ವೋಟ್ ಚೋರಿ ಎಂಬ ಸುಳ್ಳಿನ ಕಥೆ ನಿಲ್ಲಿಸಿ: ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಗೆ ದೇವೇಗೌಡರ ಎಚ್ಚರಿಕೆ
x

ವೋಟ್ ಚೋರಿ ಎಂಬ ಸುಳ್ಳಿನ ಕಥೆ ನಿಲ್ಲಿಸಿ: ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಗೆ ದೇವೇಗೌಡರ ಎಚ್ಚರಿಕೆ

ತಮ್ಮ ಏಳು ದಶಕಗಳ ಸಾರ್ವಜನಿಕ ಜೀವನದಲ್ಲಿ ಅನೇಕ ಸೋಲು-ಗೆಲುವುಗಳನ್ನು ಕಂಡಿದ್ದೇನೆ, ಆದರೆ ಎಂದಿಗೂ ಮತಗಳ್ಳತನದಂತಹ ಆರೋಪಗಳನ್ನು ಮಾಡಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.


Click the Play button to hear this message in audio format

"ವೋಟ್ ಚೋರಿ"ಯಂತಹ ಪದಗಳನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಸುಳ್ಳಿನ ಸಂಕಥನ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳು, ಭವಿಷ್ಯದಲ್ಲಿ ಇದರ ಘೋರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ರಾಜ್ಯಸಭೆಯಲ್ಲಿ ಗುಡುಗಿದ್ದಾರೆ.

ಸೋಮವಾರ ರಾಜ್ಯಸಭೆಯಲ್ಲಿ ಈ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಪಕ್ಷಗಳ ತಂತ್ರಗಾರಿಕೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಪ್ರತಿಪಕ್ಷಗಳು ನಿರಂತರವಾಗಿ ಸುಳ್ಳಿನ ಕಥೆಗಳನ್ನು ಹಬ್ಬಿಸುತ್ತಾ, ಮತದಾರರ ಮನಸ್ಸಿನಲ್ಲಿ ಅನುಮಾನದ ಬೀಜ ಬಿತ್ತಿದರೆ, ಅದರಿಂದ ನಿಮಗೇ ನಷ್ಟವಾಗಲಿದೆ. ಈ ಯುದ್ಧದಲ್ಲಿ ನೀವು ಗೆಲ್ಲಲು ಸಾಧ್ಯವಿಲ್ಲ," ಎಂದು ಕಟುವಾದ ಶಬ್ದಗಳಲ್ಲಿ ಎಚ್ಚರಿಸಿದರು.

ಕಾಂಗ್ರೆಸ್‌ಗೆ ಬಿಹಾರದ ಪಾಠ ನೆನಪಿಸಿದ ಗೌಡರು

"ವೋಟ್ ಚೋರಿ" ಎಂಬ ಅಪಪ್ರಚಾರದಿಂದ ಪ್ರತಿಪಕ್ಷಗಳು ಏನನ್ನು ಸಾಧಿಸಲು ಹೊರಟಿವೆ ಎಂದು ಪ್ರಶ್ನಿಸಿದ ದೇವೇಗೌಡರು, "ನಿಮ್ಮ ಮನಸ್ಸಿಗೇನಾಗಿದೆ? ಏನಾದರೂ ಸಮಸ್ಯೆ ಇದ್ದರೆ ಸರಿಪಡಿಸಿಕೊಳ್ಳಿ," ಎಂದು ಕಿವಿಮಾತು ಹೇಳಿದರು. ಇತ್ತೀಚೆಗೆ ನಡೆದ ಬಿಹಾರ ಚುನಾವಣೆಯನ್ನು ಉಲ್ಲೇಖಿಸಿದ ಅವರು, "ಮತದಾರರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಮೇಲೂ ಅಲ್ಲಿ ಏನಾಯಿತು? ಕಾಂಗ್ರೆಸ್ ಪಕ್ಷ ಕೇವಲ ಆರು ಸ್ಥಾನಕ್ಕೆ ಕುಸಿಯಿತು. ಇದನ್ನು ಪ್ರತಿಪಕ್ಷ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು," ಎಂದು ಚಾಟಿ ಬೀಸಿದರು.

ನೆಹರೂ ಕಾಲದ ಘಟನೆಯನ್ನು ಸ್ಮರಿಸಿದ ಮಾಜಿ ಪ್ರಧಾನಿ

ತಮ್ಮ ಏಳು ದಶಕಗಳ ಸಾರ್ವಜನಿಕ ಜೀವನದಲ್ಲಿ ಅನೇಕ ಸೋಲು-ಗೆಲುವುಗಳನ್ನು ಕಂಡಿದ್ದೇನೆ, ಆದರೆ ಎಂದಿಗೂ ಮತಗಳ್ಳತನದಂತಹ ಆರೋಪಗಳನ್ನು ಮಾಡಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು. "ಜವಾಹರಲಾಲ್ ನೆಹರೂ ಅವರ ಕಾಲದಲ್ಲಿಯೂ ಚುನಾವಣಾ ವ್ಯವಸ್ಥೆಯಲ್ಲಿ ಲೋಪಗಳಿದ್ದವು. ಕೇರಳದಲ್ಲಿ 18,000 ಮತದಾರರ ಸೇರ್ಪಡೆ ಕುರಿತು ಅಂದಿನ ಪ್ರಧಾನಿ ನೆಹರೂ ಅವರೇ ಪತ್ರ ಬರೆದಿದ್ದರು. ಆದರೆ, ಇಂದಿನಂತೆ ಸಾಂಸ್ಥಿಕ ನಿಂದನೆ ನಡೆಯುತ್ತಿರಲಿಲ್ಲ," ಎಂದು ಹಳೆಯ ಘಟನೆಯನ್ನು ಸ್ಮರಿಸಿದರು.

ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ: ಭವಿಷ್ಯ ನುಡಿದ ದೇವೇಗೌಡರು

ದೇಶದಲ್ಲಿ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನಂತಹ ಬಲಿಷ್ಠ ಸಂಸ್ಥೆಗಳಿವೆ. ಎಲ್ಲವನ್ನೂ ಸರಿಪಡಿಸಲು ಅವುಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಪಕ್ಷಗಳು ಪ್ರಧಾನಿ ಮೇಲೆ ಆರೋಪ ಮಾಡುವುದನ್ನು ಬಿಡಬೇಕು ಎಂದರು. ಇದೇ ವೇಳೆ, "ದೇಶದ ಜನತೆ ನರೇಂದ್ರ ಮೋದಿ ಅವರ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ನಂತರವೂ ಅವರೇ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ," ಎಂದು ದೇವೇಗೌಡರು ಭವಿಷ್ಯ ನುಡಿದರು.

Read More
Next Story