದೇ ವೇಳೆ ವಿಧಾನಪರಿಷತ್‌ನ ನಾಲ್ಕು ಸ್ಥಾನಗಳ ಚುನಾವಣೆಗೆ ಸಂಬಂಧಿಸಿದಂತೆ ಪ್ರಾಥಮಿಕ ಚರ್ಚೆಗಳು ಪೂರ್ಣಗೊಂಡಿದ್ದು, ಮೂರು ಸ್ಥಾನಗಳನ್ನು ಬಿಜೆಪಿಗೆ ಮತ್ತು ಒಂದು ಸ್ಥಾನವನ್ನು ಜೆಡಿಎಸ್‌ಗೆ ನೀಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಮುಖ ರಾಜಕೀಯ ನಿರ್ಧಾರಗಳಲ್ಲಿ ಬಿಜೆಪಿ ಜತೆಗಿದ್ದರೂ, ಸ್ಥಳೀಯ ಮಟ್ಟದಲ್ಲಿ ಮಾತ್ರ ಪಕ್ಷದ ಕಾರ್ಯಕರ್ತರ ಹಿತದೃಷ್ಟಿಯಿಂದ ಸ್ವತಂತ್ರ ಹಾದಿ ತುಳಿಯುವುದು ಅನಿವಾರ್ಯ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.

ವಿಜಯೇಂದ್ರಗೆ ಟಾಂಗ್

"ಬಿಜೆಪಿ ಸ್ವಂತ ಬಲದ ಮೇಲೆ ಗೆಲುವು ಸಾಧಿಸಲಿದೆ" ಎನ್ನುವ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಗೆ ದೇವೇಗೌಡರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ವಿಜಯೇಂದ್ರ ಅವರ ಹೆಸರನ್ನು ಉಲ್ಲೇಖಿಸುತ್ತಾ ಟಾಂಗ್ ನೀಡಿದ ಗೌಡರು, "ವಿಜಯೇಂದ್ರ ಅವರು ಈಗ ಬಹಳ ಉತ್ಸಾಹದಿಂದ ಓಡಾಡುತ್ತಿದ್ದಾರೆ, ಒಬ್ಬ ಯಂಗ್ ಸ್ಟಾರ್ ರೀತಿ ಕೆಲಸ ಮಾಡುತ್ತಿದ್ದಾರೆ" ಎಂದು ಲೇವಡಿ ಮಾಡಿದರು. ಮೈತ್ರಿ ರಾಜಕಾರಣದ ನಡುವೆಯೂ ವಿಜಯೇಂದ್ರ ಅವರ ಏಕಪಕ್ಷೀಯ ಗೆಲುವಿನ ವಿಶ್ವಾಸಕ್ಕೆ ಗೌಡರು ಈ ರೀತಿ ಹಾಸ್ಯ ಮಿಶ್ರಿತವಾಗಿ ತಿರುಗೇಟು ನೀಡಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಚರ್ಚ್ ದಾಳಿ ಸರಿಯಲ್ಲ

ದೇಶದ ವಿವಿಧೆಡೆ ಚರ್ಚ್‌ಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಪ್ರಧಾನಿಗಳು, ಇಂತಹ ಘಟನೆಗಳು ಸಮಾಜದಲ್ಲಿ ನಡೆಯಬಾರದು ಎಂದು ಆತಂಕ ವ್ಯಕ್ತಪಡಿಸಿದರು. "ಇಂತಹ ದಾಳಿಗಳು ಎಲ್ಲಿಯೇ ನಡೆದರೂ ಅದು ಖಂಡನೀಯ. ತಪ್ಪು ಮಾಡಿದವರ ವಿರುದ್ಧ ಆಯಾಯ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಇಂತಹ ಘಟನೆಗಳ ಬಗ್ಗೆ ಗಮನಹರಿಸಬೇಕು. ಪ್ರಧಾನಿಗಳು ನಿನ್ನೆಯಷ್ಟೇ ಚರ್ಚ್‌ಗೆ ಭೇಟಿ ನೀಡಿ ಬಂದಿದ್ದಾರೆ. ಇದು ಕೇವಲ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಆಗುತ್ತಿದೆ ಎಂದಲ್ಲ, ಎಲ್ಲಿಯೇ ಆದರೂ ಕಾನೂನು ಕ್ರಮ ಜರುಗಬೇಕು" ಎಂದು ಸಾಮಾಜಿಕ ಸಾಮರಸ್ಯದ ಪರವಾಗಿ ಮಾತನಾಡಿದರು.

ಪಕ್ಷದ ಸಂಘಟನೆಗೆ ಹೊಸ ಚೈತನ್ಯ

ಜೆಡಿಎಸ್ ಸಂಘಟನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯಾದ್ಯಂತ ವಿವಿಧೆಡೆ ಸಭೆಗಳನ್ನು ನಡೆಸಲು ತಿರ್ಮಾನಿಸಲಾಗಿದೆ. ಈ ಸಂಘಟನಾ ಪರ್ವದ ಭಾಗವಾಗಿ ಜನವರಿ 18 ರಂದು ಬೆಂಗಳೂರಿನಲ್ಲಿ ಮತ್ತು ಜನವರಿ 23 ರಂದು ಹಾಸನದಲ್ಲಿ ಬೃಹತ್ ಸಭೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಮುಂಬರುವ ಚುನಾವಣೆಗಳಿಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಗುರಿಯನ್ನು ಪಕ್ಷ ಹೊಂದಿದೆ. ಸ್ಥಳೀಯ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಯ ನಿರ್ಧಾರವು ಈ ಸಭೆಗಳಲ್ಲಿ ಮತ್ತಷ್ಟು ಚರ್ಚೆಯಾಗುವ ಸಾಧ್ಯತೆಯಿದೆ.

Read More
Next Story