ಜಾತ್ರೆಯಲ್ಲಿ ನಕ್ಕಿದ್ದ ಮಗಳು, ಪಿಜಿಯಲ್ಲಿ ಶವವಾದಳು: ವಿದ್ಯಾರ್ಥಿನಿ ಸಾವು ಹುಟ್ಟಿಸಿದ ಅನುಮಾನ
x

ಜಾತ್ರೆಯಲ್ಲಿ ನಕ್ಕಿದ್ದ ಮಗಳು, ಪಿಜಿಯಲ್ಲಿ ಶವವಾದಳು: ವಿದ್ಯಾರ್ಥಿನಿ ಸಾವು ಹುಟ್ಟಿಸಿದ ಅನುಮಾನ

ಪಿಜಿಗೆ ಬಂದ ನಂತರ, ಸಂಜೆ ಸುಮಾರು 4 ಗಂಟೆಗೆ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಇತರ ವಿದ್ಯಾರ್ಥಿನಿಯರು ಕೋಣೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಅವರ ಆತಂಕದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.


ಬಾಗಲಕೋಟೆಯ ಖಾಸಗಿ ಪಿಜಿಯೊಂದರಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಹಾಸ್ಟೆಲ್ ಸಿಬ್ಬಂದಿ "ಫಿಟ್ಸ್ ಬಂದಿದೆ" ಎಂದು ತಾಯಿಗೆ ತಪ್ಪು ಮಾಹಿತಿ ನೀಡಿರುವುದು ಸಾವಿನ ಸುತ್ತ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಊರಿನ ಜಾತ್ರೆಗೆ ಹೋಗಿ ಸಂತೋಷದಿಂದ ಮರಳಿದ್ದ ಮಗಳ ಅನಿರೀಕ್ಷಿತ ಸಾವಿಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಬೀಳಗಿ ತಾಲೂಕಿನ ಸುನಗ ತಾಂಡಾದ ನಿವಾಸಿ ಸೀಮಾ ರಾಠೋಡ (17), ಬಾಗಲಕೋಟೆಯ ವಾಗ್ದೇವಿ ಸೈನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಸೆಪ್ಟೆಂಬರ್ 25 ರಂದು, ಊರಿನ ಜಾತ್ರೆಯಲ್ಲಿ ಪಾಲ್ಗೊಂಡು ಖುಷಿಯಿಂದ ತನ್ನ ಚಿಕ್ಕಪ್ಪನ ಜೊತೆ ಪಿಜಿಗೆ ವಾಪಸಾಗಿದ್ದಳು. ಪಿಜಿಗೆ ಬಂದ ನಂತರ, ಸಂಜೆ ಸುಮಾರು 4 ಗಂಟೆಗೆ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಇತರ ವಿದ್ಯಾರ್ಥಿನಿಯರು ಕೋಣೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಅವರ ಆತಂಕದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಸಾವಿನ ಸುತ್ತ ಅನುಮಾನ

ಘಟನೆ ನಡೆದ ತಕ್ಷಣ ಹಾಸ್ಟೆಲ್ ಸಿಬ್ಬಂದಿ, ಸೀಮಾಳ ತಾಯಿ ಶಕುಂತಲಾ ಅವರಿಗೆ ಕರೆ ಮಾಡಿ "ನಿಮ್ಮ ಮಗಳಿಗೆ ಫಿಟ್ಸ್ ಬಂದಿದೆ, ಆಸ್ಪತ್ರೆಗೆ ಬನ್ನಿ" ಎಂದು ತಿಳಿಸಿದ್ದಾರೆ. ಆದರೆ, ಕುಟುಂಬಸ್ಥರು ಆಸ್ಪತ್ರೆಗೆ ಬಂದು ನೋಡಿದಾಗ ಸೀಮಾ ನೇಣು ಬಿಗಿದುಕೊಂಡಿರುವುದು ತಿಳಿದುಬಂದಿದೆ. ಸಿಬ್ಬಂದಿಯ ಈ ತಪ್ಪು ಮಾಹಿತಿಯೇ ಕುಟುಂಬಸ್ಥರ ಅನುಮಾನಕ್ಕೆ ಪ್ರಮುಖ ಕಾರಣವಾಗಿದೆ. "ನಗುನಗುತ್ತಾ ಜಾತ್ರೆ ಮುಗಿಸಿ ಬಂದ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಇದರ ಹಿಂದೆ ಬೇರೆ ಕಾರಣವಿದೆ, ನಮಗೆ ನ್ಯಾಯ ಬೇಕು" ಎಂದು ಕುಟುಂಬಸ್ಥರು ಆಕ್ರಂದನ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ತನಿಖೆ

ಸೀಮಾಳ ತಾಯಿ ಶಕುಂತಲಾ ಅವರು ಬಾಗಲಕೋಟೆ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸಾವಿಗೂ ಮುನ್ನ ಸೀಮಾ ತನ್ನ ತಾಯಿಯೊಂದಿಗೆ ಮನೆಯ ವಿಚಾರವಾಗಿ ವಾಗ್ವಾದ ನಡೆಸಿದ್ದಳು ಎಂಬ ಮಾಹಿತಿಯೂ ಲಭ್ಯವಾಗಿದ್ದು, ಆಕೆಯ ಮೇಲೆ ಯಾವುದಾದರೂ ಒತ್ತಡವಿತ್ತೇ ಅಥವಾ ಸಾವಿಗೆ ಬೇರೆ ಕಾರಣಗಳಿವೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ. ಡಿಡಿಪಿಯು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.


(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್‌: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

Read More
Next Story