ಒಳ ಮೀಸಲು ರಕ್ಷಣೆಗೆ ಮಸೂದೆ; ಆದರೂ ಬಗೆಹರಿಯದ ಗೊಂದಲ, ಅಲೆಮಾರಿಗಳಿಂದ ಕಾನೂನು‌ ಸಮರ ತೀವ್ರ
x

ನೇಮಕಾತಿಗೆ ಆಗ್ರಹಿಸಿ ಧಾರವಡದಲ್ಲಿ ಪ್ರತಿಭಟನೆ ನಡೆಸಿದ್ದ ಯುವ ಸಮುದಾಯ

ಒಳ ಮೀಸಲು ರಕ್ಷಣೆಗೆ ಮಸೂದೆ; ಆದರೂ ಬಗೆಹರಿಯದ ಗೊಂದಲ, ಅಲೆಮಾರಿಗಳಿಂದ ಕಾನೂನು‌ ಸಮರ ತೀವ್ರ

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಅಭ್ಯರ್ಥಿಗಳು ತಮ್ಮ ತಯಾರಿಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಆರ್ಥಿಕ ಇಲಾಖೆ ಅನುಮತಿ ನೀಡಿರುವ 24,300 ಹುದ್ದೆಗಳಿಗೆ ಆದಷ್ಟು ಶೀಘ್ರವೇ ನೇಮಕ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.


ರಾಜ್ಯ ಸರ್ಕಾರ ʼಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗೀಕರಣ)ವಿಧೇಯಕ ಜಾರಿಗೊಳಿಸುವ ಮೂಲಕ ಒಳ ಮೀಸಲಾತಿಗೆ ಕಾನೂನು ರಕ್ಷಣೆ ನೀಡಲು ಮುಂದಾಗಿದೆ. ಆದರೆ, ಒಳ ಮೀಸಲು ಮಸೂದೆಗೂ ಅಲೆಮಾರಿ ಸಮುದಾಯಗಳ ಆಕ್ಷೇಪ ವ್ಯಕ್ತವಾಗಿರುವುದರಿಂದ ಗೊಂದಲಗಳು ಮುಂದುವರಿದಿವೆ.

ಒಳ ಮೀಸಲು ಮಸೂದೆಗೆ ರಾಜ್ಯ ಸರ್ಕಾರವೇನೋ ಬೆಳಗಾವಿ ಅಧಿವೇಶನದಲ್ಲಿ ಅಂಗೀಕಾರ ಪಡೆದುಕೊಂಡಿದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಸರ್ಕಾರಿ ನೌಕರಿಯ ಆಸೆ ಮತ್ತೆ ಚಿಗುರಿದೆ. ಈ ಮಧ್ಯೆ ಪ್ರತ್ಯೇಕ ಮೀಸಲಾತಿ ನಿಗದಿಗೆ ಬೇಡಿಕೆ ಇಟ್ಟು ಕಾನೂನು ಸಮರ ನಡೆಸುತ್ತಿರುವ ಅಲೆಮಾರಿ ಸಮುದಾಯಗಳು ಹೊಸ ಮಸೂದೆಯನ್ನೂ ನ್ಯಾಯಾಲಯದ ಅಂಗಳಕ್ಕೆ ಎಳೆಯಲು ನಿರ್ಧರಿಸಿರುವುದು ಆತಂಕ ಮೂಡಿಸಿದೆ. ರಾಜ್ಯ ಸರ್ಕಾರ ಸುಲಭವಾಗಿ ಇತ್ಯರ್ಥವಾಗುತ್ತಿದ್ದ ಒಳ ಮೀಸಲಾತಿ ಜಾರಿಯನ್ನು ರಾಜಕೀಯ ಲಾಭದ ಕಾರಣಕ್ಕಾಗಿ ಕಗ್ಗಂಟಾಗಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ವಿಧೇಯಕವನ್ನು ರಾಜ್ಯಪಾಲರ ಸಹಿಗೆ ಕಳುಹಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ಬೆನ್ನಲ್ಲೇ ಆರ್ಥಿಕ ಇಲಾಖೆ 24,300 ಹುದ್ದೆಗಳಿಗೆ ನೇಮಕಕ್ಕೆ ಅನುಮತಿ ನೀಡಿದ್ದು, ಅಧಿಸೂಚನೆಯ ನಿರೀಕ್ಷೆಯಲ್ಲಿ ಸ್ಪರ್ಧಾರ್ಥಿಗಳು ಕಾಯುತ್ತಿದ್ದಾರೆ.

ಕೋವಿಡ್‌, ಒಳ ಮೀಸಲಾತಿ ಸೇರಿದಂತೆ ಹಲವು ಕಾರಣಕ್ಕಾಗಿ ಕಳೆದ ಮೂರು ವರ್ಷದಿಂದ ಸರ್ಕಾರ ಯಾವುದೇ ನೇಮಕಾತಿ ನಡೆಸಿಲ್ಲ. ಆಗಸ್ಟ್‌ನಲ್ಲಿ ಒಳ ಮೀಸಲಾತಿ ಘೋಷಣೆಯಾಗಿ ಒಂದು ಬಾರಿಗೆ ಅನ್ವಯವಾಗುವಂತೆ ವಯೋಮಿತಿ ಹೆಚ್ಚಿಸಿದರೂ ಸರ್ಕಾರ ಯಾವುದೇ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿಲ್ಲ. ಇದರಿಂದ ಸಾವಿರಾರು ಸ್ಪರ್ಧಾರ್ಥಿಗಳು ವಯೋಮಿತಿ ಮೀರುವ ಹಂತದಲ್ಲಿದ್ದಾರೆ.

ಸರ್ಕಾರದ ವಿರುದ್ದ ಹೋರಾಟ

ರಾಜ್ಯದಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳಿಗೆ ಹಂತ ಹಂತವಾಗಿ ಅರ್ಜಿ ಆಹ್ವಾನಿಸಿ ನೇಮಕ ಮಾಡಬೇಕು. ಕಳೆದ ಮೂರು ವರ್ಷಗಳಿಂದ ಯಾವುದೇ ಅಧಿಸೂಚನೆ ಹೊರಡಿಸದ ಕಾರಣ ಸ್ಪರ್ಧಾರ್ಥಿಗಳು ಆರ್ಥಿಕ ಹಾಗೂ ಮಾನಸಿಕವಾಗಿ ನೊಂದಿದ್ದಾರೆ. ವಯೋಮಿತಿಯನ್ನು ಐದು ವರ್ಷಗಳವರೆಗೆ ಹೆಚ್ಚಿಸಬೇಕು ಎಂದು ಸಾವಿರಾರು ವಿದ್ಯಾರ್ಥಿಗಳು ಧಾರವಾಡ, ಕೊಪ್ಪಳ, ವಿಜಯಪುರ ಹಾಗೂ ಕಲಬುರಗಿಯಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.

ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ?

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, "ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 50,000 ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಆರ್ಥಿಕ ಇಲಾಖೆಯಿಂದ ಹಲವು ನೇಮಕಾತಿಗಳಿಗೆ ಅನುಮೋದನೆ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಸರ್ಕಾರದ ಆದ್ಯತೆಯಾಗಿದೆ. ಈ ಭಾಗದ ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಒಟ್ಟು ಖಾಲಿ ಇರುವ ಹುದ್ದೆಗಳ ಭರ್ತಿಗೆ ವಿಶೇಷ ಗಮನ ಹರಿಸಲಾಗುವುದು" ಎಂದು ಹೇಳಿದ್ದರು.

ವಿದ್ಯಾರ್ಥಿಗಳಲ್ಲಿ ಗರಿಗೆದರಿದ ಆಸೆ

ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ʼಕರ್ನಾಟಕ ಅನುಸೂಚಿತ ಜಾತಿಗಳು(ಉಪ ವರ್ಗೀಕರಣ)ವಿಧೇಯಕʼವನ್ನು ಮಂಡಿಸುವ ಮೂಲಕ ಒಳ ಮೀಸಲಾತಿಗೆ ಸರ್ಕಾರ ಶಾಸನದ ಬಲವನ್ನು ನೀಡಿದ್ದು, ಒಳ ಮೀಸಲಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಉತ್ತರ ನೀಡಿದ್ದರು. ಈ ವಿಧೇಯಕವು ಬಡ್ತಿ ಹಾಗೂ ಬ್ಯಾಕ್‌ಲಾಗ್‌ಗೂ ಅನ್ವಯವಾಗುತ್ತದೆ ಎಂದು ತಿಳಿಸಿರುವುದರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಲ್ಲಿ ಉದ್ಯೋಗದ ಆಸೆ ಚಿಗುರೊಡೆದಿದೆ.

ಯಾವ್ಯಾವ ಇಲಾಖೆಯಲ್ಲಿವೆ ಖಾಲಿ ಹುದ್ದೆ

ರಾಜ್ಯ ಸರ್ಕಾರದಲ್ಲಿ ಸುಮಾರು 2.76 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಬಹುತೇಕ ಎಲ್ಲಾ ಇಲಾಖೆಗಳಲ್ಲೂ ಶೇ.50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕಾದ ಒತ್ತಡದಲ್ಲಿ ನೌಕರರಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿದೆ. ರಾಜ್ಯದಲ್ಲಿ ʼಎʼ ದರ್ಜೆಯ 16,017 ಹುದ್ದೆಗಳು . ʼಬಿʼ ದರ್ಜೆಯ 16,734 ಹುದ್ದೆಗಳು . ʼಸಿʼ ದರ್ಜೆಯ 1,66,021 ಹುದ್ದೆಗಳು . ʼಡಿʼ ದರ್ಜೆಯ 77,614 ಹುದ್ದೆಗಳು ಖಾಲಿ ಇವೆ. ಗೃಹ ಇಲಾಖೆಯಲ್ಲಿ 26,168, ಕಂದಾಯ ಇಲಾಖೆಯಲ್ಲಿ11,145, ಪಶು ಸಂಗೋಪನೆ ಇಲಾಖೆಯಲ್ಲಿ 10,755, ಸಮಾಜ ಕಲ್ಯಾಣ ಇಲಾಖೆಯಲ್ಲಿ 9,980, ಆರ್ಥಿಕ ಇಲಾಖೆ 9,536, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,334, ಕಾನೂನು ಇಲಾಖೆಯಲ್ಲಿ 7,853, ಕೃಷಿ ಇಲಾಖೆಯಲ್ಲಿ 6,773, ಅರಣ್ಯ ಇಲಾಖೆಯಲ್ಲಿ 6,337 ಸೇರಿದಂತೆ ವಿವಿಧ ಇಲಾಖೆಯಲ್ಲಿ 2.76 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.

ಆರ್ಥಿಕ ಇಲಾಖೆ ಅನುಮತಿ ನೀಡಿರುವ ಹುದ್ದೆಗಳು ಎಷ್ಟು ?

ಕೃಷಿ, ಪಶುಸಂಗೋಪನೆ, ಕಂದಾಯ, ಒಳಾಡಳಿತ, ವಸತಿ, ಕಾರ್ಮಿಕ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತ ಪಂಚಾಯತ್‌ ರಾಜ್‌ ಸೇರಿದಂತೆ ವಿವಿಧ ಇಲಾಖೆಗಳ ಗ್ರೂಪ್‌-ಎ 562, ಗ್ರೂಪ್‌-ಬಿ 619, ಗ್ರೂಪ್‌ ಸಿ-23,119 ಒಟ್ಟು 24,300 ಹುದ್ದೆಗಳನ್ನು ಭರ್ತಿ ಮಾಡುವಂತೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಆದರೆ ರಾಜ್ಯ ಸರ್ಕಾರ ಇಲ್ಲಿಯವರೆಗೂ ಒಳ ಮೀಸಲಾತಿ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಅಧಿಸೂಚನೆಯನ್ನು ಮುಂದೂಡುತ್ತಲೇ ಇದೆ ಎಂದು ಸ್ಪರ್ಧಾರ್ಥಿಗಳು ಆರೋಪಿಸಿದ್ದಾರೆ.

ಸುಪ್ರೀಂ ಆದೇಶ ಪಾಲನೆಯಲ್ಲಿ ಸರ್ಕಾರ ವಿಫಲ

ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಘದ ರಾಜ್ಯಾಧ್ಯಕ್ಷ ಸಂತೋಷ್‌ ಮರೂರು ಮಾತನಾಡಿ "ಪರಿಶಿಷ್ಟ ಜಾತಿಯಲ್ಲಿ ತೀರಾ ಹಿಂದುಳಿದವರ ನಿಖರ ದತ್ತಾಂಶ ಸಂಗ್ರಹಿಸಿ, ಒಳ ಮೀಸಲು ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು 2024 ಆಗಸ್ಟ್‌ನಲ್ಲಿ ಆದೇಶ ನೀಡಿತ್ತು. ಆದರೆ ರಾಜ್ಯ ಸರ್ಕಾರ ನಿಖರ ದತ್ತಾಂಶ ಸಂಗ್ರಹಿಸಿ ಗೊಂದಲ ರಹಿತ ಒಳ ಮೀಸಲಾತಿ ನೀಡಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಮೂರು ವರ್ಷ ಕಳೆದರೂ ಹೊಸ ಅಧಿಸೂಚನೆ ಹೊರಡಿಸಲು ಸರ್ಕಾರ ವಿಳಂಬ ಮಾಡುತ್ತಿದೆ. ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಮಾನಸಿಕವಾಗಿ ಕುಗ್ಗುತ್ತಿದ್ದು, ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ನೇಮಕಾತಿಗಳು ನಡೆಯುತ್ತಿಲ್ಲ ಎಂದು ಇತ್ತೀಚೆಗೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತಷ್ಟು ಅವಘಡಗಳು ಆಗುವ ಮೊದಲು ಸರ್ಕಾರ ಶೀಘ್ರವೇ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಬೇಕು" ಎಂದು ಆಗ್ರಹಿಸಿದರು.

ಚುನಾವಣೆಗೂ ಮುನ್ನ ಅಧಿಸೂಚನೆಯಾಗಲಿ

ಡಿಸೆಂಬರ್‌ ಅಂತ್ಯಕ್ಕೆ ಗ್ರಾಮ ಪಂಚಾಯಿತಿ ಚುನಾಯಿತ ಮಂಡಳಿ ಅಧಿಕಾರ ಮುಕ್ತಾಯವಾಗಲಿದ್ದು, 5,958 ಗ್ರಾಪಂಗಳ ಚುನಾವಣೆ ನಡೆಯಬೇಕು. ಇದರ ಜೊತೆಗೆ ಫೆಬ್ರವರಿಗೆ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಮತ್ತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಸಲು ಸರ್ಕಾರ ಸಿದ್ದತೆ ನಡೆಸಿದೆ. ಒಂದು ವೇಳೆ ಜಿಲ್ಲಾ, ತಾಲೂಕು ಪಂಚಾಯತ್‌ ಚುನಾವಣೆ ಜತೆಗೆ ಗ್ರಾಮ ಪಂಚಾಯತ್‌ ಚುನಾವಣೆಯೂ ಬಂದರೆ ನೀತಿ ಸಂಹಿತೆ ಬರಲಿದ್ದು, ನೇಮಕಾತಿಗೆ ತೊಡಕಾಗುವ ಸಾಧ್ಯತೆ ಇದೆ. ಆದ್ದರಿಂದ ಚುನಾವಣೆಗೂ ಮುನ್ನ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ಚಿಕ್ಕಮಗಳೂರಿನ ಸ್ಪರ್ಧಾರ್ಥಿ ದರ್ಶನ್‌ ಇ.ಜೆ. ಅಭಿಪ್ರಾಯಪಟ್ಟರು.

ಮಾನಸಿಕವಾಗಿ ಜರ್ಜರಿತರಾದ ಸ್ಪರ್ಧಾರ್ಥಿಗಳು

ಗ್ರೂಪ್‌ ʼಸಿʼ ಹುದ್ದೆಗ ತಯಾರಿ ನಡೆಸುತ್ತಿರುವ ಹನುಮಂತರಾಜು ಆರ್‌. ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, ಕೋವಿಡ್‌ ಕಾರಣದಿಂದ ರಾಜ್ಯ ಸರ್ಕಾರ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಕೇವಲ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು ಹಾಗೂ 384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಆದರೆ ಪೊಲೀಸ್‌ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಸ್‌ಡಿಎ, ಎಫ್‌ಡಿಎ ಹುದ್ದೆ ಸೇರಿದಂತೆ ಸಾವಿರಾರು ಗ್ರೂಪ್‌-ಸಿ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ.

ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ ಬೆಂಗಳೂರಿನಲ್ಲಿ ಲಕ್ಷಾಂತರ ಸ್ಪರ್ಧಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ಧಾರೆ. ಒಂದು ತಿಂಗಳಿಗೆ ಕನಿಷ್ಠ 10 ಸಾವಿರ ರೂ. ಖರ್ಚಾಗುತ್ತಿದೆ. ಎಲ್ಲರೂ ಮಧ್ಯಮ ಹಾಗೂ ಬಡ ಕುಟುಂಬದಿಂದ ಬಂದಿರುವುದರಿಂದ ಪ್ರತಿ ತಿಂಗಳೂ ಮನೆಯವರ ಬಳಿ ಹಣ ಕೇಳಲು ಸಾಧ್ಯವಿಲ್ಲ. ಹಲವಾರು ವಿದ್ಯಾರ್ಥಿಗಳು ಅರೆಕಾಲಿಕ ಉದ್ಯೋಗ ಮಾಡಿಕೊಂಡು ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಆದರೆ ಸರ್ಕಾರ ನೇಮಕಾತಿ ಅಧಿಸೂಚನೆ ಹೊರಡಿಸದಿರುವುದರಿಂದ ಸ್ಪರ್ಧಾರ್ಥಿಗಳು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ ಎಂದು ತಿಳಿಸಿದರು.

Read More
Next Story