
ಹಾವೇರಿ ಜಿಲ್ಲಾಸ್ಪತ್ರೆ
ಬೆಡ್ ಸಿಗದೆ ಕಾರಿಡಾರ್‌ನಲ್ಲೇ ಹೆರಿಗೆ, ನೆಲಕ್ಕೆ ಬಿದ್ದು ನವಜಾತ ಶಿಶು ಸಾವು; ಹಾವೇರಿ ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ಆಕ್ರೋಶ
ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ರೂಪಾ ಕರಬಣ್ಣನವರ (30) ಎಂಬ ಮಹಿಳೆ ತೀವ್ರ ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದರೂ ವೈದ್ಯರು ಮತ್ತು ಶುಶ್ರೂಷಕಿಯರು ನಿರ್ಲಕ್ಷ್ಯ ವಹಿಸಿದರು ಎಂದು ಆರೋಪಿಸಲಾಗಿದೆ.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಗೆ ಬೆಡ್ ಸಿಗದೇ ಕಾರಿಡಾರ್‌ನಲ್ಲೇ ಹೆರಿಗೆಯಾಗಿದ್ದು, ಸಕಾಲಿಕ ಚಿಕಿತ್ಸೆ ಸಿಗದೇ ಮಗು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಇದು ರಾಜ್ಯದ ಸರ್ಕಾರಿ ಆರೋಗ್ಯ ವ್ಯವಸ್ಥೆಯ ದುಸ್ಥಿತಿಯನ್ನು ಮತ್ತೊಮ್ಮೆ ಬಯಲು ಮಾಡಿದೆ. ಸಮರ್ಪಕ ಆರೋಗ್ಯ ಸೇವೆ ಒದಗಿಸದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ರೂಪಾ ಕರಬಣ್ಣನವರ (30) ಎಂಬ ಮಹಿಳೆಯು ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದರು. ಆದರೆ, ಬೆಡ್ ವ್ಯವಸ್ಥೆ ಇರಲಿಲ್ಲ. ತೀವ್ರ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯು ಆಸ್ಪತ್ರೆ ಕಾರಿಡಾರ್‌ನಲ್ಲಿ ಶೌಚಾಲಯಕ್ಕೆಂದು ಹೋಗುವಾಗ ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶು ನೆಲಕ್ಕೆ ಬಿದ್ದುದರಿಂದ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. ಈ ಘಟನೆಗೆ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಷಕಿಯರ ನಿರ್ಲಕ್ಷ್ಯವೇ ಕಾರಣ ಎಂದು ಗರ್ಭಿಣಿ ಕಡೆಯವರು ಆರೋಪಿಸಿದ್ದಾರೆ.
ಹೆರಿಗೆ ವಾರ್ಡ್‌ನಲ್ಲಿ ಬೆಡ್ ಕೊರತೆ
ಹೆರಿಗೆ ನೋವಿನಿಂದ ಆಸ್ಪತ್ರೆಗೆ ಧಾವಿಸಿದ ರೂಪಾ ಕರಬಣ್ಣನವರ ಅವರಿಗೆ ಬೆಡ್ ಇಲ್ಲ ಎಂದು ವೈದ್ಯರು ಹಾಗೂ ಶುಶ್ರೂಷಕಿಯರು ಹೇಳಿದ್ದರು. ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡದ ಕಾರಣ ಗರ್ಭಿಣಿಯು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನೆಲದ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ಹೆರಿಗೆ ನೋವು ಜಾಸ್ತಿಯಾಗಿ ಅವಘಡ ಸಂಭವಿಸಿತು ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಗರ್ಭಿಣಿಯು ಹೆರಿಕೆ ನೋವಿನಿಂದ ಬಳಲುತ್ತಿದ್ದರೂ ಆಸ್ಪತ್ರೆ ಸಿಬ್ಬಂದಿ ಮೊಬೈಲ್ ನೋಡುವುದರಲ್ಲಿ ಮಗ್ನರಾಗಿದ್ದರು. ಯಾರೂ ಕೂಡ ಸ್ಪಂದಿಸಲಿಲ್ಲ ಎಂದು ದೂರಲಾಗಿದೆ.
ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ
ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಆರೋಗ್ಯ ಇಲಾಖೆ ಅವ್ಯವಸ್ಥೆಯನ್ನು ಖಂಡಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಏನಾಗುತ್ತಿದೆ ಸ್ವಾಮಿ?, ನಮ್ಮ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ ಚಿಕಿತ್ಸೆಗೆ ಬರುವ ಬಡ ರೋಗಿಗಳಿಗೆ ಮಾರ್ಗದರ್ಶನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ನಿಮ್ಮ ಕಾಂಗ್ರೆಸ್ ಸರ್ಕಾರವು ಆರೋಗ್ಯ ಸೇವೆಗಳ ಶುಲ್ಕ ಹೆಚ್ಚಿಸಿದ್ದು, ಕಳಪೆ ಔಷಧ ಕೊಟ್ಟು ಗರ್ಭಿಣಿ, ಬಾಣಂತಿ ಮಹಿಳೆಯರನ್ನು ಕೊಲ್ಲುತ್ತಿದೆ. ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನಔಷಧಿ ಮಳಿಗೆಗಳನ್ನು ಮುಚ್ಚಿಸಿದ್ದೇ ನಿಮ್ಮ ಸಾಧನೆ. ಜನಸಾಮಾನ್ಯರಿಗೆ, ಬಡಬಗ್ಗರಿಗೆ ಉಪಯೋಗವಾಗುವ ಒಂದು ಕೆಲಸವನ್ನೂ ಮಾಡಲಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಟ್ಯಾಗ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ. ಆರ್. ಹಾವನೂರ ಅವರು, ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಆದರೆ, ಆಸ್ಪತ್ರೆಯಲ್ಲಿ ಮಗು ಬಿದ್ದು ಮೃತಪಟ್ಟಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ್ದಾರೆ. ಗರ್ಭಿಣಿಯ ಹೊಟ್ಟೆಯಲ್ಲಿಯೇ ಮಗು ಹಿಂದಿನ ರಾತ್ರಿಯೇ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಒಟ್ಟಾರೆ, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕರ್ತವ್ಯ ಲೋಪ ಹಾಗೂ ಆಸ್ಪತ್ರೆ ಅವ್ಯವಸ್ಥೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ.

