ಭೀಕರ ಅಪಘಾತ: ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರ ದುರ್ಮರಣ
x

ಭೀಕರ ಅಪಘಾತ: ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರ ದುರ್ಮರಣ

1974ರ ಮಾರ್ಚ್ 27ರಂದು ಜನಿಸಿದ ಮಹಾಂತೇಶ್ ಬೀಳಗಿ ಅವರು 2012ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದರು.


Click the Play button to hear this message in audio format

ರಾಜ್ಯದ ದಕ್ಷ ಹಾಗೂ ಜನಪ್ರಿಯ ಐಎಎಸ್ ಅಧಿಕಾರಿಗಳಲ್ಲೊಬ್ಬರಾದ ಮಹಾಂತೇಶ್ ಬೀಳಗಿ (51) ಅವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆ ಮಂಗಳವಾರ ಸಂಜೆ (ನ.25) ನಡೆದಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಸಂಭವಿಸಿದ ಈ ದುರ್ಘಟನೆಯಲ್ಲಿ ಮಹಾಂತೇಶ್ ಬೀಳಗಿ ಅವರ ಜೊತೆಗಿದ್ದ ಅವರ ಇಬ್ಬರು ಸಹೋದರರು ಕೂಡ ಸಾವನ್ನಪ್ಪಿದ್ದಾರೆ.

ಮಹಾಂತೇಶ್ ಬೀಳಗಿ ಮತ್ತು ಅವರ ಕುಟುಂಬದವರು ಕೆಎ04, ಎನ್​ಸಿ 7982 ಸಂಖ್ಯೆಯ ಇನ್ನೋವಾ ಕಾರಿನಲ್ಲಿ ವಿಜಯಪುರದಿಂದ ಕಲಬುರಗಿಯತ್ತ ಸಂಬಂಧಿಕರ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌನಳ್ಳಿ ಕ್ರಾಸ್ ಬಳಿ ಸಂಚರಿಸುತ್ತಿದ್ದಾಗ, ರಸ್ತೆಗೆ ಅಡ್ಡಲಾಗಿ ನಾಯಿಯೊಂದು ಬಂದಿದೆ. ಅದನ್ನು ಉಳಿಸಲು ಚಾಲಕ ಪ್ರಯತ್ನಿಸಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಅಪಘಾತದ ತೀವ್ರತೆಗೆ ಮಹಾಂತೇಶ್ ಅವರ ಸಹೋದರರಾದ ಶಂಕರ ಬೀಳಗಿ ಮತ್ತು ಈರಣ್ಣ ಶಿರಸಂಗಿ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರನ್ನು ತಕ್ಷಣವೇ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಮಹಾಂತೇಶ್​ ಕಿರುಪರಿಚಯ

1974ರ ಮಾರ್ಚ್ 27ರಂದು ಜನಿಸಿದ ಮಹಾಂತೇಶ್ ಬೀಳಗಿ ಅವರು 2012ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದರು. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೂ ಮುನ್ನ ಅವರು ಬೆಸ್ಕಾಂ (BESCOM) ವ್ಯವಸ್ಥಾಪಕ ನಿರ್ದೇಶಕರಾಗಿ, ಹಾಗೂ ದಾವಣಗೆರೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದ್ದರು.

Read More
Next Story