
ವಿಧಾನ ಪರಿಷತ್ ಮಾಜಿ ಸಭಾಪತಿ ಎನ್. ತಿಪ್ಪಣ್ಣ ನಿಧನ
ವಕೀಲರಾಗಿದ್ದ ಎನ್. ತಿಪ್ಪಣ್ಣ ಅವರು ಹಲವು ವರ್ಷಗಳ ಕಾಲ ಕಾನೂನು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ನಂತರ ರಾಜಕೀಯ ಪ್ರವೇಶಿಸಿದರು. ಅವರು ನಾಲ್ಕು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು.
ರಾಜ್ಯ ರಾಜಕಾರಣದಲ್ಲಿ ಹಾಗೂ ವೀರಶೈವ ಸಮಾಜದಲ್ಲಿ ಮಹತ್ವದ ಸ್ಥಾನ ಗಳಿಸಿದ್ದ, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ ಅವರು 97ನೇ ವಯಸ್ಸಿನಲ್ಲಿ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ತಿಪ್ಪಣ್ಣ ಅವರಿಗೆ ಒಬ್ಬ ಪುತ್ರ ಇದ್ದು, ಕುಟುಂಬದ ಸದಸ್ಯರು ಅವರ ಅಂತ್ಯಸಂಸ್ಕಾರವನ್ನು ನಾಳೆ, ಅಂದರೆ ಶನಿವಾರ, ಅವರ ಹುಟ್ಟೂರಾದ ಚಿತ್ರದುರ್ಗ ಜಿಲ್ಲೆಯ ತುರವಿನೂರಿನಲ್ಲಿ ನೆರವೇರಿಸಲು ನಿರ್ಧರಿಸಿದ್ದಾರೆ. ಪ್ರಸ್ತುತ, ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ಬಳ್ಳಾರಿಯ ನಿವಾಸದಲ್ಲಿ ಇರಿಸಲಾಗಿದೆ.
ವಕೀಲರಾಗಿದ್ದ ಎನ್. ತಿಪ್ಪಣ್ಣ ಅವರು ಹಲವು ವರ್ಷಗಳ ಕಾಲ ಕಾನೂನು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ನಂತರ ರಾಜಕೀಯ ಪ್ರವೇಶಿಸಿದರು. ಅವರು ನಾಲ್ಕು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿ, ರಾಜ್ಯದ ಶಾಸನಸಭೆಯಲ್ಲಿ ಸಕ್ರಿಯರಾಗಿದ್ದರು. ಅಲ್ಲದೆ, ವಿರೋಧ ಪಕ್ಷದ ಉಪ ನಾಯಕರಾಗಿ ಮತ್ತು ಅಲ್ಪಾವಧಿಗೆ ವಿಧಾನ ಪರಿಷತ್ತಿನ ಸಭಾಪತಿಯಾಗಿ ಕೂಡಾ ಸೇವೆ ಸಲ್ಲಿಸಿದ್ದರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ನಿಕಟವರ್ತಿಗಳಾಗಿದ್ದ ತಿಪ್ಪಣ್ಣ, ಜನತಾದಳದಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕೆಲವೊಮ್ಮೆ ಸೋಲನ್ನು ಅನುಭವಿಸಿದ್ದರು. ಜೆಡಿಯು ಪಕ್ಷದಲ್ಲಿ ಸಕ್ರಿಯರಾಗಿದ್ದ ಅವರು, ಪಕ್ಷವನ್ನು ಜೆಡಿಎಸ್‌ಗೆ ವಿಲೀನಗೊಳಿಸಿದ ನಂತರ ಜೆಡಿಎಸ್‌ನ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು.
ಸಮಾಜ ಸೇವೆ ಹಾಗೂ ವೀರಶೈವ ಮಹಾಸಭಾದ ಕೊಡುಗೆ
ರಾಜಕೀಯದ ಜೊತೆಗೆ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲೂ ತಿಪ್ಪಣ್ಣ ಅವರ ಕೊಡುಗೆ ಅಪಾರ. 2012ರಲ್ಲಿ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮುನ್ನ, ಮಹಾಸಭಾದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿ ಸಂಘಟನೆಗೆ ಶಕ್ತಿ ತುಂಬಿದ್ದರು. ಬಳ್ಳೂರಿನ ಪ್ರಖ್ಯಾತ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಹಾಗೂ ಇತರ ಹುದ್ದೆಗಳಲ್ಲಿ ಬರೋಬ್ಬರಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರ ಈ ಸೇವೆಗಳು ಸಮಾಜದಲ್ಲಿ ಅವರ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದ್ದವು