
ಗಂಜಾಂನ ದಲಿತ ಕಾಲೋನಿ
ಪುರಸಭೆ ಸದಸ್ಯೆ ಸೇರಿ 7 ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ಸ್ವಜಾತಿಯ ಮುಖ್ಯಸ್ಥ
ಶ್ರೀರಂಗಪಟ್ಟಣ ಸಮೀಪದ ಗಂಜಾಂನ ಅಂಬೇಡ್ಕರ್ ಕಾಲೊನಿಯ ಪುರಸಭೆ ಸದಸ್ಯೆ ಗೀತಾ ಮಹೇಶ್, ಯಶವಂತಕುಮಾರ್ ಸೇರಿ ಒಟ್ಟು ಏಳು ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದ್ದು, ದಂಡ ವಿಧಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ದೇಗುಲದ ಕಾರ್ಯಗಳಿಗೆ ದೇಣಿಗೆ ನೀಡದೇ ಸಮುದಾಯದ ಯಜಮಾನರ ವಿರುದ್ಧವೇ ಮಾತನಾಡಿದರೆಂಬ ಕಾರಣಕ್ಕೆ ಪುರಸಭೆ ಸದಸ್ಯೆ ಸೇರಿ ಏಳು ದಲಿತ ಕುಟುಂಬಗಳಿಗೆ ಸಮುದಾಯದವರೇ ಸಾಮಾಜಿಕ ಬಹಿಷ್ಕಾರ ಹಾಕಿ, ದಂಡ ವಿಧಿಸಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ಗಂಜಾಂನ ಅಂಬೇಡ್ಕರ್ ಕಾಲೊನಿ ನಿವಾಸಿಗಳಾದ ಪುರಸಭೆ ಸದಸ್ಯೆ ಗೀತಾ ಮಹೇಶ್, ಯಶವಂತಕುಮಾರ್ ಸೇರಿ ಒಟ್ಟು ಏಳು ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ. ಬಹಿಷ್ಕಾರಕ್ಕೆ ಒಳಗಾದ ಕುಟುಂಬಗಳ ಜತೆ ಉಳಿದ ದಲಿತ ಕುಟುಂಬಗಳು ಯಾವುದೇ ವ್ಯವಹಾರ ನಡೆಸಬಾರದು ಎಂದು ಸಮುದಾಯದ ಮುಖ್ಯಸ್ಥರು ಎಚ್ಚರಿಕೆ ನೀಡಿರುವುದಾಗಿ ಸ್ಥಳೀಯರು ಹೇಳಿದ್ದಾರೆ.
ದೂರಿನಲ್ಲೇನಿದೆ ?
"ಗಂಜಾಂನ ಅಂಬೇಡ್ಕರ್ ಬೀದಿಯಲ್ಲಿ ಶಿವರಾತ್ರಿ ಆಚರಣೆಗೆ ನಾಲ್ಕು ವರ್ಷಗಳ ಹಿಂದೆ ಪ್ರತಿ ಕುಟುಂಬಕ್ಕೆ 100 ರೂ. ದೇಣಿಗೆ ನಿಗದಿ ಮಾಡಲಾಗಿತ್ತು. ದೇಣಿಗೆ ಹಣವನ್ನು ಇನ್ನೂ ನೀಡಿಲ್ಲ ಎಂಬ ಕಾರಣಕ್ಕೆ ಬಹಿಷ್ಕಾರ ಹಾಕಲಾಗಿದೆ. ಮಹೇಶ್ ಎಂಬುವರು ದಂಡದ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಪುರಸಭೆಯಿಂದ ಅವರು ಬಾಡಿಗೆಗೆ ಪಡೆದಿದ್ದ ವಾಣಿಜ್ಯ ಮಳಿಗೆ ಮುಚ್ಚಿಸಿದ್ದಾರೆ. ಕೂಲಿಗಾರ ಮಂಜಣ್ಣ ಎಂಬುವರಿಗೂ ಸಾವಿರಾರು ರೂಪಾಯಿ ದಂಡ ವಿಧಿಸಿದ್ದು, ಜಿಲ್ಲಾಧಿಕಾರಿ ಮತ್ತು ಪೊಲೀಸರು ನ್ಯಾಯ ಕೊಡಿಸಬೇಕು,'' ಎಂದು ಯಶವಂತಕುಮಾರ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸಿಎಂ, ಡಿಸಿಎಂ ತವರಲ್ಲೂ ನಡೆದಿತ್ತು ಬಹಿಷ್ಕಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶ್ರೀನಿವಾಸಪುರ ಗ್ರಾಮದಲ್ಲಿ ಇತ್ತೀಚೆಗೆ ಪಂಚಾಯಿತಿ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ದಲಿತ ಕುಟುಂಬವೊಂದಕ್ಕೆ ಗ್ರಾಮದ ಮುಖಂಡರು ಬಹಿಷ್ಕಾರ ಹಾಕಿದ್ದರು.
ಅದೇ ರೀತಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರ ತಾಲೂಕಿನ ಬನವಾಸಿ ಗ್ರಾಮದ ಮಾರಮ್ಮ ಜಾತ್ರೆಯಲ್ಲಿ ಪಾಲ್ಗೊಳ್ಳಲು ಸಮಾನ ಅವಕಾಶ ನೀಡಬೇಕೆಂದು ಕೇಳಿದ ದಲಿತರಿಗೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದ್ದರು.