Understand our problems too: Employees union unhappy with Minister Krishna Byre Gowda
x

ಸಚಿವ ಕೃಷ್ಣಬೈರೇಗೌಡ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ

'ನಮ್ಮ ಸಮಸ್ಯೆಗಳನ್ನೂ ಅರ್ಥ ಮಾಡಿಕೊಳ್ಳಿ': ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ನೌಕರರ ಸಂಘ ಅಸಮಾಧಾನ

ಜನಪ್ರತಿನಿಧಿಗಳಿಗೆ ಮತ್ತು ನಾಗರಿಕರಿಗೆ ಆವೇಶ ಇರುವುದು ಸಹಜ. ಆದರೆ, ನಮ್ಮ ಸಮಸ್ಯೆಗಳನ್ನೂ ನೀವು ಗಮನಿಸಬೇಕು ಎಂದು ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರು ಹೇಳಿದ್ದಾರೆ.


Click the Play button to hear this message in audio format

ಸಾರ್ವಜನಿಕವಾಗಿ ಸರ್ಕಾರಿ ನೌಕರರನ್ನು ತರಾಟೆಗೆ ತೆಗೆದುಕೊಳ್ಳುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಧೋರಣೆ ವಿರುದ್ಧ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನೌಕರರ ಮೇಲೂ ಒತ್ತಡವಿದೆ, ನಮ್ಮ ಕಷ್ಟಗಳನ್ನೂ ಅರ್ಥ ಮಾಡಿಕೊಳ್ಳಿ," ಎಂದು ಅವರು ಸಚಿವರು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ದ ಫೆಡರಲ್ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಷಡಾಕ್ಷರಿ, "ಜನಪ್ರತಿನಿಧಿಗಳಿಗೆ ಮತ್ತು ನಾಗರಿಕರಿಗೆ ಆವೇಶ ಇರುವುದು ಸಹಜ. ಆದರೆ, ನಮ್ಮ ಸಮಸ್ಯೆಗಳನ್ನೂ ನೀವು ಗಮನಿಸಬೇಕು. ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಇಬ್ಬರು ಮಾಡುವ ಕೆಲಸವನ್ನು ಒಬ್ಬರೇ ನಿರ್ವಹಿಸುತ್ತಿದ್ದೇವೆ. ಕಂದಾಯ ಇಲಾಖೆಯೊಂದರಲ್ಲೇ ಶೇ.40ರಷ್ಟು ಹುದ್ದೆಗಳು ಖಾಲಿ ಇವೆ. ನಿಮ್ಮ ತಪ್ಪುಗಳನ್ನು ಇಟ್ಟುಕೊಂಡು ನಮ್ಮ ತಪ್ಪುಗಳನ್ನು ಮಾತ್ರ ಎತ್ತಿ ತೋರಿಸುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದ್ದಾರೆ.

ಮೂಲಭೂತ ಸೌಕರ್ಯಗಳ ಕೊರತೆ

ಸರ್ಕಾರಿ ನೌಕರರಿಗೆ ಖಾಸಗಿ ಕಂಪನಿಗಳಂತೆ ತರಬೇತಿ, ಸಂಬಳ ಅಥವಾ ಸೌಲಭ್ಯಗಳಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. "ಐಎಎಸ್ ಅಧಿಕಾರಿಗಳಿಗೆ ಎರಡು ವರ್ಷ, ಕೆಎಎಸ್ ಅಧಿಕಾರಿಗಳಿಗೆ ಆರು ತಿಂಗಳು ತರಬೇತಿ ನೀಡಲಾಗುತ್ತದೆ. ಆದರೆ, 'ಗ್ರೂಪ್ ಸಿ' ನೌಕರರಿಗೆ ಯಾವುದೇ ಟ್ರೈನಿಂಗ್ ಇಲ್ಲದೆ ನೇರವಾಗಿ ಕೆಲಸಕ್ಕೆ ಹಾಕಲಾಗುತ್ತದೆ. ಸರಿಯಾದ ತರಬೇತಿ ನೀಡದೆ, ಮೂಲಭೂತ ಸೌಕರ್ಯ ಒದಗಿಸದೆ ಕೇವಲ ಬೈದರೆ ಹೇಗೆ?" ಎಂದು ಅವರು ಸಚಿವರನ್ನು ಪ್ರಶ್ನಿಸಿದ್ದಾರೆ.

ನೆಟ್‌ವರ್ಕ್ ಸಮಸ್ಯೆ, ಕ್ವಾರ್ಟರ್ಸ್ ಕೊರತೆ ಸೇರಿದಂತೆ ಅನೇಕ ಸವಾಲುಗಳ ಮಧ್ಯೆ ನೌಕರರು ಕೆಲಸ ಮಾಡುತ್ತಿದ್ದಾರೆ. "ನೌಕರರು ಹೆಡ್‌ಕ್ವಾರ್ಟರ್ಸ್‌ನಲ್ಲೇ ಇರಬೇಕು ಎಂಬ ಕಾನೂನಿದೆ. ಆದರೆ, ಅಲ್ಲಿ ಉಳಿಯಲು ಸರಿಯಾದ ಕ್ವಾರ್ಟರ್ಸ್ ಇದೆಯೇ? ಬಾಡಿಗೆ ಮನೆಗಳು ಸಿಗುತ್ತಿವೆಯೇ? ಇನ್ಫ್ರಾಸ್ಟ್ರಕ್ಚರ್ ಸರಿ ಇದೆಯೇ ಎಂಬುದನ್ನು ಮೊದಲು ನೋಡಬೇಕಲ್ಲವೇ?" ಎಂದು ಷಡಾಕ್ಷರಿ ಸರ್ಕಾರದ ಗಮನ ಸೆಳೆದರು.

ತೆರಿಗೆ ಸಂಗ್ರಹದಲ್ಲಿ ರಾಜ್ಯ ಮುಂದು

ಇಷ್ಟೆಲ್ಲಾ ಸವಾಲುಗಳಿದ್ದರೂ, ನೌಕರರು ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪವನ್ನು ಅವರು ತಳ್ಳಿಹಾಕಿದರು. "ರಾಜ್ಯದ 6.5 ಕೋಟಿ ಜನಸಂಖ್ಯೆಗೆ ಕೇವಲ 5.12 ಲಕ್ಷ ನೌಕರರಿದ್ದಾರೆ. ಆದರೂ, ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲೇ ಟಾಪ್-1 ಅಥವಾ ಟಾಪ್-2 ಸ್ಥಾನದಲ್ಲಿದೆ. ಕೆಲಸ ಮಾಡದೆ ಇದು ಸಾಧ್ಯವಾಗುತ್ತದೆಯೇ?" ಎಂದು ಅವರು ಮರುಪ್ರಶ್ನೆ ಹಾಕಿದರು.

ಸಾರ್ವಜನಿಕರಿಗೆ ಮನವಿ

ಸಾರ್ವಜನಿಕರು ಕೂಡ ನೌಕರರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು ಎಂದು ಅವರು ಮನವಿ ಮಾಡಿದರು. "ನಮ್ಮಲ್ಲೂ ಕೆಲವೊಂದು ವ್ಯತ್ಯಾಸಗಳಿರಬಹುದು, ಎಲ್ಲರೂ ಶೇ.100 ರಷ್ಟು ಸರಿ ಇದ್ದಾರೆ ಎಂದು ನಾನು ಹೇಳುವುದಿಲ್ಲ. ಸಮಸ್ಯೆಗಳಿದ್ದರೆ ಕೆಳಹಂತದ ಅಧಿಕಾರಿಗಳಾದ ತಹಸೀಲ್ದಾರ್, ಎಸಿ ಅಥವಾ ಡಿಸಿ ಅವರಿಗೆ ದೂರು ನೀಡಿ. ಆದರೆ ಎಲ್ಲರೂ ಮೈಮೇಲೆ ಬರುವಂತಹ ವರ್ತನೆ ಸರಿಯಲ್ಲ," ಎಂದು ಷಡಾಕ್ಷರಿ ಹೇಳಿದರು.ಹುದ್ದೆಗಳ ನೇಮಕಾತಿಯಾದರೆ ನೌಕರರ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಸರ್ಕಾರ ಮೊದಲು ಮೂಲಭೂತ ಸೌಕರ್ಯಗಳನ್ನು ಒದಗಿಸಿ, ನಂತರ ಪ್ರಶ್ನೆ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.

ʼದ ಫೆಡರಲ್ ಕರ್ನಾಟಕʼಕ್ಕೆ ಸಿ.ಎಸ್‌. ಷಡಾಕ್ಷರಿ ನೀಡಿರುವ ಸಂದರ್ಶನ ಇಲ್ಲಿದೆ.

Read More
Next Story