Dharmasthala case; SIT report to be submitted by the end of the month
x

ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥ ಪ್ರಣಬ್‌ ಮೊಹಂತಿ

ಧರ್ಮಸ್ಥಳ ಪ್ರಕರಣ|ಮೂರ್ನಾಲ್ಕು ದಿನದಲ್ಲಿ ಎಸ್‌ಐಟಿಯಿಂದ ಅಂತಿಮ ವರದಿ

ಅಕ್ಟೋಬರ್ ತಿಂಗಳಲ್ಲಿ ವರದಿ ಕೊಡುವುದಾಗಿ ಎಸ್‌ಐಟಿ ಅಧಿಕಾರಿಗಳು ಹೇಳಿದ್ದರು. ಅ. 31ರೊಳಗೆ ಕೊಡಬಹುದು ಅಥವಾ ಒಂದೆರಡು ದಿನ ವಿಳಂಬವಾಗಬಹುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಧರ್ಮಸ್ಥಳ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದೆ. ಮೂರ್ನಾಲ್ಕು ದಿನದಲ್ಲಿ ವರದಿ ಕೈ ಸೇರಲಿದ್ದು, ತೀವ್ರ ಕುತೂಹಲ ಕೆರಳಿಸಿದೆ. ತನಿಖಾ ವರದಿಯನ್ನು ವಿಶೇಷ ತನಿಖಾ ತಂಡವು(ಎಸ್‌ಐಟಿ) ಅ.31 ರೊಳಗೆ ಸಲ್ಲಿಸಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಲ್ಲಿ ವರದಿ ನೀಡುವುದಾಗಿ ಎಸ್‌ಐಟಿ ಅಧಿಕಾರಿಗಳು ಹೇಳಿದ್ದರು. ಅ. 31ರೊಳಗೆ ಕೊಡಬಹುದು ಅಥವಾ ಒಂದೆರಡು ದಿನ ವಿಳಂಬವಾಗಬಹುದು. ಧರ್ಮಸ್ಥಳದಲ್ಲಿ ಪತ್ತೆಯಾಗಿರುವ ಮೂಳೆಗಳ ಎಫ್‌ಎಸ್‌ಎಲ್ ವರದಿ, ಕೆಮಿಕಲ್ ರಿಪೋರ್ಟ್ಸ್ ವಿಶ್ಲೇಷಣೆಯೂ ವರದಿಯಲ್ಲಿ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದರು.

ಏನಿದು ಪ್ರಕರಣ ?

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಕುರಿತು ಅನಾಮಿಕ ಜುಲೈ 11ರಂದು ಬೆಳ್ತಂಗಡಿಯ ಜೆಎಂಎಫ್‌ಸಿ (JMFC) ನ್ಯಾಯಾಲಯದ ಮುಂದೆ ಹಾಜರಾಗಿ ಬಿಎನ್‌ಎಸ್‌ಎಸ್‌ ಸೆಕ್ಷನ್ 183 ರಡಿ ಹೇಳಿಕೆ ದಾಖಲಿಸಿದ್ದ. ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಪೊಲೀಸರು ತನಿಖೆಗೆ ಮುಂದಾಗಿದ್ದರು. ಪ್ರಕರಣ ಗಂಭೀರವಾಗಿರುವುದರಿಂದ ಎಸ್‌ಐಟಿಗೆ ವಹಿಸಬೇಕು ಎಂದು ವಕೀಲರ ಸಂಘ, ಮಹಿಳಾ ಆಯೋಗ ಹಾಗೂ ಪ್ರಗತಿಪರ ವೇದಿಕೆಗಳು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ ಪರಿಣಾಮ ಜು.19ರಂದು ರಾಜ್ಯ ಸರ್ಕಾರ ಹಿರಿಯ ಐಪಿಎಸ್‌ ಅಧಿಕಾರಿ ಪ್ರಣವ್‌ ಮೊಹಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಆದೇಶಿಸಿತ್ತು.

ಹಲವು ಸ್ಥಳ ಗುರುತು

ಅನಾಮಿಕ ವ್ಯಕ್ತಿ ಶವಗಳನ್ನು ಹೂತಿಟ್ಟಿರುವ ಜಾಗಗಳನ್ನು ಗುರುತಿಸಿದ್ದು, ಸುಮಾರು 13 ಸ್ಥಳಗಳನ್ನು ಶೋಧ ಕಾರ್ಯ ನಡೆಸಲಾಯಿತು. ನೇತ್ರಾವತಿ ನದಿಯ ಸ್ನಾನಘಟ್ಟದಲ್ಲಿ ಮೊದಲು ಕಳೇಬರ ಹೊರ ತೆಗೆಯುವ ಕೆಲಸ ನಡೆಸಲಾಗಿತ್ತು. ದೂರು ಸಾಕ್ಷಿದಾರ ಗುರುತಿಸಿದ 6 ನೇ ಜಾಗದಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆಯಾಗಿತ್ತು. ಅಸ್ಥಿಪಂಜರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಮೊದಲ ಐದು ಜಾಗಗಳಲ್ಲಿ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ತದನಂತರ ಬಂಗ್ಲೆಗುಡ್ಡದಲ್ಲಿಯೂ ಮಾನವನ ಅಸ್ಥಿಪಂಜರ ಪತ್ತೆಯಾಗಿತ್ತು.

ಬಿಜೆಪಿ-ಜೆಡಿಎಸ್‌ನಿಂದ ಧರ್ಮಸ್ಥಳ ಯಾತ್ರೆ

ಧರ್ಮಸ್ಥಳದ ಮೇಲೆ ಹಲವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಧರ್ಮಸ್ಥಳಕ್ಕೆ ಕಾರುಗಳ ಮೂಲಕ ʼಧರ್ಮಸ್ಥಳ ಚಲೋʼ ಮಾಡಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಆದರೆ ಧಾರ್ಮಿಕ ಸ್ಥಳದ ಬಗ್ಗೆ ಅಪಪ್ರಚಾರ ನಡೆಸಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.

ಅಧಿವೇಶನದಲ್ಲಿ ಚರ್ಚೆ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅಧಿವೇಶನದಲ್ಲಿ ಮಾಹಿತಿ ನೀಡಿ, ಶವ ಹೂತಿಟ್ಟಿರುವ ಕುರಿತು ದೂರು ಸಾಕ್ಷಿದಾರ ನೀಡಿರುವ ಹೇಳಿಕೆ ಆಧರಿಸಿ ಎಸ್‌ಐಟಿ ಹಲವು ಜಾಗಗಳಲ್ಲಿ ಶೋಧ ನಡೆಸಿದೆ. ಒಂದು ಜಾಗದಲ್ಲಿ ಅಸ್ಥಿಪಂಜರ ಸಿಕ್ಕಿದೆ. ಮತ್ತೊಂದು ಜಾಗದಲ್ಲಿ ಮೂಳೆಗಳು ಸಿಕ್ಕಿವೆ. ಈ ಎಲ್ಲಾ ಸ್ಯಾಂಪಲ್‌ಗಳನ್ನು ಎಫ್ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗಿದೆ.

ಮತ್ತೊಂದು ಕೆಂಪು ಮಣ್ಣು (Laterite soil - ಎಲುಬು ಕರಗುವ ಆಸಿಡಿಕ್‌ ಅಂಶವಿರುವ ಮಣ್ಣು) ಜಾಗದಲ್ಲಿ ಮಣ್ಣಿನ ಮಾದರಿ ಸಂಗ್ರಹಿಸಿ ಎಫ್ಎಸ್ಎಲ್‌ಗೆ ಕಳುಹಿಸಲಾಗಿದೆ. ಅದರ ವಿಶ್ಲೇಷಣೆ ಆಗಬೇಕು. ಅಸ್ಥಿಪಂಜರ, ಮೂಳೆಗಳು ಸಿಕ್ಕಿರುವ ಜಾಗದಲ್ಲಿ ವಿಶ್ಲೇಷಣೆ ಆಗಬೇಕು. ಇಲ್ಲಿಯವರೆಗೆ ಆಗಿರುವುದು ಬರೀ ಶೋಧ ಕಾರ್ಯಾಚರಣೆ. ಇನ್ನು ಮುಂದೆ ಇರುವುದೇ ನಿಜವಾದ ತನಿಖೆ. ಸ್ಯಾಂಪಲ್, ಡಿಎನ್ಎ, ಮಣ್ಣಿನ ವಿಶ್ಲೇಷಣೆ ಆಧಾರದ ಮೇಲೆ ತನಿಖೆ ಆರಂಭವಾಗಲಿದೆ ಎಂದು ಹೇಳಿದ್ದರು.

Read More
Next Story