
ಸಾಂದರ್ಭಿಕ ಚಿತ್ರ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಿಯಮ ಬಾಹಿರ ಕಟ್ಟಡಗಳು; 2.15 ಕೋಟಿ ರೂ. ದಂಡ ವಸೂಲಿ
ಕೆಲವು ಘಟಕಗಳನ್ನು ಸೀಲ್ ಮಾಡಲಾಗಿದ್ದು, ಮತ್ತೆ ಕೆಲವು ಕಟ್ಟಡಗಳ ಅಕ್ರಮ ಭಾಗಗಳನ್ನು ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ವೇಳೆ, ದಾಖಲೆಗಳು ಮತ್ತು ಅನುಮತಿಗಳ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಕೆಲವು ಘಟಕಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
ನಗರದ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ಮಳಿಗೆಗಳು ಮತ್ತು ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹಗಳ ಮೇಲೆ ಮಾಸ್ಟರ್ ಡೆವಲಪ್ಮೆಂಟ್ ಮ್ಯಾನೇಜ್‌ಮೆಂಟ್ ಅಥಾರಿಟಿ (MDMA) ಅಧಿಕಾರಿಗಳು ಬೃಹತ್ ದಾಳಿ ನಡೆಸಿದ್ದು, ಸುಮಾರು 500ಕ್ಕೂ ಹೆಚ್ಚು ಘಟಕಗಳ ಮೇಲೆ ಕ್ರಮ ಜರುಗಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 2.15 ಕೋಟಿಗೂ ರೂಪಾಯಿ ಅಧಿಕ ದಂಡವನ್ನು ವಸೂಲಿ ಮಾಡಲಾಗಿದೆ.
ಕಳೆದ ಒಂದು ವಾರದಿಂದ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಹಂತ ಹಂತವಾಗಿ ಈ ದಾಳಿಗಳನ್ನು ನಡೆಸಲಾಗಿದೆ. ಈ ಹಿಂದೆ ನೋಟಿಸ್ ನೀಡಿದ್ದರೂ ಅಗ್ನಿ ಸುರಕ್ಷತೆ, ಕಟ್ಟಡದ ದೃಢತೆ, ಪಾರ್ಕಿಂಗ್ ಮತ್ತು ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ನಿಯಮಗಳನ್ನು ಪಾಲಿಸದ 490 ವಾಣಿಜ್ಯ ಘಟಕಗಳು ಮತ್ತು 43 ಪಿಜಿಗಳ ಮೇಲೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ.
ಕೆಲವು ಘಟಕಗಳನ್ನು ಸೀಲ್ ಮಾಡಲಾಗಿದ್ದು, ಮತ್ತೆ ಕೆಲವು ಕಟ್ಟಡಗಳ ಅಕ್ರಮ ಭಾಗಗಳನ್ನು ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ವೇಳೆ, ದಾಖಲೆಗಳು ಮತ್ತು ಅನುಮತಿಗಳ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಕೆಲವು ಘಟಕಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದ್ದು, ಇಲ್ಲಿನ ಉದ್ಯೋಗ ಮತ್ತು ವಸತಿ ದಟ್ಟಣೆಗೆ ಅನುಗುಣವಾಗಿ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲೂ ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಸಾರ್ವಜನಿಕರು ಯಾವುದೇ ಅಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.