London-style tour to be launched in Bengaluru; Ambari bus service launched
x

 ಅಂಬಾರಿ ಡಬಲ್ ಡೆಕ್ಕರ್ ಬಸ್‌

ಬೆಂಗಳೂರಲ್ಲಿ ಇನ್ಮುಂದೆ 'ಲಂಡನ್ ಮಾದರಿ' ಪ್ರವಾಸ; ‘ಅಂಬಾರಿ’ ಬಸ್ ಸೇವೆಗೆ ಚಾಲನೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯಶಸ್ವಿಯಾಗಿರುವ ಅಂಬಾರಿ ಸೇವೆಯನ್ನು ಈಗ ರಾಜಧಾನಿಗೂ ವಿಸ್ತರಿಸಲಾಗಿದ್ದು, ಲಂಡನ್ ಮಾದರಿಯ ಈ ಬಸ್‌ಗಳು ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಿಗೆ ಹೊಸ ರೀತಿಯಲ್ಲಿ ಕರೆದೊಯ್ಯಲಿವೆ.


Click the Play button to hear this message in audio format

ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಮೆರುಗು ನೀಡಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಸಜ್ಜಾಗಿದೆ. ಪ್ರವಾಸಿಗರು ಮತ್ತು ನಗರವಾಸಿಗಳ ಬಹುನಿರೀಕ್ಷಿತ ‘ಅಂಬಾರಿ’ ಡಬಲ್ ಡೆಕ್ಕರ್ (ಹಾಪ್-ಆನ್ ಹಾಪ್-ಆಫ್) ಬಸ್ ಸೇವೆಗೆ ಜನವರಿ 21 ರಂದು (ನಾಳೆ) ಚಾಲನೆ ದೊರೆಯಲಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯಶಸ್ವಿಯಾಗಿರುವ ಅಂಬಾರಿ ಸೇವೆಯನ್ನು ಈಗ ರಾಜಧಾನಿಗೂ ವಿಸ್ತರಿಸಲಾಗಿದ್ದು, ಲಂಡನ್ ಮಾದರಿಯ ಈ ಬಸ್‌ಗಳು ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಿಗೆ ಹೊಸ ರೀತಿಯಲ್ಲಿ ಕರೆದೊಯ್ಯಲಿವೆ.

ನಾಳೆ (ಜ.21, 2026) ಬೆಳಿಗ್ಗೆ 10.30ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಈ ನೂತನ ಸೇವೆಗೆ ಹಸಿರು ನಿಶಾನೆ ತೋರಲಿದ್ದಾರೆ. ಮೊದಲ ಹಂತದಲ್ಲಿ ಮೂರು ಹೈಟೆಕ್ ಬಸ್‌ಗಳು ಸಂಚಾರ ಆರಂಭಿಸಲಿವೆ.

ಇದು ಓಪನ್ ರೂಫ್ (ತೆರೆದ ಮೇಲ್ಚಾವಣಿ) ಮಾದರಿಯ ಡಬಲ್ ಡೆಕ್ಕರ್ ಬಸ್ ಆಗಿದ್ದು, ನಗರದ ಸೌಂದರ್ಯವನ್ನು ಸವಿಯಲು ಅನುಕೂಲಕರವಾಗಿದೆ. ಬೆಂಗಳೂರಿನ ಪ್ರಮುಖ ಪಾರಂಪರಿಕ ತಾಣಗಳು, ವಿಧಾನಸೌಧ, ಮತ್ತು ಪ್ರಮುಖ ಪ್ರವಾಸಿ ಆಕರ್ಷಣೆಗಳನ್ನು ಈ ಬಸ್ ಮೂಲಕ ವೀಕ್ಷಿಸಬಹುದಾಗಿದೆ. ಅಧಿಕೃತ ದರಪಟ್ಟಿ ಇಲಾಖೆಯಿಂದ ಶೀಘ್ರದಲ್ಲೇ ಪ್ರಕಟವಾಗಲಿದ್ದು, ಮೂಲಗಳ ಪ್ರಕಾರ ಪ್ರತಿ ಟಿಕೆಟ್‌ಗೆ 250 ರಿಂದ 350 ರೂಪಾಯಿ ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಮೈಸೂರಿನ ಯಶಸ್ಸಿನ ಹೆಜ್ಜೆ

2021ರಿಂದ ಮೈಸೂರಿನಲ್ಲಿ ಅಂಬಾರಿ ಸೇವೆ ಅತ್ಯಂತ ಜನಪ್ರಿಯವಾಗಿದೆ. ದಸರಾ ಮತ್ತು ವಾರಾಂತ್ಯಗಳಲ್ಲಿ ಈ ಬಸ್‌ಗಳಿಗೆ ಭಾರಿ ಬೇಡಿಕೆ ಇರುತ್ತದೆ. ರಾಜ್ಯಾದ್ಯಂತ ಈಗಾಗಲೇ 100ಕ್ಕೂ ಹೆಚ್ಚು ಬಸ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಕೆಎಸ್​ಟಿಡಿಸಿ , ಬೆಂಗಳೂರಿನಲ್ಲಿಯೂ ಈ ಸೇವೆಯನ್ನು ಯಶಸ್ವಿಗೊಳಿಸುವ ವಿಶ್ವಾಸದಲ್ಲಿದೆ.

ಟ್ರಾಫಿಕ್ ಸವಾಲು

ಬೆಂಗಳೂರಿನ ಸಂಚಾರ ದಟ್ಟಣೆ (Traffic) ಈ ಸೇವೆಗೆ ಪ್ರಮುಖ ಸವಾಲಾಗುವ ಸಾಧ್ಯತೆಯಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಟ್ರಾಫಿಕ್ ಜಾಮ್‌ಗಳ ನಡುವೆ ಈ ಬಸ್‌ಗಳು ನಿಗದಿತ ಸಮಯದಲ್ಲಿ ಪ್ರವಾಸಿ ತಾಣಗಳನ್ನು ತಲುಪಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ. ಆದಾಗ್ಯೂ, ಪ್ರವಾಸಿಗರಿಗೆ ಇದೊಂದು ಹೊಸ ಅನುಭವವಾಗಲಿದೆ ಎಂದು ಇಲಾಖೆ ಹೇಳಿದೆ.

ಹೆಚ್ಚಿನ ಮಾಹಿತಿ ಮತ್ತು ಮುಂಗಡ ಬುಕ್ಕಿಂಗ್‌ಗಾಗಿ ಆಸಕ್ತರು KSTDCಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

Read More
Next Story