
ಸಿದ್ದರಾಮಯ್ಯ ಸರ್ಕಾರದ 'ರಿಪೋರ್ಟ್ ಕಾರ್ಡ್': ರಾಜ್ಯಪಾಲರು ಓದದ ಭಾಷಣದ ವಿವರ ಇಲ್ಲಿದೆ
ರಾಜ್ಯದ ಸರ್ವತೋಮುಖ ಅಭಿವೃದ್ಧಿ ಸಂಬಂಧ ಹತ್ತಾರು ಇತರೆ ಪ್ರಮುಖ ಯೋಜನೆಗಳು ಮತ್ತು ಪ್ರಸ್ತಾವನೆಗಳನ್ನು ಉಲ್ಲೇಖಿಸಲಾಗಿದೆ. ಬರಗಾಲದ ನಡುವೆಯೂ ರೈತರಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ ಎಂದು ಭಾಷಣದಲ್ಲಿ ತಿಳಿಸಲಾಗಿದೆ.
ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಂಪೂರ್ಣ ಭಾಷಣ ಮಾಡದಿದ್ದರೂ ಅವರ ಭಾಷಣದ ಪ್ರತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳ ರಿಪೋರ್ಟ್ ಕಾರ್ಡ್‌ನಂತಿದ್ದು, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧದ ಸಮರ ಸಾರಿರುವುದು ಸ್ಪಷ್ಟವಾಗಿದೆ.
ಗ್ಯಾರಂಟಿ ಯೋಜನೆಗಳ ಮಹತ್ವ ಮತ್ತು 'ವಿಬಿಜಿ ರಾಮ್ ಜಿ' ಯೋಜನೆಯ ವಿವಾದದ ಹೊರತಾಗಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ಇತರೆ ಪ್ರಮುಖ ಯೋಜನೆಗಳು ಮತ್ತು ಪ್ರಸ್ತಾವನೆಗಳನ್ನು ಉಲ್ಲೇಖಿಸಲಾಗಿದೆ. ರಾಜ್ಯದ ಆರ್ಥಿಕ ಶಕ್ತಿ, ಗ್ಯಾರಂಟಿ ಯೋಜನೆಗಳ ಯಶಸ್ಸು ಮತ್ತು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಅಂಕಿ-ಅಂಶಗಳ ಸಮೇತ ವಿವರಿಸಲಾಗಿದೆ. ಅಲ್ಲದೇ, ಡಿಜಿಟಲ್ ಕರ್ನಾಟಕ ಮತ್ತು ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಸರ್ಕಾರವು ಡಿಜಿಟಲ್ ವೇದಿಕೆಗಳನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬುದರ ಕುರಿತು ವಿವರಿಸಲಾಗಿದೆ.
ಕೇಂದ್ರದ ನೀತಿಯ ಉಲ್ಲೇಖ
ರಾಜ್ಯಪಾಲರ ಭಾಷಣವು ರಾಜ್ಯ ಸರ್ಕಾರದ ಪ್ರಗತಿಪರ ನಿಲುವನ್ನು ಎತ್ತಿಹಿಡಿಯುವುದರ ಜೊತೆಗೆ, ಕೇಂದ್ರದ ನೀತಿಗಳು ರಾಜ್ಯದ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಕನ್ನಡಿ ಹಿಡಿದಿದೆ. ಇದು ಕೇವಲ ಒಂದು ವರ್ಷದ ಸಾಧನೆಯ ವರದಿಯಲ್ಲದೆ, ಮುಂದಿನ ದಿನಗಳಲ್ಲಿ ಕೇಂದ್ರ-ರಾಜ್ಯದ ನಡುವೆ ನಡೆಯಲಿರುವ ರಾಜಕೀಯ ಮತ್ತು ಆರ್ಥಿಕ ಸಂಘರ್ಷದ ದಿಕ್ಸೂಚಿಯಂತಿದೆ. ಕರ್ನಾಟಕವು ದೇಶದ ಆರ್ಥಿಕತೆಗೆ ಶಕ್ತಿಯಾಗಿದ್ದರೂ, ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕವಾಗಿ ರಾಜ್ಯಕ್ಕೆ ದಮನಕಾರಿ ಪರಿಸ್ಥಿತಿ ಎದುರಾಗಿದೆ. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ ಸುಮಾರು 1.25 ಲಕ್ಷ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಕೇಂದ್ರ ಸರ್ಕಾರವು ವಿಶೇಷ ಅನುದಾನಗಳನ್ನು ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಕೇಂದ್ರದ ನಡೆಯನ್ನು ವಿರೋಧಿಸಲಾಗಿದೆ. ಕೇಂದ್ರ ಸರ್ಕಾರವು ಮನರೇಗಾವನ್ನು ಹಂತಹಂತವಾಗಿ ರದ್ದುಗೊಳಿಸಿ, ಅದರ ಬದಲಿಗೆ ತರುತ್ತಿರುವ 'ವಿಬಿಜಿ ರಾಮ್ ಜಿ' ಯೋಜನೆಯು ಬಂಡವಾಳಶಾಹಿಗಳ ಹಿತಾಸಕ್ತಿ ಕಾಯುವ ಉದ್ದೇಶ ಹೊಂದಿದೆ ಎಂದು ಟೀಕಿಸಲಾಗಿದೆ. ಹೊಸ ಯೋಜನೆಯು ಪಂಚಾಯತ್ ರಾಜ್ ವ್ಯವಸ್ಥೆಯ ಅಧಿಕಾರವನ್ನು ಕಿತ್ತುಕೊಂಡು ಕೇಂದ್ರದ ಆಧಿಪತ್ಯ ಸ್ಥಾಪಿಸಲು ಯತ್ನಿಸುತ್ತಿದೆ. ಇದು ಗಾಂಧೀಜಿಯವರ 'ಗ್ರಾಮ ಸ್ವರಾಜ್ಯ'ಕ್ಕೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರ ತನ್ನ ನಿಲುವನ್ನು ರಾಜ್ಯಪಾಲರ ಮೂಲಕ ಸ್ಪಷ್ಟಪಡಿಸಿದೆ.
ರೈತರ ನೆರವಿಗೆ ಬದ್ಧ
ಬರಗಾಲದ ನಡುವೆಯೂ ರೈತರಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ ಎಂದು ಭಾಷಣದಲ್ಲಿ ತಿಳಿಸಲಾಗಿದೆ. ರಾಜ್ಯವು ತನ್ನ ಸ್ವಂತ ಸಂಪನ್ಮೂಲದಿಂದ ರೈತರ ಖಾತೆಗಳಿಗೆ ಹಣ ಜಮೆ ಮಾಡಿದೆ. ಕೇಂದ್ರದಿಂದ ಬರಬೇಕಾದ ಬರ ಪರಿಹಾರಕ್ಕೆ ಇನ್ನೂ ಕಾಯಲಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಮತ್ತು ಮಹದಾಯಿ ಯೋಜನೆಗೆ ಅನುಮತಿ ನೀಡುವಂತೆ ಒತ್ತಾಯಿಸಲಾಯಿತು. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿದ 5,300 ಕೋಟಿ ರೂ. ಇನ್ನೂ ಬಿಡುಗಡೆಯಾಗಿಲ್ಲ. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದ ನಗರವನ್ನಾಗಿ ಮಾಡಲು 'ಬ್ರಾಂಡ್ ಬೆಂಗಳೂರು' ಅಡಿ ಹಲವು ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಮೆಟ್ರೋ ಹಂತ-3ಕ್ಕೆ ಅನುಮೋದನೆ ಮತ್ತು ಉಪನಗರ ರೈಲು ಯೋಜನೆಗೆ ವೇಗ ನೀಡಲಾಗುತ್ತಿದೆ. ಸ್ಕೈಡೆಕ್ ನಿರ್ಮಾಣ, ಪೆರಿಫೆರಲ್ ರಿಂಗ್ ರೋಡ್ ಮತ್ತು ಟನಲ್ ರಸ್ತೆಗಳ ಮೂಲಕ ಸಂಚಾರ ದಟ್ಟಣೆ ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂಬುದನ್ನು ಉಲ್ಲೇಖಿಸಲಾಗಿದೆ. ದಲಿತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಪದವಿ ಪೂರ್ವ ಹಂತದವರೆಗೂ ಉಚಿತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯನ್ನು ಆಧುನೀಕರಿಸಲಾಗುತ್ತಿದೆ. ದ್ವೇಷದ ಭಾಷಣ ಮತ್ತು ಸಮಾಜದಲ್ಲಿ ಅಶಾಂತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಘೋಷಿಸಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ಹಸ್ತಪ್ರತಿಗಳ ದಾಖಲೀಕರಣ
ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಸ್ತಪ್ರತಿಗಳ ದಾಖಲೀಕರಣ, ಸಂರಕ್ಷಣೆ ಮತ್ತು ಡಿಜಿಟಲೀಕರಣಕ್ಕಾಗಿ ಕರ್ನಟಕ ಹಸ್ತಪ್ರತಿಗಳ ಪ್ರಾಧಿಕಾರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಸ್ಮಾರಕ ಮತ್ತು ಪ್ರಾಚ್ಯಾವಶೇಷಗಳನ್ನು ದಾಖಲೀಕರಣಗೊಳಿಸುವಲ್ಲಿ ರಾಜ್ಯವು ದೇಶದಲ್ಲಿಯೇ ಮೊದಲ ರಾಜ್ಯವಾಗಿದೆ. ಐತಿಹಾಸಿಕ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ಹೊಸ ನೀತಿ ಜಾರಿ ಮಾಡಲಾಗಿದ್ದು, ಗಿಗ್ ವರ್ಕರ್ಸ್ ಕಲ್ಯಾಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಸ್ವಿಗ್ಗಿ, ಜೊಮ್ಯಾಟೋ ಅಂತಹ ಡೆಲಿವರಿ ಬಾಯ್ಸ್ ಮತ್ತು ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಹೊಸ ಕಾಯ್ದೆ ಜಾರಿ ಮಾಡಲಾಗಿದೆ.
ಸ್ಥಗಿತಗೊಂಡಿದ್ದ ಕೃಷಿ ಭಾಗ್ಯ ಯೋಜನೆಯನ್ನು ಪುನಶ್ಚೇತನಗೊಳಿಸಿ, ಕೃಷಿ ಹೊಂಡಗಳ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ ನೀಡಲಾಗಿದೆ. ಆಧುನಿಕ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆಗೆ ನೀಡಲು ಪ್ರತಿ ಜಿಲ್ಲೆಯಲ್ಲಿ ಹಬ್‌ಗಳ ಸ್ಥಾಪನೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ನೂತನ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆಗೆ 40 ಕೋಟಿ ರೂ. ಮೀಸಲಿಡಲಾಗಿದ್ದು, ರೈತರಿಗೆ ಬಿತ್ತನೆ ಬೀಜದಿಂದ ಮಾರುಕಟ್ಟೆಯವರೆಗೆ ನೆರವಾಗಲು ಹೊಸ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಭಿವೃದ್ಧಿ ಮಾಡಲಾಗಿದೆ.
ಹಲವು ಇಲಾಖೆಯಲ್ಲಿ ಡಿಜಿಟಲ್ ಕ್ರಾಂತಿ
ರಾಜ್ಯ ಸರ್ಕಾರವು ಹಲವು ಇಲಾಖೆಯಲ್ಲಿ ಡಿಜಿಟಲ್ ಕ್ರಾಂತಿಯನ್ನು ಮಾಡಿದೆ. ಗ್ರಾಮೀಣ ಭಾಗದ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ, ಪಾರದರ್ಶಕವಾಗಿ ಆಸ್ತಿ ನೋಂದಣಿ ಮಾಡಲು 'ಇ-ಸ್ವತ್ತು 2.0' ತಂತ್ರಜ್ಞಾನವನ್ನು ಜಾರಿಗೆ ತರಲಾಗಿದೆ. ಕಂದಾಯ ನ್ಯಾಯಾಲಯಗಳ ಪ್ರಕರಣಗಳ ನಿರ್ವಹಣೆಗಾಗಿ ಡಿಜಿಟಲ್ ತಂತ್ರಾಂಶ ಬಳಸಲಾಗುತ್ತಿದ್ದು, ಇದು ಪ್ರಕರಣಗಳ ವಿಳಂಬವನ್ನು ತಪ್ಪಿಸಲಿದೆ.ರೈತರಿಗೆ ಮಧ್ಯವರ್ತಿಗಳ ಕಾಟ ತಪ್ಪಿಸಲು ತಂತ್ರಜ್ಞಾನವನ್ನು ಅಸ್ತ್ರವಾಗಿ ಬಳಸಲಾಗಿದೆ. ರೇಷ್ಮೆ ಮಾರುಕಟ್ಟೆಗಳಲ್ಲಿ ಸಂಪೂರ್ಣ ನಗದು ರಹಿತ ಡಿಜಿಟಲ್ ವಹಿವಾಟು ಮತ್ತು ಇ-ಹರಾಜು ಪ್ರಕ್ರಿಯೆಯನ್ನು ಜಾರಿಗೆ ತರಲಾಗಿದೆ. ಇದರಿಂದ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುತ್ತಿದೆ.
ರೈತರಿಗೆ ಹೊಸ ಇ ಕಾಮರ್ಸ್
ರೈತರು ತಮ್ಮ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಹೊಸ ಇ-ಕಾಮರ್ಸ್ ಫ್ಲಾಟ್‌ಫಾರಂ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿನ ವಿಳಂಬ ಮತ್ತು ಭ್ರಷ್ಟಾಚಾರ ತಡೆಯಲು ಡಿಜಿಟಲ್ ವ್ಯವಸ್ಥೆ ಅಳವಡಿಸಲಾಗಿದೆ. ಸರ್ಕಾರಿ ಕಾಮಗಾರಿಗಳ ಬಿಲ್‌ಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಲು ಮತ್ತು ಪಾವತಿಸಲು ಈ ಮಾಡ್ಯೂಲ್ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಗುತ್ತಿಗೆದಾರರು ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ರಾಜ್ಯದ ಬಹುತೇಕ ಸರ್ಕಾರಿ ಇಲಾಖೆಗಳನ್ನು ಕಾಗದ ರಹಿತ ಕಚೇರಿಗಳನ್ನಾಗಿ ಮಾಡಲು ಇ-ಆಫೀಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ.
ಮುಂದಿನ ಪೀಳಿಗೆಯನ್ನು ಡಿಜಿಟಲ್ ಯುಗಕ್ಕೆ ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ. ಮೈಕ್ರೋಸಾಫ್ಟ್ ಮತ್ತು ಇತರ ಕಂಪನಿಗಳ ಸಹಯೋಗದೊಂದಿಗೆ ಕಾಲೇಜುಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಮತ್ತು ಗುಣಮಟ್ಟದ ಮೇಲೆ ನಿಗಾ ಇಡಲು 'ಫೇಸ್ ರೆಕಗ್ನಿಷನ್' ತಂತ್ರಜ್ಞಾನ ಆಧರಿತ 'ನಿರಂತರ' ಎಂಬ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಅತ್ಯಾಧುನಿಕ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ಸುಮಾರು 1.16 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಡಿಜಿಟಲ್ ಮೂಲಕವೇ ವಿತರಿಸಲಾಗಿದೆ ಎಂಬುದಾಗಿ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಲಾಗಿದೆ.

