
ಪಿಯುಸಿ ಪಾಸಾಗಿದೆಯೇ?ಪೊಲೀಸ್ ಇಲಾಖೆಯಲ್ಲಿವೆ 7,500 ಹುದ್ದೆಗಳು, ತಕ್ಷಣವೇ ಅರ್ಜಿ ಸಲ್ಲಿಸಿ
5,069 ಹುದ್ದೆಗಳು ಪುರುಷ ಅಭ್ಯರ್ಥಿಗಳಿಗೆ ಮತ್ತು 2,496 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿವೆ. ಮಾಜಿ ಸೈನಿಕರಿಗೂ ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಯುವಕ-ಯುವತಿಯರಿಗೆ ಸಿಹಿ ಸುದ್ದಿಯೊಂದಿದೆ., ಸಿಬ್ಬಂದಿ ನೇಮಕಾತಿ ಆಯೋಗ (SSC) ದೆಹಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 7,565 ಕಾನ್‌ಸ್ಟೆಬಲ್ (ಕಾರ್ಯನಿರ್ವಾಹಕ) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
ಹುದ್ದೆಗಳ ಸಂಪೂರ್ಣ ವಿವರ
ದೆಹಲಿ ಪೊಲೀಸ್ ಇಲಾಖೆಯು ಒಟ್ಟು 7,565 ಕಾನ್‌ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಇದರಲ್ಲಿ 5,069 ಹುದ್ದೆಗಳು ಪುರುಷ ಅಭ್ಯರ್ಥಿಗಳಿಗೆ ಮತ್ತು 2,496 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿವೆ. ಮಾಜಿ ಸೈನಿಕರಿಗೂ ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು
ಅಭ್ಯರ್ಥಿಗಳು ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್ ssc.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸೆಪ್ಟೆಂಬರ್ 22ರಿಂದ ಆರಂಭವಾಗಿದೆ. ಅಕ್ಟೋಬರ್ 21 ರಾತ್ರಿ 11 ಗಂಟೆಯವರೆಗೆ ಅವಕಾಶವಿರುತ್ತದೆ. ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಅಕ್ಟೋಬರ್ 22 ಕೊನೆಯ ದಿನವಾಗಿದೆ. ಅರ್ಜಿಯಲ್ಲಿ ಏನಾದರೂ ತಪ್ಪುಗಳಾಗಿದ್ದರೆ, ಅಕ್ಟೋಬರ್ 29 ರಿಂದ 31ರವರೆಗೆ ತಿದ್ದುಪಡಿ ಮಾಡಲು ಅವಕಾಶ ನೀಡಲಾಗುತ್ತದೆ.
ಅರ್ಹತಾ ಮಾನದಂಡಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10+2 (ದ್ವಿತೀಯ ಪಿಯುಸಿ) ತೇರ್ಗಡೆಯಾಗಿರಬೇಕು. ಜುಲೈ 1, 2025ಕ್ಕೆ ಅನ್ವಯವಾಗುವಂತೆ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ಮತ್ತು ಗರಿಷ್ಠ 25 ವರ್ಷಗಳ ನಡುವೆ ಇರಬೇಕು. SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ವಿಶೇಷವಾಗಿ, ಪುರುಷ ಅಭ್ಯರ್ಥಿಗಳು ದೈಹಿಕ ಪರೀಕ್ಷೆಯ ಸಮಯದಲ್ಲಿ ಲಘು ಮೋಟಾರು ವಾಹನ (ಮೋಟಾರ್‌ಸೈಕಲ್ ಅಥವಾ ಕಾರ್) ಚಾಲನಾ ಪರವಾನಗಿಯನ್ನು ಹೊಂದಿರುವುದು ಕಡ್ಡಾಯ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಅಭ್ಯರ್ಥಿಗಳ ಆಯ್ಕೆಯು ನಾಲ್ಕು ಹಂತಗಳಲ್ಲಿ ನಡೆಯಲಿದೆ. ಮೊದಲಿಗೆ, 100 ಅಂಕಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಮತ್ತು ಮಾಪನ ಪರೀಕ್ಷೆ (PE&MT) ಇರುತ್ತದೆ. ಈ ಎರಡೂ ಹಂತಗಳಲ್ಲಿ ಯಶಸ್ವಿಯಾದ ನಂತರ, ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಮತ್ತು ಅಂತಿಮವಾಗಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ
ಕಂಪ್ಯೂಟರ್ ಆಧಾರಿತ ಪರೀಕ್ಷೆಯು 90 ನಿಮಿಷಗಳ ಅವಧಿಯದ್ದಾಗಿದ್ದು, 100 ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಪರೀಕ್ಷೆಯು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು (50 ಅಂಕಗಳು), ರೀಸನಿಂಗ್ (25 ಅಂಕಗಳು), ಸಂಖ್ಯಾತ್ಮಕ ಸಾಮರ್ಥ್ಯ (15 ಅಂಕಗಳು), ಮತ್ತು ಕಂಪ್ಯೂಟರ್ ಜ್ಞಾನ (10 ಅಂಕಗಳು) ಎಂಬ ನಾಲ್ಕು ವಿಭಾಗಗಳನ್ನು ಹೊಂದಿರುತ್ತದೆ. ಈ ಪರೀಕ್ಷೆಯು ಡಿಸೆಂಬರ್ 2025 ಅಥವಾ ಜನವರಿ 2026ರಲ್ಲಿ ನಡೆಯುವ ಸಾಧ್ಯತೆಯಿದೆ.
ಅರ್ಜಿ ಶುಲ್ಕ ಎಷ್ಟು?
ಅರ್ಜಿ ಶುಲ್ಕವನ್ನು 100 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.