
ವಯೋಮಿತಿ ಹೆಚ್ಚಳ ಹಾಗೂ ನೇಮಕಾತಿ ಮಾಡುವಂತೆ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು
ನೇಮಕಾತಿ ವಯೋಮಿತಿ 5 ವರ್ಷ ಹೆಚ್ಚಳ ಸಂಪುಟ ಅಸ್ತು; ಆಕಾಂಕ್ಷಿಗಳ ಕಣ್ಣೊರಿಸಿದ ಸರ್ಕಾರ!
ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದ್ದು, 2027 ಡಿಸೆಂಬರ್ 31 ರವರೆಗೆ ಹೊರಡಿಸಲಾಗುವ ಎಲ್ಲಾ ಅಧಿಸೂಚನೆಗಳಿಗೆ ಐದು ವರ್ಷ ವಯೋಮಿತಿ ಹೆಚ್ಚಳ ಅನ್ವಯವಾಗಲಿದೆ ಎಂದು ತಿಳಿಸಿದೆ.
ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಗೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಹಾಗೂ ಮೂರು ವರ್ಷಗಳಿಂದ ನೇಮಕಕ್ಕೆ ಕಾಯುತ್ತಿದ್ದವರ ಕಣ್ಣೊರೆಸುವ ತಂತ್ರ ಅನುಸರಿಸಿದೆ.
ಗುರುವಾರ(ಜ.22) ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದ್ದು, 2027 ಡಿಸೆಂಬರ್ 31 ರವರೆಗೆ ಹೊರಡಿಸಲಾಗುವ ಎಲ್ಲಾ ಅಧಿಸೂಚನೆಗಳಿಗೆ ಐದು ವರ್ಷ ವಯೋಮಿತಿ ಹೆಚ್ಚಳ ಅನ್ವಯವಾಗಲಿದೆ ಎಂದು ತಿಳಿಸಿದೆ. ಕಳೆದ ಮೂರು ವರ್ಷಗಳಿಂದ ಯಾವುದೇ ನೇಮಕಗಳನ್ನು ನಡೆಸದ ಸರ್ಕಾರ ಕೇವಲ ಒಳ ಮೀಸಲಾತಿಯನ್ನು ನೀಡುವ ಸಲುವಾಗಿಯೇ ಅಧಿಸೂಚನೆಗಳನ್ನು ಮುಂದೂಡುತ್ತಿದ್ದು, ಲಕ್ಷಾಂತರ ಯುವಕರ ಕೆಂಗೆಣ್ಣಿಗೆ ಗುರಿಯಾಗಿದೆ.
ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗಳ ಪೈಕಿ 28 ಸಾವಿರ ಹುದ್ದೆಗಳಿಗೆ ನೇಮಕ ಮಾಡುವಂತೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಆದರೆ ರಾಜ್ಯ ಸರ್ಕಾರದ ಶೇ. 56 ಮೀಸಲಾತಿ ಹಾಗೂ ಒಳ ಮೀಸಲಾತಿ ಗೊಂದಲದಿಂದ ಕೆಲವು ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿರುವುದೂ ಹೊಸ ಅಧಿಸೂಚನೆ ಹೊರಡಿಸಲು ಅಡ್ಡಿಯಾಗಿದೆ.
ವಯೋಮಿತಿ ಎಷ್ಟಿದೆ ?
ರಾಜ್ಯದಲ್ಲಿ ಸಿವಿಲ್ ಸೇವಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು, ಹಿಂದುಳಿದ ವರ್ಗಗಳಿಗೆ 38 ವರ್ಷಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಿದೆ. ಇದೀಗ ಐದು ವರ್ಷ ವಯೋಮಿತಿ ಸಡಿಲಿಕೆ ಮಾಡಿರುವುದರಿಂದ ಎಲ್ಲಾ ವರ್ಗದ ಸ್ಪರ್ಧಾತ್ಮಕ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.
ಮೂರು ವರ್ಷ ಸಡಿಲಿಕೆ ನೀಡಿದ್ದ ಸರ್ಕಾರ
ಕೋವಿಡ್ ಹಾಗೂ ಒಳ ಮೀಸಲಾತಿ ಕಾರಣದಿಂದ ಸರ್ಕಾರವು ಸರಿಯಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಆದ್ದರಿಂದ ಸರ್ಕಾರ ಕನಿಷ್ಠ ಐದು ವರ್ಷ ವಯೋಮಿತಿ ಸಡಿಲಿಕೆ ಮಾಡಬೇಕು ಎಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಸರ್ಕಾರ ಸೆಪ್ಟಂಬರ್ 29ರಂದು ಮೂರು ವರ್ಷ ಸಡಿಲಿಕೆ ಮಾಡಿ ಆದೇಶ ಹೊರಡಿಸಿತ್ತು.
ಐದು ವರ್ಷ ವಯೋಮಿತಿ ಸಡಿಲಿಕೆಗೆ ಆಗ್ರಹಸಿದ್ದ ವಿದ್ಯಾರ್ಥಿಗಳು
ರಾಜ್ಯ ಸರ್ಕಾರ ಈ ಹಿಂದೆ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಿದ ನಂತರ ಸ್ಪರ್ಧಾರ್ಥಿಗಳು ಹಲವಾರು ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿ ರಾಜ್ಯ ಸಿವಿಲ್ ಸೇವೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡುವಂತೆ ಕೋರಿದ್ದರು. ಈ ಎಲ್ಲಾ ಮನವಿಗಳನ್ನು ಸರ್ಕಾರ ಪರಿಶೀಲಿಸಿ ಒಂದು ಬಾರಿಗೆ ಮಾತ್ರ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಿತ್ತು.

