
ಮೃತ ಪೊಲೀಸ್ ಇನ್ಸ್‌ಪೆಕ್ಟರ್ ಪಂಚಾಕ್ಷರಿ ಸಾಲಿಮಠ
ಡಿವೈಡರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು: ಹಾವೇರಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಸಜೀವ ದಹನ
ಪಂಚಾಕ್ಷರಿ ಸಾಲಿಮಠ ಅವರು ತಮ್ಮ ಐ20 ಕಾರಿನಲ್ಲಿ ಕುಟುಂಬಸ್ಥರನ್ನು ಭೇಟಿಯಾಗಲು ಗದಗ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ಅವಘಡ ನಡೆದಿದೆ. ಅಣ್ಣಿಗೇರಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಾವೇರಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಅವರು ಸಜೀವ ದಹನವಾಗಿದ್ದಾರೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದ ಪರಿಣಾಮ, ನಡುರಸ್ತೆಯಲ್ಲೇ ಕಾರು ಹೊತ್ತಿ ಉರಿದು ಈ ದುರಂತ ಸಂಭವಿಸಿದೆ.
ಪಂಚಾಕ್ಷರಿ ಸಾಲಿಮಠ ಅವರು ತಮ್ಮ ಐ20 ಕಾರಿನಲ್ಲಿ ಕುಟುಂಬಸ್ಥರನ್ನು ಭೇಟಿಯಾಗಲು ಗದಗ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ಅವಘಡ ನಡೆದಿದೆ. ಅಣ್ಣಿಗೇರಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ತೀವ್ರತೆಗೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಜ್ವಾಲೆ ಆವರಿಸಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಕಾರಿನ ಸೆಂಟ್ರಲ್ ಲಾಕ್ ಜಾಮ್ ಆಗಿದ್ದರಿಂದ ಇನ್ಸ್‌ಪೆಕ್ಟರ್ ಸಾಲಿಮಠ ಅವರು ಹೊರಬರಲಾಗದೆ ಕಾರಿನೊಳಗೆ ಸಿಲುಕಿಕೊಂಡರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ
ಕಾರು ಹೊತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಣ್ಣಿಗೇರಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದರು. ಆದರೆ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಅಗ್ನಿಶಾಮಕ ದಳ ಬರುವಷ್ಟರಲ್ಲೇ ಸಾಲಿಮಠ ಅವರು ಕಾರಿನೊಳಗೆ ಸುಟ್ಟು ಕರಕಲಾಗಿದ್ದರು.
ವಾರದ ಅಂತರದಲ್ಲಿ ಮತ್ತೊಂದು ದುರಂತ
ಕಳೆದ ವಾರವಷ್ಟೇ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ಘಟನೆಯ ಆಘಾತ ಮಾಸುವ ಮುನ್ನವೇ ರಾಜ್ಯದ ಮತ್ತೊಬ್ಬ ಅಧಿಕಾರಿ ರಸ್ತೆ ಅಪಘಾತಕ್ಕೆ ಬಲಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಮತ್ತು ಅಧಿಕಾರಿ ವರ್ಗದಲ್ಲಿ ತೀವ್ರ ಆಘಾತ ಮೂಡಿಸಿದೆ.

