
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಧರ್ಮಸ್ಥಳ ಪ್ರಕರಣ, ಗೃಹ ಸಚಿವರ ಉತ್ತರದಿಂದ ಗೊಂದಲಕ್ಕೆ ತೆರೆ ಎಳೆಯುವ ವಿಶ್ವಾಸ: ವಿಜಯೇಂದ್ರ
ಧರ್ಮಸ್ಥಳದ ವಿಚಾರದಲ್ಲಿ ಬಹಳ ದೊಡ್ಡ ಷಡ್ಯಂತ್ರ ಇದೆ ಎಂದು ಅವರೇ ಹೇಳಿಕೆ ನೀಡಿ ಸಂದರ್ಭ ಬಂದಾಗ ಉತ್ತರ ನೀಡುತ್ತೇನೆ ಎಂದಿದ್ದಾರೆ. ಇನ್ನೂ ಯಾವಾಗ ಸಮಯ ಬರಲಿದೆ ಎಂದು ಬಿಜಿಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಧ್ಯಂತರ ವರದಿಯನ್ನು ಸದನಕ್ಕೆ ತಿಳಿಸುವ ಮೂಲಕ ಎಲ್ಲಾ ಗೊಂದಲಕ್ಕೆ ತೆರೆ ಎಳೆಯುವ ವಿಶ್ವಾಸವಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ. ಧರ್ಮಸ್ಥಳದ ವಿಚಾರದಲ್ಲಿ ಬಹಳ ದೊಡ್ಡ ಷಡ್ಯಂತ್ರ ಇದೆ ಎಂದು ಅವರೇ ಹೇಳಿಕೆ ನೀಡಿ ಸಂದರ್ಭ ಬಂದಾಗ ಉತ್ತರ ನೀಡುತ್ತೇನೆ ಎಂದಿದ್ದಾರೆ. ಇನ್ನೂ ಯಾವಾಗ ಸಮಯ ಬರಲಿದೆ? ಲಕ್ಷಾಂತರ ಭಕ್ತಾದಿಗಳು ಇಂದು ಆತಂಕದಲ್ಲಿದ್ದಾರೆ. ಧರ್ಮಸ್ಥಳದಲ್ಲಿ ಯಾವ ರೀತಿ ತನಿಖೆ ನಡೆಯುತ್ತಿದೆ. ಎಂಬುದರ ಕುರಿತು ವಿವರಿಸಲು ಡಿಸಿಎಂಗೆ ಸಮಯ ಬಂದಿಲ್ಲ ಎಂದು ಟೀಕಿಸಿದರು.
ಭಾನುವಾರ ಬಿಜೆಪಿ ಸಂಸದರು, ಹಿರಿಯ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ಜೊತೆಗೂಡಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಶ್ರೀ ಮಂಜುನಾಥೇಶ್ವರನ ದರ್ಶನ ಪಡೆದುಕೊಂಡಿದ್ದೇವೆ. ನಂತರ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನೂ ಭೇಟಿ ಮಾಡಿದ್ದೆವು ಎಂದು ತಿಳಿಸಿದರು.
ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ನಡೆಯುತ್ತಿದ್ದು, ಅಪಪ್ರಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಏಕೆ ಎಚ್ಚತ್ತುಕೊಂಡಿಲ್ಲ? ಅಪಪ್ರಚಾರಕ್ಕೆ ಕಡಿವಾಣ ಹಾಕುವ ಮನಸ್ಸು ಇರಲಿಲ್ಲವೇ? ಯಾವ ಕಾರಣಕ್ಕೆ ಕಡಿವಾಣವಾಕಿಲ್ಲ ಎಂಬದರ ಕುರಿತು ಗೃಹ ಸಚಿವರು ತಿಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವು ತುಮಕೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪದೇ ಪದೇ ಎಫ್‍ಐಆರ್ ದಾಖಲಿಸುತ್ತಿದೆ. ಮೈಸೂರಿನಲ್ಲೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಕಾರ್ಯಕರ್ತನ ಮೇಲೆ ಎಫ್‍ಐಆರ್ ದಾಖಲಿಸಿ ಬಂಧಿಸಿದೆ. ಹಿಂದೂ ಕಾರ್ಯಕರ್ತರ ಬಗ್ಗೆ ತೋರುವ ಆಸಕ್ತಿಯನ್ನು ಧರ್ಮಸ್ಥಳದ ವಿಷಯದಲ್ಲಿ ಅಪಪ್ರಚಾರದ ಮಾಡುವವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನಕ್ಕೆ ತಡೆ
ರಾಜ್ಯ ಸರ್ಕಾರಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ ಕೊಡುವ ಯೋಗ್ಯತೆಯೂ ಇಲ್ಲದಾಗಿದೆ. ಮಾಸಾಶನದ 4.85 ಕೋಟಿ ಮೊತ್ತವನ್ನು ಕೊಡದೇ ತಡೆ ಹಿಡಿದಿದ್ದಾರೆ. ಇದನ್ನು ಪ್ರಶ್ನಿಸಿದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಬಹಳ ಚೆನ್ನಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳುತ್ತಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣವನ್ನು ಬಿಡುಗಡೆ ಮಾಡದಂಥ ದುಸ್ಥಿತಿಗೆ ಬಂದು ನಿಂತಿದೆ ಎಂದು ಆಕ್ಷೇಪಿಸಿದರು.
ರೈತರಿಗೆ ಒಂದೇ ಬೆಳೆಗೆ ನೀರು
ಕಳೆದ ವರ್ಷ ತುಂಗಭದ್ರಾ ಅಣೆಕಟ್ಟಿನ 19ನೇ ಕ್ರಸ್ಟ್ ಗೇಟ್ ಮುರಿದುಬಿದ್ದಿತ್ತು. ಇದರ ಬಗ್ಗೆ ರೈತರೂ ಆತಂಕದಲ್ಲಿ ಇದ್ದರು. ಸಾವಿರಾರು ಕ್ಯುಸೆಕ್ ನೀರು ಹರಿದು ವ್ಯರ್ಥವಾಗಿತ್ತು. ಅದಕ್ಕೆ ಖಾಯಂ ಪರಿಹಾರ ನೀಡಿಲ್ಲ. ಇದರ ಒತ್ತಡ ಇತರ ಗೇಟ್‍ಗಳ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ಎಲ್ಲ 33 ಕ್ರಸ್ಟ್ ಗೇಟನ್ನೂ ತಕ್ಷಣ ಬದಲಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಮೊದಲಾದ ಜಿಲ್ಲೆಗಳ ರೈತರು ಪ್ರತಿವರ್ಷ 2 ಬೆಳೆ ಬೆಳೆಯುತ್ತಿದ್ದರು. ಆದರೆ, ಸಚಿವರ ಮತ್ತು ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದ ತುಂಗಭದ್ರಾ ನಿರಾವರಿ ಮಂಡಳಿಯಲ್ಲಿ ಚರ್ಚೆ ಮಾಡಿ ಒತ್ತಡ ಹಾಕದ ಪರಿಣಾಮ ಈ ಬಾರಿ ರೈತರು ಒಂದೇ ಬೆಳೆಗೆ ತೃಪ್ತಿ ಪಡುವ ಸಂದರ್ಭ ಬಂದಿದೆ ಎಂದು ಟೀಕಿಸಿದರು.