
No To Child Pregnancy: ಅಪ್ರಾಪ್ತೆಯರ ರಕ್ಷಣೆಗೆ ಚಲನಚಿತ್ರ ರಂಗದ ಸಾಥ್: "ಮಗಳೇ ಎಚ್ಚರ" ಅಭಿಯಾನಕ್ಕೆ ಸಾಧು ಕೋಕಿಲ ಬೆಂಬಲ
ಅಪ್ರಾಪ್ತ ಹೆಣ್ಣುಮಕ್ಕಳು ಮುಗ್ಧರು, ಅವರಿಗೆ ಪ್ರಪಂಚದ ಅರಿವಿರುವುದಿಲ್ಲ. ಅವರನ್ನು ದುರುಪಯೋಗಪಡಿಸಿಕೊಳ್ಳುವುದು ಅಕ್ಷಮ್ಯ ಅಪರಾಧ,'' ಎಂದು ಸಾಧು ಕೋಕಿಲ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಆತಂಕಕಾರಿ ಬೆಳವಣಿಗೆಯ ಹಿನ್ನೆಲೆಯಲ್ಲಿ, ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಚಲನಚಿತ್ರ ರಂಗವು ಮುಂದಾಗಿದೆ. 'ದ ಫೆಡರಲ್ ಕರ್ನಾಟಕ' ನಡೆಸುತ್ತಿರುವ "ಮಗಳೇ ಎಚ್ಚರ" ಎಂಬ ವಿಶೇಷ ಸರಣಿ ವರದಿಯ ಹಿನ್ನೆಲೆಯಲ್ಲಿ ಮಾತನಾಡಿದ ಖ್ಯಾತ ನಟ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸಾಧು ಕೋಕಿಲ ಅವರು ಈ ಸಾಮಾಜಿಕ ಹೋರಾಟಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.
'ದ ಫೆಡರಲ್ ಕರ್ನಾಟಕ' ರಾಜ್ಯದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತ ವಯಸ್ಸಿನ ಗರ್ಭಧಾರಣೆಯ ಗಂಭೀರ ಸಮಸ್ಯೆಯನ್ನು ಸಮಾಜದ ಮುಂದಿಡುವ ಉದ್ದೇಶದಿಂದ "ಮಗಳೇ ಎಚ್ಚರ" ಎಂಬ ಸರಣಿ ವರದಿಗಳನ್ನು ಪ್ರಕಟಿಸುತ್ತಿದೆ. ಈ ವರದಿಗಳು, ಸಮಸ್ಯೆಯ ಆಳ, ಅದರ ಹಿಂದಿನ ಸಾಮಾಜಿಕ ಕಾರಣಗಳು, ಕಾನೂನಾತ್ಮಕ ಅಂಶಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಬೆಳಕು ಚೆಲ್ಲುತ್ತಿವೆ. ಈ ಮೂಲಕ ಸಮಾಜದ ವಿವಿಧ ಸ್ತರಗಳಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಕಾರ್ಯಪ್ರವೃತ್ತರನ್ನಾಗಿಸುವುದು ಈ ಸರಣಿಯ ಮುಖ್ಯ ಉದ್ದೇಶವಾಗಿದೆ.
ಚಲನಚಿತ್ರ ಅಕಾಡೆಮಿಯಿಂದ ಜಾಗೃತಿ ಅಭಿಯಾನ
"ಅಪ್ರಾಪ್ತ ಹೆಣ್ಣುಮಕ್ಕಳು ಮುಗ್ಧರು, ಅವರಿಗೆ ಪ್ರಪಂಚದ ಅರಿವಿರುವುದಿಲ್ಲ. ಅವರನ್ನು ದುರುಪಯೋಗಪಡಿಸಿಕೊಳ್ಳುವುದು ಅಕ್ಷಮ್ಯ ಅಪರಾಧ,'' ಎಂದು ಸಾಧು ಕೋಕಿಲ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಗಂಭೀರ ಸಮಸ್ಯೆಯ ಬಗ್ಗೆ ಶಾಲೆಗಳಲ್ಲಿ ಮತ್ತು ಸಮಾಜದ ಇತರ ವೇದಿಕೆಗಳಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ನಿಟ್ಟಿನಲ್ಲಿ, ಕರ್ನಾಟಕ ಚಲನಚಿತ್ರ ಅಕಾಡೆಮಿಯು ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
"ನಾವು ಚಲನಚಿತ್ರ ಕಲಾವಿದರನ್ನು ಬಳಸಿಕೊಂಡು ವಿಶೇಷ ವಿಡಿಯೋಗಳನ್ನು ನಿರ್ಮಿಸಿ, ಸಾಮಾಜಿಕ ಜಾಲತಾಣಗಳು ಮತ್ತು ಇತರ ಮಾಧ್ಯಮಗಳ ಮೂಲಕ ಪ್ರಸಾರ ಮಾಡಿ ಜಾಗೃತಿ ಮೂಡಿಸಲಿದ್ದೇವೆ. ಹೆಣ್ಣುಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ," ಎಂದು ಸಾಧು ಕೋಕಿಲ ಹೇಳಿದ್ದಾರೆ.