
ಕರ್ನಾಟಕ ಹೈಕೋರ್ಟ್
ವೀರಶೈವ -ಲಿಂಗಾಯತ ಜಂಗಮರು ಬುಡ್ಗ ಅಥವಾ ಬೇಡ ಜಂಗಮರಲ್ಲ: ಹೈಕೋರ್ಟ್ ತೀರ್ಪು
ಬೇಡ ಮತ್ತು ಬುಡ್ಗ ಜಂಗಮರ ಇತಿಹಾಸವನ್ನು ಪರಿಶೀಲಿಸಿರುವ ಕೋರ್ಟ್ ಇತಿಹಾಸಕಾರರು ಮತ್ತು ಮಾನವಶಾಸ್ತ್ರಜ್ಞರ ದಾಖಲೆಗಳನ್ನು ಉಲ್ಲೇಖಿಸಿ ಮಹತ್ವದ ತೀರ್ಪು ನೀಡಿದೆ.
ವೀರಶೈವ-ಲಿಂಗಾಯತ ಜಂಗಮರು ಬೇಡ ಅಥವಾ ಬುಡ್ಗ ಜಂಗಮರಲ್ಲ ಎಂದು ಹೈಕೋರ್ಟ್ ಕಲಬುರಗಿ ಪೀಠ ಮಹತ್ವದ ಆದೇಶ ನೀಡಿದ್ದು, ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದು ಮೀಸಲಾತಿ ದುರ್ಬಳಕೆ ಮಾಡಿಕೊಳ್ಳದಂತೆ ನಿರ್ಬಂಧ ಹೇರಿದೆ.
ಈ ಕುರಿತು ವೀರಶೈವ ಸಮುದಾಯದಲ್ಲಿನ ಜಂಗಮ ವರ್ಗದ ವೃತ್ತಾಂತ, ಬೇಡ ಮತ್ತು ಬುಡ್ಗ ಜಂಗಮರ ಇತಿಹಾಸ ಪರಿಶೀಲಿಸಿರುವ ಕೋರ್ಟ್, ಇತಿಹಾಸ ತಜ್ಞ ಬಿ.ಎಲ್.ರೈಸ್ ಮತ್ತು ಮಾನವಶಾಸ್ತ್ರಜ್ಞರ ದಾಖಲೆಗಳನ್ನು ಉಲ್ಲೇಖಿಸಿ ಈ ಆದೇಶ ಪ್ರಕಟಿಸಿದೆ.
ಲಿಂಗಾಯಿತರಲ್ಲಿನ ಜಂಗಮರೇ ಬೇರೆ, ಬುಡ್ಗ ಅಥವಾ ಬೇಡ ಜಂಗಮರೇ ಬೇರೆ ಎಂದು ನ್ಯಾ. ಸುನೀಲ್ ದತ್ ಯಾದವ್ ಹಾಗೂ ನ್ಯಾ. ರಾಮಚಂದ್ರ ಡಿ. ಹುದ್ದಾರ್ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ಇದರಿಂದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ನಡೆಯುತ್ತಿರುವ ಒಳ ಮೀಸಲಾತಿಯಲ್ಲಿ ನಮಗೂ ನಿರ್ಧಿಷ್ಟ ಮೀಸಲು ನೀಡಬೇಕು ಎಂದು ವೀರಶೈವ ಲಿಂಗಾಯತ ಬೇಡ ಜಂಗಮರು ಕೋರಿಕೆಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ.
ಬುಡ್ಗ ಜಂಗಮರೆಂದರೆ ಯಾರು ?
ಬುಡ್ಗ ಅಥವಾ ಬೇಡ ಜಂಗಮರು ಅಲೆಮಾರಿಗಳಾಗಿದ್ದು ಅವರು ರಾಜ್ಯದ ಆಂಧ್ರ ಗಡಿ ಭಾಗದ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ. ಮೂಲತಃ ಆಂಧ್ರದಿಂದ ಅವರು ವಲಸೆ ಬಂದು ಮಾಂಸ ಹಾಗೂ ಮದ್ಯ ಸೇವನೆ ಮಾಡುತ್ತಾ, ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದರು. ಆದರೆ, ಈಗ ಅಂತಹ ಬೇಡ ಜಂಗಮರಿಲ್ಲ ಎಂದು ಇತ್ತೀಚೆಗೆ ಮಾಜಿ ಸಚಿವ ಹೆಚ್. ಆಂಜನೇಯ ತಿಳಿಸಿದ್ದರು.
ಏನಿದು ಪ್ರಕರಣ?
ಬೀದರ್‌ನ ರವೀಂದ್ರ ಸ್ವಾಮಿ ಎಂಬುವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಅವರ ಶಾಲಾ ದಾಖಲಾತಿಗಳಲ್ಲೂ ನಮೂದಾಗಿದೆ. ರವೀಂದ್ರ ಸ್ವಾಮಿ ಅವರ ಸಹೋದರ ಹಾಗೂ ಸಹೋದರಿಯ ಶಾಲಾ ದಾಖಲಾತಿಗಳಲ್ಲೂ ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂದು ನಮೂದಾಗಿದೆ. ಆದರೆ, ಕುಟುಂಬದ ಒಬ್ಬರು ಮಾತ್ರ ಬೇಡ ಜಂಗಮರ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದರು.
2016ರಲ್ಲಿ ರವೀಂದ್ರ ಸ್ವಾಮಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ತಹಶೀಲ್ದಾರ್ ಅವರು ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದರು.
ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ರವೀಂದ್ರ ಸ್ವಾಮಿ ಮೇಲ್ಮನವಿ ಸಲ್ಲಿಸಿದ್ದರು. ನಂತರ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದರು. ಆದರೆ ಅವರಿಗೆ ಹಿನ್ನೆಡೆಯಾಗಿತ್ತು. ನಂತರ ಸುಪ್ರೀಂ ಏಕಸದಸ್ಯ ಪೀಠವು ಬೀದರ್ ಜಿಲ್ಲಾ ಪರಿಶೀಲನಾ ಸಮಿತಿಗೆ ಮರು ಪರಿಶೀಲಿಸುವಂತೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್ ವೀರಶೈವ ಲಿಂಗಾಯತ ಜಂಗಮರು ಬೇಡ ಅಥವಾ ಬುಡ್ಗ ಜಂಗಮರಲ್ಲ ಎಂದು ತೀರ್ಪು ನೀಡಿದೆ.