ಬಿಜೆಪಿ ಕಾರ್ಯಕರ್ತರಿಂದ ಧರ್ಮಸ್ಥಳ ಪ್ರವೇಶ; ವಿದೇಶಿ ಹಣ, ಎಸ್‌ಡಿಪಿಐ ಕೈವಾಡ ಬಗ್ಗೆ ವಿಶ್ವನಾಥ್‌ ಆರೋಪ
x

ಬಿಜೆಪಿ ಕಾರ್ಯಕರ್ತರಿಂದ ಧರ್ಮಸ್ಥಳ ಪ್ರವೇಶ; ವಿದೇಶಿ ಹಣ, ಎಸ್‌ಡಿಪಿಐ ಕೈವಾಡ ಬಗ್ಗೆ ವಿಶ್ವನಾಥ್‌ ಆರೋಪ

ಭಗವಾಧ್ವಜಗಳನ್ನು ಪ್ರದರ್ಶಿಸಿಕೊಂಡು ʼಧರ್ಮಸ್ಥಳ ಚಲೋʼ ಕಾರ್‌ ರ್ಯಾಲಿ ಕೈಗೊಂಡಿರುವ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್, ಕ್ಷೇತ್ರದ ಅಪಪ್ರಚಾರ ಸಂಬಂಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದ್ದಾರೆ.


ಭಗವಾಧ್ವಜಗಳನ್ನು ಪ್ರದರ್ಶಿಸಿಕೊಂಡು ಬೆಂಗಳೂರಿನಿಂದ ಧರ್ಮಸ್ಥಳ ಕ್ಷೇತ್ರದವರೆಗೆ ʼಧರ್ಮಸ್ಥಳ ಚಲೋʼ ಕಾರ್‌ ರ್ಯಾಲಿ ಕೈಗೊಂಡಿರುವ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್, ಮಂಜುನಾಥ ಕ್ಷೇತ್ರದ ಅಪಪ್ರಚಾರ ಕುರಿತಾಗಿ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದ್ದಾರೆ.

ಶನಿವಾರ ರಾತ್ರಿ ಧರ್ಮಸ್ಥಳಕ್ಕೆ ತಲುಪಿದ ಬಳಿಕ, ಭಾನುವಾರ ಬೆಳಿಗ್ಗೆ ನೂರಾರು ಕಾರ್ಯಕರ್ತರ ಜತೆ ತೆರಳಿದ ಅವರು, "ತಾನು ಶ್ರೀ ಕ್ಷೇತ್ರದ ವಿರುದ್ಧ ನಡೆದಿರುವ ಷಡ್ಯಂತ್ರದ ವಿರುದ್ಧ ಮತ್ತು ಅಪ ಚಾರದ ವಿರುದ್ಧ ಯಾತ್ರೆ ಕೈಗೊಂಡಿದ್ದು, ಈ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದೇನೆ,"'ಎಂದರು.

"ಮುಸುಕುಧಾರಿಯ ದೂರಿನ ಆಧಾರದಲ್ಲಿ ಅಗೆತ ಆರಂಭಿಸಲಾಗಿದೆ. ನಾಳೆ ಆತ ವಸತಿ ಗೃಹ ಅಥವಾ ಇತರ ಕಟ್ಟಡ ಅಗೆಯಲು ಹೇಳಬಹುದು. ಆತನ ಮುಸುಕು ತೆಗೆದು ವಿಚಾರಣೆ ನಡೆಸಬೇಕು, ಎಂದು ಒತ್ತಾಯಿಸಿದ ಅವರು, ಸರಕಾರ SIT ರಚನೆ ಮಾಡಿರುವುದು ತಪ್ಪಲ್ಲ, ಆದರೆ ಕಾರ್ಯದ ಜೊತೆಗೆ ಶ್ರೀ ಕ್ಷೇತ್ರದ ಅಪಪ್ರಚಾರ ಮಾಡಲಾಗುತ್ತಿದೆ. ಇದು ತಪ್ಪು, ಇದರ ಕುರಿತು ತನಿಖೆಯಾಗಬೇಕು," ಎಂದು ಒತ್ತಾಯಿಸಿದರು.

"ವಿದೇಶಿಯರ ಹಣದ ಕೈವಾಡ, SDPI ಕೈವಾಡ ಕೂಡಾ ಈ ಷಡ್ಯಂತ್ರದ ಹಿಂದೆ ಇರಬಹುದು, ಹಾಗೆಯೇ ಮುಸುಕುಧಾರಿ ವ್ಯಕ್ತಿ ಒಬ್ಬ ಮತಾಂತರಗೊಂಡವನು. ಆತನಿಗೆ ಇಲ್ಲಿನ ನಂಬಿಕೆ ಬಗ್ಗೆ ಗೌರವ ಇಲ್ಲ. ಆತ ಭೀಮ ಎಂದು ಹೇಳಿಕೊಂಡಿದ್ದರೂ ಆತನ ನಿಜವಾದ ಹೆಸರು ಚೆನ್ನಯ್ಯ, ಅವನಿಗೆ ಮೂವರು ಹೆಂಡತಿಯರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ.ಅವನ ಸುಧೀರ್ಘ ವಿಚಾರಣೆ ಅಗತ್ಯವಿದೆ," ಎಂದರು.

"ಶವಗಳ ಅಗೆತ ಶುರುವಾಗಿನಿಂದ ಸಾಮಾಜಿಕ ಮಾಧ್ಯಮಗಳು ಸಿಕ್ಕಾಪಟ್ಟೆ ಅಪಪ್ರಚಾರ ಮಾಡುತ್ತಿವೆ. ಎಲ್ಲವೂ ಶ್ರೀ ಕ್ಷೇತ್ರವನ್ನು ಟಾರ್ಗೆಟ್ ಮಾಡುತ್ತಿವೆ. ಇದು ಜನರ ನಂಬಿಕೆಗೆ ಹಾನಿ ಮಾಡುತ್ತಿವೆ. ಇದರ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಅಪಪ್ರಚಾರ ತಪ್ಪಿಸಲು ಕ್ರಮ ಅಗತ್ಯ ಇದೆ, ಎಂದು ಅಭಿಪ್ರಾಯಪಟ್ಟರು.

ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುವ ಮೂಲಕ ಸರಕಾರದ ಗಮನ ಸೆಳೆಯುವುದಾಗಿ ಅವರು ಹೇಳಿದರು.

ಧರ್ಮಸ್ಥಳ ಚಲೋ

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮತ್ತು ಅವಹೇಳನಗಳನ್ನು ನಡೆಸಲಾಗುತ್ತಿದೆ ಎಂದಿರುವ ಬಿಜೆಪಿ ನಾಯಕರು, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದಲ್ಲಿ ಶನಿವಾರ 'ಧರ್ಮಸ್ಥಳ ಚಲೋ' ಹೊರಟಿದ್ದರು ಶನಿವಾರ. ಬೆಳಗ್ಗೆ 6.30ಕ್ಕೆ ಬೆಂಗಳೂರಿನ ನೆಲಮಂಗಲ ಟೋಲ್ ಬಳಿಯಿಂದ ಹೊರಟ ಈ ಯಾತ್ರೆಯಲ್ಲಿ, ಯಲಹಂಕ ಕ್ಷೇತ್ರದ ನೂರಾರು ಭಕ್ತರು ಮತ್ತು ಬಿಜೆಪಿ ಕಾರ್ಯಕರ್ತರು 400ಕ್ಕೂ ಹೆಚ್ಚು ವಾಹನಗಳಲ್ಲಿ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದ್ದರು.

ಧರ್ಮಸ್ಥಳ ಮತ್ತು ಅದರ ಪಾವಿತ್ರ್ಯತೆಯ ಕುರಿತು ಹರಡುತ್ತಿರುವ ಋಣಾತ್ಮಕ ಪ್ರಚಾರವನ್ನು ವಿರೋಧಿಸಿ ಈ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಹೇಳಿದೆ. ಪೂಜಾ ವಿಧಿವಿಧಾನಗಳೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ, ಧರ್ಮಸ್ಥಳಕ್ಕೆ ತಲುಪಿ ಶ್ರೀ ಮಂಜುನಾಥ ಸ್ವಾಮಿಯ ವಿಶೇಷ ದರ್ಶನ ಪಡೆಯುವ ಕಾರ್ಯಕ್ರಮವಿದೆ. ಈ ಸಂದರ್ಭದಲ್ಲಿ, "ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು" ಎಂಬ ಬೇಡಿಕೆಯೊಂದಿಗೆ ಸಾಮೂಹಿಕ ಸಂಕಲ್ಪ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಶಾಸಕ ಎಸ್.ಆರ್. ವಿಶ್ವನಾಥ್ ಅವರೊಂದಿಗೆ, ಹಾಲು ಪ್ರಕೋಷ್ಠದ ರಾಜ್ಯ ಸಂಚಾಲಕ ಬೇಲೂರು ರಾಘವೇಂದ್ರ ಶೆಟ್ಟಿ, ಪಕ್ಷದ ಪ್ರಮುಖರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಬಿಜೆಪಿ ನಾಯಕರ ಉಪಸ್ಥಿತಿ

ಈ ಅಭಿಯಾನದ ಭಾಗವಾಗಿ, ಭಾನುವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿ ಪಕ್ಷದ ಶಾಸಕರು ಮಂಜುನಾಥನ ವಿಶೇಷ ದರ್ಶನ ಪಡೆಯಲು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ.

Read More
Next Story