Is the Bangalore-Mysore Highway a road of death? 300 people have died in three years!
x

ಬೆಂಗಳೂರು - ಮೈಸೂರು ಹೈವೇ

ಬೆಂಗಳೂರು-ಮೈಸೂರು ಹೈವೇ ಸಾವಿನ ದಾರಿ'ಯೋ? ಮೂರು ವರ್ಷಗಳಲ್ಲಿ 300 ಮಂದಿ ಬಲಿ!

'ಸ್ಟಾರ್ ಆಫ್ ಮೈಸೂರ್' (Star of Mysore) ಪ್ರಕಟಿಸಿದ ರಸ್ತೆ ಅಪಘಾತಗಳ ವಿಶ್ಲೇಷಣಾ ವರದಿಯ ಪ್ರಕಾರ, ಮಾರ್ಚ್ 2023ರಿಂದ ಈವರೆಗೆ ಸರಾಸರಿ ಪ್ರತಿ ವರ್ಷ 87 ಜನರು ಈ ಹೆದ್ದಾರಿಯಲ್ಲಿ ಮೃತಪಟ್ಟಿದ್ದಾರೆ.


Click the Play button to hear this message in audio format

ಅಭಿವೃದ್ಧಿಯ ಸಂಕೇತವಾಗಿ ಅದ್ಧೂರಿಯಾಗಿ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275, ಮೂರು ವರ್ಷಗಳ ನಂತರ ರಾಜ್ಯದ ಪಾಲಿಗೆ ಅತ್ಯಂತ ಅಪಾಯಕಾರಿ 'ಸಾವಿನ ರಸ್ತೆ'ಯಾಗಿ ಪರಿಣಮಿಸಿದೆ. ಕಳೆದ ಮೂರು ವರ್ಷಗಳಲ್ಲಿ ಈ ಹೆದ್ದಾರಿಯಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡಿದ್ದು, 1,901 ಅಪಘಾತ ಪ್ರಕರಣಗಳು ದಾಖಲಾಗಿವೆ ಎಂಬ ಆತಂಕಕಾರಿ ಅಂಕಿಅಂಶಗಳು ಲಭ್ಯವಾಗಿವೆ.

'ಸ್ಟಾರ್ ಆಫ್ ಮೈಸೂರ್' (Star of Mysore) ಪ್ರಕಟಿಸಿದ ರಸ್ತೆ ಅಪಘಾತಗಳ ವಿಶ್ಲೇಷಣಾ ವರದಿಯ ಪ್ರಕಾರ, ಮಾರ್ಚ್ 2023ರಿಂದ ಈವರೆಗೆ ಸರಾಸರಿ ಪ್ರತಿ ವರ್ಷ 87 ಜನರು ಈ ಹೆದ್ದಾರಿಯಲ್ಲಿ ಸಾವನ್ನಪ್ಪಿದ್ದಾರೆ. 2023 ಮತ್ತು 2025ರ ನಡುವೆ ಸುಮಾರು 351 ಜನರು ಗಂಭೀರ ಸ್ವರೂಪದ ಗಾಯಗಳಿಗೆ ತುತ್ತಾಗಿದ್ದರೆ, 1,365 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದಾರೆ.

ನಿಡಘಟ್ಟ-ಮೈಸೂರು ಭಾಗವೇ 'ಡೆಡ್ಲಿ ಸ್ಪಾಟ್'

120 ಕಿ.ಮೀ ಉದ್ದದ ಈ ಹೆದ್ದಾರಿಯು ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಒಟ್ಟಾರೆ ದತ್ತಾಂಶವನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಿ ನೋಡಿದಾಗ, ಬೆಂಗಳೂರು-ನಿಡಘಟ್ಟಕ್ಕಿಂತ 'ನಿಡಘಟ್ಟ-ಮೈಸೂರು' ಭಾಗವೇ ಅತ್ಯಂತ ಅಪಾಯಕಾರಿ ಎಂದು ಸಾಬೀತಾಗಿದೆ.

ನಿಡಘಟ್ಟ-ಮೈಸೂರು (59 ಕಿ.ಮೀ) ಭಾಗದಲ್ಲಿ 948 ಅಪಘಾತಗಳು ಸಂಭವಿಸಿದ್ದು, ಬರೋಬ್ಬರಿ 163 ಮಂದಿ ಮೃತಪಟ್ಟಿದ್ದಾರೆ. 136 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಲ್ಲಿನ ಪಟ್ಟಣಗಳು ಹೆದ್ದಾರಿಯಿಂದ ದೂರವಿರುವುದರಿಂದ ಮತ್ತು ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ತಲುಪಲು ವಿಳಂಬವಾಗುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ.

ಬೆಂಗಳೂರು-ನಿಡಘಟ್ಟ (61 ಕಿ.ಮೀ) ಭಾಗದಲ್ಲಿ 953 ಅಪಘಾತಗಳು ನಡೆದಿದ್ದರೂ, ಸಾವಿನ ಸಂಖ್ಯೆ 99ಕ್ಕೆ ಸೀಮಿತವಾಗಿದೆ. ಬೆಂಗಳೂರಿನ ಸಮೀಪವಿರುವುದರಿಂದ ಆಸ್ಪತ್ರೆಗಳು ಮತ್ತು ಟ್ರಾಮಾ ಸೆಂಟರ್‌ಗಳು ಹತ್ತಿರದಲ್ಲಿವೆ. ಅಲ್ಲದೆ, ಇಲ್ಲಿ ಪೊಲೀಸ್ ಕಣ್ಗಾವಲು ಮತ್ತು ತುರ್ತು ಸ್ಪಂದನಾ ವ್ಯವಸ್ಥೆ ಉತ್ತಮವಾಗಿರುವುದು ಸಾವಿನ ಪ್ರಮಾಣ ತಗ್ಗಿರುವುದಕ್ಕೆ ಕಾರಣ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ವರ್ಷವಾರು ಅಪಘಾತಗಳ ಚಿತ್ರಣ

ಅಂಕಿಅಂಶಗಳ ಪ್ರಕಾರ, ಹೆದ್ದಾರಿ ಉದ್ಘಾಟನೆಯಾದ ಆರಂಭಿಕ ವರ್ಷವಾದ 2023ರಲ್ಲಿ ಅತ್ಯಧಿಕ ಸಾವು-ನೋವು ಸಂಭವಿಸಿತ್ತು.

2023: 797 ಅಪಘಾತಗಳು, 149 ಸಾವು.

2024: 548 ಅಪಘಾತಗಳು, 56 ಸಾವು (ಇಳಿಮುಖ).

2025: 556 ಅಪಘಾತಗಳು, 57 ಸಾವು (ಮತ್ತೆ ಏರಿಕೆ).

ದ್ವಿಚಕ್ರ ವಾಹನ ನಿಷೇಧವಿದ್ದರೂ ನಿಲ್ಲದ ಆತಂಕ

ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಈ ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನಗಳು, ಆಟೋಗಳು, ಟ್ರ್ಯಾಕ್ಟರ್‌ಗಳು ಮತ್ತು ಕೃಷಿ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ವಾಹನಗಳು ಚಲಿಸುವ ಈ ರಸ್ತೆಯಲ್ಲಿ, ನಿಧಾನಗತಿಯ ವಾಹನಗಳಿಂದ ಅಪಾಯ ಹೆಚ್ಚು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಆದರೂ, ಅಪಘಾತಗಳ ಸರಣಿ ಮುಂದುವರೆದಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2023ರಲ್ಲಿ ಲೋಕಾರ್ಪಣೆಗೊಳಿಸಿದ್ದ ಈ ಹೆದ್ದಾರಿ, ಪ್ರಯಾಣದ ಸಮಯವನ್ನು ತಗ್ಗಿಸಿದ್ದೇನೋ ನಿಜ. ಆದರೆ, ಅಷ್ಟೇ ವೇಗದಲ್ಲಿ ಜನರ ಪ್ರಾಣವನ್ನೂ ತೆಗೆಯುತ್ತಿರುವುದು ವ್ಯವಸ್ಥೆಯ ಲೋಪಗಳಿಗೆ ಕನ್ನಡಿ ಹಿಡಿದಿದೆ.

Read More
Next Story