/category/karnataka/high-court-stays-government-order-rss-route-march-to-proceed-smoothly-213543
x

ಕರ್ನಾಟಕ ಹೈಕೋರ್ಟ್‌ ಹಾಗೂ ಆರ್‌ಎಸ್‌ಎಸ್‌ ಪಥಸಂಚಲನ ದೃಶ್ಯ

ಸರ್ಕಾರದ ಆದೇಶಕ್ಕೆ ಹೈಕೋರ್ಟ್​ ತಡೆ, ಆರ್​ಎಸ್​ಎಸ್​ ಪಥ ಸಂಚಲನ ನಿರಾತಂಕ

ಸಂವಿಧಾನ ನೀಡಿರುವ ಮೂಲಭೂತ ಹಕ್ಕನ್ನು ಸರ್ಕಾರದ ಒಂದು ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಕೋರ್ಟ್​ ಸರ್ಕಾರದ ಆದೇಶಕ್ಕೆ ತಡೆ ನೀಡಿತು.


Click the Play button to hear this message in audio format

ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊರಡಿಸಲಾಗಿದ್ದ, "ಸಾರ್ವಜನಿಕ ಸ್ಥಳಗಳಲ್ಲಿ ಪೂರ್ವಾನುಮತಿಯಿಲ್ಲದೆ 10ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ" ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಆರ್‌ಎಸ್‌ಎಸ್‌ನ ಪಥಸಂಚಲನ ಸೇರಿದಂತೆ ಹಲವು ಸಂಘಟನೆಗಳ ಸಭೆ-ಸಮಾರಂಭಗಳಿಗೆ ಎದುರಾಗಿದ್ದ ಕಾನೂನು ಅಡಚಣೆ ತಾತ್ಕಾಲಿಕವಾಗಿ ನಿವಾರಣೆಯಾದಂತಾಗಿದೆ.

ಹುಬ್ಬಳ್ಳಿಯ 'ಪುನಶ್ಚೇತನ ಸೇವಾ ಸಂಸ್ಥೆ' ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಸರ್ಕಾರದ ಅಕ್ಟೋಬರ್ 18ರ ಆದೇಶವು ಸಂವಿಧಾನಬದ್ಧ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮೇಲ್ನೋಟಕ್ಕೆ ಅಭಿಪ್ರಾಯಪಟ್ಟು ಈ ತಡೆ ನೀಡಿದೆ.

ವಾದ-ಪ್ರತಿವಾದ ಮತ್ತು ನ್ಯಾಯಾಲಯದ ಆದೇಶ

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, “ಸರ್ಕಾರದ ಈ ಆದೇಶವು ಸಂವಿಧಾನದ 19(1)ಎ (ವಾಕ್ ಸ್ವಾತಂತ್ರ್ಯ) ಮತ್ತು 19(1)ಬಿ (ಶಾಂತಿಯುತವಾಗಿ ಸಭೆ ಸೇರುವ ಹಕ್ಕು) ವಿಧಿಗಳು ನೀಡಿರುವ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ. ಈ ಆದೇಶದ ಪ್ರಕಾರ, ಉದ್ಯಾನವನದಲ್ಲಿ ‘ನಗೆ ಕೂಟ’ ನಡೆಸಿದರೂ ಅದು ಅಕ್ರಮ ಕೂಟ ಎನಿಸಿಕೊಳ್ಳುತ್ತದೆ. ಪೊಲೀಸ್ ಕಾಯಿದೆ ಈಗಾಗಲೇ ಜಾರಿಯಲ್ಲಿರುವಾಗ ಇಂತಹ ಪ್ರತ್ಯೇಕ ಆಡಳಿತಾತ್ಮಕ ಆದೇಶದ ಅಗತ್ಯವೇನಿದೆ?” ಎಂದು ಪ್ರಶ್ನಿಸಿದರು.

ವಾದವನ್ನು ಪರಿಗಣಿಸಿದ ನ್ಯಾಯಪೀಠವು, “ಸಂವಿಧಾನ ನೀಡಿರುವ ಮೂಲಭೂತ ಹಕ್ಕನ್ನು ಸರ್ಕಾರದ ಒಂದು ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿತು. ಸರ್ಕಾರದ ವಕೀಲರು ವಾದ ಮಂಡಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ, ಗೃಹ ಇಲಾಖೆ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದ ಪೀಠ, ವಿವಾದಿತ ಆದೇಶಕ್ಕೆ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಆದೇಶದ ಹಿನ್ನೆಲೆ

ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ನಂತರ, ರಾಜ್ಯ ಸರ್ಕಾರವು ಅಕ್ಟೋಬರ್ 18ರಂದು ಹೊಸ ಆದೇಶ ಹೊರಡಿಸಿತ್ತು. ಇದರನ್ವಯ, ಯಾವುದೇ ಖಾಸಗಿ ಸಂಘ-ಸಂಸ್ಥೆಗಳು ಸರ್ಕಾರಿ ಅಥವಾ ಸಾರ್ವಜನಿಕ ಸ್ಥಳಗಳಾದ ಉದ್ಯಾನವನ, ಮೈದಾನ, ರಸ್ತೆಗಳಲ್ಲಿ ಯಾವುದೇ ಕಾರ್ಯಕ್ರಮ, ಮೆರವಣಿಗೆ ನಡೆಸಬೇಕಾದರೆ, ಸಕ್ಷಮ ಪ್ರಾಧಿಕಾರದಿಂದ (ಜಿಲ್ಲಾಧಿಕಾರಿ ಅಥವಾ ಪೊಲೀಸ್ ಕಮಿಷನರ್) ಮೂರು ದಿನ ಮುಂಚಿತವಾಗಿ ಲಿಖಿತ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿತ್ತು. 10ಕ್ಕಿಂತ ಹೆಚ್ಚು ಜನರು ಸೇರುವುದನ್ನು 'ಮೆರವಣಿಗೆ' ಎಂದು ಪರಿಗಣಿಸಲಾಗಿತ್ತು.

ಈ ಆದೇಶವನ್ನು ಬಳಸಿಕೊಂಡು, ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು

Read More
Next Story